ಶಿರಾ :
ಕಳೆದ ಒಂದು ತಿಂಗಳಿಂದಲೂ ಇಡೀ ಶಿರಾ ಕ್ಷೇತ್ರದ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರಲ್ಲಿದ್ದ ಉಸಿರುಗಟ್ಟುವಂತಹ ವಾತಾವರಣವೀಗ ಕರಗಿದ ಮಂಜುಗಡ್ಡೆಯಂತಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾದು ಕೆಂಡವಾಗಿದ್ದ ಚುನಾವಣಾ ರಣರಂಗವೀಗ ಮತದಾನ ಮುಗಿದ ನಂತರ ಸೈನಿಕರಲ್ಲದ ಯುದ್ಧಾಂಗಣದಂತೆ ಬರಿದಾಗಿ ಬಿಟ್ಟಿದೆ.
ಬರದ ನೆಲದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿಧಾನಸಭಾ ಚುನಾವಣೆಗಳಿಗಿಂತಲೂ ಆಕಸ್ಮಿಕವಾಗಿ ಎದುರಾದ ಉಪ ಚುನಾವಣೆಯ ವರಸೆಯು ಹೀಗೂ ಇರುತ್ತದೆಯಾ ಎಂದು ಮತದಾರ ಅಚ್ಚರಿಪಟ್ಟಿದ್ದೂ ಉಂಟು. ಗರಿ ಗರಿ ಹೊಳೆಯುವ ಹಾಗೂ ಚೆನ್ನಾಗಿ ಇಸ್ತ್ರಿ ಮಾಡಿದ ಬಿಳಿವಸ್ತ್ರಗಳ ರಾಜಕಾರಣಿಗಳ ಹೊಸ ಹಾಗೂ ಹಳಸಲು ಮುಖಗಳನ್ನು ಕಂಡು ರೋಸಿ ಹೋಗಿದ್ದ ಮತದಾರರೀಗ ಮತ ಚಲಾಯಿಸಿ ಹೃದಯದ ಭಾರವನ್ನು ಕೊಂಚ ಇಳಿಸಿಕೊಂಡಿದ್ದಾರೆ.
ಚುನಾವಣೆಗೂ ಮುನ್ನವೆ ನಗರದ ವಿವಿಧ ವಸತಿಗೃಹಗಳೆಲ್ಲವೂ ಭರ್ತಿಯಾಗಿ ತರಾವರಿ ರಾಜಕಾರಣಿಗಳು, ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಚುನಾವಣೆಗಾಗಿ ಬಂದಿದ್ದ ಧುರೀಣರು ಜಾಗ ಖಾಲಿ ಮಾಡಿದ್ದು, ವಸತಿ ಗೃಹಗಳು ಬಣಗುಡುತ್ತಿವೆ. ಕಳೆದ ಒಂದು ತಿಂಗಳಿಂದಲೂ ನಗರದಲ್ಲಿ ವಿವಿಧ ಅಂಗಡಿಗಳ ಪುಟ್ಟ ಪುಟ್ಟ ವ್ಯಾಪಾರಸ್ಥರು ವ್ಯವಹಾರದಲ್ಲಿ ಒಂದಿಷ್ಟು ಚುರುಕು ಕಂಡಿದ್ದು ಬುಧವಾರದಿಂದ ಶಿರಾ ನಗರವೀಗ ಒಂದಿಷ್ಟು ಬಣಗುಡುತ್ತಿದೆ.
ಇತ್ತ ಮತದಾರರರು ಚಲಾಯಿಸಿದ ಮತಗಳು ಇ.ವಿ.ಎಂ.ನಲ್ಲಿ ಭದ್ರವಾಗಿ ಅವಿತುಕೊಂಡ ಬೆನ್ನಲ್ಲಿಯೇ ಕ್ಷೇತ್ರದ ಅಭ್ಯರ್ಥಿಗಳಲ್ಲಿ ನಿಲ್ಲದ ಆತಂಕ ಶುರುವಾಗಿದೆ. ಚುನಾವಣೆಗೂ ಮುನ್ನ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಗಳಲ್ಲಿ ತರಾವರಿ ಆತಂಕಗಳೇ ಇದ್ದವು. ನಾಮಪತ್ರ ಸಲ್ಲಿಕೆ ನಂತರ ನಡೆದ ಅಬ್ಬರದ ಪ್ರಚಾರದ ವೇಳೆಯಲ್ಲಿ ಜನರ ದಂಡನ್ನು ಕೂಡಿ ಹಾಕಲು ನಡೆಸಿದ ಪೈಪೋಟಿ, ದೂರದ ಊರುಗಳಿಂದ ಮುಖಂಡರನ್ನು ಕರೆಯಿಸಿ ಮತ ಯಾಚನೆ ನಡೆಸಿದ ಪರಿಯೂ ಕೂಡ ಅಚ್ಚರಿ ಹುಟ್ಟಿಸುವಂತಿತ್ತು.
ವಿವಿಧ ಪಕ್ಷದ ರಾಜಕಾರಣಿಗಳು ಮತದಾರರಿಗೆ ಮತ ಸೆಳೆಯಲು ನೀಡುತ್ತಿದ್ದ ಝಣ ಝಣ ಕಾಂಚಾಣದ ಸದ್ದು ಕ್ಷೇತ್ರದಾದ್ಯಂತ ವ್ಯಾಪಕವಾಗಿ ಸದ್ದು ಮಾಡಿತು. ಈ ಹಿಂದೆ ಎಂದೂ ಕೂಡ ಕೈ ತುಂಬಾ ಮತಭಿಕ್ಷೆಗಾಗಿ ಅಭ್ಯರ್ಥಿಗಳ ಬೆಂಬಲಿಗರಿಂದ ಚಿಕ್ಕಾಸನ್ನೂ ಕಾಣದ ಬಹುತೇಕ ಮತದಾರರು, ಕಾಂಚಾಣದ ಸದ್ದಿಗೆ ಬೆಚ್ಚಿ ಬಿದ್ದಿದ್ದಾರೆ. ಗರಿಗರಿ ನೋಟುಗಳ ಹಂಚಿಕೆಯ ಅಬ್ಬರದ ಮುಂದೆ ಕೆಲ ಅಭ್ಯರ್ಥಿಗಳ ಮೈ ನಡುಗಿದ್ದಷ್ಟೇ ಅಲ್ಲದೆ, ಇಂತಹ ಚುನಾವಣೆಯನ್ನು ನಾವೆಂದೂ ಕಂಡಿಲ್ಲವೆಂದು ಹಿರಿಯರು ಶಪಿಸಿದ್ದೂ ಉಂಟು.
ಇದೆಲ್ಲಕ್ಕೂ ಮಿಗಿಲಾಗಿ ಚುನಾವಣೆಯು ಇನ್ನೇನು ಒಂದೆರಡು ದಿನಗಳಲ್ಲಿ ಸಮೀಪಿಸಿ ಬಿಟ್ಟಿತು ಅನ್ನುವಷ್ಟರಲ್ಲಿ ಕ್ಷೇತ್ರದ ಮತದಾರರನ್ನು ಓಲೈಸಲು ನಡೆದಂತಹ ಕಸರತ್ತುಗಳ ನಡುವೆಯೂ ಪಕ್ಷದ ಅಭ್ಯರ್ಥಿಗಳ ಮೈ ಮೇಲಿನ ಬೆವರನ್ನು ಈ ಚುನಾವಣೆ ಇಳಿಸಿಬಿಟ್ಟಿದೆ. ಈ ಕ್ಷೇತ್ರದಲ್ಲಿ ಬಹಿರಂಗ ಸಭೆಗಳಲ್ಲಿ ಜನರ ದಂಡನ್ನು ತಂದು ತೋರಿಸಿದರೆ ಹೆಚ್ಚು ಮತ ಗಿಟ್ಟಿಸಿಕೊಳ್ಳಲು ಸಾಧ್ಯವೆಂದು ಅರಿತ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆಯನ್ನೂ ಗಾಳಿಗೆ ತೂರಿ ಸಹಸ್ರ ಸಹಸ್ರ ಜನರನ್ನು ಕರೆ ತಂದು ಅಬ್ಬರವಿಟ್ಟಿದ್ದು ಸರಿಯಷ್ಟೆ.
ವಿವಿಧ ಪಕ್ಷಗಳ ನಿರಂತರವಾದ ರ್ಯಾಲಿಗಳು, ಬಹಿರಂಗ ಸಭೆಗಳು, ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳುವಿಕೆ ಸೇರಿದಂತೆ ವಿವಿಧ ಜಾತಿ, ಜನಾಂಗಗಳ, ಸಮುದಾಯಗಳ ಮತ ಸೆಳೆಯಲು ನಡೆಸಿದ ತಂತ್ರಮಂತ್ರಗಳೆಲ್ಲವೂ ತೆರೆಮರೆಗೆ ಸರಿದು ಇದೀಗ ಅಭ್ಯರ್ಥಿಗಳ ಹಾಗೂ ಆಯಾ ಪಕ್ಷಗಳ ಮುಖಂಡರಲ್ಲಿನ ಆತಂಕವಂತೂ ಇಮ್ಮಡಿಗೊಂಡಿದೆ.
ಮತದಾನ ಮುಗಿದ ಮಾರನೆಯ ದಿನದಿಂದಲೂ ಅಭ್ಯರ್ಥಿಗಳ ನಡುವಿನ ಪೈಪೋಟಿ ಹಾಗೂ ಸೋಲು-ಗೆಲುವಿನ ಲೆಕ್ಕಾಚಾರಗಳು ಭರದಿಂದ ನಡೆಯುತ್ತಿವೆ. ನಗರದ ಹಾಗೂ ಗ್ರಾಮೀಣ ಪ್ರದೇಶದ ಟೀ ಅಂಗಡಿಗಳು, ಹೇರ್‍ಸೆಲೂನ್‍ಗಳು, ಹಳ್ಳಿಕಟ್ಟೆಗಳು, ಶಾಲಾ ಮೈದಾನಗಳು ಸೇರಿದಂತೆ ಗಿಡ-ಮರಗಳ ನೆರಳಲ್ಲಿ ಕೂತು ಚುನಾವಣೆಯ ಫಲಿತಾಂಶ ಏನಾಗಬಹುದೆಂಬ ಲೆಕ್ಕಾಚಾರಗಳು ಬಿರುಸಿನಿಂದಲೇ ನಡೆಯುತ್ತಿವೆ.
ಕಣದಲ್ಲಿ ಉಳಿದು ಅಬ್ಬರದ ಪ್ರಚಾರ ನಡೆಸಿದ ಅಭ್ಯರ್ಥಿಗಳ ಮುಂದೆ ಕೂತು ಆಯಾ ಪಕ್ಷಗಳ ಕೆಲ ಕಾರ್ಯಕರ್ತರು ಬೂತ್‍ಗಳಲ್ಲಿ ನಡೆದ ಶೇಕಡಾವಾರು ಫಲಿತಾಂಶದ ಅಂದಾಜನ್ನು ಅಭ್ಯರ್ಥಿಗಳಿಗೆ ಹೇಳಿ, ಕೆಲವರು ತಮ್ಮ ತಮ್ಮ ಅಭ್ಯರ್ಥಿಗಳ ಕಿವಿಗೆ ಹೂ ಮುಡಿಸುತ್ತಿದ್ದರೆ, ಮತ್ತಲವರು ಅಭ್ಯರ್ಥಿಗಳ ತಲೆಗೆ ಹುಳ ಬಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಸದರಿ ಉಪ ಚುನಾವಣಾ ಕಣದಲ್ಲಿ ಅತ್ಯಂತ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಗಳಲ್ಲಿ ನೇರನೇರವಾದ ಹಣಾಹಣಿ ನಡೆದಿದ್ದರಿಂದ ಸದರಿ ಚುನಾವಣೆಯ ಫಲಿತಾಂಶದ ಬಗ್ಗೆ ಮತದಾರರು ಹಾಗೂ ಮುಖಂಡರುಗಳು ಕೂಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆಯೇ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡುತ್ತಿದ್ದಾರೆ.
ಸ್ವಾಭಿಮಾನ, ಅನುಕಂಪ ಸೇರಿದಂತೆ ಉತ್ತಮ ಅಭ್ಯರ್ಥಿಯ ಆಯ್ಕೆಗೆ ಪ್ರತಿಯೊಂದು ಚುನಾವಣೆಯಲ್ಲೂ ಬುದ್ದಿವಂತಿಕೆಯಿಂದಲೇ ಮತದಾನ ಮಾಡುತ್ತಾ ಬಂದಿದ್ದ ಕ್ಷೇತ್ರದ ಮತದಾರರು ಈ ಉಪ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲವನ್ನೂ ಉಂಟು ಮಾಡಿಕೊಂಡ ಪರಿಣಾಮ ವಿಮರ್ಶಕರಿಗೂ, ರಾಜಕೀಯ ಲೆಕ್ಕಾಚಾರಸ್ಥರಿಗೂ ಚುನಾವಣೆಯ ಫಲಿತಾಂಶದ ಬಗ್ಗೆ ಗೊಂದಲಗಳ ಹುಳುಗಳು ಮಿದುಳನ್ನು ಹೊಕ್ಕಿವೆ.
ಶಿರಾ ಕ್ಷೇತ್ರದಲ್ಲಿ ಈವರೆಗೆ ಆಯ್ಕೆಗೊಂಡಿರುವುದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಗಳು ಮಾತ್ರ. ಈ ಕ್ಷೇತ್ರದಲ್ಲಿ ಐತಿಹಾಸಿಕ ರಾಜಕೀಯ ವಿಶ್ಲೇಷಣೆಯನ್ನು ಗಮನಿಸಿದರೆ ಬಿ.ಜೆ.ಪಿ. ಪಕ್ಷ ಯಾವ ಚುನಾವಣೆಯಲ್ಲೂ ಆಯ್ಕೆಗೊಂಡ ಅಭ್ಯರ್ಥಿಯ ಸನಿಹಕ್ಕೂ ಕೂಡ ಬಂದಿಲ್ಲ. ವ್ಯಾಪಕ ಅಂತರದ ಮತಗಳಿಂದಲೇ ಈ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳು ಪರಾಜಯಗೊಳ್ಳುತ್ತಲೇ ಬಂದ ಪರಿಣಾಮ ಈ ಕ್ಷೇತ್ರದಲ್ಲಿ ಈವರೆಗೆ ಬಿ.ಜೆ.ಪಿ. ಪಕ್ಷಕ್ಕೆ ನೆಲೆಯೇ ಇಲ್ಲದಂತಾಗಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಮತದಾರರ ಹಾಗೂ ಕಾರ್ಯಕರ್ತರ ನಿರೀಕ್ಷೆಯನ್ನು ಗಮನಿಸಿದರೆ ಈ ಬಾರಿಯ ಚುನಾವಣೆ ಬಿ.ಜೆ.ಪಿ. ಪಕ್ಷದತ್ತ ವಾಲಬಹುದೆಂಬ ವ್ಯಾಪಕ ವಾತಾವರಣವಿದ್ದು, ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡಿದೆ.
