ತುಮಕೂರು :
ಶಿರಾ ವಿಧಾನಸಭೆಯ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಹಿಂದೆಯೆ ಸೋಲು-ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿವೆ. ಯಾರ ಮತಗಳನ್ನು ಮತ್ಯಾರು ಕಸಿದಿದ್ದಾರೆ ಎಂಬ ಅವಲೋಕನ ನಡೆದಿದೆ. ಕಳೆದ ಬಾರಿಯ ಚುನಾವಣೆಗೂ ಈಗಿನ ಚುನಾವಣೆಗೂ ಆಗಿರುವ ವ್ಯತ್ಯಾಸಗಳನ್ನು ಮೆಲುಕು ಹಾಕುತ್ತಿದ್ದಾರೆ.
1,81,596 ಒಟ್ಟು ಮತಗಳ ಪೈಕಿ ಬಿಜೆಪಿಯ ಡಾ.ಸಿ.ಎಂ.ರಾಜೇಶ್ ಗೌಡ 74,522 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿಯ (2018) ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಆರ್.ಗೌಡ 16,959 ಮತಗಳನ್ನು ಪಡೆದುಕೊಂಡಿದ್ದರು. ಎರಡೂವರೆ ವರ್ಷಗಳ ಅಂತರದ ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿ ಈಗ ಹೆಚ್ಚುವರಿಯಾಗಿ 57,563 ಮತಗಳನ್ನು ಸೆಳೆದುಕೊಂಡಿದ್ದಾರೆ. ಹೆಚ್ಚುವರಿಯಾಗಿ ಪಡೆದ ಈ ಮತಗಳು ಯಾವ ಪಕ್ಷಕ್ಕೆ ಹೋಗುತ್ತಿದ್ದವು? ಯಾರ ಓಟನ್ನು ಕಸಿಯಲಾಗಿದೆ ಎಂಬುದು ಈಗ ಚರ್ಚಾ ವಿಷಯ.
2018 ರಲ್ಲಿ ಬಿ.ಸತ್ಯನಾರಾಯಣ ಅವರು 74,338 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಈಗ ಬಿಜೆಪಿ ಅಭ್ಯರ್ಥಿ ಗಳಿಸಿರುವ ಮತಗಳು ಸಹ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಪಡೆದಿದ್ದ ಮತಗಳ ಆಜುಬಾಜಿನಲ್ಲಿಯೇ ಇವೆ. (ಕೇವಲ 184 ಮತಗಳ ವ್ಯತ್ಯಾಸ) ಮೂರು ಅಭ್ಯರ್ಥಿಗಳ ನಡುವೆ ಮತಗಳು ಹಂಚಿಕೆಯಾಗಿರುವುದನ್ನು ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಜೆಡಿಎಸ್ ಮತ ಬುಟ್ಟಿಗೆ ಕೈ ಹಾಕಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
2018 ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಟಿ.ಬಿ.ಜಯಚಂದ್ರ ಪಡೆದಿದ್ದ ಮತಗಳು 63,973. ಈ ಬಾರಿಯೂ ಸರಿ ಸುಮಾರು ಅಷ್ಟೇ ಮತಗಳನ್ನು ಪಡೆಯುವಲ್ಲಿ ಅವರು ಯಶಸ್ವಿಯಾದರಾದರೂ ನಿರೀಕ್ಷಿತ ಗೆಲುವಿನತ್ತ ದಾಪುಗಾಲು ಹಾಕಲು ಸಾಧ್ಯವಾಗಿಲ್ಲ. ಈ ಬಾರಿ ಜಯಚಂದ್ರ ಪಡೆದುಕೊಂಡಿರುವ ಮತಗಳು 61,573. ಅಂದರೆ ಕಳೆದ ಬಾರಿಗೆ ಹೋಲಿಸಿದರೆ ಮತಗಳ ಅಂತರ ಕೇವಲ 2400 ಅಷ್ಟೆ. ಕಾಂಗ್ರೆಸ್ ಅಭ್ಯರ್ಥಿಗೆ ದಾಖಲಾಗಿರುವ ಮತಗಳಲ್ಲಿ ಕೇವಲ ಎರಡೂವರೆ ಸಾವಿರದಷ್ಟು ಮತಗಳ ಕೊರತೆಯನ್ನು ಕಾಣಬಹುದು. ಜಯಚಂದ್ರ ವಿರುದ್ಧ ಸತ್ಯನಾರಾಯಣ ಅವರು 10,365 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಈ ಬಾರಿ 12,949 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಬಿ.ಸತ್ಯನಾರಾಯಣ ಅವರು ಪಡೆದಿದ್ದ 74,338 ಮತಗಳ ಅರ್ಧದಷ್ಟನ್ನು ಮಾತ್ರವೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪಡೆಯಲು ಸಾಧ್ಯವಾಗಿದೆ. 38,356 ಮತಗಳನ್ನು ಈ ಬಾರಿ ಜೆಡಿಎಸ್ ಕಳೆದುಕೊಂಡಿದ್ದರೆ ಇದರ ಬಹುಪಾಲು ಮತಗಳನ್ನು ಬಿಜೆಪಿ ಸೆಳೆದುಕೊಂಡಿದೆ. ಕಾಂಗ್ರೆಸ್‍ನ ಮತಗಳು ಹೆಚ್ಚಾಗಿ ಹಂಚಿ ಹೋಗಿಲ್ಲ ಎಂಬುದನ್ನು ಫಲಿತಾಂಶದ ಅಂಕಿ ಅಂಶಗಳು ಸ್ಪಷ್ಟವಾಗಿ ಹೇಳುತ್ತವೆ.
