ಶಿರಾ : ಮತದಾರನ ಚಿತ್ತ ಇವಿಎಂ ಯಂತ್ರದ ಬಟನ್‍ನತ್ತ!!

ಶಿರಾ : 

      ಶಿರಾ ಕ್ಷೇತ್ರದಲ್ಲೊಂದು ಏಕಾಏಕಿ ಉಪ ಚುನಾವಣೆ ನಡೆಯುತ್ತದೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ನೆಮ್ಮದಿಯಾಗಿದ್ದ ಶಿರಾ ಕ್ಷೇತ್ರ ಶಾಸಕ ಬಿ.ಸತ್ಯನಾರಾಯಣ್ ಅವರ ಅಕಾಲಿಕ ಮರಣದಿಂದಾಗಿ ಕಳೆದ 15 ದಿನಗಳಿಂದ ರಾಜಕೀಯದ ಬೇಗೆಯಲ್ಲಿ ಸಿಲುಕಿ ತಳಮಳಿಸಿ ಹೋಗಿಬಿಟ್ಟಿದೆ.

      ನಾಮಪತ್ರ ಸಲ್ಲಿಕೆಯು ಆರಂಭಗೊಂಡಾಗಿನಿಂದಲೂ ಎಲ್ಲಾ ಪಕ್ಷಗಳ ಧುರೀಣರು ಶಿರಾ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡುವ ಮೂಲಕ ಉಪ ಚುನಾವಣೆ ಎಂದರೆ ಹೀಗೂ ನಡೆಯುತ್ತಾ ಎಂದು ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ಪಡುವಂತಹ ಕಾರ್ಯಕ್ರಮಗಳು, ಬೃಹತ್ ರ್ಯಾಲಿಗಳು, ಆರೋಪ-ಪ್ರತ್ಯಾರೋಪಗಳೆಲ್ಲವೂ ಮುಗಿದು ಹೋಗಿವೆ.
ವಿವಿಧ ಪಕ್ಷದ ಪ್ರಮುಖ ರಾಜಕಾರಣಿಗಳನ್ನು, ಮುಖ್ಯಮಂತ್ರಿಗಳನ್ನು, ಮಾಜಿ ಮುಖ್ಯಮಂತ್ರಿಗಳನ್ನು, ಹಾಲಿ ಹಾಗೂ ಮಾಜಿ ಸಚಿವರುಗಳನ್ನು ಕೇವಲ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮಾತ್ರ ನೋಡಿದ್ದವರಿಗೆ ಅಂತಹ ಅಪರೂಪದ ರಾಜಕಾರಣಿಗಳ ನೇರ ಮುಖ ದರ್ಶನ ಕೂಡ ಪ್ರತಿ ಗ್ರಾಮಗಳ ಹಳ್ಳಿಗರಿಗೂ ಆಗಿದೆ. ಪುರುಸೊತ್ತಿಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಯ ಪರ ಓಡಾಡಿ ಬಸವಳಿದ ಮುಖಂಡರನ್ನು ಕಂಡು ಮತದಾರ ಕಿರು ನಗೆ ಬೀರಿದ್ದೂ ಉಂಟು.

      ಸ್ವಾಭಿಮಾನ, ಭಾವನಾತ್ಮಕ ಸಂಬಂಧಗಳ ಬೆಸುಗೆಯಷ್ಟೇ ಅಲ್ಲದೆ ಜಾತಿವಾರು ಲೆಕ್ಕಾಚಾರಗಳಿಂದಲೂ ಪ್ರತಿ ಚುನಾವಣೆಯಲ್ಲೂ ಅತ್ಯಂತ ಅಚ್ಚರಿ ಹಾಗೂ ಬೆಕ್ಕಸ ಬೆರಗಾಗುವಂತಹ ಫಲಿತಾಂಶ ನೀಡುವ ಇಲ್ಲಿನ ಮತದಾರನನ್ನು ಓಲೈಸುವುದು ಶಿರಾ ಕ್ಷೇತ್ರದಲ್ಲಿ ನಿಜಕ್ಕೂ ಕಷ್ಟದ ಕೆಲಸವೆ ಸರಿ. ಇಂತಹ ಕಷ್ಟದ ಕೆಲಸದ ನಡುವೆಯೂ ಮತದಾರನ ಓಲೈಕೆಗೆ ಅಭ್ಯರ್ಥಿಗಳು ನಡೆಸಿದ ಕಸರತ್ತು ಮಾತ್ರ ಈ ಹಿಂದಿನ ಯಾವ ಚುನಾವಣೆಗಳಲ್ಲೂ ನಡೆದೇ ಇರಲಿಲ್ಲ.
ನಾಮಪತ್ರ ಪರಿಷ್ಕರಣೆಯ ನಂತರ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಈ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಬಿ.ಸತ್ಯನಾರಾಯಣ್ ಹಾಗೂ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಈ ಮೂವರೂ ಕ್ಷೇತ್ರದಲ್ಲಿನ ಮತದಾರರ ಗಮನ ಸೆಳೆದ ಪ್ರಬಲ ಅಭ್ಯರ್ಥಿಗಳಾಗಿದ್ದು, ಈ ಮೂವರಲ್ಲೂ ಒಂದು ರೀತಿಯ ತ್ರಿಕೋನ ಸ್ಪರ್ಧೆಯೇ ಚುನಾವಣಾ ಕಣದಲ್ಲಿ ಏರ್ಪಟ್ಟಿದೆ.

      ಶಿರಾ ಉಪ ಚುನಾವಣಾ ಕಣದಲ್ಲಿ ಇಂದು ನಡೆಯುವ ಮತದಾನದ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯ ಹಣೆ ಬರಹವು ಇವಿಎಂ ಯಂತ್ರದಲ್ಲಿ ಗುಟ್ಟಾಗಿ ಸೇರಲಿದ್ದು, ಈ ಮೂರು ಪಕ್ಷಗಳಿಗೂ ಸದರಿ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಮತದಾನಕ್ಕೂ ಮುನ್ನ ರಾಜಕಾರಣಿಗಳು ಹೇಳಿದ ಹಾಗೂ ನೀಡಿದ ಭರವಸೆಗಳು, ಚುನಾವಣಾ ತಂತ್ರಗಾರಿಕೆಯ ವಿವಿಧ ಮಜಲುಗಳು, ಮತ ಭಿಕ್ಷೆಗಾಗಿ ನಡೆದ ತರಾವರಿ ಕಸರತ್ತುಗಳೆಲ್ಲವೂ ನವಂಬರ್ 1 ರ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ.

      ನೀತಿ ಸಂಹಿತೆಯು ಕ್ಷೇತ್ರದಲ್ಲಿ ಜಾರಿಯಾಗುತ್ತಿದ್ದಂತೆ ಚುನಾವಣೆಯಲ್ಲಿ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲು ಕ್ಷೇತ್ರದ ಲಕ್ಕನಹಳ್ಳಿ, ಹಾರೋಗೆರೆ, ಉಜ್ಜನಕುಂಟೆ, ಬೆಟ್ಟಪ್ಪನಹಳ್ಳಿ, ಬೋರಸಂದ್ರ, ಕಳ್ಳಂಬೆಳ್ಳ, ಶೀಬಿ, ಹೊನ್ನೇನಹಳ್ಳಿ, ಗಾಣದಹುಣಸೆ ಗ್ರಾಮಗಳ ಬಳಿ ಚೆಕ್‍ಪೋಸ್ಟ್ ನಿರ್ಮಿಸಲಾಗಿತ್ತು.

      5 ತಂಡಗಳಲ್ಲಿ 20 ಮಂದಿ ಇರುವ ಫ್ಲೈಯಿಂಗ್ ಸ್ಕ್ವಾಡ್, ಜಿಲ್ಲಾ ಮಟ್ಟದ ಅಧಿಕಾರಿಗಳ ಎಸ್‍ಎಸ್‍ಟಿ ತಂಡ ಸೇರಿದಂತೆ 28 ಮಂದಿ ಸೆಕ್ಟರ್ ಆಫೀಸರ್‍ಗಳು, ಅಂಕಿ-ಅಂಶಗಳ ಸಂಗ್ರಹಕರು, ವಿಡಿಯೋ ಚಿತ್ರೀಕರಣ ತಂಡಗಳನ್ನು ರಚಿಸುವ ಮೂಲಕ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಬಿಗಿ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ವಿವಿಧ ತಂಡಗಳನ್ನು ರಚಿಸಿತ್ತು.

     ಕಳೆದ ಒಂದು ತಿಂಗಳಿಂದಲೂ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಹಾಗೂ ವಿವಿಧ ವಸತಿ ಗೃಹಗಳಲ್ಲಿ ಠಿಕಾಣಿ ಹೂಡಿದ್ದ ಬೇರೆ ಬೇರೆ  ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಆಗಮಿಸಿದ್ದ ಎಲ್ಲಾ ಪಕ್ಷದ ರಾಜಕಾರಣಿಗಳು ಜಾಗ ಖಾಲಿ ಮಾಡಿದ್ದು, ಇಡೀ ಶಿರಾ ಕ್ಷೇತ್ರವೀಗ ತಣ್ಣಗೆ ಸುಧಾರಿಸಿಕೊಳ್ಳಲು ಆರಂಭಿಸಿದೆ.