ಈ ಎಲ್ಲಾ ಆತಂಕ, ಅನುಮಾನಗಳ ನಡುವೆಯೂ ಈಗಾಗಲೇ ಬೆಟ್ಟಿಂಗ್ ಆಟ ಶುರುವಾಗಿಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿ.ಜೆ.ಪಿ. ಆಯ್ಕೆ ಖಚಿತ ಎಂದು ತೀರ್ಮಾನಕ್ಕೆ ಬಂದು ಆ ಪಕ್ಷದ ಕಾರ್ಯಕರ್ತ-ಮುಖಂಡರು ಒಂದು ಕಡೆ ಗೆಲುವಿನ ನಗೆ ಬೀರುತ್ತಿದ್ದರೆ, ಇತ್ತ ಯಾವುದೇ ಕಾರಣಕ್ಕೂ ಬಿ.ಜೆ.ಪಿ. ಪಕ್ಷದ ಆಯ್ಕೆ ಸಾಧ್ಯವಿಲ್ಲವೆಂದು ವಾದಿಸುವ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ಧುರೀಣರು ಹಣದ ಅಮಿಷದ ಆಟ ಈ ಕ್ಷೇತ್ರದಲ್ಲಿ ನಡೆಯದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ನಗರವೂ ಸೇರಿದಂತೆ ಗ್ರಾಮೀಣ ಭಾಗದ ಪಕ್ಷಗಳ ಕಾರ್ಯಕರ್ತರು ಹಣವನ್ನು ಪಣಕ್ಕಿಟ್ಟು ಸೋಲು-ಗೆಲುವಿಗೆ ಬಾಜಿ ಕಟ್ಟಲು ಆರಂಭಿಸಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿ, ಗೌಡಗೆರೆ, ಕಳ್ಳಂಬೆಳ್ಳ, ಹುಲಿಕುಂಟೆ ಭಾಗದಲ್ಲಿ ನಡೆದಿರಬಹುದಾದ ಆಯಾ ಪಕ್ಷಗಳ ಬೆಂಬಲಿಗರ ಸಲಹೆ ಪಡೆದುಕೊಂಡು ಕೆಲವರು ಬೆಟ್ಟಿಂಗ್ ಕಟ್ಟಲು ತೀರ್ಮಾನ ಕೈಗೊಂಡಿದ್ದಾರೆ.
ಬಿ.ಜೆ.ಪಿ. ಪಕ್ಷದ ಗೆಲುವಿನ ಪರವಾಗಿ ಬಾಜಿ ಕಟ್ಟುವ ಮಂದಿಯೇ ಹೆಚ್ಚಾಗಿದ್ದು, ಬೂತ್ ಮಟ್ಟದಲ್ಲಿ ನಡೆದಿರಬಹುದಾದ ವೋಟಿಂಗ್‍ನ ಆಧಾರದ ಮೇಲೂ ಕೆಲವರು ಬಾಜಿ ಕಟ್ಟುವ ತೀರ್ಮಾನ ಕೈಗೊಳ್ಳುತ್ತಿರುವುದು ಸೋಜಿಗದ ಸಂಗತಿಯೂ ಆಗಿದೆ. ಮತದಾರರಿಗೆ ಹಣದ ಆಮಿಷ ತೋರಿಸುವಲ್ಲಿ ಯಾವ ಪಕ್ಷಗಳು ಕೂಡ ಸೋತಿಲ್ಲವಾದರೂ, ಹಣ ಹಂಚಿಕೆಯ ಲೆಕ್ಕಾಚಾರದಲ್ಲಿ ಹೆಚ್ಚು-ಕಡಿಮೆಯಾಗಿದ್ದರಿಂದ ಸೋಲು-ಗೆಲುವುಗಳ ಲೆಕ್ಕಾಚಾರಗಳು ಕ್ಷೇತ್ರದಲ್ಲಿ ಸರಸರನೆ ಓಡಾಡಿಕೊಂಡಿದ್ದು, ನ.10 ರಂದು ಮತ ಯಂತ್ರಗಳಲ್ಲಿನ ಗುಟ್ಟು ರಟ್ಟಾದಾಗ ಎಲ್ಲವೂ ಬಹಿರಂಗಗೊಳ್ಳಲಿದೆ.
“ವಿವಿಧ ಪಕ್ಷದ ರಾಜಕಾರಣಿಗಳು ಮತದಾರರಿಗೆ ಮತ ಸೆಳೆಯಲು ನೀಡುತ್ತಿದ್ದ ಝಣ ಝಣ ಕಾಂಚಾಣದ ಸದ್ದು ಕ್ಷೇತ್ರದಾದ್ಯಂತ ವ್ಯಾಪಕವಾಗಿ ಸದ್ದು ಮಾಡಿತು. ಈ ಹಿಂದೆ ಎಂದೂ ಕೂಡ ಕೈ ತುಂಬಾ ಮತಭಿಕ್ಷೆಗಾಗಿ ಅಭ್ಯರ್ಥಿಗಳ ಬೆಂಬಲಿಗರಿಂದ ಚಿಕ್ಕಾಸನ್ನೂ ಕಾಣದ ಬಹುತೇಕ ಮತದಾರರು ಕಾಂಚಾಣದ ಸದ್ದಿಗೆ ಬೆಚ್ಚಿ ಬಿದ್ದಿದ್ದಾರೆ. ಗರಿಗರಿ ನೋಟುಗಳ ಹಂಚಿಕೆಯ ಅಬ್ಬರದ ಮುಂದೆ ಕೆಲ ಅಭ್ಯರ್ಥಿಗಳ ಮೈ ನಡುಗಿದ್ದಷ್ಟೇ ಅಲ್ಲದೆ, ಇಂತಹ ಚುನಾವಣೆಯನ್ನು ನಾವೆಂದೂ ಕಂಡಿಲ್ಲವೆಂದು ಹಿರಿಯರು ಶಪಿಸಿದ್ದೂ ಉಂಟು.”
“ಎಲ್ಲಾ ಆತಂಕ, ಅನುಮಾನಗಳ ನಡುವೆಯೂ ಈಗಾಗಲೇ ಬೆಟ್ಟಿಂಗ್ ಆಟ ಶುರುವಾಗಿಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿ.ಜೆ.ಪಿ. ಆಯ್ಕೆ ಖಚಿತ ಎಂದು ತೀರ್ಮಾನಕ್ಕೆ ಬಂದು, ಆ ಪಕ್ಷದ ಕಾರ್ಯಕರ್ತ-ಮುಖಂಡರು ಒಂದು ಕಡೆ ಗೆಲುವಿನ ನಗೆ ಬೀರುತ್ತಿದ್ದರೆ ಇತ್ತ ಯಾವುದೇ ಕಾರಣಕ್ಕೂ ಬಿ.ಜೆ.ಪಿ. ಪಕ್ಷದ ಆಯ್ಕೆ ಸಾಧ್ಯವಿಲ್ಲವೆಂದು ವಾದಿಸುವ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ಧುರೀಣರು ಹಣದ ಅಮಿಷದ ಆಟ ಈ ಕ್ಷೇತ್ರದಲ್ಲಿ ನಡೆಯದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.”
ಕಣದಲ್ಲಿ ಉಳಿದು ಅಬ್ಬರದ ಪ್ರಚಾರ ನಡೆಸಿದ ಅಭ್ಯರ್ಥಿಗಳ ಮುಂದೆ ಕೂತು ಆಯಾ ಪಕ್ಷಗಳ ಕೆಲ ಕಾರ್ಯಕರ್ತರು ಬೂತ್‍ಗಳಲ್ಲಿ ನಡೆದ ಶೇಕಡಾವಾರು ಫಲಿತಾಂಶದ ಅಂದಾಜನ್ನು ಅಭ್ಯರ್ಥಿಗಳಿಗೆ ಹೇಳಿ ಕೆಲವರು ತಮ್ಮ ತಮ್ಮ ಅಭ್ಯರ್ಥಿಗಳ ಕಿವಿಗೆ ಹೂ ಮುಡಿಸುತ್ತಿದ್ದರೆ, ಮತ್ತಲವರು ಅಭ್ಯರ್ಥಿಗಳ ತಲೆಗೆ ಹುಳ ಬಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ.