‘ಕೊಟ್ಟ ಭರವಸೆಯನ್ನು ಸರ್ಕಾರ ಈಡೇರಿಸಲಿದೆ’ ಶಾಸಕಿ ಪೂರ್ಣಿಮಾ ಶ್ರೀನಿವಾಸ್ 

ಶಿರಾ :

      ಚುನಾವಣೆಗೂ ಮುನ್ನ ಶಿರಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಮದಲೂರು ಕೆರೆಯನ್ನು ತುಂಬಿಸುವ ವಿಚಾರವೂ ಸೇರಿದಂತೆ ನೀಡಿದ ಭರವಸೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವುದು ಖಚಿತ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿ.ಜೆ.ಪಿ. ಪಕ್ಷವು ನನಗೆ ಒಂದಷ್ಟು ಜವಾಬ್ದಾರಿಯನ್ನು ನಿಡಿದ್ದ ಹಿನ್ನೆಲೆಯಲ್ಲಿ 12 ದಿನಗಳವರೆಗೂ ಕ್ಷೇತ್ರದಲ್ಲಿ ಸಂಚರಿಸುವ ಮೂಲಕ ಮತದಾರರನ್ನು ಹಾಗೂ ಕಾಡು ಗೊಲ್ಲ ಸಮುದಾಯದ ಸಂಘಟನೆಯಲ್ಲಿ ತೊಡಗಿದ್ದೆನು. ಕಾಡು ಗೊಲ್ಲ ಸಮುದಾಯವು ನಿಜಕ್ಕೂ ಪಕ್ಷವನ್ನು ಬೆಂಬಲಿಸಿದ್ದು ನಮಗೆ ಸಂತಸ ತಂದಿದೆ ಎಂದರು.

      ಕ್ಷೇತ್ರದ ಪ್ರತಿಯೊಂದು ಗೊಲ್ಲರಹಟ್ಟಿಗಳಿಗೆ ನಾನು ಚುನಾವಣಾ ಸಮಯದಲ್ಲಿ ಭೇಟಿ ನೀಡಿದ್ದೇನೆ. ಅನೇಕ ಹಟ್ಟಿಗಳಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಹಾಗೂ ಇನ್ನೂ ಅನೇಕ ಮಂದಿ ಗುಡಿಸಲುಗಳಲ್ಲಿಯೇ ವಾಸಿಸುವುದನ್ನು ಮನಗಂಡಿದ್ದು ಮನೆಗಳ ಮಂಜೂರಾತಿಗಾಗಿ ಸರ್ಕಾರ ಈಗಾಗಲೇ ಕ್ರಮ ಕೈಗೊಳ್ಳುತ್ತಿದೆ ಎಂದರು.

     ನೂತನ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಒಬ್ಬ ಯುವಕರಿದ್ದಾರೆ. ಈ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂಧಿಸುವ ಇಚ್ಚಾಶಕ್ತಿ ಅವರಿಗಿದೆ. ಅಪ್ಪರ್ ಭದ್ರಾ ಯೋಜನೆಗೆ ಸಂಬಂಧಿಸಿದಂತೆ ಈವರೆಗೆ ನಿಧಾನ ಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿ 2018ರಿಂದ ತ್ವರಿತ ಗತಿಯಲ್ಲಿ ಸಾಗಿದೆ. ಶಿರಾ, ಚಿ.ನಾ.ಹಳ್ಳಿ ಭಾಗಕ್ಕೆ ಭದ್ರಾ ನೀರು ಹರಿಯಲಿದೆ. ಭದ್ರಾದಿಂದ ವಿ.ವಿ.ಸಾಗರಕ್ಕೆ ನೀರು ತರುವ ಕಾಮಗಾರಿ ಶೇ 90 ರಷ್ಟು ಮುಗಿದಿದೆ. ಕಾಮಗಾರಿ ನಿಧಾನಗೊಳ್ಳಲು ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವಿಕೆಯಷ್ಟೆ ಕಾರಣವಾಗಿತ್ತು ಎಂದರು.

     ವಿ.ವಿ.ಸಾಗರವು ಕಳೆದ ವರ್ಷ 102 ಅಡಿಯಷ್ಟು ನಿರಿನಿಂದ ತುಂಬಿತ್ತು. ಈ ವರ್ಷವೂ ಈಗಾಗಲೇ 100 ಅಡಿಯಾಗಿದೆ. ಶಿರಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀರಾವರಿ ಯೋಜನೆಯನ್ನು ಶಾಶ್ವತವಾಗಿ ಕಲ್ಪಿಸುವ ಇಚ್ಚಾಶಕ್ತಿ ಸರ್ಕಾರಕ್ಕಿದೆ. ಇಲ್ಲಿನ ಮೂಲಭೂತ ಸಮಸ್ಯೆಗಳಿಗೆ ಸರ್ಕಾರ ಪ್ರಮಾಣಿಕವಾಗಿ ಸ್ಪಂಧಿಸಲಿದೆ. ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಈ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಪರಿಶ್ರಮ ಶ್ಲಾಘನಾರ್ಹವಾದುದು ಎಂದರು.

     ಜಿಲ್ಲಾ ಬಿ.ಜೆ.ಪಿ. ಪ್ರ. ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಪಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಬಿ.ಜೆ.ಪಿ. ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಶಿರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಕಾಡು ಗೊಲ್ಲ ಸಮಾಜದ ಮುಖಂಡರಾದ ಶ್ರೀರಂಗ ಯಾದವ್, ಚಂಗಾವರ ಮಾರಣ್ಣ, ಮಾಗೋಡು ನಾಗರಾಜು, ಮಲ್ಲಯ್ಯ ಮುಂತಾದವರು ಹಾಜರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link