      ಇತ್ತ ಸೋಮವಾರ ಚುನಾವಣೆಗೆ ಇನ್ನು ಒಂದು ದಿನ ಮಾತ್ರ ಬಾಕಿಯಿರುವ ಕಾರಣ ಸ್ಪರ್ಧಿಸಿದ್ದ ಪ್ರಮುಖ ಅಭ್ಯರ್ಥಿಗಳಲ್ಲಿ ಆತಂಕ ಕೂಡ ಹೆಚ್ಚಾಗಿದ್ದು, ನವೆಂಬರ್ 1 ರ ಸಂಜೆಯಿಂದಲೂ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸುವ ಕೆಲಸ ಮಾತ್ರ ನಡೆಯಿತು. ಇದೀಗ ಎಲ್ಲಾ ಮತದಾರರ ಚಿತ್ತ ಇವಿಎಂ.ಯಂತ್ರಗಳತ್ತ ನೆಟ್ಟಿದ್ದು, ಚುನಾವಣಾ ಆಯೋಗ ಮತದಾನವನ್ನು ಯಶಸ್ವಿಗೊಳಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ.

     ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು 2,15,725 ಇದ್ದು, ಈ ಪೈಕಿ ಪುರುಷರು 11,0281, ಮಹಿಳೆಯರು 105334 ಮಂದಿ ಇದ್ದಾರೆ. ಚುನಾವಣೆಗೂ ಮುನ್ನ ಆಯೋಗದ ನಿಯಮದಂತೆ ನಮೂನೆ-12 ಡಿ ಅಡಿಯಲ್ಲಿ 80 ವರ್ಷ ಮೇಲ್ಪಟ್ಟವರು 2674 ಮಂದಿ, ಅಂಗವಿಕಲರು 2042, ಕೋವಿಡ್-19 ಪಾಸಿಟಿವ್ ಇರುವ 105 ಮಂದಿ ಮತದಾರರು ಅಂಚೆ ಮತದಾನದ ಮೂಲಕ ಈಗಾಗಲೇ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

      ನ.3 ರಂದು ಅಂದರೆ ಇಂದು ಬೆಳಗ್ಗೆ 8 ಗಂಟೆಯಿಂದ ನಡೆಯುವ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ತುಮಕೂರು ಹಾಗೂ ಗುಬ್ಬಿ ತಾಲ್ಲೂಕುಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

       ಒಟ್ಟು 330 ಮತಗಟ್ಟೆಗಳಿದ್ದು, 397 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 1 ನೆ ಮತಗಟ್ಟೆ ಅಧಿಕಾರಿಗಳು 397, 2ನೆ ಮತಗಟ್ಟೆ ಅಧಿಕಾರಿಗಳು 397, 3ನೆ ಮತಗಟ್ಟೆ ಅಧಿಕಾರಿಗಳು 397 ಮಂದಿ ಸೇರಿದಂತೆ ಒಟ್ಟು 1,588 ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ನಡೆಯುವ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

      ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಇಬ್ಬರು ಡಿ.ಎಸ್.ಪಿ, ಐದು ಮಂದಿ ಪಿ.ಐ, 21 ಮಂದಿ ಪಿ.ಎಸ್.ಐ, 19 ಮಂದಿ ಎ.ಎಸ್.ಐ, 208 ಮಂದಿ ಮುಖ್ಯಪೇದೆಗಳನ್ನು ಹಾಗೂ 561 ಮಂದಿ ಆರಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

       ಈ ಬಾರಿ ಸದರಿ ಉಪ ಚುನಾವಣೆಯಲ್ಲಿ ಎಂ-3 ಇ.ವಿ.ಎಂ.ಗಳನ್ನು ಬಳಸಲಾಗುತ್ತಿದೆ. ಬಿಯು-462, ಸಿಯು-462 ಮತ್ತು 495 ವಿವಿ ಪ್ಯಾಟ್‍ಗಳನ್ನು ಚುನಾವಣೆಗೆ ಹಂಚಿಕೆ ಮಾಡಲಾಗಿದೆ. ಇ.ವಿ.ಎಂ. ಮತ್ತು ವಿವಿ ಪ್ಯಾಟ್‍ಗಳ ನಿರ್ವಹಣೆ ಮಾಡುವ ಸಲುವಾಗಿಯೇ ಇದರ ಮೇಲ್ವಿಚಾರಣೆಗಾಗಿ 4 ಮಂದಿ ಬಿಇಎಲ್ ಎಂಜಿನಿಯರ್‍ಗಳನ್ನು ನೇಮಕ ಮಾಡಲಾಗಿದೆ.

      ಇದೆಲ್ಲಕ್ಕೂ ಮಿಗಿಲಾಗಿ ಇಡೀ ದೇಶದಲ್ಲಿಯೇ ಕೋವಿಡ್ ಮಹಾಮಾರಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎಲ್ಲಾ ರೀತಿಯ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೂಡ ಸದರಿ ಮತದಾನದ ಸಂದರ್ಭದಲ್ಲಿ ಕೈಗೊಂಡಿದೆ. ಎಲ್ಲಾ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಿಸಿ, ಮತಗಟ್ಟೆಗಳನ್ನು ಶುಚಿಗೊಳಿಸಿ ಸಜ್ಜುಗೊಳಿಸುವ ಕೆಲಸ ಈಗಾಗಲೇ ನಡೆದಿದೆ.

      ಜಿಲ್ಲಾ ಕ್ಷಯ ರೋಗ ಅಧಿಕಾರಿಗಳು ಕೋವಿಡ್-19 ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಿರಾ ತಾ. ಆರೋಗ್ಯಾಧಿಕಾರಿಗಳನ್ನು 136-ಶಿರಾ ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಮತದಾರರು ಮತಗಟ್ಟೆಗೆ ಮತ ಚಲಾಯಿಸಲು ಬರುವಾಗ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸಲೇಬೇಕೆಂಬ ಸೂಚನೆಯನ್ನು ನೀಡಲಾಗಿದೆ.

      ಎಲ್ಲಾ ಮತಗಟ್ಟೆಗಳಲ್ಲೂ ಮತದಾರರಿಗೆ ಥರ್ಮಲ್ ಸ್ಕ್ಯಾನರ್ ಮಾಡಿ, ಸ್ಯಾನಿಟೈಸೇಷನ್ ಮಾಡಿದ ನಂತರ ಮತದಾನಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಮತಗಟ್ಟೆಯ ಅಧಿಕಾರಗಳಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್, ಹ್ಯಾಂಡ್‍ಗ್ಲೌಸ್, ಸೋಪ್, ಫೇಸ್‍ಶೀಲ್ಡ್ ಮುಂತಾದ ಎಲ್ಲಾ ಸೌಲಭ್ಯಗಳನ್ನು ನೀಡಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

      ಮತದಾನಕ್ಕೆಂದು ಆಗಮಿಸುವ ಪ್ರತಿಯೊಬ್ಬ ಮತದಾರರಿಗೂ ಗ್ಲೌಸ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು ಪ್ರತಿ ಮತಗಟ್ಟೆಗೆ ಒಬ್ಬ ಆರೋಗ್ಯಾಧಿಕಾರಿ, ಎ.ಎನ್.ಎಂ. ಹಾಗೂ ಆಶಾ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಇದರೊಟ್ಟಿಗೆ ಮತದಾರರಿಗೆ ನೆರಳಿನ ವ್ಯವಸ್ಥೆಯನ್ನೂ ಕಲ್ಪಸಿಕೊಡುವ ಕೆಲಸವನ್ನು ಮಾಡಲೇಬೇಕಿದೆ. ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಮತದಾನ ಮಾಡಲು ವ್ಯವಸ್ಥಿತ ಕ್ರಮಗಳನ್ನು ಚುನಾವಣಾಧಿಕಾರಿಗಳು ಕೈಗೊಂಡಿದ್ದಾರೆ.

      ಕೋವಿಡ್ ಪಾಸಿಟಿವ್ ಅಥವ ಕೋವಿಡ್ ಸಸ್ಪೆಕ್ಟ್ ಇರುವ ಮತದಾರರಿಗೆ ಮತದಾನ ಮುಗಿಯುವ 1 ಗಂಟೆ ಮುಂಚಿತವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಮತದಾರರನ್ನು ಆ್ಯಂಬ್ಯುಲೆನ್ಸ್ ಮೂಲಕ ಕರೆ ತಂದು ಪುನಃ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆಯೂ ಇದೆ. ಸಂಬಂಧಪಟ್ಟ ಎಲ್ಲಾ ಮತಗಟ್ಟೆಯ ಅಧಿಕಾರಿಗಳಿಗೆ ಪಿ.ಪಿ.ಇ. ಕಿಟ್‍ಗಳನ್ನು ವಿತರಿಸುವ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಮತದಾರರಿಗೆ ಹೆಲ್ಪ್‍ಡೆಸ್ಕ್ ಹಾಗೂ ಟೋಕನ್ ವ್ಯವಸ್ಥೆ ಮಾಡಲಾಗಿದೆ.

      ಒಟ್ಟಾರೆ ಉಪ ಚುನಾವಣೆಯನ್ನು ಯಶಸ್ವಿಗೊಳಿಸಲು ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಸ್ಪರ್ಧಿಸಿದ ಅಭ್ಯರ್ಥಿಗಳ ಹಣೆ ಬರಹಗಳು ಮತಯಂತ್ರದಲ್ಲಿ ಕ್ರೋಡೀಕರಣಗೊಂಡು ನ.10 ರಂದು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುವ ಮತ ಎಣಿಕೆಯ ನಂತರ ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap