ತುಮಕೂರು: ಮತಯಂತ್ರಗಳ ಕೊಠಡಿಗೆ ತ್ರಿಬಲ್ ಲೇಯರ್ ಭದ್ರತೆ!

ತುಮಕೂರು :
     
      ಸಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನವಾಗಿರುವ ಇವಿಎಂ ಮತಯಂತ್ರಗಳನ್ನು ಮತ ಎಣಿಕೆ ಕೇಂದ್ರವಾದ ತುಮಕೂರು ನಗರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಎರಡು ಸ್ಟ್ರಾಂಗ್ ಕೊಠಡಿಗಳಲ್ಲಿಟ್ಟು ಬಿಗಿ ಭದ್ರತೆ ಒದಗಿಸಲಾಗಿದೆ.  
  
     ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಆದ ಇವಿಎಂ ಮತಯಂತ್ರಗಳನ್ನು ಶಿರಾ ಪಟ್ಟಣದ ಡಿ-ಮಸ್ಟರಿಂಗ್ ಕೇಂದ್ರದಿಂದ ಇಂದು ಬೆಳಿಗ್ಗೆ ಎಣಿಕೆ ಕೇಂದ್ರಕ್ಕೆ ಸುರಕ್ಷಿತವಾಗಿ ತಂದು ಎರಡು ಸ್ಟ್ರಾಂಗ್ ರೂಮ್‍ಗಳಲ್ಲಿಟ್ಟು ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕಿ ಬಿ. ಮಹೇಶ್ವರಿ, ಜಿಲ್ಲಾಧಿಕಾರಿ  ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ, ಚುನಾವಣಾಧಿಕಾರಿ ಡಾ: ನಂದಿನಿ ದೇವಿ ಕೆ. ಅವರ ಸಮ್ಮುಖದಲ್ಲಿ ಸೀಲ್ ಮಾಡಲಾಯಿತು.
   
      ಆನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು, ಮತಯಂತ್ರಗಳನ್ನು ಸ್ಟ್ರಾಂಗ್‍ರೂಮ್‍ನಲ್ಲಿಟ್ಟು ಇಂದು ಬೆಳಿಗ್ಗೆ 9 ಗಂಟೆಗೆ ಸೀಲ್ ಮಾಡಲಾಗಿದೆ.  ಕೇಂದ್ರದ ಪೊಲೀಸರ ಪ್ಲಟೂನ್, ಕೆಎಸ್‍ಆರ್‍ಪಿ ಪೊಲೀಸರ ಪ್ಲಟೂನ್ ಹಾಗೂ ರಾಜ್ಯ ಪೊಲೀಸರಿಂದ ದಿನದ 24 ಗಂಟೆ ಬಂದೋಬಸ್ತು ಒದಗಿಸಲಾಗಿದೆ.  ಅಲ್ಲದೆ ಭದ್ರತೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ.
      ನ. 10 ರಂದು ಈ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಒಂದು ವೇಳೆ ಅನಿವಾರ್ಯ ಪರಿಸ್ಥಿತಿ ಎದುರಾದರೆ ಆಗ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗಮನಕ್ಕೆ ತಂದು ಭದ್ರತಾ ಕೊಠಡಿಯನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
      ಸಿರಾ ವಿಧಾನಸಭಾ ಉಪಚುನಾವಣೆಗೆ ಪೋಸ್ಟಲ್ ಬ್ಯಾಲೆಟ್ ಸೇರಿ ಶೇ. 84.54 ರಷ್ಟು ಮತದಾನ ನಡೆಯುವ ಮೂಲಕ ಅತಿ ಹೆಚ್ಚು ಮತದಾನ ನಡೆದಿದೆ. ಕಳೆದ 2018 ರಲ್ಲಿ ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ. 84 ರಷ್ಟು ಮತದಾನ ನಡೆದಿತ್ತು. ಹಾಗೆಯೇ ಲೋಕಸಭಾ ಚುನಾವಣೆಯಲ್ಲೂ ಶೇ. 76ರಷ್ಟು ಮತದಾನ ನಡೆದಿತ್ತು. ಇದಕ್ಕೆ ಹೋಲಿಸಿದರೆ ಉತ್ತಮ ಮತದಾನ ನಡೆದಿದೆ ಎಂದರು.
      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಮಾತನಾಡಿ, ಮತಯಂತ್ರಗಳಿಟ್ಟಿರುವ ಎರಡು ಭದ್ರತಾ ಕೊಠಡಿ ಹಾಗೂ ಎಣಿಕೆ ಕೇಂದ್ರದ ಭದ್ರತೆಗೆ ಸಿಐಎಸ್‍ಎಫ್ ಅರೆ ಸೇನಾಪಡೆ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 
      ಭದ್ರತಾ ಕೊಠಡಿಗೆ 3 ಲೇಯರ್ ಭದ್ರತೆಯನ್ನು ಒದಗಿಸಲಾಗುತ್ತಿದ್ದು, ಮೊದಲನೇ ವಲಯದಲ್ಲಿ ಸಿಐಎಸ್‍ಎಫ್ ಅರೆ ಸೇನಾ ಪಡೆ, 2ನೇ ಲೇಯರ್‍ನಲ್ಲಿ ಕೆಎಸ್‍ಆರ್‍ಪಿ ಪೊಲೀಸ್ ಭದ್ರತೆ, 3ನೇ ವಲಯದಲ್ಲಿ ಸಿವಿಲ್ ಪೊಲೀಸ್ ಭದ್ರತೆಯನ್ನು ದಿನದ 24 ಗಂಟೆ ನವೆಂಬರ್ 10ರವರೆಗೂ ಒದಗಿಸಲಾಗಿದೆ. ಒಂದು ಪಾಳಿಯಲ್ಲಿ 70 ರಿಂದ 80 ಮಂದಿ ಸಿಬ್ಬಂದಿ ಭದ್ರತೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. 
      ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ನಿರ್ಮಿತಿ ಕೇಂದ್ರದ ರಾಜಶೇಖರ್ ಮತ್ತಿತರರು ಹಾಜರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap