ಶಿರಾ ಚುನಾವಣೆ : ನೀರಿನಂತೆ ಕರಗಿಹೋಗಿವೆ ಕೋಟ್ಯಂತರ ರೂ.ಗಳ ನೋಟಿನ ಕಂತೆ!

 
ತುಮಕೂರು : 

ಸಾಂದರ್ಭಿಕ ಚಿತ್ರ

      ಹಾಲಿ ವಿಧಾನ ಸಭೆಯ ಬಾಕಿ ಇರುವ ಎರಡೂವರೆ ವರ್ಷಗಳ ಅವಧಿಗೆ ನಡೆದ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಆಗಿರುವ ಖರ್ಚು-ವೆಚ್ಚಗಳು ಬೆಚ್ಚಿ ಬೀಳಿಸುತ್ತ್ತಿವೆ. ಈ ಹಿಂದಿನ ಎಲ್ಲಾ ಚುನಾವಣೆಗಳನ್ನು ಮೀರಿಸಿದ ದಾಖಲೆಗೆ ಈ ಚುನಾವಣೆ ಸೇರಿ ಹೋಗಿದೆ. ಮತದಾನದಲ್ಲಿ ದಾಖಲೆ ಬರೆದಂತೆ, ಹಣದ ಹೊಳೆ ಹರಿಸುವುದರಲ್ಲಿಯೂ ಈ ಚುನಾವಣೆ ಗಮನ ಸೆಳೆದಿದೆ.

      ಉಪ ಚುನಾವಣೆಗೆ ಆಯೋಗವು ಸೆಪ್ಟೆಂಬರ್ 29 ರಂದು ವೇಳಾಪಟ್ಟಿ ಪ್ರಕಟಿಸಿತು. ಅ.9 ರಂದು ಅಧಿಸೂಚನೆ ಹೊರಡಿಸಲಾಯಿತು. ಅಂದಿನಿಂದ (ಅ.9) ನವೆಂಬರ್ 3 ರವರೆಗೆ ಶಿರಾ ಕ್ಷೇತ್ರದಲ್ಲಿ ಚುನಾವಣೆಗಾಗಿ ಆಗಿರುವ ಖರ್ಚು ಸರಾಸರಿ 50 ಕೋಟಿ ರೂ.ಗಳನ್ನು ದಾಟಿದೆ. ಆದರೆ ಲೆಕ್ಕಕ್ಕೆ ಸಿಗುವುದು ಮಾತ್ರ ಬೆರಳೆಣಿಕೆಯ ಕೋಟಿ ರೂ.ಗಳ ವೆಚ್ಚ ಮಾತ್ರ.

      ನಾಮಪತ್ರ ಸಲ್ಲಿಕೆಯ ದಿನದಂದು ಜನ ಸೇರಲು ವ್ಯಯಿಸಲಾದ ವೆಚ್ಚದಿಂದ ಹಿಡಿದು ಮತದಾನದ ದಿನದ ಬೂತ್ ಮಟ್ಟದ ಕಾರ್ಯಕರ್ತರಿಗೆ ಪಕ್ಷಗಳು ಮಾಡಿರುವ ವೆಚ್ಚವೆ ಸರಾಸರಿ ಇಷ್ಟಾದರೆ ಇನ್ನು ಉಳಿದ ಸರ್ಕಾರಿ ವೆಚ್ಚಗಳು ಎಷ್ಟಾಗಿರಬಹುದು?

