ಶಿರಾ :
ಇಡೀ ದೇಶಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಶಿರಾ ನಗರದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಕೊರೋನಾ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟು ಜನತೆ ಇನ್ನೂ ಭೀತಿಯಲ್ಲಿಯೇ ಬದುಕುತ್ತಿದ್ದಾರೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆರಕ್ಷಕ ಇಲಾಖೆಯ ಬಂದೋಬಸ್ತಿನ ನಡುವೆ ಇಡೀ ತಾಲ್ಲೂಕು ಆಡಳಿತಕ್ಕೆ ಬೆಲೆ ಕೊಟ್ಟು ಮಹಾಮಾರಿಯಿಂದ ದೂರವಿರಲು ಸಾರ್ವಜನಿಕರು ಕೂಡ ಸಹಾಯ ಹಸ್ತ ನೀಡಿರುವುದು ನಿಜಕ್ಕೂ ಶ್ಲಾಘನಾರ್ಹ ಸಂಗತಿಯೇ ಸರಿ.
ಮಹಾಮಾರಿಯ ಇಂತಹ ಸಂದರ್ಭದಲ್ಲಿ ಚಿತ್ರದುರ್ಗ ಸಂಸದರು ಶಿರಾ ನಗರದಲ್ಲಿ ನೂರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇಡೀ ತಾಲ್ಲೂಕಿನಲ್ಲಿ ಸರಿಯಾಗಿ ಮಳೆ-ಬೆಳೆ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಕೊರೋನಾ ಮಹಾಮಾರಿಯಿಂದ ಜನರ ಕೈಯಲ್ಲಿ ಕಾಸಿಲ್ಲದೆ ಬೆಂದು ಬಸವಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಸದರ ಈ ಹುಟ್ಟು ಹಬ್ಬ ಆಚರಣೆ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಮೇ 15 ರಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ದೈವಾಧೀನರಾದಾಗ ಇಲ್ಲಿನ ತಾಲ್ಲೂಕು ಸಂಘಟನೆಯ ಹತ್ತು ಮಂದಿ ಪ್ರವಾಸಿ ಮಂದಿರದ ವೃತ್ತದಲ್ಲಿ ಮುತ್ತಪ್ಪ ರೈ ಅವರ ಫೋಟೋ ಇಟ್ಟು ಸಂತಾಪ ಸೂಚಿಸಲು ಆಗಮಿಸಿದರು. ಆರಕ್ಷಕ ಸಿಬ್ಬಂದಿ ಈ ಹತ್ತು ಮಂದಿಯನ್ನೂ ಸಂತಾಪ ಸೂಚಿಸಲು ಅವಕಾಶ ನೀಡದಂತೆ ಚದುರಿಸಿ ಕಳುಹಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರಕ್ಷಕ ಸಿಬ್ಬಂದಿ ಈ ಸಂಘಟನೆಯನ್ನು ಚದುರಿಸಿದ್ದು ಕಾನೂನು ಪಾಲನೆ ದೃಷ್ಟಿಯಿಂದ ಸರಿ ಅಂಬೋಣ.
ಆದರೆ ಮೇ 16 ರಂದು ಚಿತ್ರದುರ್ಗ ಸಂಸದರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಶಿರಾ ನಗರಕ್ಕೆ ಬಂದಾಗ ಆ ಪಕ್ಷದ ಕಾರ್ಯಕರ್ತ-ಮುಖಂಡರು ಅವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿಯೆ ಕೈಗೊಂಡಿದ್ದು ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಕೋವಿಡ್-19 ನಿಯಮದಂತೆ ಯಾವುದೇ ಸಭೆ, ಸಮಾರಂಭ ಮಾಡಬಾರದು. ಹೆಚ್ಚು ಮಂದಿ ಗುಂಪುಗೂಡಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು…ಹೀಗೆ ನೂರೆಂಟು ನಿಯಮಗಳನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು. ಆದರೆ ಸಂಸದರ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಬ್ಬರಲ್ಲ, ಇಬ್ಬರಲ್ಲ ನೂರಾರು ಮಂದಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಸರಿಯಾಗಿ ಮುಖಕ್ಕೆ
ಮಾಸ್ಕ್‍ಗಳನ್ನೂ ಹಾಕಿಕೊಳ್ಳದೆ, ಅದರಲ್ಲೂ ಆರಕ್ಷಕ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಈ ಹುಟ್ಟು ಹಬ್ಬ ನಡೆದಿರುವುದು ನಿಯಮಬಾಹಿರವೂ ಆಗಿದ್ದು ಸಂಸದರ ಈ ಹುಟ್ಟು ಹಬ್ಬ ಆಚರಣೆ ಚರ್ಚೆಗೆ ಗ್ರಾಸವಾಗಿದೆ.
ಸಂಸದರ ಹುಟ್ಟು ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ನಾರಾಯಣಸ್ವಾಮಿ ದೇವಾಲಯದಲ್ಲಿ ಕನಿಷ್ಠ ಅಂತರ ಪಾಲಿಸದೆ ಪೂಜೆಯನ್ನು ಸಲ್ಲಿಸಿ ಸನ್ಮಾನ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್‍ಡೌನ್ ಆರಂಭಗೊಂಡಾಗಿನಿಂದಲೂ ಶಿರಾ ತಾಲ್ಲೂಕಿನಾದ್ಯಂತ ಇಡೀ ತಾಲ್ಲೂಕು ಆಡಳಿತ ಕೈಗೊಂಡ ಬಿಗಿ ಬಂದೋಬಸ್ತಿನ ಬಗ್ಗೆ ಸಾರ್ವಜನಿಕರಲ್ಲಿ ಪ್ರಶಂಸೆಗಳೂ ಇದ್ದವು. ಅದರಲ್ಲೂ ಆರಕ್ಷಕ ಅಧಿಕಾರಿಗಳು, ಸಿಬ್ಬಂದಿಯ ಬಗ್ಗೆ ಅವರ ಕಾರ್ಯದಕ್ಷತೆಯ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿದ್ದವು. ಇಂತಹ ಸಂದರ್ಭದ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಸದರ ಹುಟ್ಟು ಹಬ್ಬ ಆಚರಿಸಲು ಆರಕ್ಷಕ ಅಧಿಕಾರಿಗಳು ಅವಕಾಶ ನೀಡಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮಾಸ್ಕ್ ಧರಿಸದವರ ಮೇಲೆ ಇಲ್ಲಿನ ನಗರಸಭೆ ದಂಡ ವಿಧಿಸುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ. ಈಗ ಸಂಸದರ ಹುಟ್ಟು ಹಬ್ಬದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಕೋವಿಡ್ ನಿಯಮ ಪಾಲನೆಯಾಗಿದೆ ಎಂಬುದಕ್ಕೆ ಅಧಿಕಾರಿಗಳೆ ಉತ್ತರ ನೀಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