ಶಿರಾ ಗ್ರಾಮಾಂತರದಲ್ಲಿ ಅತಿ ಹೆಚ್ಚು ಮತದಾನ : ಲಾಭ ಯಾರಿಗೆ?

 ತುಮಕೂರು:

      ನ.3ರಂದು ನಡೆದ ಶಿರಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆವಾರು ಅಂತಿಮ ಮತ ಪ್ರಮಾಣದ ವರದಿ ಬಂದಿದ್ದು, 2,15,725 ಮತದಾರರ ಪೈಕಿ, 92,077 ಪುರುಷರು, 85,568 ಮಹಿಳೆಯರು ಸೇರಿದಂತೆ 1,77,645 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 82.35 ಮತಪ್ರಮಾಣ ದಾಖಲಾಗಿದೆ. ನಗರ ಭಾಗಕ್ಕಿಂತ ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಇದರ ಲಾಭ ಯಾವ ಪಕ್ಷಕ್ಕೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.
      330 ಮತಗಟ್ಟೆ ವ್ಯಾಪ್ತಿಯಲ್ಲಿ 45 ಕ್ಕೂ ಅಧಿಕ ಮತಗಟ್ಟೆಗಳು ಶಿರಾ ನಗರದಲ್ಲಿ ಬರಲಿದ್ದು, ಈ ವ್ಯಾಪ್ತಿಯಲ್ಲಿ ಗ್ರಾಮಾಂತರಕ್ಕೆ ಹೋಲಿಸಿದಲ್ಲಿ ಅತಿ ಕಡಿಮೆ ಮತದಾನವಾಗಿರುವುದು ಮತಗಟ್ಟೆವಾರು ಅಂಕಿ-ಅಂಶದಲ್ಲಿ ವ್ಯಕ್ತವಾಗಿದೆ. ಶಿರಾ ನಗರದಲ್ಲಿ ಅತಿ ಹೆಚ್ಚು ಮತದಾನವಾಗಿರುವ ಪ್ರದೇಶವೆಂದರೆ ಭವಾನಿ ನಗರ ಮತಗಟೆ ಸಂಖ್ಯೆ 150 ಆಗಿದ್ದು, ಇಲ್ಲಿ ಶೇ.86.10 ಪ್ರತಿಶತ ಮತದಾನ ದಾಖಲಾಗಿದೆ. ಮತಗಟ್ಟೆ ಸಂಖ್ಯೆ 175 ಸರಕಾರಿ ಬಾಲಕಿಯರ ಕಾಲೇಜಿನÀಲ್ಲಿ ಅತಿ ಕಡಿಮೆ ಶೇ.53.56ರಷ್ಟು ಮತಪ್ರಮಾಣ ದಾಖಲಾಗಿದ್ದು, ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರು ಅಧಿಕವಾಗಿರುವ ಮೆಹಬೂಬ್‍ನಗರ, ಮಟನ್ ಮಾರುಕಟ್ಟೆ ರಸ್ತೆ, ಲಾಡ್‍ಪುರ ಕಚೇರಿ ಮೊಹಲ್ಲ, ಅಸ್ಸಾರ್ ಮೊಹಲ್ಲ, ಸಂತೇಪೇಟ್ ಮತಗಟ್ಟೆಗಳಲ್ಲೂ ಶೇ.65 ರಿಂದ 78ರವರೆಗೆ ಮತಪ್ರಮಾಣ ದಾಖಲಾಗಿದೆ. ಒಂದು ಕೋಮಿನವರ ಮತ ಪ್ರಮಾಣದಲ್ಲಿ ಇಳಿಕೆಯಾದರೆ ಅದು ಯಾರಿಗೆ ಲಾಭ? ಇದರ ಹಿಂದಿನ ತಂತ್ರಗಾರಿಕೆ ಏನು ಎಂಬ ಚರ್ಚೆ, ಗುರುತಿನ ಅನುಮಾನಗಳಿಗೂ ಆಸ್ಪದ ಒದಗಿಸಿದೆ.

 ನೀರಿನ ಸಂಗತಿ ಮತ ಹೆಚ್ಚಳಕ್ಕೆ ಕಾರಣವಾಯಿತೇ?:
      ಇನ್ನೂ ಗ್ರಾಮಾಂತರ ಭಾಗದಲ್ಲಿ ಚುನಾವಣೆಗೆಂದು 260ಕ್ಕೂ ಅಧಿಕ ಮತಗಟ್ಟೆಗಳು ಸ್ಥಾಪನೆಯಾಗಿದ್ದವು. ಗ್ರಾಮಾಂತರ ಪ್ರದೇಶದಲ್ಲಿ ಅತಿ ಕಡಿಮೆ ಅಂದರೆ ದ್ವಾರನಕುಂಟೆ, ಬೇವಿನಹಳ್ಳಿ, ಬರಗೂರು, ಮಾಗೋಡು, ಪದ್ಮಾಪುರದಲ್ಲಿ ಶೇ.70. ರಿಂದ ಶೇ.76ರವರೆಗೆ ಮತದಾನವಾಗಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ರಾಜಕೀಯ ಪಕ್ಷಗಳ ಪ್ರಮುಖ ಅಸ್ತ್ರವಾಗಿದ್ದ ಮದಲೂರು ಕೆರೆಯನ್ನೊಳಗೊಂಡಿರುವ ಮದಲೂರು ಗ್ರಾಮದಲ್ಲಿ ಶೇ.90.93ರಷ್ಟು ದಾಖಲೆ ಮತದಾನವಾಗಿದೆ. ಕೆರೆಗೆ ನೀರು ಹರಿಸುವ ವಿಷಯ ಮದಲೂರು ಸುತ್ತಮುತ್ತಲಿನ ಗ್ರಾಮದಲ್ಲಿ ಮತಪ್ರಮಾಣ ಹೆಚ್ಚಿಸಲು ಕಾರಣವಾಯಿತೆ ಎಂಬ ವಿಶ್ಲೇಷಣೆಗೆ ಎಡೆಮಾಡಿದೆ. ಉಳಿದಂತೆ ಕ್ಷೇತ್ರ ವ್ಯಾಪ್ತಿಗೆ ಬರುವ ಪ್ರಮುಖ ಹೋಬಳಿಗಳಾದ ಶಿರಾ ಕಸಬಾ, ಕಳ್ಳಂಬೆಳ್ಳ, ಹುಲಿಕುಂಟೆ, ಗೌಡಗೆರೆ ಭಾಗದಲ್ಲಿ ಶೇ.80ರಷ್ಟು ಮೇಲ್ಪಟ್ಟು ಶೇ.94.15ರವರೆಗೂ ಮತದಾನ ಆಗಿರುವುದು ಅಂಕಿ ಅಂಶಗಳಲ್ಲಿ ದಾಖಲಾಗಿದೆ.
 ಯಾರು ಎಷ್ಟು ಲೀಡ್ ಕೊಡಿಸ್ತಾರೆ ಚರ್ಚೆ:

      ಚಲಾವಣೆಯಾದ ಮತಪ್ರಮಾಣದಲ್ಲಿ ಯಾವ ಹೋಬಳಿಯಲ್ಲಿ ಯಾರು ಎಷ್ಟು ಲೀಡ್ ಕೊಡಿಸ್ತಾರೆ ಎಂಬ ಚರ್ಚೆಗಳು ಸಾಗಿದ್ದು, ಜೆಡಿಎಸ್‍ನಲ್ಲಿ ಕಳ್ಳಂಬೆಳ್ಳ ಹೋಬಳಿ ಉಸ್ತುವಾರಿಯನ್ನು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್, ಮುದಿಮಡು ರಂಗಸ್ವಾಮಯ್ಯ, ಹುಲಿಕುಂಟೆ ಹೋಬಳಿ ಉಸ್ತುವಾರಿಯನ್ನು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಕಸಬಾ ಹೋಬಳಿ ಉಸ್ತುವಾರಿಯನ್ನು ತಾಲ್ಲೂಕು ಅಧ್ಯಕ್ಷ ಉಗ್ರೇಶ್, ಆರ್.ರಾಮು, ಆರ್.ರಾಘವೇಂದ್ರ ವಹಿಸಿದ್ದರೆ, ಮದಲೂರಿಗೆ ಸಂಬಂಧಿಸಿದಂತೆ ಹುಳಿಗೆರೆ ಮೂಡಲಗಿರಿಯಪ್ಪ, ನಾದೂರು ಉಸ್ತುವಾರಿಯನ್ನು ಸಿ.ಆರ್.ಉಮೇಶ್, ಒಟ್ಟಾರೆ ಉಸ್ತುವಾರಿಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ , ಶಾಸಕ ಎಂ.ವಿವೀರಭದ್ರಯ್ಯ, ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕರಾದ ಸಿ.ಬಿ.ಸುರೇಶ್‍ಬಾಬು, ಸುಧಾಕರಲಾಲ್, ಎಂ.ಟಿ.ಕೃಷ್ಣಪ್ಪ ಮತ್ತಿತರ ಮುಖಂಡರು ವಹಿಸಿದ್ದರು.
      ಇನ್ನೂ ಬಿಜೆಪಿಗೆ ಸಂಬಂಧಿಸಿದಂತೆ ಕಳ್ಳಂಬೆಳ್ಳ ಹೋಬಳಿ ಎಸ್.ಆರ್.ಗೌಡ, ತಾವರೆಕೆರೆ ನಾದೂರು ಬಿ.ಕೆ.ಮಂಜುನಾಥ್, ಮದಲೂರು ಶ್ರೀರಂಗ ಯಾದವ್, ಸುಧಾಕರಗೌಡ, ಹುಲಿಕುಂಟೆ ಹೋಬಳಿ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಶಿರಾ ನಗರ, ಗ್ರಾಮಾಂತರ ಉಸ್ತುವಾರಿಯನ್ನು ನಗರಾಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ ಇತರರು ವಹಿಸಿದ್ದರು. ಒಟ್ಟಾರೆ ಉಸ್ತುವಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಸಂಸದರಾದ ನಾರಾಯಣಸ್ವಾಮಿ, ಜಿ.ಎಸ್.ಬಸವರಾಜು, ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಎಂಎಲ್ಸಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‍ಗೌಡ, ಶಾಸಕರಾದ ಜ್ಯೋತಿಗಣೇಶ್, ಮಸಾಲ ಜಯರಾಂ, ಮಾಜಿ ಸಚಿವ ಎಸ್.ಶಿವಣ್ಣ , ತಮ್ಮೇಶ್‍ಗೌಡ, ಎಂ.ಬಿ.ನಂದೀಶ್ ಇತರರು ವಹಿಸಿದ್ದರು.
      ಕಾಂಗ್ರೆಸ್‍ಗೆ ಸಂಬಂಧಿಸಿದಂತೆ ಗೌಡಗೆರೆ ಕಲ್ಕೆರೆ ರವಿಕುಮಾರ್, ಹುಲಿಕುಂಟೆ ಬರಗೂರು ನಟರಾಜ್, ಹಲಗುಂಡೆಗೌಡ, ಕಳ್ಳಂಬೆಳ್ಳ ಹೋಬಳಿ ಪರ್ವತಪ್ಪ, ರುದ್ರೇಶ್, ಕಸಬಾ ಆರ್.ನಾಗರಾಜು, ವಿನಯ್ ತ್ಯಾಗರಾಜು, ತ್ಯಾಗರಾಜು ವಹಿಸಿದ್ದರೆ, ಒಟ್ಟಾರೆ ಕ್ಷೇತ್ರ ಉಸ್ತುವಾರಿಯನ್ನು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಎಸ್.ಪಿ.ಮುದ್ದಹನುಮೇಗೌಡ, ಷಫಿ ಅಹಮದ್, ಷಡಾಕ್ಷರಿ, ವೆಂಕಟರವಣಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಸಂಸದ ಡಾ.ಎಲ್.ಹನುಮಂತಯ್ಯ, ಯುವಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಾಸಲು ಸತೀಶ್, ಸಂತೋಷ ಜಯಚಂದ್ರ, ಶಶಿ ಹುಲಿಕುಂಟೆಮಠ್ ಸೇರಿದಂತೆ ಇತರ ಕೈ ಮುಖಂಡರು ವಹಿಸಿದ್ದರು. ಇವರೆಲ್ಲರ ಪರಿಶ್ರಮದ ಮಾಪನ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂಬ ಚರ್ಚೆಗಳು ಸಾಗಿವೆ.
ಪಂಚಾಯ್ತಿಗೆ ಅಖಾಡ:
     ಇದರೊಂದಿಗೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಮೂರು ಪಕ್ಷದ ಹಲವು ಸ್ಥಳೀಯ ನಾಯಕರು ಚುನಾವಣೆಯಲ್ಲಿ ಹುಮ್ಮಸ್ಸಿನಿಂದ ಓಡಾಡಿದ್ದು, ನ.10ರಂದು ಘೋಷಣೆಯಾಗುವ ಚುನಾವಣಾ ಫಲಿತಾಂಶವು ಇವರಿಗೂ ಸೆಮಿಫೈನಲ್ ರಿಸಲ್ಟ್ ಗೋಚರಿಸಲಿದೆ.

ಸಿಎಂ ಬಿಎಸ್‍ವೈ ಉತ್ತರಾಧಿಕಾರ, ಟಿಬಿಜೆ ಸ್ಥಾನ ನಿರ್ಧರಿಸಲಿದೆ ಫಲಿತಾಂಶ!

      ಶಿರಾ ಉಪ ಚುನಾವಣೆ ಫಲಿತಾಂಶ ಅಭ್ಯರ್ಥಿಗಳಿಗಷ್ಟೇ ಅಲ್ಲ ರಾಜ್ಯ ಹಾಗೂ ಜಿಲ್ಲಾ ರಾಜಕೀಯಕ್ಕೆ ಸಂಬಂಧಿಸಿದಂತೆ ಚುನಾವಣಾ ಅಖಾಡಕ್ಕಿಳಿದು ಶ್ರಮಿಸಿದ ಮುಖಂಡರು ರಾಜಕಾರಣದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧನವಾಗಲಿದೆ. ಪ್ರಮುಖವಾಗಿ ಕೆ.ಆರ್.ಪೇಟೆ ಮಾದರಿಯಲ್ಲಿ ಚುನಾವಣೆ ನಡೆಸುತ್ತೇನೆಂದು ಅಖಾಡಕ್ಕಿಳಿದು ಗಡಿಯಲ್ಲಿ ಕುಳಿತು ಕಾರ್ಯತಂತ್ರ ಹೆಣೆದ ಸಿಎಂ ಬಿಎಸ್‍ವೈ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೆ ಈ ಚುನಾವಣೆ ಗೆಲುವು ತಂದುಕೊಟ್ಟರೆ ಬಿಎಸ್‍ವೈ ಉತ್ತರಾಧಿಕಾರಿ ಪಟ್ಟಕ್ಕೆ ಅವರು ಮತ್ತಷ್ಟು ಸನಿಹವಾಗಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆದ್ದರೆ ಸದÀನದಲ್ಲಿ ಕಾಂಗ್ರೆಸ್‍ನ ಅತಿ ಹಿರಿಯ ಶಾಸಕರೆನಿಸಲಿದ್ದು, ಪಕ್ಷದಲ್ಲಿ ಪ್ರಭಾವ ಹೆಚ್ಚಲಿದೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಗೆಲುವು ಪಕ್ಷದ ಪ್ರಾಬಲ್ಯವನ್ನು ಜಿಲ್ಲೆಯಲ್ಲಿ ಮುಂದುವರಿಸಲು ಎಡೆ ಮಾಡಿಕೊಡಲಿದ್ದು, ಒಟ್ಟಾರೆ ಸೋಲು-ಗೆಲುವು ಮೂರು ಪಕ್ಷದ ಹಿರಿಯ-ಕಿರಿಯರ ನಾಯಕರ ಮುಂದಿನ ರಾಜಕೀಯ ಹಾದಿ, ರಾಜಕೀಯ ಧ್ರುವೀಕರಣ ಆರೋಪ, ಪ್ರತ್ಯಾರೋಪಗಳಿಗೂ ನಾಂದಿ ಹಾಡಲಿರುವುದು ಸುಳ್ಳಲ್ಲ.

ಪ್ರಚಾರರಕ್ಕಿಳಿದಿದ್ದ ಪ್ರಮುಖ ಸ್ಮಾರ್ ಪ್ರಚಾರಕರು :

     ಕಾಂಗ್ರೆಸ್:

      ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್‍ಜಾರಕಿಹೊಳಿ, ಈಶ್ವರಖಂಡ್ರೆ, ಸಲೀಂಅಹ್ಮದ್, ಪ್ರಚಾರ ಸಮಿತಿ ಚೇರ್ಮನ್ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಕೋ ಚೇರ್ಮನ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮತ್ತಿತರ ಪ್ರಮುಖರು.

ಬಿಜೆಪಿ:

      ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಲಕ್ಷ್ಮಣ್ ಸವದಿ, ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಈಶ್ವರಪ್ಪ, ಎಂಎಲ್ಸಿ ರವಿಕುಮಾರ್ ಇತರ ಪ್ರಮುಖರು.

ಜೆಡಿಎಸ್:

      ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್‍ರೇವಣ್ಣ, ನಿಖಿಲ್‍ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಶಾಸಕರಾದ ಡಿ.ಸಿ. ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ಎಂಎಲ್ಸಿ ತಿಪ್ಪೇಸ್ವಾಮಿ ಇತರ ಪ್ರಮುಖರು. 

 

ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link