      ಖರ್ಚು-ವೆಚ್ಚದಲ್ಲಿ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ. ಕೆಲವು ಪಕ್ಷಗಳು ಅತಿಯಾದ ನೋಟು ಚಲಾವಣೆ ಮಾಡಿದ್ದರೆ, ಇನ್ನು ಕೆಲವು ಪಕ್ಷಗಳು ಕಡಿಮೆ ಹಣ ಖರ್ಚು ಮಾಡಿರಬಹುದು. ಆದರೆ ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಎಲ್ಲ ಪಕ್ಷಗಳಿಗೂ ಈ ವೆಚ್ಚ ಮುಂದಿಗೂ ಸರಿಸಾಟಿಯಾಗಲಾರದು. ಬೇರೆ ಪಕ್ಷದಲ್ಲಿದ್ದವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ / ಬರಮಾಡಿಕೊಳ್ಳುವುದರಿಂದ ಹಿಡಿದು, ಆತನ ಹಿಂದಿರುವ ಕಾರ್ಯಕರ್ತರನ್ನು ಸಮಾಧಾನಪಡಿಸುವುದು, ಮುಖಂಡರನ್ನು ಓಲೈಸುವುದು, ಸಭೆ, ಸಮಾರಂಭಗಳಿಗೆ ಆಹ್ವಾನಿಸುವುದು, ಅವುಗಳ ಖರ್ಚು-ವೆಚ್ಚ, ಕಾರ್ಯಕರ್ತರಿಗೆ ಹಣ ಇವೆಲ್ಲವನ್ನು ಗಣನೆಗೆ ತೆಗೆದುಕೊಳ್ಳುತ್ತಾ ಹೋದರೆ ಕೋಟಿ ಕೋಟಿ ರೂ.ಗಳು ಪ್ರತಿದಿನ ತಮಗರಿವಿಲ್ಲದಂತೆಯೇ ಕೈಬಿಟ್ಟು ಹೋಗಿವೆ.

    ಮತದಾರರಿಗೆ ಹಂಚಿರುವ ಹಣ:

      ಮೂರು ಪ್ರಮುಖ ಪಕ್ಷಗಳೂ ಮತದಾರರಿಗೆ ಹಣ ಹಂಚಿವೆ. ಒಂದು ಪಕ್ಷವು ಓರ್ವ ಮತದಾgನಿಗೆ 1 ಸಾವಿರ ರೂ. ಹಂಚಿದ್ದರೆ ಮತ್ತೊಂದು ಪಕ್ಷವು 500 ರಿಂದ 1000 ರೂ.ಗಳವರೆಗೆ, ಮಗದೊಂದು ಪಕ್ಷ 500 ರೂ. ಹೀಗೆ ಕ್ಷೇತ್ರದಲ್ಲಿ ಹಣ ಹಂಚಿಕೆಯಾಗಿರುವ ಬಗ್ಗೆ ಒಂದು ಸಾಧಾರಣ ಲೆಕ್ಕಾಚಾರವಿದೆ.

      ಕ್ಷೇತ್ರದಲ್ಲಿ ಒಟ್ಟು ಮತದಾರರು 2,15,725 ಇದ್ದಾರೆ. ಪ್ರತಿ ಮತದಾರನಿಗೆ 3 ಪಕ್ಷಗಳಿಂದ ಕನಿಷ್ಠವೆಂದರೂ 2000 ರೂ.ಗಳಿಗೂ ಹೆಚ್ಚು ಹಣ ತಲುಪಿರುವ ಲೆಕ್ಕಾಚಾರಗಳಿವೆ. ಇದು ಮತದಾರರಿಗೆ ಪಕ್ಷಗಳಿಂದ ಹಂಚಿಕೆಯಾಗಿರುವ ಹಣವಾದರೆ, ಇತರೆ ಖರ್ಚುಗಳು ಲೆಕ್ಕವಿಲ್ಲದಷ್ಟಿವೆ.

