‘ಶಿರಾ ಜನತೆಗೆ ನೀಡಿದ ಭರವಸೆಯನ್ನು ಪೂರೈಸುವ ಗುರಿ ನಮ್ಮದು’ -ಬಿ.ವೈ.ವಿಜಯೇಂದ್ರ

 ಶಿರಾ:

      ಶಿರಾ ಕ್ಷೇತ್ರದ ಜನತೆ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ಭದ್ರಕೋಟೆಯನ್ನು ಭೇಧಿಸುವ ಮೂಲಕ ನಿಜಕ್ಕೂ ಇತಿಹಾಸವನ್ನು ತಿರುಚಿ ಹಾಕಿದ್ದಾರೆ. ಬಿ.ಜೆ.ಪಿ. ಪಕ್ಷವನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸನ್ನು ಕಂಡ ಇಲ್ಲಿನ ಜನತೆಗೆ ಚುನಾವಣೆಗೂ ಮುನ್ನ ನೀಡಿದ ಭರವಸೆಯನ್ನು ಈಡೇರಿಸುವ ಗುರಿ ನಮ್ಮದು ಎಂದು ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

      ತುಮಕೂರಿನಲ್ಲಿ ಮತ ಎಣಿಕೆಯ ನಂತರದ ಫಲಿತಾಂಶ ಲಭ್ಯವಾಗುತ್ತಿದ್ದಂತೆಯೇ ಸಂಜೆ 7 ಗಂಟೆಗೆ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧವಾದ ಕಾಡು ಗೊಲ್ಲರ ಆರಾಧ್ಯ ದೈವ ಜುಂಜಪ್ಪನಗುಡ್ಡೆಗೆ ಭೇಟಿ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

      ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಗೆಲುವಿಗಾಗಿ ಜಿಲ್ಲಾಧ್ಯಕ್ಷರಾದ ಸುರೇಶ್‍ಗೌಡ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಉಪ ಮುಖ್ಯಮಂತ್ರಿ ಕಾರಜೋಳ ಅವರೂ ಸೇರಿದಂತೆ ಅನೇಕ ಸಚಿವರುಗಳು, ಹಾಲಿ ಶಾಸಕರುಗಳು ಹಾಗೂ ಈ ಕ್ಷೇತ್ರದ ಎಲ್ಲಾ ಮುಖಂಡರು ಪಕ್ಷದ ಕಾರ್ಯಕರ್ತರ ಪರಿಶ್ರಮವನ್ನು ನಾನು ಹೃದಯಪೂರ್ವಕವಾಗಿ ಶ್ಲಾಘಿಸುತ್ತೇನೆ. ಈ ಭಾಗದ ವಿವಿಧ ಸಮುದಾಯಗಳ ಜನರು ಪಕ್ಷ-ಭೇಧವನ್ನು ಮರೆತು ಈ ಬಾರಿ ನಮ್ಮ ಪಕ್ಷಕ್ಕೆ ಮತ ಚಲಾಯಿಸಿದ್ದು ಕ್ಷೇತ್ರದ ಋಣ ತೀರಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

      ಚುನಾವಣೆಯ ಪ್ರಚಾರದ ಸಂದರ್ಬದಲ್ಲಿ ಈ ಭಾಗದ ಮದಲೂರು ಕೆರೆಗೆ ಹೇಮಾವತಿಯ ನೀರು ಹರಿಸಿ ಕೆರೆಯನ್ನು ತುಂಬಿಸುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದು ಮುಂದಿನ 6 ತಿಂಗಳೊಳಗೆ ಮದಲೂರು ಕೆರೆಯನ್ನು ತುಂಬಿಸುವ ಪ್ರಾಮಾಣಿಕ ಕೆಲಸ ಮಾಡಬೇಕಿದೆ. ಈಗಾಗಲೇ ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗಳನ್ನು ತುಂಬಿಸುವ ಕೆಲಸ ನಡೆದಿದೆ ಎಂದರು.

      ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವ ಮುನ್ನವೇ ಮುಖ್ಯಮಂತ್ರಿಗಳ ಸೂಚನೆಯಂತೆ ಹೇಮಾವತಿ ನಾಲಾ ವಲಯದ ಹಾಗೂ ಭದ್ರಾ ಮೇಲ್ದಂಡೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‍ಗಳು ಮದಲೂರು ಕೆರೆಗೆ ಭೇಟಿ ನೀಡಿ ತಾಂತ್ರಿಕ ವರದಿಯನ್ನು ತಯಾರಿಸಿ ಮುಖ್ಯಮಂತ್ರಿಗಳಿಗೆ ನೀಡಲಿದ್ದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯೇಂದ್ರ ಹೇಳಿದರು.

      ಸರ್ಕಾರದ ಯಾವುದೇ ಯೋಜನೆಗಳು ಶಿರಾ ಕ್ಷೇತ್ರಕ್ಕೆ ಲಭ್ಯವಾಗಲಿದ್ದು ಶಿರಾ ಕ್ಷೇತ್ರವನ್ನು ಶಿಕಾರಿಪುರ ಮಾಡುವ ಭರವಸೆ ನೀಡಿದ ಮುಖ್ಯಮಂತ್ರಿಗಳು ಈ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ಹರಿಸುವುದು ಖಚಿತ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

      ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸುರೇಶ್‍ಗೌಡ, ಸಂಸದ ಪ್ರೀತಂ ಜೆ.ಗೌಡ, ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ವಿಜಯರಾಜ್, ಗ್ರಾ. ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ಪಕ್ಷದ ಅನೇಕ ಮುಖಂಡರುಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap