ಶಿರಾ: ಕಗ್ಗಂಟಾಗಿಯೇ ಉಳಿದ ಬೀಡಿ ಕಾಲನಿ ಕಾರ್ಮಿಕರ ಸಮಸ್ಯೆಗಳು

 ಶಿರಾ : 

      ಮಳೆ-ಬೆಳೆ ಇಲ್ಲದೆ ಪರಿತಪಿಸುತ್ತಿರುವಂತಹ ಸಂದರ್ಭದಲ್ಲೂ ಕೂಡ ಅತ್ಯಂತ ಕಡು ಬಡ ಕುಟುಂಬಗಳ ಹಸಿದ ಹೊಟ್ಟೆಯನ್ನು ಇಂಗಿಸಿ ಹಸಿವು ನೀಗಿಸಿದ ಉದ್ಯಮವೆಂದರೆ ಅದು ಬೀಡಿ ಸುತ್ತುವಿಕೆ ಮಾತ್ರ.

ನಗರದ ಬಹುತೇಕ ಕುಟುಂಬಗಳು ಇಂದು ತುತ್ತು ಅನ್ನ ತಿಂದು ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದರೆ ಅದಕ್ಕೆ ಬೀಡಿ ಕಾರ್ಮಿಕ ವೃತ್ತಿಯೇ ಪ್ರಮುಖ ಕಾರಣವೂ ಹೌದು. ಬಡವರ ಬದುಕಿನ ಜಟಕಾ ಬಂಡಿ ಸಾಗಿರುವುದೇ ಈ ಉದ್ಯಮದಿಂದ.

      ಬೆಳಗಾಯಿತೆಂದರೆ ತೂಬರಿ ಎಲೆ, ಹೊಗೆಸೊಪ್ಪು, ಕೈ ಬೀಡಿ, ಕಡ್ಡಿ ಬೀಡಿಗಳನ್ನು ಕೈಯಲ್ಲಿ ಹಿಡಿದು, ಹೊಗೆ ಸೊಪ್ಪು ತುಂಬಿದ ಬೀಡಿಗಳನ್ನು ಮಿಲಾಯಿಸುತ್ತಾ ಹಸಿವನ್ನೂ ಇಂಗಿಸಿಕೊಂಡು ಕಾರ್ಮಿಕ ವೃತ್ತಿಯಲ್ಲಿ ತೊಡಗುವ ಅನೇಕ ಮಂದಿಗೆ ಬೀಡಿ ಕಾರ್ಮಿಕ ವೃತ್ತಿ ಜೀವನಕ್ಕೆ ನೆಲೆಯನ್ನು ತಂದುಕೊಟ್ಟಿದೆ.

      ಬೀಡಿ ಕಟ್ಟುವಿಕೆಯಿಂದ ಯಾರೂ ಕೂಡ ಶ್ರೀಮಂತರಾಗಲು ಖಂಡಿತ ಸಾಧ್ಯವಿಲ್ಲ. ದಿನ ನಿತ್ಯದ ಆಹಾರ ಸಾಮಗ್ರಿಗಳನ್ನು ಕೊಳ್ಳಲು ಹಾಗೂ ಹಬ್ಬ-ಹರಿದಿನಗಳು ಬಂದಾಗ ಒಂದು ಜೊತೆ ಬಟ್ಟೆ ಕೊಳ್ಳಲು ಮಾತ್ರ ನೆರವಾಗುವಂತಹ ಬೀಡಿ ಉದ್ಯಮ ಕೆಲ ಬಡ ಕುಟುಂಬಗಳ ಶಾಲಾ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೂ ನೆರವಾಗಿದೆ. ನಮ್ಮನ್ನಾಳುವ ಸರ್ಕಾರಗಳು ಬೀಡಿ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳಡಿ ನೆರವಿಗೆ ದಾವಿಸಬಹುದು. ಆದರೆ ಕೈಗಾರಿಕಾ ಇಲಾಖೆಯಿಂದ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಒಂದಷ್ಟು ನೆರವನ್ನು ಬಿಟ್ಟರೆ ವ್ಯಾಪಕವಾದ ನೆರವು ಯಾವುದೇ ಸರ್ಕಾರಗಳಿಂದ ಬೀಡಿ ಕಾರ್ಮಿಕರಿಗೆ ಲಭಿಸದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.

      ಈ ರೀತಿ ಹೊಟ್ಟೆ ಬಟ್ಟೆ ಕಟ್ಟಿಕೊಂಡು ಬದುಕುವ ನಿರಾಶ್ರಿತ ಬೀಡಿ ಕಾರ್ಮಿಕರಿಗೆ ನಿವೇಶನವನ್ನು ನೀಡಿ ಮನೆ ಕಟ್ಟಿಕೊಡಲು ಮುಂದಾದ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದ ನಿರ್ಲಕ್ಷ್ಯತನ ಹಾಗೂ ಮೊಂಡುತನಗಳಿಂದಾಗಿ ಶಿರಾ ನಗರದ ಅನೇಕ ಬೀಡಿ ಕಾರ್ಮಿಕ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

      2008ರಲ್ಲಿ ಶಿರಾ ನಗರದಲ್ಲಿರುವ ನಿರಾಶ್ರಿತ ಅರ್ಹ ಬೀಡಿ ಕಾರ್ಮಿಕರ ಕುಟುಂಬಗಳಿಗೆ ಸೂರನ್ನು ಒದಗಿಸುವ ಸಲುವಾಗಿ ಬೆಂಗಳೂರಿನ ಕೆಂಗೇರಿಯಲ್ಲಿರುವ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವು 281 ಮಂದಿ ಬೀಡಿ ಕಾರ್ಮಿಕರಿಂದ ಸಹಾಯ ಧನದ ಮುಂಗಡ ಹಣವನ್ನು ಪಾವತಿಸಿಕೊಂಡು ನಿವೇಶನದ ಜೊತೆಗೆ ಮನೆ ಕಟ್ಟಿಕೊಡಲು ಮುಂದಾಗಿತ್ತು.

      ಅರ್ಹರಿಗೆ ವಸತಿಗಳನ್ನು ಕಲ್ಪಿಸುವ ಸಲುವಾಗಿ ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವು ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮದ ಮೊರೆ ಹೋಯಿತು. ಸದರಿ ಸಂಘದ ಕೋರಿಕೆಯ ಮೇರೆಗೆ 281 ಬೀಡಿ ಕಾರ್ಮಿಕರಿಗೆ ಕೆಲ ಷರತ್ತುಗಳಿಗೆ ಒಳಪಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜೀವ್‍ಗಾಂಧಿ ನಿಗಮದಿಂದ 27.6.2011 ರಂದು ಅನುಮೋದನೆಯನ್ನೂ ನೀಡಲಾಯಿತು.

      ಭಾರತ ಸರ್ಕಾರ ಕಾರ್ಮಿಕ ಕಲ್ಯಾಣ ಆಯುಕ್ತರ ಮೂಲಕ ಸಹಾಯ ಧನ ಪ್ರತಿ ಮನೆಗೆ 40,000 ರೂ.ಗಳಂತೆ ಒಟ್ಟು 112.40 ಲಕ್ಷ ರೂ, ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 50,000 ರೂ.ಗಳಂತೆ ಒಟ್ಟು 140.50 ಲಕ್ಷ ರೂ, IHSUP KGRHCL ಸಾಲ 50,000 ರೂ. ಸೇರಿದಂತೆ ಒಟ್ಟು 140.50 ಲಕ್ಷ ರೂ, ಫಲಾನುಭವಿಗಳ ವಂತಿಕೆಯ ಹಣ ತಲಾ 10,000 ರೂಗಳಂತೆ ಒಟ್ಟು 281 ಮಂದಿ ಫಲಾನುಭವಿಗಳಿಂದ ಒಟ್ಟು 28.10 ಲಕ್ಷ ರೂ.ಗಳನ್ನು ಪಡೆಯಲಾಗಿತ್ತು.
   

      281 ಮನೆಗಳನ್ನು ಪೂರ್ಣಗೊಳಿಸುವ ತಯಾರಿ ನಡೆಸಿದ ವಿವಿಧೋದ್ದೇಶ ಸಹಕಾರ ಸಂಘವು 8 ಮನೆಗಳ ಮೇಲ್ಛಾವಣಿಯನ್ನು ಹಾಕಲೇ ಇಲ್ಲ. ಇನ್ನೂ 59 ಮನೆಗಳು ಲಿಂಟಲ್ ಲೆವೆಲ್‍ನಲ್ಲಿದ್ದು ಈವರೆಗೂ ಅವುಗಳನ್ನು ಪೂರ್ಣಗೊಳಿಸುವ ಕೆಲಸವನ್ನೂ ಮಾಡಲೇ ಇಲ್ಲ. 281 ಮನೆಗಳ ಪೈಕಿ ಇನ್ನೂ ಬಹಳಷ್ಟು ಮನೆಗಳು ಪೂರ್ಣಗೊಳ್ಳಬೇಕಿತ್ತು. ಆದರೆ ಬಹುತೇಕ ಮನೆಗಳು ಪೂರ್ಣಗೊಳ್ಳಲೇ ಇಲ್ಲ.
ಪೂರ್ಣಗೊಂಡ 214 ಮನೆಗಳಿಗೆ ಫಲಾನುಭವಿಗಳು ನಾ ಮುಂದು ತಾ ಮುಂದು ಎಂದು ಮನೆಗಳಲ್ಲಿ ತರಾತುರಿಯಲ್ಲಿ ಸೇರಿಕೊಂಡೇ ಬಿಟ್ಟರು, ಕಿಟಕಿ, ಬಾಗಿಲುಗಳು ಕಳಪೆ ಗುಣಮಟ್ಟದ್ದಿದ್ದರೂ ಮಲಗಲು ಸೂರು ಸಿಕ್ಕರೆ ಸಾಕೆಂದು ಕೆಲವರು ಗೂಡು ಸೇರಿಕೊಂಡೇ ಬಿಟ್ಟರು. ಗೂಡು ಸೇರಿಕೊಳ್ಳುವ ತರಾತುರಿಯಲ್ಲಿ ಅನೇಕ ಮಂದಿಗೆ ಹಣ ಕಟ್ಟಿದ್ದರೂ ಕೂಡ ಮೊದಲ ಹಂತದಲ್ಲಿ ಮನೆಗಳನ್ನು ಗುರ್ತಿಸಿಕೊಡುವಲ್ಲಿಯೂ ಸಹಕಾರ ಸಂಘ ಸಂಪೂರ್ಣ ವಿಫಲಗೊಂಡಿತು.

      ಮೊದಲ ಹಂತದಲ್ಲಿ ಕಟ್ಟಿಸಿದ ಫಲಾನುಭವಿಗಳ ಮನೆಗಳು ಇನ್ನೂ ಪೂರ್ಣಗೊಂಡಿಲ್ಲದಿದ್ದರೂ ಮತ್ತಷ್ಟು ಕಾರ್ಮಿಕರಿಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಡುವ ಆಸೆಯನ್ನು ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ಹುಟ್ಟಿಸಿತು. ಮೊದಲ ಹಂತದಲ್ಲಿಯೇ ಯಶಸ್ಸು ಕಾಣದ ಸಹಕಾರ ಸಂಘದ ಇಂತಹ ಭಂಡತನವನ್ನು ಪ್ರಶ್ನಿಸುವ ತಾಕತ್ತು ಕೂಡ ಜಿಲ್ಲಾಡಳಿತ ಕೊನೆಗೂ ಪ್ರದರ್ಶಿಸಲೇ ಇಲ್ಲ.

      ಮೊದಲ ಹಂತದಲ್ಲಿ ನಿರ್ಮಿಸಿಕೊಡಬೇಕಾದ ಮನೆಗಳ ಗುರಿಯನ್ನು ಇನ್ನೂ ಮುಟ್ಟಿಯೇ ಇಲ್ಲದಿದ್ದರೂ ಮತ್ತಷ್ಟು ಬೀಡಿ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡುವ ಆಸೆಯನ್ನು ಹುಟ್ಟಿಸಲಾಯಿತು. ಎರಡನೇ ಹಂತದಲ್ಲಿ 611 ಮಂದಿ ಕಾರ್ಮಿಕರು ಸಹಕಾರ ಸಂಘ ನಿಗದಿಪಡಿಸಿದ ತಮ್ಮ ಪಾಲಿನ ಹಣವನ್ನು ಸಂದಾಯ ಮಾಡಿದ್ದು, ಈ 611 ಮಂದಿ ಫಲಾನುಭವಿಗಳಿಂದ 1 ಕೋಟಿ 15 ಲಕ್ಷ ರೂಗಳನ್ನು ಸಹಕಾರ ಸಂಘ ಪಾವತಿಸಿಕೊಂಡಿದೆ.