ಶಿರಾ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರ. ಈ ಸಮುದಾಯ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಹೆಚ್ಚು ಶ್ರಮಿಸುತ್ತಾ ಬಂದಿದೆ.
ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ ಒಕ್ಕಲಿಗರಾದರೂ ಮೊದಲಿನಿಂದಲೂ ಒಕ್ಕಲಿಗ ಸಮುದಾಯದ ಬೆಂಬಲ ಅಷ್ಟಕ್ಕಷ್ಟೆ. ಹಿಂದುಳಿದ ಹಾಗೂ ಸಾಂಪ್ರದಾಯಿಕ ಮತಗಳಿಂದ ಜಯಚಂದ್ರ ಗೆಲುವು ಸಾಧಿಸುತ್ತಾ ಬಂದಿದ್ದರು. ಈ ಕ್ಷೇತ್ರದಲ್ಲಿ ಹಿಂದುಳಿದ ಮತ್ತು ಸಾಂಪ್ರದಾಯಿಕ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದರ ನಿರೀಕ್ಷೆಯಲ್ಲಿಯೇ ಜಯಚಂದ್ರ ಅತಿಯಾದ ವಿಶ್ವಾಸದೊಂದಿಗೆ ಚುನಾವಣೆ ಎದುರಿಸುತ್ತಾ ಬಂದಿದ್ದರು. ಈ ಬಾರಿಯೂ ಒಕ್ಕಲಿಗ ಸಮುದಾಯ ಜಯಚಂದ್ರ ಅವರ ಕೈ ಹಿಡಿದಂತೆ ಕಂಡುಬರುತ್ತಿಲ್ಲ. ಸಮುದಾಯದ ಹೆಚ್ಚು ಮತಗಳನ್ನು ಸೆಳೆಯಲು ಜಯಚಂದ್ರ ಅವರಿಂದ ಸಾಧ್ಯವಾಗಿಲ್ಲ.
2018 ರಲ್ಲಿ ಸತ್ಯನಾರಾಯಣ ಅವರಿಗೆ ಒಕ್ಕಲಿಗ ಸಮುದಾಯ ಹಾಗೂ ಈ ಹಿಂದೆ ಸೋತಿದ್ದ ಅನುಕಂಪದ ಅಲೆ ಕೆಲಸ ಮಾಡಿತ್ತು. ಹೀಗಾಗಿ ಹಿಂದುಳಿದ ಸಮುದಾಯದ ಮತಗಳು ಸಹ ಜೆಡಿಎಸ್ ಪಾಲಾಗಿದ್ದವು. ಆದರೆ ಈ ಬಾರಿ ಅನುಕಂಪದ ಅಲೆ ಕೆಲಸ ಮಾಡಲಿಲ್ಲ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರದ ಕೆಲವು ಹೋಬಳಿಗಳಲ್ಲಿ ಠಿಕಾಣಿ ಹೂಡಿ ಜೆಡಿಎಸ್ ಮತಗಳು ಹಂಚಿ ಹೋಗದಂತೆ ತಡೆಯುವ ಸಾಹಸ ಮಾಡಿದರು. ಆದರೂ ಅದರಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಜೆಡಿಎಸ್ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದ ಜನರನ್ನು ನೋಡಿ ಸ್ವತಃ ದೇವೇಗೌಡರು, ಕುಮಾರಸ್ವಾಮಿಯವರೆ ಆಶ್ಚರ್ಯಕ್ಕೆ ಒಳಗಾಗಿದ್ದರು. ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಿದೆ ಎಂದೆಲ್ಲ ವ್ಯಾಖ್ಯಾನಗಳು ಕೇಳಿಬಂದಿದ್ದವು.
