ಶಿರಾ :
ಶಿರಾ ಅಂದರೆ ಸಾಕು ಇದೊಂದು ಬರದ ಬೀಡು ಅನ್ನುವುದು ಸಹಜವೇ ಆಗಿದೆ. ಕೇವಲ ಬಿಸಿಲ ಬೇಗೆಯ ಬರದ ಬೀಡಷ್ಟೇ ಆಗದ ಈ ಭಾಗವು ಇತ್ತೀಚೆಗೆ ಒಂದಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿಯೇ ಇರುತ್ತದೆ.
ಒಳಿತಾಗಲಿ, ಒಂದಷ್ಟು ನಡೆಯಬಾರದಂತಹ ಕೆಡುಕಿನ ಪ್ರಕರಣಗಳಾಗಲಿ, ಒಳಿತು ಕೆಡುಕುಗಳೆನ್ನದೆ ಕೆಲವೊಮ್ಮೆ ಶಿರಾ ಭಾಗ ತನಗರಿವಿಲ್ಲದಂತೆಯೇ ಒಂದಷ್ಟು ಸುದ್ದಿಯಲ್ಲಿರುವುದಂತೂ ತಪ್ಪಿಯೇ ಇಲ್ಲ.
ಮೊದಲನೇ ಹಂತದ ಕೋವಿಡ್-19 ಪ್ರಕರಣದಡಿಯಲ್ಲಿ ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಕೋವಿಡ್ ಪ್ರಕರಣದಿಂದ ವ್ಯಕ್ತಿ ಮೃತಪಟ್ಟದ್ದು ಶಿರಾ ನಗರದಲ್ಲಿ ಅನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆಗ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮೂಲಕ ಕೋವಿಡ್ ಸೋಂಕಿನಲ್ಲಿ ಜಿಲ್ಲೆಯಲ್ಲಿಯೇ ಶಿರಾ ಪ್ರಥಮ ಸ್ಥಾನ ಪಡೆದಿದ್ದೂ ಉಂಟು.
ಶಿರಾ ತಾಲ್ಲೂಕಿಗೆ ಪ್ರಯಾಣ ಬೆಳೆಸುವುದೆಂದರೆ ಕೋವಿಡ್ ಸೋಂಕನ್ನು ಹೊತ್ತುಕೊಂಡು ಬಂದಂತೆ ಅನ್ನುವಂತಹ ಭೀಕರ ಭಯದ ವಾತಾವರಣ ಕಳೆದ ವರ್ಷದ ಇದೇ ತಿಂಗಳಲ್ಲಿ ಕಂಡು ಬಂದಿತ್ತು. ಕಳೆದ ವರ್ಷದ ಮಾರ್ಚ್, ಏಪ್ರಿಲ್ ತಿಂಗಳು ಶಿರಾ ಭಾಗಕ್ಕೆ ಕೋವಿಡ್ ಸೋಂಕು ಕರಾಳ ಛಾಯೆಯನ್ನು ಮೂಡಿಸಿತ್ತು.
ಬೆಂಗಳೂರಿನ ಪಾದರಾಯನಪುರ, ಆಂದ್ರದ ಹಿಂದೂಪುರ, ಮುಂಬೈ, ದೆಹಲಿ…ಹೀಗೆ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದ ಸ್ಥಳಗಳಿಗೆ ಹೋಗಿ ಬಂದ ಅನೇಕ ಮಂದಿ ಕೊರೋನಾ ಮಹಾ ಮಾರಿಯನ್ನು ಹೊತ್ತು ತಂದು ನಗರದಲ್ಲೂ ಬಿತ್ತಿದ್ದು ಇನ್ನೂ ಮಾಸದ ಸಂಗತಿಯೇ ಆಗಿದೆ.