      ಫಲಾನುಭವಿಗಳಿಗೆ ನಿವೇಶನಗಳನ್ನು ವಿಂಗಡಿಸಿ ಕೊಡುವ ಹಿನ್ನೆಲೆಯಲ್ಲಿ ಇದೇ ಸಹಕಾರ ಸಂಘವು ಶಿರಾ ನಗರದಲ್ಲಿಯೇ 2018 ರಲ್ಲಿ 1 ಎಕರೆ ಭೂಮಿಯನ್ನು 15 ಲಕ್ಷ ರೂ.ಗಳಿಗೆ ಖರೀದಿ ಮಾಡಿದೆ. ಅತ್ಯಂತ ವಿಪರ್ಯಾಸದ ಸಂಗತಿ ಎಂದರೆ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವು ತಾನು ಖರೀದಿ ಮಾಡಿದ ಈ ಒಂದು ಎಕರೆ ಜಮೀನನ್ನು ತನ್ನ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳಲು ಕೂಡ ಇತ್ತ ಕಡೆ ತಲೆ ಹಾಕಿಯೇ ಇಲ್ಲ.

      ಸಹಕಾರ ಸಂಘಕ್ಕೆ ಹಣವನ್ನು ಪಾವತಿಸಿದ ಬೀಡಿ ಕಾರ್ಮಿಕರು ತಾವು ಕಟ್ಟಿದ ಹಣದ ರಸೀದಿಯನ್ನಿಡಿದು ಬೀದಿ ಬೀದಿ ಅಲೆಯುವಂತಾಗಿದೆ. ಕಳೆದ ಎರಡೂವರೆ ವರ್ಷಗಳಿಂದಲೂ ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘದವರು ಇತ್ತ ಕಡೆ ತಲೆ ಹಾಕಿಯೇ ಇಲ್ಲ ಎನ್ನಲಾಗಿದೆ.

      ಇನ್ನು ಒಂದು ಅಚ್ಚರಿಯ ಸಂಗತಿ ಎಂದರೆ ಪ್ರತಿಯೊಬ್ಬ ಫಲಾನುಭವಿಯು ತಾನು ಸ್ವಂತದ್ದೊಂದು ಸೂರನ್ನು ಪಡೆಯಲು ತನ್ನ ಪಾಲಿನ ವಂತಿಕೆಯ ಹಣವನ್ನು ಪಾವತಿಸಿ ರಸೀದಿ ಪಡೆಯಬೇಕು. ಆದರೆ ಅನೇಕ ಫಲಾನುಭವಿಗಳಿಂದ ವಂತಿಕೆಯ ಹಣವನ್ನು ಮೀರಿ ಸುಮಾರು 62,000 ರೂ.ಗಳನ್ನು ಪಡೆದ ನಿದರ್ಶನಗಳು ಇದ್ದು ಅಂತಹ ಫಲಾನುಭವಿಗಳು ಹಣ ಪಾವತಿಸಿದ್ದಕ್ಕೆ ರಸೀದಿಯನ್ನೂ ಇಟ್ಟುಕೊಂಡಿದ್ದಾರೆ.

      ಅತ್ತ ಹಣವನ್ನೂ ಕಟ್ಟಿ ಮನೆಯೂ ಇಲ್ಲದೆ, ನಿವೇಶನವೂ ಇಲ್ಲದೆ ಸಹಕಾರ ಸಂಘಕ್ಕೆ ಹಣ ಪಾವತಿಸಿದ ಫಲಾನುಭವಿಗಳಿಗೆ ದಿಕ್ಕು ತೋಚದಂತಾಗಿದ್ದು, ತಮಗೆ ಕೂಡಲೇ ಮನೆ ಕಟ್ಟಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ, ರಾಜೀವ್‍ಗಾಂಧಿ ವಸತಿ ನಿಗಮಕ್ಕೆ, ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದು ಈತನಕವೂ ಯಾವುದೇ ಪ್ರಯೋಜನವಾಗಿಲ್ಲ.
ಸುಮಾರು 611 ಮಂದಿ ಬೀಡಿ ಕಾರ್ಮಿಕರು ತಮ್ಮ ಪಾಲಿನ ಸಂಪೂರ್ಣ ವಂತಿಕೆಯ ಹಣವನ್ನು ಕಟ್ಟಿ ರಸೀದಿಯನ್ನೂ ಪಡೆದಿದ್ದಾರೆ. ರಾಜೀವ್‍ಗಾಂಧಿ ವಸತಿ ನಿಗಮ, ಭಾರತ ಸರ್ಕಾರದ ಕಾರ್ಮಿಕ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಸ್ಥಳೀಯ ನಗರಸಭೆಗಳಷ್ಟೇ ಅಲ್ಲದೆ ವಾಜಪೇಯಿ ವಸತಿ ಯೋಜನೆಯ ಅಧಿಕಾರಿಗಳು ಕೂಡ ಇದಕ್ಕೆ ನೇರ ಕಾರಣವೂ ಆಗಿದ್ದಾರೆ.

     ಹಸಿದ ಹೊಟ್ಟೆಯನ್ನು ನೀಗಿಸಿಕೊಳ್ಳಲು ಕೂಡ ಕಷ್ಟಪಡುವಂತಹ ಬೀಡಿ ಕಾರ್ಮಿಕರಿಗೆ ವಸತಿ ಕಲ್ಪಿಸುವ ನೆಪದಲ್ಲಿ ಆಗಿರುವಂತಹ ಈ ಅನ್ಯಾಯವನ್ನು ಕ್ಷೇತ್ರದ ಶಾಸಕರು ಸರಿಪಡಿಸುವರೇನೋ ಕಾದು ನೋಡಬೇಕಿದೆ.

      ಅರ್ಹರಿಗೆ ವಸತಿಗಳನ್ನು ಕಲ್ಪಿಸುವ ಸಲುವಾಗಿ ರಾಜ್ಯ ಬೀಡಿ ಕಾರ್ಮಿಕರ ವಿವಿದೋದ್ದೇಶ ಸಹಕಾರ ಸಂಘವು ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮದ ಮೊರೆ ಹೋಯಿತು. ಸದರಿ ಸಂಘದ ಕೋರಿಕೆಯ ಮೇರೆಗೆ 281 ಬೀಟಿ ಕಾರ್ಮಿಕರಿಗೆ ಕೆಲ ಷರತ್ತುಗಳಿಗೆ ಒಳಪಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜೀವ್‍ಗಾಂಧಿ ನಿಗಮದಿಂದ ಅನುಮೋಧನೆಯನ್ನೂ ನೀಡಲಾಯಿತು.

       ಫಲಾನುಭವಿಗಳಿಗೆ ನಿವೇಶನಗಳನ್ನು ವಿಂಗಡಿಸಿ ಕೊಡುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವು ಶಿರಾ ನಗರದಲ್ಲಿಯೇ 2018 ರಲ್ಲಿ 1 ಎಕರೆ ಭೂಮಿಯನ್ನು 15 ಲಕ್ಷ ರೂ.ಗಳಿಗೆ ಖರೀದಿ ಮಾಡಿದೆ. ಅತ್ಯಂತ ವಿಪರ್ಯಾಸದ ಸಂಗತಿ ಎಂದರೆ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘವು ತಾನು ಖರೀದಿ ಮಾಡಿದ ಈ ಒಂದು ಎಕರೆ ಜಮೀನನ್ನು ತನ್ನ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳಲು ಕೂಡ ಇತ್ತ ಕಡೆ ತಲೆ ಹಾಕಿಯೇ ಇಲ್ಲ.
—————————————————————–

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link