ಅವೆಲ್ಲವೂ ಮತಗಳಾಗಿ ಪರಿವರ್ತಿತವಾಗಿದ್ದರೆ ಅದರ ಲಾಭ ಜಯಚಂದ್ರ ಅವರಿಗಾಗುತ್ತಿತ್ತು. ಆದರೆ ಕೊನೆಯ ನಾಲ್ಕೈದು ದಿನಗಳ ಅವಧಿಯಲ್ಲಿ ಜೆಡಿಎಸ್‍ನ ಬಹಳಷ್ಟು ಮತಗಳು ಬಿಜೆಪಿ ಕಡೆಗೆ ವಾಲಿದವು ಎಂಬುದು ವಾಸ್ತವದ ಚಿತ್ರಣ.
ಕಣದಲ್ಲಿ ಇದ್ದ ಮೂವರು ಒಂದೇ ಸಮುದಾಯಕ್ಕೆ ಸೇರಿದವರು. ಜಯಚಂದ್ರ ಅವರು ಈಗಾಗಲೇ ಅಧಿಕಾರ ಅನುಭವಿಸಿದ್ದಾರೆ. ಡಾ.ಸಿ.ಎಂ.ರಾಜೇಶ್‍ಗೌಡ ಹೊಸಬರು. ಕ್ಷೇತ್ರದಲ್ಲಿ ಈಗಾಗಲೇ ಸಾಮಾಜಿಕ ಕಾರ್ಯಗಳಿಂದ ಪರಿಚಯ ಹೊಂದಿದ್ದಾರೆ, ಅವರನ್ನೂ ಒಮ್ಮೆ ಗೆಲ್ಲಿಸಿ ಬಿಡೋಣ ಎಂಬ ತೀರ್ಮಾನಗಳು ಆ ಸಮುದಾಯದವರಲ್ಲಿ ಬಂದಂತೆ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಕೊನೆಯ ನಾಲ್ಕೈದು ದಿನಗಳು ಕೆಲಸ ಮಾಡಿವೆ. ಇವೆಲ್ಲವುಗಳ ಪರಿಣಾಮ ಎಂಬಂತೆ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಅವರಿಗೆ ಪೂರಕ ವಾತಾವರಣ ಸೃಷ್ಟಿಯಾಯಿತು. ಇದೇ ಮೊದಲ ಬಾರಿಗೆ ಶಿರಾದಲ್ಲಿ ಬಿಜೆಪಿ ಬಾವುಟ ಹಾರಿತು.
ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳಲ್ಲಿ ಒಂದಷ್ಟು ಮತಗಳನ್ನು ಸೆಳೆಯುವಲ್ಲಿಯೂ ಬಿಜೆಪಿ ಯಶಸ್ವಿಯಾಯಿತು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಯಂತಹ ನಿರ್ಧಾರಗಳು, ಹಿಂದುಳಿದ ಸಮುದಾಯಗಳ ಮುಖಂಡರ ಓಲೈಕೆ, ಅವರನ್ನು ಪ್ರಚಾರದಲ್ಲಿ ಬಳಸಿಕೊಳ್ಳುವುದು, ಪ್ರತಿ ಮತಗಟ್ಟೆಯ ನಿಗಾ ವಹಿಸುವುದು, ಅದಕ್ಕಾಗಿಯೇ ಕೆಲವು ಕಾರ್ಯಕರ್ತರನ್ನು ನೇಮಿಸಿದ ತಂತ್ರಗಾರಿಕೆ ಬಿಜೆಪಿ ಪಾಲಿಗೆ ವರವಾಯಿತು. ಜೆಡಿಎಸ್‍ನ ಒಡಕಿನ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾದರೆ ಅದರ ಲಾಭವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಯಾವ ಮುಖಂಡರನ್ನು, ಯಾವ ಕಾರ್ಯಕರ್ತರನ್ನು ಯಾರು ಭೇಟಿ ಮಾಡಬೇಕು ಎಂಬಂತಹ ತಂತ್ರಗಾರಿಕೆಗಳು ಬಿಜೆಪಿಯಲ್ಲಿ ಸಿದ್ಧವಾಗುತ್ತಾ ಹೋದವು. ಅದರಲ್ಲಿ ಯಶಸ್ಸನ್ನೂ ಕಂಡರು. ಈ ತರಹದ ತಂತ್ರಗಾರಿಕೆಗಳು ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ನಡೆಯಲಿಲ್ಲ.