      ನಾಮಪತ್ರ ಸಲ್ಲಿಕೆಯ ದಿನದಿಂದ ಆರಂಭಗೊಂಡು ಬಹಿರಂಗ ಪ್ರಚಾರ ಅಂತ್ಯವಾಗುವವರೆಗೂ ಅಭ್ಯರ್ಥಿಗಳು ತನ್ನ ಹಿಂದೆ ಕಾರ್ಯಕರ್ತರ ಪಡೆಯನ್ನೆ ಹೊಂದಿರಬೇಕು. ಇದಕ್ಕಾಗಿ ಹೋಬಳಿವಾರು ಕಾರ್ಯಕರ್ತರ ಪಡೆಯನ್ನು ಗುರುತಿಸಲಾಗುತ್ತದೆ. ಇವರಿಗೆಲ್ಲ ವಾಹನದ ವ್ಯವಸ್ಥೆ ಮಾಡಬೇಕು. ಬೆಳಗಿನ ಕಾಫಿ, ಟೀ, ವ್ಯವಸ್ಥೆಯಿಂದ ರಾತ್ರಿ ಭೋಜನದವರೆಗೂ ವ್ಯವಸ್ಥೆಯಾಗಬೇಕು. ಕಾರ್ಯಕರ್ತರನ್ನು ಹಿಡಿದಿಟ್ಟುಕೊಂಡು ವ್ಯವಸ್ಥಿತವಾಗಿ ಪ್ರಚಾರದ ಕೆಲಸ ಮಾಡುವುದೆ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಒಂದು ಹರಸಾಹಸದ ಕಾಯಕ. ಈ ವಿಷಯದಲ್ಲಿ ಸ್ವಲ್ಪ ಎಡವಟ್ಟಾದರೂ ಮತ್ತೊಂದು ಪಕ್ಷದತ್ತ ಜಿಗಿಯುವ ಆತಂಕವು ಇದ್ದೇ ಇರುತ್ತದೆ. ಇಲ್ಲವೇ ನಿಷ್ಕ್ರಿಯರಾಗಿ ಬಿಡುತ್ತಾರೆಂಬ ಭಯ.ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸಂಭಾಳಿಸುವುದು ಒಂದು ಸಾಹಸದ ಕಲೆ. ಹಾಗೆ ನೋಡಿದರೆ ಪ್ರತಿದಿನ ಓರ್ವ ಕಾರ್ಯಕರ್ತನಿಗೆ ಎಲ್ಲ ಖರ್ಚು ವೆಚ್ಚಗಳು ಸೇರಿ 4000 ದಿಂದ 5000 ರೂ.ಗಳಾಗಬಹುದೆಂಬ ಅಂದಾಜಿದೆ.

      ಚುನಾವಣೆ ಮುಗಿಯುವ ವೇಳೆಗೆ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿ, ಪ್ರಭಾವಿ ಸಚಿವರುಗಳು, ಶಾಸಕರು, ಪಕ್ಷಗಳ ಮುಖಂಡರು ಬಂದು ಹೋಗಿದ್ದಾರೆ. ಇವರು ಬಂದು ಹೋಗುವ ಕಡೆಗಳಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಲಾಗಿದೆ. ಓರ್ವ ಮುಖಂಡ ಅಥವಾ ಪಕ್ಷದ ಪ್ರಮುಖರು ಪ್ರಚಾರದ ಸಭೆಗಳಿಗೆ ಬಂದು ಹೋಗುತ್ತಾರೆಂದರೆ ಅವರಿಗೆ ತಕ್ಕುದಾದ ರೀತಿಯಲ್ಲಿಯೇ ಜನರನ್ನು ಸೇರಿಸಬೇಕು. ಅಷ್ಟು ಸುಲಭವಾಗಿ ಪ್ರಚಾರ ಸಭೆಗಳಿಗೆ ಜನ ಸೇರಲಾರರು. ಅವರಿಗೆ ವಾಹನದ ವ್ಯವಸ್ಥೆಯಿಂದ ಹಿಡಿದು, ವಾಪಸ್ ಹೋಗುವಾಗ ಪಾನಕದ ವ್ಯವಸ್ಥೆ ಮಾಡಿ, ಜೇಬಿಗೆ ಇಂತಿಷ್ಟು ಎಂದು ನೀಡಬೇಕು. ಇದೆಲ್ಲದಕ್ಕೂ ಪಂಚಾಯತಿವಾರು, ಗ್ರಾಮವಾರು ವ್ಯವಸ್ಥೆಯಾಗಿರುತ್ತದೆ.

      ಒಂದು ದಿನದ ಪ್ರಚಾರ ಸಭೆಗೆ ಓರ್ವ ಮುಖ್ಯಮಂತ್ರಿ ಅಥವಾ ಮಾಜಿ ಮುಖ್ಯಮಂತ್ರಿಗಳು ಬಂದು ಹೋಗುತ್ತಾರೆಂದರೆ ಅವರ ಹಿಂದೆ ಬಂದು ಹೋಗುವವರಿಂದ ಹಿಡಿದು, ಗ್ರಾಮ ಮಟ್ಟದ ಮತದಾರರನ್ನು ಸಂತೈಸುವುದು ಪಕ್ಷದ ಅಥವಾ ಅದರ ವ್ಯವಸ್ಥೆ ಮಾಡಿರುವವರ ಜವಾಬ್ದಾರಿ. ವಾಹನಗಳ ವೆಚ್ಚ, ದ್ವಿಚಕ್ರ ವಾಹನದಲ್ಲಿ ಬರುವವರಿಗೆ ಪೆಟ್ರೋಲ್, ಕೈಗೆ ಕಾಸು ಹೀಗೆ ನಾನಾ ರೀತಿಯ ವೆಚ್ಚಗಳು ನೀರಿನಂತೆ ವ್ಯಯವಾಗಿ ಹೋಗುತ್ತದೆ. ಶಿರಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಾದಾಗಿನಿಂದ ಬಹಿರಂಗ ಪ್ರಚಾರದ ಅಂತ್ಯವಾಗುವ ಅಂತಿಮ ದಿನ ನವೆಂಬರ್ 1 ರವರೆಗೂ ಘಟಾನುಘಟಿ ನಾಯಕರುಗಳು ಬಂದು ಹೋದರು. ಇದಕ್ಕಾಗಿ ಸಾಧಾರಣ ಮೊತ್ತದ ಹಣ ಸಾಕಾಗದು.

      ಮತಗಟ್ಟೆ ಖರ್ಚು:

      ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 330 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಎಲ್ಲ ಮತಗಟ್ಟೆಗಳಿಗೂ ಪಕ್ಷವಾರು ವ್ಯವಸ್ಥೆಯಾಗಬೇಕು. ಮತದಾನ ಕೇಂದ್ರಕ್ಕೆ ನಿಯೋಜಿಸುವ ಪಕ್ಷದ ಏಜೆಂಟ್, ಹೊರಗಡೆ ಪಕ್ಷದ ಕಾರ್ಯಕರ್ತರ ಗುಂಪು, ಶಾಮಿಯಾನ, ಬಂದು-ಹೋಗುವವರನ್ನು ವಿಚಾರಿಸಿಕೊಳ್ಳುವ ಕಾರ್ಯಕರ್ತರಾದಿಯಾಗಿ ಇವರೆಲ್ಲರಿಗೆ ಚಹಾ, ಊಟೋಪಚಾರದ ವ್ಯವಸ್ಥೆಯಾಗಬೇಕು. ಇದಕ್ಕಾಗಿಯೇ ಪಕ್ಷಗಳು ಬೂತ್ ಖರ್ಚು ಎಂದು ನಿಗದಿಪಡಿಸಿರುತ್ತವೆ. ಮತದಾನದ ಹಿಂದಿನ ಎರಡು ದಿನಗಳಲ್ಲಿಯೇ ಬೂತ್‍ವಾರು ಜವಾಬ್ದಾರಿ ಹಂಚಿಕೆ ಮಾಡಲಾಗಿರುತ್ತದೆ. ಹಿಂದೆಲ್ಲ 10 ರಿಂದ 15 ಸಾವಿರ ರೂ.ಗಳಲ್ಲಿ ಬೂತ್‍ವೆಚ್ಚ ಮುಗಿದು ಹೋಗುತ್ತಿತ್ತು. ಆದರೆ ಈ ಬಾರಿ 15 ಸಾವಿರ ರೂ.ಗಳಿಂದ 40 ಸಾವಿರ ರೂ.ಗಳವರೆಗೂ ಖರ್ಚು ಮಾಡಲಾಗಿದೆ. ಕೆಲವು ಪಕ್ಷಗಳು 15 ಸಾವಿರ ಮಿತಿಯೊಳಗೆ ವೆಚ್ಚ ಮಾಡುವ ಸೂಚನೆ ನೀಡಿದ್ದರೆ, ಪ್ರಮುಖ ಕೆಲವು ಪಕ್ಷಗಳು 40 ಸಾವಿರ ರೂ.ಗಳವರೆಗೂ ವೆಚ್ಚ ಮಾಡಿರುವ ಬಗ್ಗೆ ಆಯಾ ಪಕ್ಷಗಳ ಕಾರ್ಯಕರ್ತರೆ ಹೇಳುತ್ತಾರೆ.

      ಒಂದು ಬೂತ್‍ಗೆ ಮೂರೂ ಪಕ್ಷಗಳಿಂದ ಕ್ರಮವಾಗಿ 30 ಸಾವಿರ, 20 ಸಾವಿರ, 15 ಸಾವಿರ ರೂ. ಹೀಗೆ ಲೆಕ್ಕ ಹಾಕಿದರೆ 60 ಸಾವಿರ ರೂ.ಗಳಿಗೂ ಮೇಲ್ಪಟ್ಟು ಖರ್ಚಾಗಿರುವ ಮಾಹಿತಿಗಳಿವೆ. ಅಂದರೆ 330 ಮತಗಟ್ಟೆ ಕೇಂದ್ರಗಳಿಗೆ ಆಗಿರುವ ವೆಚ್ಚ 19 ಕೋಟಿ ರೂ.ಗಳಿಗೂ ಹೆಚ್ಚು. ಇದು ಸರಾಸರಿ ಅಂದಾಜಿನ ಮಾಹಿತಿ.
ಪಕ್ಷಗಳು ತಮ್ಮ ಕಾರ್ಯಕರ್ತರಿಗೆ, ಬೂತ್ ಮಟ್ಟದಲ್ಲಿ ವ್ಯವಸ್ಥೆ ಮಾಡಿರುವ ಖರ್ಚು ವೆಚ್ಚಗಳು ಇದಾದರೆ, ಸರ್ಕಾರದ ವತಿಯಿಂದ ಮಾಡುವ ವೆಚ್ಚಗಳು ಬೇರೆ. ಸರ್ಕಾರದ ವತಿಯಿಂದ ಒಂದು ಬೂತ್‍ಗೆ 7 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಒಂದು ಮತಗಟ್ಟೆ ಕೇಂದ್ರದಲ್ಲಿ ಓರ್ವ ಡಿ ದರ್ಜೆ ನೌಕರ ಸೇರಿ ಒಟ್ಟು 5 ಮಂದಿ ಕಾರ್ಯನಿರ್ವಹಿಸುತ್ತಾರೆ. ಇದರಲ್ಲಿ ಮತಗಟ್ಟೆ ಅಧಿಕಾರಿ ಮುಖ್ಯಸ್ಥನಾಗಿದ್ದು, ಆತನಿಗೆ ಸರ್ಕಾರ 7000 ರೂ.ಗಳನ್ನು ನೀಡಲಿದ್ದು, ನಿಯಮಾನುಸಾರ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಚುನಾವಣಾ ಕರ್ತವ್ಯಕ್ಕೆಂದು ಆ ಹಣವನ್ನು ಪಾವತಿಸಲಾಗುತ್ತದೆ.

ಸಮಾಜದ ಮುಖಂಡರುಗಳಿಗೆ :

       ಜಾತಿ ಹೊರತುಪಡಿಸಿ ಚುನಾವಣೆಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಶಿರಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಜಾತಿ ಲೆಕ್ಕಾಚಾರಗಳು ನಡೆದಿವೆ. ಕೆಲವು ಜಾತಿಗಳ ಓಲೈಕೆಯೂ ನಡೆಯಿತು. ಆಯಾ ಜಾತಿ, ಜನಾಂಗಗಳ ಮುಖ್ಯಸ್ಥರನ್ನು ಸಂಪರ್ಕಿಸುವ, ಪ್ರಚಾರಕ್ಕೆ ಕರೆ ತರುವ, ಪತ್ರಿಕಾ ಗೋಷ್ಠಿ ನಡೆಸುವ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ತಂತ್ರಗಾರಿಕೆಗಳು ವ್ಯವಸ್ಥಿತವಾಗಿ ನಡೆದವು. ಹೀಗೆ ಜನಾಂಗದ ಮುಖಂಡರನ್ನು ಪಕ್ಷಕ್ಕೆ ಕರೆ ತರುವುದು, ಅವರನ್ನು ಗುರುತಿಸುವುದು ಅಷ್ಟು ಸುಲಭವಾದ ಕೆಲಸವೂ ಅಲ್ಲ. ಅದರ ಹಿಂದೆ ಬೇರೆ ರೀತಿಯದ್ದೇ ಆಟಗಳು ನಡೆದಿರುತ್ತವೆ. ಆದರೆ ಹೀಗೆ ಸಮಾಜದ ಮುಖಂಡರನ್ನು ಆಹ್ವಾನಿಸುವ ಮತ್ತು ಪ್ರಚಾರಕ್ಕೆ ಬಳಸಿಕೊಳ್ಳುವಾಗ ಖರ್ಚು ವೆಚ್ಚಗಳ ಇತಿಮಿತಿ ಇರುವುದಿಲ್ಲ. ಇದಾವುದೂ ಲೆಕ್ಕಕ್ಕೆ ಸಿಗುವುದಿಲ್ಲ.  ಇನ್ನು ಪ್ರತಿದಿನ ಪತ್ರಿಕಾಗೋಷ್ಠಿಗಳು ನಡೆದಿವೆ. ಇದಕ್ಕಾಗಿಯೇ ಒಂದಷ್ಟು ಹಣವನ್ನು ತೆಗೆದಿರಿಸಲಾಗಿತ್ತು. ಆದರೆ ಎಷ್ಟು ಖರ್ಚಾಯಿತು? ಯಾರ ಹಣ ಎಂಬ ಯಾವ ಮಾಹಿತಿಗಳೂ ಸಿಗುವುದಿಲ್ಲ. ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ವೆಚ್ಚದ ಪಟ್ಟಿ ಏರುಮುಖದಲ್ಲಿಯೇ ಸಾಗುತ್ತದೆ.

 ಮಹಿಳಾ ಸಂಘಗಳ ಟಾರ್ಗೆಟ್:

      ಮತಾಕರ್ಷಣೆಗೆ ಈಗ ಹೆಚ್ಚು ಬಳಕೆಯಾಗುತ್ತಿರುವುದು ಮಹಿಳಾ ಸಂಘಗಳು. ಪ್ರತಿ ಗ್ರಾಮಗಳಲ್ಲೂ ಒಂದಲ್ಲ ಒಂದು ಮಹಿಳಾ ಸಂಘಗಳು ಅಸ್ತಿತ್ವದಲ್ಲಿವೆ. ಹಿಂದೆಲ್ಲ ಈ ಸಂಘಗಳ ಖಾತೆಗೆ ಒಂದಷ್ಟು ಹಣ ಹಾಕುವ ಯೋಜನೆ ರೂಪಿತಗೊಂಡಿತ್ತು. ಆದರೆ ಈಗ ಅದಕ್ಕೆ ಬದಲಾಗಿ ನೇರವಾಗಿ ಸಂಘಗಳಿಗೆ ಮತ್ತು ಅದರ ಸದಸ್ಯರುಗಳಿಗೆ ನಗದು ನೀಡುವ ವ್ಯವಸ್ಥೆಯನ್ನು ಸಲೀಸಾಗಿ ಮಾಡಲಾಗಿದೆ. ಶಿರಾ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚು ಗಮನ ಸೆಳೆದ ತಂತ್ರಗಾರಿಕೆ ಇದು.

