ಶಿರಾ :

ಮನುಷ್ಯನ ಮೂಲಭೂತ ಸೌಕರ್ಯಗಳ ಪೈಕಿ ನೀರು ಅತ್ಯಮೂಲ್ಯವಾದುದು. ಅಂತಹುದರಲ್ಲಿ ಶಿರಾ ನಗರಸಭೆಯು ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಟೀಕಿಸಿದರು.
ಅವರು ನಗರದ ದೊಡ್ಡಕೆರೆ ಜಲ ಸಂಗ್ರಹಾಗಾರಕ್ಕೆ ಗುರುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆರೆಯಲ್ಲಿ ಸಾಕಷ್ಟು ನೀರಿದ್ದರೂ ಯಂತ್ರ ಕೆಟ್ಟಿದೆ ಎಂದು ದುರಸ್ತಿ ಮಾಡದೆ ಕೊಳಚೆ ನೀರು ಪೂರೈಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲ. ಇಂತಹ ಸಂದರ್ಭದಲ್ಲಿ ಶಾಸಕರಾದವರು ತಮ್ಮ ಜವಾಬ್ದಾರಿ ಏನಿದೆ ಎಂಬುದನ್ನು ಅರಿಯದೆ ಹೋದರೆ ಜನರ ಪ್ರತಿನಿಧಿಯಾಗಿ ವಿಫಲವಾದಂತೆ ಎಂದರು.
ಕಳೆದ 17 ವರ್ಷಗಳ ಅವಧಿಯಲ್ಲಿ ಎಂದೂ ಕೂಡ ಇಂತಹ ಘಟನೆ ನಡೆದಿರಲಿಲ್ಲ. ಲಾಕ್‍ಡೌನ್‍ನಿಂದಾಗಿ ಮಧ್ಯಮ ವರ್ಗದ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಸಂದರ್ಭದಲ್ಲಿ ಕೊಳಚೆ ನೀರು ಪೂರೈಕೆ ಮಾಡಿ, ನೀರಿನ ಶೇಖರಣೆ ಮಾಡುವ ತೊಟ್ಟಿಗಳು ಕಲುಷಿತವಾಗಿವೆ. ಇದನ್ನು ಸ್ವಚ್ಛ ಗೊಳಿಸಲು ಸಾರ್ವಜನಿಕರು ನೂರಾರು ರೂಪಾಯಿ ತೆರಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ನಗರಸಭೆ ಒಂದು ವರ್ಷದ ನೀರಿ ಕರ ಮನ್ನಾ ಮಾಡಬೇಕು ಎಂದು ಹೇಳಿದರು.
ಮುಖಂಡರಾದ ಅಮಾನುಲ್ಲಾಖಾನ್, ಜಾಫರ್, ಪಾಂಡುರಂಗಪ್ಪ, ಹಬೀಬ್‍ಖಾನ್, ಶ್ರೀನಿವಾಸ್, ಜೀಷನ್ ಅಹಮದ್, ಹರೀಶ್, ಬುರ್ರಾನ್ ಅಹಮದ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








