ಬರಗೂರು :
ಕೊರೊನಾ ಎರಡನೆ ಅಲೆಯ ವೈರಸ್ ಯಾವ ವಯಸ್ಸಿನವರಿಗಾದರೂ ಬರಬಹುದಾಗಿದೆ. ಶಿರಾ ತಾಲ್ಲೂಕಿನ ಯಾವುದೇ ವ್ಯಕ್ತಿಗೆ ಉಸಿರಾಟದ ತೊಂದರೆಯಾಗಿ ಪಲ್ಸ್ ರೇಟ್ ಕಡಿಮೆಯಾದಲ್ಲಿ ಕೂಡಲೆ ನಮ್ಮನ್ನು ಸಂಪರ್ಕಿಸಿದರೆ ಹೆಚ್ಚಿನ ಚಿಕಿತ್ಸೆಗೆ ಸಹಕರಿಸಲಿದ್ದೇನೆ ಎಂದು ಶಾಸಕ ಡಾ. ಎಂ.ರಾಜೇಶ್‍ಗೌಡ ತಿಳಿಸಿದ್ದಾರೆ.
ಶಿರಾ ತಾಲ್ಲೂಕು ಬರಗೂರು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಇತ್ತೀಚೆಗೆ ತಾಲ್ಲೂಕಿನ ಹೆಚ್ಚು ಗ್ರಾಮಗಳಲ್ಲಿ ಹೆಚ್ಚು ಮಂದಿಗೆ ಕೊರೋನಾ ಸೋಂಕು ಇರುವುದು ಕಂಡುಬಂದಿದೆ. ಈಗಾಗಲೆ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತಿದೆ. ತುರ್ತು ಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದೇವೆ. ಯಾವುದೇ ವ್ಯಕ್ತಿಗಳಾಗಲಿ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಹಲವು ಸಮಸ್ಯೆಗಳಿಗೆ ತುತ್ತಾದರೆ, ಅತಿರೇಕಕ್ಕೆ ಹೋಗುವ ಮುನ್ನವೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರೆ ಮುಂದೆ ಆಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದರು.
ತಾಲ್ಲೂಕು ತಹಸೀಲ್ದಾರ್ ಮಮತ ಎಂ ಮಾತನಾಡಿ, ತಾಲ್ಲೂಕಿನ ಯಾವುದೇ ಕೊರೊನಾ ಪಾಸಿಟೀವ್ ವ್ಯಕ್ತಿಗಳಿಗೆ ಆಶಾ ಕಾರ್ಯಕರ್ತೆಯರು ಮಾತ್ರೆಗಳನ್ನು, ಮಾಸ್ಕ್, ಸ್ಯಾನಿಟೈಸರ್ ಒದಗಿಸಬೇಕಿದೆ. ಪಂಚಾಯ್ತಿ ಸಿಬ್ಬಂದಿ ಹಾಟ್‍ಸ್ಪಾಟ್ ಸ್ಥಳಕ್ಕೆ ದಿನಕ್ಕೆ ಮೂರು ಬಾರಿ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕೆಂದು ತಿಳಿಸಲಾಗಿದೆ. ಬೆಂಗಳೂರಿನಿಂದ ಬಂದ ವ್ಯಕ್ತಿಗಳಿಂದ ಕೊರೊನಾ ವೈರಸ್ ಹೆಚ್ಚಾಗಿದೆ. ಪಾಸಿಟೀವ್ ಬಂದಂತಹ ವ್ಯಕ್ತಿಗಳು ಯಾರೇ ಆಗಿರಲಿ ಮನೆಯಿಂದ ಹೊರ ಬರದೆ 10 ದಿನಗಳ ಕಾಲ ಕ್ವಾರಂಟೈನ್‍ನಲ್ಲಿದ್ದು ಸಹಕರಿಸಿ. ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದರೆ ಇನ್ನಷ್ಟು ಕೊರೊನಾ ವೈರಸ್ ಹರಡುತ್ತದೆ. ಈ ಹಿಂದೆ ಕೊರೊನಾ ಪಾಸಿಟೀವ್ ಬಂದ ಕಂಟೈನ್ಮೆಂಟ್ ಝ್ಹೋನ್ ಕುಟುಂಬಕ್ಕೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಹಾಲು, ರೇಷನ್ ಸೇರಿದಂತೆ ಹಲವು ದಿನ ಬಳಕೆ ವಸ್ತುಗಳನ್ನು ನೀಡಲಾಗುತ್ತಿತ್ತು. ಈಗ ಅವಕಾಶವಿಲ್ಲ. ಜನರು ನಿಮ್ಮ ಗ್ರಾಮ, ನಿಮ್ಮ ಜನ ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಇರಬೇಕು. ತುರ್ತು ಸೇವೆಗಾಗಿ ಆರೋಗ್ಯ ಇಲಾಖೆ ವೈದ್ಯರು, ಪಿಡಿಓ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಅವರ ಕಾರ್ಯ ವ್ಯಾಪ್ತಿಯಲ್ಲಿ 24 ಗಂಟೆ ಕಾಲ ತುರ್ತು ಸೇವೆಗೆ ಸಿದ್ಧರಿರಬೇಕೆಂದು ತಿಳಿಸಲಾಗಿದೆ. ಈಗಾಗಲೇ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳ ಸಭೆ ಕರೆದು ಕೊರೋನಾ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ ಎಂದರು.
ಇದೇ ವೇಳೆ ಹೆಚ್ಚು ಕೊರೊನಾ ಕೇಸ್ ಇದ್ದ ಬರಗೂರು ಹಾಗೂ ಹಾರೋಗೆರೆ ಗ್ರಾಮದ ಸೋಂಕಿತರ ಮನೆಗಳ ಬಳಿಗೆ ಭೇಟಿ ನೀಡಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಂಡು, ಸಕಾಲಕ್ಕೆ ಮಾತ್ರೆ ಸೇವಿಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ ಡಾ.ಸಿ.ಎಂ.ರಾಜೇಶ್‍ಗೌಡ ಸೋಂಕಿತರಲ್ಲಿ ಆತ್ಮ ಸ್ಥೈರ್ಯ ತುಂಬಿದರು.
ತಾಲ್ಲೂಕು ಇಓ ಲಕ್ಷ್ಮಣ್, ಗ್ರಾ.ಪಂ.ಅಧ್ಯಕ್ಷ ಜಯರಾಮಯ್ಯ, ಪಿಡಿಓ ನಾಗರಾಜಯ್ಯ, ಎ.ಎಸ್.ಐ ಮುದ್ದರಂಗಪ್ಪ, ಕÀಂದಾಯ ತನಿಖಾಧಿಕಾರಿ ಹೊನ್ನಪ್ಪ, ಗ್ರಾಪಂ ಉಪಾಧ್ಯಕ್ಷೆ ಯಶೋಧ ದೇವರಾಜು, ಸದಸ್ಯರಾದ ಮಂಜುನಾಥ್, ಕಾಂತರಾಜು, ಶಾಂತಮ್ಮಬಾಲಕೃಷ್ಣ, ಶೃತಿರಾಜು, ಗ್ರಾಮಲೆಕ್ಕಿಗ ಮಂಜು ಜಡೇದಾ, ಬಿಲ್ ಕಲೆಕ್ಟರ್ ಲಕ್ಷ್ಮಣ್, ಕಂದಾಯ ಇಲಾಖೆ ಸಿಬ್ಬಂದಿ ನರಸಿಂಹಮೂರ್ತಿ, ಗ್ರಾಮಸ್ಥರಾದ ಬಿ.ಎಸ್.ಸಿದ್ದೇಶ್, ಮುದ್ದುಕೃಷ್ಣೇಗೌಡ, ಕೃಷ್ಣಪ್ಪ, ಗಿರೀಶ್ ಇತರರಿದ್ದರು.
ಬರಗೂರು ಗ್ರಾಪಂ ವ್ಯಾಪ್ತಿಯ ಬರಗೂರಿನಲ್ಲಿ 22, ಹಾರೋಗೆರೆ ಗ್ರಾಮದಲ್ಲಿ 16, ಯಲಪೇನಹಳ್ಳಿ 8, ಕಲಿಗೋನಹಳ್ಳಿ 4, ಕದಿರೇಹಳ್ಳಿ 3, ಬೀರನಹಳ್ಳಿ 1, ಕಾಟನಹಳ್ಳಿಯಯಲ್ಲಿ 1 ಕೊರೊನಾ ಪಾಸಿಟೀವ್ ಕೇಸುಗಳಿದ್ದು, ಬರಗೂರು ಪಂಚಾಯ್ತಿಯನ್ನು ಮೈಕ್ರೋ ಕಂಟೈನ್ಮೆಂಟ್ ಝ್ಹೋನ್ ಎಂದು ಪರಿಗಣಿಸಲಾಗಿದೆ. ಗ್ರಾಮಸ್ಥರು ಎಚ್ಚೆತ್ತುಕೊಳ್ಳದಿದ್ದರೆ ಇಡೀ ಗ್ರಾಮಕ್ಕೇ ರೋಗ ಹಬ್ಬುವ ಭೀತಿ ಇದೆ.
-ಮನುಕಿರಣ್, ಹಿರಿಯ ಆರೋಗ್ಯ ಸಹಾಯಕ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