      ಆಯುಧ ಪೂಜಾ ಹಬ್ಬದಿಂದ ಆರಂಭವಾದ ಹಣ ಹಂಚಿಕೆ ಮತದಾನದ ಹಿಂದಿನ ದಿನದವರೆಗೂ ನಡೆದಿದೆ. ಅರಿಶಿನ ಕುಂಕುಮ ನೀಡುವಾಗ 200 ರೂ., ಆನಂತರ ಮತ್ತೆ ಹಣ ನೀಡಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಕತ್ತಲಾಗುತ್ತಿದ್ದಂತೆ ಗ್ರಾಮಗಳಿಗೆ ತೆರಳಿರುವ ಪಕ್ಷದ ಕಾರ್ಯಕರ್ತರು ಮಹಿಳೆಯರನ್ನು ಒಂದು ಕಡೆ ಸೇರಿಸಿ, ಹಣ ಹಂಚಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದವು. ಹೀಗೆ ಒಂದು ಕಡೆ ನೇರವಾಗಿ ಮತದಾರರಿಗೆ ನಗದು ಹಣ ತಲುಪಿಸುವ ವ್ಯವಸ್ಥೆಗಳು ನಡೆದಿದ್ದರೆ ಮತ್ತೊಂದು ಕಡೆ ಕೆಲವು ಪಕ್ಷಗಳು ಮಹಿಳಾ ಸಂಘಗಳ ಮೂಲಕ ಹಣ ಹಂಚಿಕೆ ಮಾಡಿರುವುದು ಎಲ್ಲೆಡೆ ಕೇಳಿಬರುತ್ತಿದೆ.

      ಕೆಲವು ಗ್ರಾಮಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರ ಕುಂಟುತ್ತಾ ಸಾಗಿದೆ. ಗ್ರಾಮಸ್ಥರು ರಾಜಕೀಯ ಮುಖಂಡರುಗಳನ್ನು ಈ ಬಗ್ಗೆ ಗಮನ ಸೆಳೆದಿದ್ದಾರೆ. ಸದ್ಯಕ್ಕೆ ಇಷ್ಟು ಇಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿಕೊಡುತ್ತೇವೆ ಎಂದು ಹೇಳಿ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.
ಇಡೀ ಜಿಲ್ಲೆಯಲ್ಲಿ ಶಿರಾ ಕ್ಷೇತ್ರಕ್ಕೆ ಮಾತ್ರವೇ ಉಪ ಚುನಾವಣೆ ನಡೆದಿದ್ದರಿಂದ ಜಿಲ್ಲೆಯ ಮುಖಂಡರು ಮಾತ್ರವಲ್ಲದೆ, ರಾಜ್ಯದ ಇತರೆ ಕಡೆಗಳಿಂದಲೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಿರಾ ಕ್ಷೇತ್ರದಲ್ಲಿ ಕೆಲವು ದಿನಗಳ ಮಟ್ಟಿಗೆ ಬೀಡು ಬಿಟ್ಟಿದ್ದರು. ಇವರೆಲ್ಲರಿಗೆ ವಸತಿ ಗೃಹಗಳ ಬಾಡಿಗೆ ಖರ್ಚು, ಅವರ ಊಟೋಪಚಾರ, ವಾಹನದ ವ್ಯವಸ್ಥೆ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡರೆ ಎಲ್ಲವೂ ಕೋಟಿಗಟ್ಟಲೆ ಆಗಿರುವ ಖರ್ಚಿನ ಬಾಬತ್ತುಗಳು.

      ವಿವಿಧ ಪಕ್ಷಗಳು ಮತ್ತು ಅಭ್ಯರ್ಥಿಗಳು ಗೆಲುವಿಗಾಗಿ ಮಾಡಿರುವ ಖರ್ಚು ವೆಚ್ಚಗಳ ಪಟ್ಟಿ ಎಲ್ಲಿಯೂ ಸಿಗಲಾರದು. ಆದರೆ ಇಷ್ಟು ದಿನಗಳ ಈ ಅವಧಿಯಲ್ಲಿ 50 ಕೋಟಿ ರೂ.ಗಳಿಗೂ ಅಧಿಕ ವೆಚ್ಚವಾಗಿರುವುದನ್ನು ಯಾರೂ ಅಲ್ಲಗಳೆಯಲಾರರು.

      ಚುನಾವಣಾ ಆಯೋಗವು ಮತದಾರರ ಖರೀದಿ ತಡೆಯುವುದಕ್ಕಾಗಿಯೇ ಕೆಲವೊಂದು ನಿಯಮಗಳನ್ನು ವಿಧಿಸಿತ್ತು. ಆದರೆ ಆಯೋಗದ ನಿಯಮಗಳೆಲ್ಲ ಗಾಳಿಗೆ ತೂರಲ್ಪಟ್ಟಿವೆ. ಚುನಾವಣಾ ಆಯೋಗವು ಓರ್ವ ಅಭ್ಯರ್ಥಿಗೆ ಈ ಹಿಂದೆ 28 ಲಕ್ಷ ರೂ. ಖರ್ಚು ಮಾಡಲು ಕಾನೂನು ಬದ್ದವಾಗಿ ಅವಕಾಶ ನೀಡುತ್ತಿತ್ತು. ಆದರೆ ಇತ್ತೀಚೆಗೆ ಅದನ್ನು ಏರಿಕೆ ಮಾಡಲಾಗಿದ್ದು, 30.80 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಈ ವೆಚ್ಚಗಳ ನಿರ್ವಹಣೆಗಾಗಿಯೇ ಆಯೋಗದ ವೀಕ್ಷಕರು ಇರುತ್ತಾರೆ. ಆದರೆ ವಾಸ್ತವವಾಗಿ ಅಭ್ಯರ್ಥಿಗಳು ಖರ್ಚು ಮಾಡುವುದೇ ಬೇರೆ. ಕನಿಷ್ಠ ಏನಿಲ್ಲ ಎಂದರೂ ಚುನಾವಣೆ ಮುಗಿಯುವ ವೇಳೆಗೆ ಶಿರಾದಲ್ಲಿ ಕೆಲವು ಅಭ್ಯರ್ಥಿಗಳು 30 ರಿಂದ 55 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿರುವ ಸಾಧ್ಯತೆಗಳಿವೆ. ಚುನಾವಣಾ ಆಯೋಗ ಈ ಬಾರಿ ನಿಯಮಗಳ ಕಠಿಣ ಪಾಲನೆ ಮಾಡಲಿಲ್ಲ. ವೀಕ್ಷಕರು ಸೇರಿದಂತೆ ಇತರೆ ಅಧಿಕಾರಿಗಳ ಕಾರ್ಯ ನಿóಷ್ಟೆ ಕಂಡುಬರಲಿಲ್ಲ. ಆಯೋಗದ ನಿರ್ಬಂಧಗಳು ಅನುಷ್ಠಾನಗೊಳ್ಳದ ಬಗ್ಗೆ ಅಲ್ಲಿನ ಜನರೇ ಅಸಮಧಾನ ವ್ಯಕ್ತಪಡಿಸಿದ್ದಾರೆ.

      ಪಕ್ಷಗಳು, ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಪರವಾಗಿ ಹಿತೈಷಿಗಳು ಚುನಾವಣೆಗೆ ಖರ್ಚು ಮಾಡುವ ವೆಚ್ಚಗಳೆಲ್ಲವನ್ನು ಗಣನೆಗೆ ತೆಗೆದುಕೊಂಡರೆ ಊಹೆಗೆ ನಿಲುಕದಷ್ಟಾಗುತ್ತದೆ. ಶಿರಾಕ್ಕೆ ಈ ಬಾರಿ ಬಂದು ಹೋದÀವರ ಸಂಖ್ಯೆ ಹೆಚ್ಚಳವಾಗಿದ್ದು, ಹಣದ ಮೂಟೆಯನ್ನೇ ಸುರಿದು ಹೋಗಿರುವ ವದಂತಿಗಳಿವೆ. ಚುನಾವಣೆಗಳು ಹೀಗೆ ಹಣದ ಥೈಲಿಯಲ್ಲಿ ನಡೆಯುವಂತಾದರೆ ಮುಂದಿನ ದಿನಗಳು ಬಹಳ ಭಯಾನಕ. ಪ್ರಜಾಪ್ರಭುತ್ವ ಯಾವುದರ ಮೇಲೆ ನಿಂತಿದೆ ಎಂಬುದನ್ನು ಊಹಿಸುವುದೂ ಕಷ್ಟವಾಗಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link