ಜೆಡಿಎಸ್‍ನ ಸಭೆ, ಸಮಾರಂಭಗಳಿಗೆ ದೇವೇಗೌಡರು ಮತ್ತು ಅವರ ಕುಟುಂಬದವರನ್ನು ಹೊರತುಪಡಿಸಿದರೆ ಉಳಿದ ಮುಖಂಡರುಗಳು ಹೆಚ್ಚಾಗಿ ತೊಡಗಿಸಿಕೊಳ್ಳಲಿಲ್ಲ. ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರು, ಮುಖಂಡರು ಶಾಸ್ತ್ರಕ್ಕೆ ಎಂಬಂತೆ ವರಿಷ್ಠರ ಮುಂದೆ ಕುಳಿತು ಬಂದರೆ ವಿನಃ ಪ್ರಚಾರದಲ್ಲಿ ಮುಂದೆ ಬರಲಿಲ್ಲ. ಹೀಗೆ ಜೆಡಿಎಸ್ ಮತಗಳು ಹಂಚಿ ಹೋಗಲಿಕ್ಕೆ ಹಲವಾರು ವಿಷಯಗಳು ಕಾರಣವಾಗುತ್ತಾ ಹೋದವು. ಇದನ್ನೆ ಕಾಯುತ್ತಿದ್ದ ಬಿಜೆಪಿ ತನ್ನ ಗಾಳ ಉರುಳಿಸುತ್ತಾ ಹೋಯಿತು.
ಆರು ಬಾರಿ ಶಾಸಕರಾಗಿ 11ನೆ ಚುನಾವಣೆ ಎದುರಿಸಿದ ಮಾಜಿ ಸಚಿವರೂ ಆದ ಟಿ.ಬಿ.ಜಯಚಂದ್ರ ಅವರಿಗೆ ಈ ಬಾರಿಯೂ ಸೋಲು ಕಡೆ ಘಳಿಗೆಯ ಅನಿವಾರ್ಯವಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಟಿಕೆಟ್ ಪಡೆಯಲು ವಿಫಲರಾಗಿ ಬಿಜೆಪಿ ಬಾವುಟ ಹಿಡಿದ ಡಾ.ಸಿ.ಎಂ.ರಾಜೇಶ್‍ಗೌಡ ಕಣಕ್ಕಿಳಿದ ಮೊದಲ ಸಲವೆ ಬಾವುಟ ಹಾರಿಸಿದರು. ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನಗಳವರೆಗೂ ಎಲ್ಲ ಪಕ್ಷಗಳಿಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರುತ್ತಿದ್ದ ಜನರನ್ನು ನೋಡಿ ಸ್ಥಳೀಯರಿಗೆ ಅಂದಾಜಿನ ಲೆಕ್ಕಾಚಾರಗಳೆ ತಪ್ಪಿ ಹೋಗಿದ್ದವು. ಫಲಿತಾಂಶ ಪ್ರಕಟವಾಗುವುದರೊಂದಿಗೆ ಎಲ್ಲರ ಆತಂಕ, ಲೆಕ್ಕಾಚಾರಗಳಿಗೆ ಇತಿಶ್ರೀ ಹಾಡಲಾಗಿದೆ.
ಟಿ.ಬಿ.ಜಯಚಂದ್ರ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾದರೂ ಹಿಂದಿನಿಂದಲೂ ಆ ಸಮುದಾಯದ ಬೆಂಬಲ ಅಷ್ಟಕ್ಕಷ್ಟೆ. ಹಿಂದುಳಿದ, ಸಾಂಪ್ರದಾಯಿಕ ಮತಗಳು ಶಿರಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ತನ್ನ ಸಮುದಾಯದ ಒಂದಿಷ್ಟು ಮತಗಳೊಂದಿಗೆ ಗೆಲುವು ಸಾಧಿಸುತ್ತಾ ಬಂದಿದ್ದರು. ಜೆಡಿಎಸ್‍ನ ಸಾಂಪ್ರದಾಯಿಕ ಮತಗಳನ್ನು ಬಿಜೆಪಿ ಹೆಚ್ಚು ಸೆಳೆದುಕೊಂಡಿತು. ಹೀಗಾಗಿ ಕಳೆದ ಬಾರಿ ಕೇವಲ 16,959 ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ 74,522 ಮತಗಳನ್ನು ಗಳಿಸುವ ಮೂಲಕ ವಿಜಯದ ಪತಾಕೆ ಹಾರಿಸಿತು.