ಶಿರಾ :
ಶಿರಾ ಭಾಗವು ಅತ್ಯಂತ ಬರ ಪೀಡಿತ ಪ್ರದೇಶವೆಂಬ ಅರಿವು ನನಗಿದೆ. ಈ ಭಾಗದ ಮದಲೂರು ಕೆರೆಗೆ ನೀರು ಹರಿಸುವ ಸಲುವಾಗಿ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಲುವೆ ನಿರ್ಮಾಣಕ್ಕೂ ಅನುದಾನ ನೀಡಿದ್ದೆನು. ಈಗಲೂ ನಾನು ಸಂಪೂರ್ಣವಾದ ಭರವಸೆ ನೀಡುತ್ತೇನೆ. ಮುಂದಿನ 6 ತಿಂಗಳೊಳಗೆ ಮದಲೂರು ಕೆರೆಯನ್ನು ತುಂಬಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಮದಲೂರು ಗ್ರಾಮದಲ್ಲಿ ಬಿ.ಜೆ.ಪಿ. ಪಕ್ಷದ ವತಿಯಿಂದ ಶುಕ್ರವಾರ ನಡೆದ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರದಿಂದಲೂ ಶಿರಾ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷಗಳಿಗೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿದ್ದೀರಿ. ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡರಿಗೆ ಮತ ಚಲಾಯಿಸಿ ಅವಕಾಶ ಕಲ್ಪಿಸಿಕೊಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಸಂಕಲ್ಪ ಮಾಡುತ್ತೇನೆ ಎಂದರು.
ಶಿರಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಪಕ್ಷದ ಅಲೆ ಎದ್ದಿದೆ. ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ಭದ್ರಕೋಟೆಯನ್ನು ಬಿ.ಜೆ.ಪಿ. ಈ ಬಾರಿ ಛಿದ್ರಗೊಳಿಸುವುದು ಖಚಿತ. ಈ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ 25,000 ಮತಗಳ ಅಂತರದಿಂದ ಗೆಲ್ಲುವುದನ್ನು ಯಾವ ಶಕ್ತಿಗಳೂ ತಪ್ಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳು ಸದರಿ ಚುನಾವಣೆಯಲ್ಲಿ ಎರಡನೆಯ ಸ್ಥಾನ ಉಳಿಸಿಕೊಳ್ಳಲು ಈಗಾಗಲೇ ಒದ್ದಾಡುವಂತಾಗಿದೆ ಎಂದು ಯಡಿಯೂರಪ್ಪ ಛೇಡಿಸಿದರು.
ಈಗಾಗಲೇ ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ಹೇಮಾವತಿ ಹರಿಯುತ್ತಿದ್ದು ಕೇವಲ ಮದಲೂರು ಕೆರೆಯೊಂದೇ ಅಲ್ಲದೆ ಕ್ಷೇತ್ರದ ಬಹುಪಾಲು ಕೆರೆಗಳನ್ನು ತುಂಬಿಸುವ ಕೆಲಸವನ್ನು ನಾನು ಮಾಡುತ್ತೇನೆ. ನೆನೆಗುದಿಗೆ ಬಿದ್ದಿರುವ ಬಗರ್‍ಹುಕುಂ ಸಾಗುವಳಿ ಚೀಟಿಗಳನ್ನು ರೈತರಿಗೆ ವಿತರಣೆ ಮಾಡುವ ಕೆಲಸವನ್ನು ಮಾಡುತ್ತೇನೆ. ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಶಿರಾ ಭಾಗದ ಒಟ್ಟು 60 ಕೆರೆಗಳಿಗೆ ನೀರು ಹರಿಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರಿಂದಲೂ ಪ್ರತಿ ರೈತರಿಗೆ 10,0000 ರೂಗಳನ್ನು ಅವರ ಖಾತೆಗಳಿಗೆ ಹಾಕಲು ಎಲ್ಲಾ ತಯಾರಿಯೂ ನಡೆದಿದೆ. ಮಹಿಳಾ ಸಬಲೀಕರಣಕ್ಕೆ ಯೋಜನೆಯೂ ಸಿದ್ಧಗೊಂಡಿದೆ. ಪ.ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಯೋಜನೆಯನ್ನು ತಯಾರಿಸಲಾಗಿದ್ದು ಸದರಿ ಯೋಜನೆಗಳ ಪ್ರಯೋಜನ ಸಾರ್ವಜನಿಕರಿಗೆ ಲಭ್ಯವಾಗಲಿವೆ. ಶಿರಾ ಕ್ಷೇತ್ರದ ಪ್ರತಿಯೊಬ್ಬ ನಿವೇಶನ ರಹಿತರಿಗೂ ನಿವೇಶನಗಳನ್ನು ನೀಡುವ ಹಾಗೂ ಮನೆ ನಿರ್ಮಾಣ ಮಾಡಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದಲ್ಲದೆ ಮನೆಗಳ ನಿರ್ಮಾಣಕ್ಕಾಗಿ ಅರ್ಹ ಫಲಾನುಭವಿಗಳಿಗೆ 5 ಲಕ್ಷ ರೂ ಅನುದಾನವನ್ನೂ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಮದ್ದಕ್ಕನಹಳ್ಳಿಯ ಕಲ್ಲು ಗಣಗಾರಿಕೆಯ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿದ್ದು ಗಣಿಗಾರಿಕೆಯ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಶೀಘ್ರದಲ್ಲಿಯೇ ನೆರವೇರಲಿದೆ. ನಾನು ಬರೀ ಬಾಯಿಂದ ಮಾತನಾಡಿದರೂ ಆ ಭರವಸೆಗಳು ಕಾನೂನುಗಳಂತೆ ಜಾರಿಗೊಳ್ಳುತ್ತವೆ. ಇದರಲ್ಲಿ ಯಾರಿಗೂ ಅನುಮಾನವೇ ಬೇಡ. ಕೋವಿಡ್‍ನಿಂದ ಸರ್ಕಾರಕ್ಕೆ ಆರ್ಥಿಕ ಕೊರತೆ ಇತ್ತು ನಿಜ, ಆದರೆ ಈಗ ಸರ್ಕಾರದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಮುಂದಿನ ಎರಡೂವರೆ ವರ್ಷದೊಳಗೆ ರಾಜ್ಯವನ್ನು ಒಂದು ಮಾದರಿ ರಾಜ್ಯವನ್ನಾಗಿ ರೂಪುಗೊಳಿಸುತ್ತೇನೆಂದು ಭರವಸೆ ನೀಡಿದರು.
ಕೆ.ಆರ್.ಪೇಟೆಯನ್ನು ಗೆದ್ದಂತೆ ಶಿರಾ ಕ್ಷೇತ್ರವನ್ನೂ ಗೆಲ್ಲುವುದು ಖಚಿತ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಪ್ರಾಮಾಣಿಕವಾಗಿ ನೀವು ಗೆಲ್ಲಿಸಿಕೊಡಿ. ಇಲ್ಲೂ ಕೂಡಾ ಕೇಸರಿ ಬಾವುಟ ಹಾರಿಸಿ. ಶಿರಾ ಕ್ಷೇತ್ರವನ್ನು ನಾನು ಶಿಕಾರಿಪುರ ಕ್ಷೇತ್ರವನ್ನಾಗಿ ಮಾಡುತ್ತೇನೆ. ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಜಾರಿಗೆ ತರುವ ಮೂಲಕ ಆ ತಳ ಸಮುದಾಯಕ್ಕೆ ಸರ್ಕಾರ ಒಂದು ಗೌರವ ನೀಡಿದೆ. ಶಿರಾ ಐತಿಹಾಸಿಕ ಕ್ಷೇತ್ರವಾದ ಜುಂಜಪ್ಪನಗುಡ್ಡೆ ಅಭಿವೃದ್ಧಿಗಾಗಿ ಕೂಡಲೇ ಅನುದಾನ ಮಂಜೂರು ಮಾಡುತ್ತೇನೆಂದು ಯಡಿಯೂರಪ್ಪ ಭರವಸೆ ನೀಡಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಕಳೆದ 15 ದಿನಗಳಿಂದಲೂ ಈ ಕ್ಷೇತ್ರದಲ್ಲಿ ನಾನು ನಿರಂತರವಾಗಿ ಮತ ಯಾಚನೆಯಲ್ಲಿ ತೊಡಗಿದ್ದು ಈ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿದ್ದೇನೆ. ಸಮಗ್ರ ನೀರಾವರಿ ಯೋಜನೆಗಳನ್ನು ಈ ಕ್ಷೇತ್ರಕ್ಕೆ ತಲುಪಿಸುವ ಕೆಲಸ ಮಾಡಲು ಬಿ.ಜೆ.ಪಿ. ಪಕ್ಷದಿಂದ ಮಾತ್ರಾ ಸಾಧ್ಯವಾಗಿದ್ದು ಪಕ್ಷದ ಅಭ್ಯರ್ಥಿ ಡಾ.ರಾಜೇಶ್‍ಗೌಡರ ಗೆಲುವಿನಿಂದ ಇಡೀ ದೇಶಕ್ಕೆ ಒಂದು ದೊಡ್ಡ ಸಂದೇಶ ಹೋಗುವುದು ಖಚಿತ ಎಂದರು.
ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡ ಅವರನ್ನು ಗೆಲ್ಲಿಕೊಂಡು ಇತಿಹಾಸ ಸೃಷ್ಠಿಸಿದಂತೆ ಶಿರಾ ಕ್ಷೇತ್ರದಲ್ಲೂ ಒಂದು ಇತಿಹಾಸ ಸೃಷ್ಠಿಯಾಗಲಿದೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಯಡಿಯೂರಪ್ಪ ಅವರ ನೀಡಿದ ಭರವಸೆಯಂತೆ ಆ ಕ್ಷೇತ್ರಕ್ಕೆ 600 ಕೋಟಿ ರೂಗಳ ಅನುದಾನ ನೀಡಿ ಅಭಿವೃದ್ಧಿ ಕೈಗೊಂಡಿದ್ದಾರೆ. ಅನುಕಂಪ, ಕಣ್ಣೀರು ಹಾಕಿ ಮತ ಕೇಳಲು ಬರುವವರು ಈಗಾಗಲೇ ಹತಾಶ ಹೇಳಿಕೆ ನೀಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಯಡಿಯೂರಪ್ಪ ಅವರು ಕೇಳಿದ ವರ ನೀಡುವ ಕಾಮಧೇನು ಇದ್ದಂತೆ. ಮುಖ್ಯಮಂತ್ರಿಯಾದಾಗ ಕನಕ ಗುರುಪೀಠಕ್ಕೆ ಅದರ ಅಭಿವೃದ್ಧಿಗೆ 40 ಕೋಟಿ ರೂ ನೀಡಿದ್ದಾರೆ. ವಾಲ್ಮೀಕಿ ಜಯಂತಿ ಆಚರಣೆಯ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಸವಿತಾ ಸಮಾಜದ ಅಭಿವೃದ್ಧಿ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ, ಮಡಿವಾಳ ಸಮುದಾಯದ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಇಂತಹ ತಳ ಸಮುದಾಯಕ್ಕೂ ಗೌರವ ನೀಡಿ ಕೀರ್ತಿ ಯಡಿಯೂರಪ್ಪ ಅವರದ್ದು. ಈ ಕ್ಷೇತ್ರದಲ್ಲಿನ ಸಮಗ್ರ ಅಭಿವೃದ್ಧಿ ಆಗಲೇಬೇಕಿದೆ. ಇದಕ್ಕಾಗಿ ಬಿ.ಜೆ.ಪಿ. ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಿ ಎಂದು ಕರೆ ನಿಡಿದರು.
ಸಮಾಜ ಕಲ್ಯಾಣ ಇಲಾಖಾ ಸಚಿವ ಶ್ರೀರಾಮುಲು ಮಾತನಾಡಿ, ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದು ಉಪ ಕಣದ ಯುದ್ಧ ಮಾಡಲು ಬಂದಿರುವುದು ಛತ್ರಪತಿ ಶಿವಾಜಿಯಂತಹ ವಿಜಯೇಂದ್ರ. ವಿಜಯೇಂದ್ರ ಯುದ್ಧ ಕ್ಷೇತ್ರದಲ್ಲಿದ್ದರೆ ಅಲ್ಲಿ ಜಯ ಕಟ್ಟಿಟ್ಟ ಬುತ್ತಿ ಎಂದು ಶ್ರೀರಾಮುಲು ವಿಜಯೇಂದ್ರ ಅವರ ಶ್ರಮವನ್ನು ಶ್ಲಾಘಿಸಿದರು.
ಸಿದ್ಧರಾಮಯ್ಯ ಅವರು ಪದೇ ಪದೇ ಬಿ.ಜೆ.ಪಿ. ಪಕ್ಷ ಚೂರಿ ಹಾಕಿದೆ, ಚೂರಿ ಹಾಕಿದೆ ಎಂದು ಭಾಷಣದಲ್ಲಿ ಹೇಳುತ್ತಲೇ ಇರುತ್ತಾರೆ. ಅವರಿಗೆ ನಾವು ಚೂರಿಯನ್ನೇ ಹಾಕಿಲ್ಲ. ಜೆ.ಡಿ.ಎಸ್. ಪಕ್ಷದಲ್ಲಿದ್ದುಕೊಂಡು ಅಲ್ಲಿ ಎಲ್ಲಾ ರೀತಿಯ ಸ್ಥಾನಮಾನಗಳನ್ನೂ ಪಡೆದಿದ್ದಲ್ಲದೆ ರಾಜಕೀಯವಾಗಿ ಬೆಳೆದ ಪಕ್ಷಕ್ಕೆ ಚೂರಿ ಹಾಕಿದ್ದು ಸಿದ್ಧರಾಮಯ್ಯ ಅವರೇ ಹೊರತು ನಾವಲ್ಲ. ದೇವೇಗೌಡರು ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರೇ ಅವರ ಪಕ್ಷದವರನ್ನು ಬಿಟ್ಟು ಗೌಡರ ಬೆನ್ನಿಗೂ ಚೂರಿ ಹಾಕಿದ್ದು ಸಿದ್ಧರಾಮಯ್ಯ ಎಂಬುದನ್ನು ಅವರು ಮರೆಯಬಾರದು ಎಂದು ಶ್ರೀರಾಮಲು ಟೀಕಾಸ್ತ್ರಗೈದರು.
ಸಿದ್ಧರಾಮಯ್ಯ ಅವರು ನಾನು ಸಿ.ಎಂ.ಆದ್ರೆ 10 ಕೆ.ಜಿ. ಅಕ್ಕಿ ಉಚಿತವಾಗಿ ಕೊಡ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗೂ ಮುನ್ನವೇ ಸಿ.ಎಂ.ಸ್ಥಾನಕ್ಕೆ ಟವೆಲ್ ಹಾಕುತ್ತಾರೆ. ಇತ್ತ ಡಿ.ಕೆ.ಶಿವಕುಮಾರ್ ಕೂಡಾ ಮುಂದಿನ ಸಿ.ಎಂ.ನಾನೇ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಇವರಿಬ್ಬರೂ ಸಿ.ಎಂ. ಆಗುವ ಹಗಲುಗನಸು ಕಾಣುತ್ತಿದ್ದಾರೆ. ಒಂದು ರೀತಿಯಲ್ಲಿ ಮ್ಯೂಸಿಕಲ್‍ಚೇರ್ ಆಟವನ್ನು ಇಬ್ಬರೂ ಶುರು ಮಾಡಿದ್ದಾರೆ. ಯಡಿಯೂರಪ್ಪ ಭದ್ರವಾಗಿ ಕುರ್ಚಿಯಲ್ಲಿ ಕೂತಿದ್ದಾರೆ. ಖಾಲಿ ಇಲ್ಲದ ಕುರ್ಚಿಗೆ ನೀವಿಬ್ಬರೂ ಯಾಕೆ ಕಿತ್ತಾಡುತ್ತೀರಿ? ಎಂದು ಶ್ರೀರಾಮುಲು ಲೇವಡಿ ಮಾಡಿದರು.
ಕೇಂದ್ರ ಸಚಿವ ಡಿ.ಬಿ.ಸದಾನಂದಗೌಡ ಮಾತನಾಡಿ, ಭ್ರಷ್ಠಾಚಾರ ಮುಕ್ತ ಆಡಳಿತ ಮೋದಿಯವರದ್ದು. ಜಗತ್ತಿನ ಯಶಸ್ವಿ ರಾಷ್ಟ್ರದ ಕನಸು ಅವರಲ್ಲಿದೆ. ರೈತರ ಸಂಕಷ್ಟ ನಿವಾರಣೆ ಮಾಡುವಂತಹ, ಕಾರ್ಮಿಕರ ಸಮಸ್ಯೆಗಳನ್ನು ದೂರಗೊಳಿಸುವಂತ ತಿದ್ದುಪಡಿ ಕಾಯಿದೆಗಳನ್ನೂ ವಿರೋಧಿಸುವಂತಹ ಜನ ನಮ್ಮಲ್ಲಿದ್ದಾರೆ. ಎ.ಪಿ.ಎಂ.ಸಿ. ಕಾಯಿದೆ ತಿದ್ದುಪಡಿಯಿಂದ ಯಾವುದೇ ರೈತ ಸ್ವತಂತ್ರವಾಗಿ ತಾನು ಬೆಲೆದ ಬೆಳೆ ಮಾರಾಟ ಮಾಡಬಹುದಾಗಿದ್ದು ಮಧ್ಯವರ್ತಿಗಳ ಹಾವಳಿಯೂ ಇರುವುದಿಲ್ಲ. ಕುಂಚಿಟಿಗ ಸಮುದಾಯವನ್ನು ಓ.ಬಿ.ಸಿ.ಗೆ ಸೇರಿಸುವ ಸಂಬಂಧವೂ ಸರ್ಕಾರ ಚಿಂತನೆ ನಡೆಸಿದ್ದು ಶಿರಾದಲ್ಲೂ ಡಾ.ರಾಜೇಶ್‍ಗೌಡ ಅವರನ್ನು ಬೆಂಬಲಿಸುವ ಮೂಲಕ ಸರ್ಕಾರವನ್ನು ಸುಭದ್ರವಾಗಿಸಬೇಕಿದೆ ಎಂದರು.
ಸಚಿವ ನಾರಾಯಣಗೌಡ, ಸಂಸದ ಪ್ರತಾಪ್‍ಸಿಂಹ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸುರೇಶ್‍ಗೌಡ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ, ಸಂಸದ ಎ.ನಾರಾಯಣಸ್ವಾಮಿ, ಪಿ.ಸಿ.ಮೋಹನ್, ರೇಣುಕಾಚಾರ್ಯ, ಬಿ.ಸಿ.ನಾಗೇಶ್, ತಿಪ್ಪಾರೆಡ್ಡಿ, ಪ್ರೀತಂಗೌಡ, ಚಿದಾನಂದ್ ಎಂ.ಗೌಡ, ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