ಈಗ ಎರಡನೇ ಹಂತದ ಕೋವಿಡ್ ಸೋಂಕು ರಾಜ್ಯಕ್ಕೆ ಅಪ್ಪಳಿಸಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೇ ಶಿರಾ ತಾಲ್ಲೂಕಿನಲ್ಲೂ ಹೆಚ್ಚು ಪ್ರಕರಣಗಳು ಮತ್ತೆ ದಾಖಲಾಗುತ್ತಿವೆ. 2ನೇ ಹಂತದ ಪ್ರಕರಣದ ಆರಂಭದಲ್ಲಿ ಕೇವಲ ಎರಡು ಮೂರು ಇದ್ದ ಕೋವಿಡ್ ಪ್ರಕರಣ ಇದೀಗ 10, 15, 20, 30…ಹೀಗೆ ಹಂತ ಹಂತವಾಗಿ ಏರಿಕೆಯಾಗುತ್ತಲೇ ಇದೆ. ಕಳೆದ ತಿಂಗಳು ವಿದ್ಯಾರ್ಥಿ ನಿಲಯಯವೊಂದರಲ್ಲಿ 6 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಲ್ಲಿ ಈ ಸೋಂಕು ಕಂಡು ಬಂದು ಎರಡು ಮೂರು ದಿನಗಳಾದರೂ ವಿದ್ಯಾರ್ಥಿ ನಿಲಯದಲ್ಲಿ ಈ ಬಗ್ಗೆ ಯಾರಿಗೂ ಸುಳಿವು ನೀಡದ ಪರಿಣಾಮ ಒಂದಷ್ಟು ಆತಂಕದ ಸುದ್ದಿಗೂ ಈ ವಿಚಾರ ಕಾರಣವಾಗಿತ್ತು.
ಇದೀಗ 2ನೇ ಹಂತದ ಪ್ರಕರಣ ಹೆಚ್ಚಾಗುತ್ತಿದ್ದರೂ ಅರಿವು ಮೂಡಿಸುವ ವ್ಯಾಪಕ ಪ್ರಚಾರದ ಕೊರತೆಯೂ ಹೆಚ್ಚಾಗಿದೆ. ಸಾರ್ವಜನಿಕರಲ್ಲಿ ತಾವೇ ಸ್ವತಃ ಎಚ್ಚರಿಕೆ ತೆಗೆದುಕೊಳ್ಳುವ ವ್ಯವದಾನವಿರಬೇಕು ನಿಜ ಆದರೆ ಸರ್ಕಾರ ಹೇರಿದ ನಿಬಂಧನೆಗಳೊಂದೂ ಕೂಡಾ ತಾಲ್ಲೂಕಿನಾಧ್ಯಂತ ಪರಿಪಾಲನೆಯಾಗುತ್ತಿಲ್ಲವೆಂಬುದು ಹಗಲಿನಷ್ಟೇ ಸತ್ಯ.
ಈ ಕ್ಷೇತ್ರದ ಜನಪ್ರತಿನಿಧಿಗಳು, ಸರ್ಕಾರದ ಸೇವೆಯಲ್ಲಿರುವವರೂ ಕೂಡಾ ಕೋವಿಡ್ ನಿಯಮಗಳನ್ನು ಪಾಲಿಸುವಲ್ಲಿ ಬಹುತೇಕ ಮಂದಿ ಎಡವುತ್ತಿರುವುದು ಮುಂದಿನ ಅಪಾಯದ ಮುನ್ಸೂಚನೆಗೆ ಕಾರಣವೂ ಆಗಿದೆ. ಸರ್ಕಾರಿ ಕಛೇರಿಯ ಕಾರ್ಯಕ್ರಮಗಳು, ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮ, ಶಂಕುಸ್ಥಾಪನೆಗಳ ಕಾರ್ಯಕ್ರಮಗಳಲ್ಲಿಯೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.
ತಾಲ್ಲೂಕಿನ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿಯೇ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳೇ ವಿಫಲರಾಗಿದ್ದಾರೆ. ತಾಲ್ಲೂಕು ದಂಡಾಧಿಕಾರಿಗಳ ಕಛೇರಿಯಿಂದಾ ಹಿಡಿದು ನಗರದ ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರು ಕಛೇರಿಯೊಳಗೆ ಪ್ರವೇಶಿಸುವ ಮುನ್ನ ಸ್ಯಾನಿಟರೈಸ್ ಹಾಕುವ ಇಲ್ಲವೇ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಹಾಕಿಸುವಂತಹ ಕೆಲಸಗಳನ್ನೂ ಮಾಡುತ್ತಿಲ್ಲ.
ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಸಾರ್ವಜನಿಕ ಕೆಲಸಗಳಿಗೆಂದು ಸರ್ಕಾರಿ ಕಛೇರಿಗಳಿಗೆ ಬಂದ ಅನೇಕ ಮಂದಿ ಮಾಸ್ಕ್‍ಗಳನ್ನು ಧರಿಸದಿದ್ದರೂ ಇಡೀ ಕಛೇರಿಯಲ್ಲಿ ಓಡಾಡಿಕೊಂಡು ಹೋಗಬಹುದೆನ್ನುವಷ್ಟರ ಮಟ್ಟಿಗೆ ಸರ್ಕಾರಿ ಕಛೇರಿಗಳೆಲ್ಲವೂ ಸಲಿಗೆಯ ಕಛೇರಿಗಳಾಗಿಬಿಟ್ಟಿವೆ.
ಮರೆತು ಹೋಯಿತಾ ಮಾಸ್ಕ್:
ಬಾಯಿಯಲ್ಲಿ ಇರಬೇಕಾದ ಮಾಸ್ಕ್‍ಗಳೆಲ್ಲವೂ ಈಗ ಅನೇಕ ಮಂದಿಯ ಗದ್ದಕ್ಕೆ ಬಂದಿದ್ದು ನಗರದ ಜನ ಮಾಸ್ಕ್‍ಗಳನ್ನು ಮರೆತೇ ಬಿಟ್ಟಿದ್ದಾರೆ. ಮೊದಲನೇ ಹಂತದ ಕೋವಿಡ್‍ನಿಂದ ಇನ್ನೂ ಆರ್ಥಿಕವಾಗಿ ಸಬಲರಾಗದ ಅನೇಕ ಕುಟುಂಬಗಳು ದುಡ್ಡು ಕೊಟ್ಟು ಮಾಸ್ಕ್‍ಗಳನ್ನು ಪಡೆಯುವುದೂ ಕೂಡಾ ಕಷ್ಟವಿದ್ದು ಈಗ ಉಚಿತ ಮಾಸ್ಕ್ ನೀಡುವವರೆಲ್ಲರೂ ಕಣ್ಮರೆಯಾಗಿಬಿಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಹಾಗೂ ಇನ್ನೇನು ನಗರಸಭಾ ಚುನಾವಣೆಯೂ ಸಮೀಪಿಸಿಬಿಡುತ್ತದೆ ಎಂದು ಸಾರ್ವಜನಿಕರಿಗೆ ಉಚಿತವಾಗಿ ಸಾವಿರಾರು ರೂಗಳನ್ನು ತೆತ್ತು ಮಾಸ್ಕ್‍ಗಳನ್ನು ಅನೇಕ ಮಂದಿಗೆ ಉಚಿತವಾಗಿ ನೀಡಿ ನಿಜಕ್ಕೂ ಕೆಲವು ದಾನಿಗಳು ಗೌರವಕ್ಕೆ ಪಾತ್ರರಾಗಿದ್ದು ಪ್ರಶಂಸನೀಯವೇ ಸರಿ.
ಈಗ ಎರಡನೇ ಹಂತದ ಕೋವಿಡ್ ಪ್ರಕರಣ ಉಲ್ಪಣಗೊಂಡು ಮತ್ತೊಮ್ಮೆ ಭೀತಿಯ ವಾತಾವರಣ ಸೃಷ್ಠಿಯಾಗುವ ಹಂತ ತಲುಪುತ್ತಿದ್ದರೂ ಉಚಿತ ಮಾಸ್ಕ್, ಸ್ಯಾನಿಟೈಸರ್ ನೀಡುವ ಮಂದಿ ಈಗ ಕೈಚೆಲ್ಲಿ ಕೂತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ನಿರಾಶ್ರಿತರಿಗಾದರೂ ಉಚಿತ ಮಾಸ್ಕ್ ನೀಡುವ ಮಂದಿ ಇದೀಗ ಮೌನಗೊಂಡಿದ್ದಾರೆ.
ನಗರದ ಆರಕ್ಷಕ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಆಗ ಸಮಾಜಸೇವಕರಾಗಿ ಇದೀಗ ಶಾಸಕರಾಗಿರುವ ಡಾ.ರಾಜೇಶ್‍ಗೌಡ ಅವರು ಉಚಿತವಾಗಿ ನೀಡಿದ ಸ್ಯಾನಿಟರೈಸ್ ಸುರಂಗ ಯಂತ್ರಗಳು ಇದೀಗ ಕಣ್ಣಿಗೆ ಕಾಣದಂತಾಗಿಬಿಟ್ಟಿವೆ. ಈ ಕಛೇರಿಗಳ ಅಧಿಕಾರಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಗೋಜಿಗೂ ಹೋಗದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಕಳೆದ ಎರಡು ದಿನಗಳ ಹಿಂದೆ ಜಿಲ್ಲಾ ಸಚಿವರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಂತೆ ಕಾಣುತ್ತಲೇ ಇಲ್ಲ. ತಾಲ್ಲೂಕು ದಂಡಾಧಿಕಾರಿಗಳು ಮಾತ್ರಾ ನಗರಸಭೆಯ ಹಾಗೂ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ವ್ಯಾಕ್ಸಿನೇಷನ್ ಬಗ್ಗೆ ಅರಿವು ಮೂಡಿಸುತ್ತಿರುವುದನ್ನು ಬಿಟ್ಟರೆ ಉಳಿದಂತೆ ಕೋವಿಡ್ ಜಾಗೃತಿ ಕಾರ್ಯಕ್ರಮ ಸಂಪೂರ್ಣ ಹಿನ್ನಡೆಯಾಗಿದೆ.
ಅತ್ಯಂತ ಅಚ್ಚರಿ ಹಾಗೂ ವಿಪರ್ಯಾಸದ ಸಂಗತಿ ಎಂದರೆ ಕಳೆದ 15-20 ದಿನಗಳ ಹಿಂದೆ ಅನೇಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೋವಿಡ್ ಸ್ವಾಬ್ ಟೆಸ್ಟ್ ಮಾಡಿಸಿದ್ದರಾದರೂ ಈವರೆಗೂ ಅದರ ಫಲಿತಾಂಶ ಬಾರದೆ ಕಾಯುತ್ತಾ ಕುಳಿತಿದ್ದಾರೆ.
ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡ ಕೆಲ ವಿದ್ಯಾರ್ಥಿಗಳು ಕೂಡಲೇ ಹೋಗಿ ಶಿರಾ ಆಸ್ಪತ್ರೆಯಲ್ಲಿ ಸ್ವಾಬ್‍ಟೆಸ್ಟ್ ಮಾಡಿಸಿ 10-15 ದಿನಗಳಾಗುತ್ತಾ ಬಂದರೂ ಈವರೆಗೂ ಅದರ ಫಲಿತಾಂಶ ಬಂದಿಲ್ಲವಾದರಿಂದ ಮಕ್ಕಳು ಶಾಲಾ, ಕಾಲೇಜಿನ ಕಡೆ ಹೋಗಲು ಕೂಡಾ ಹೆದರುವಂತಾಗಿದೆ. ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆಯುವ ಸ್ವಾಬ್‍ಟೆಸ್ಟ್ ಫಲಿತಾಂಶ ತುಂಬಾ ತಡವಾಗಿ ಬರುತ್ತಿದ್ದು ಈ ಬಗ್ಗೆ ಸಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ವಾಬ್‍ಟೆಸ್ಟ್ ನೀಡಿದ ಬಹುತೇಕ ವಿದ್ಯಾರ್ಥಿಗಳು ಪತ್ರಿಕೆಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪರೀಕ್ಷೆಗೆ ಒಳಪಟ್ಟವರ ಫಲಿತಾಂಶ ಪಾಸಿಟೀವ್ ಆಗಿದ್ದರೆ ಈ ಫಲಿತಾಂಶ ಬರುವ ಮುನ್ನವೇ ಪಾಸಿಟೀವ್‍ಗೆ ಒಳಗಾದ ವ್ಯಕ್ತಿ ಅದೆಷ್ಟು ಜನರಿಗೆ ಸೋಂಕನ್ನು ಅಂಟಿಸಿರುತ್ತಾನೆಯೋ ಎಂಬುದನ್ನು ಸ್ಮರಿಸಿಕೊಂಡರೆ ನಿಜಕ್ಕೂ ಭೀತಿಯಾಗದೇ ಇರದು.
ಇನ್ನಾದರೂ ಶಿರಾ ಸರ್ಕಾರಿ ಕಛೇರಿಗಳ ಅಧಿಕಾರಿಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂಧಿ ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಶಿರಾ ಭಾಗವು ಮತ್ತೊಮ್ಮೆ ಕೋವಿಡ್ ಸಂದಿಗ್ದತೆಯನ್ನು ಎದುರಿಸಬೇಕಾಗಬಹುದೆಂಬ ಎಚ್ಚರಿಕೆಯ ಅಗತ್ಯವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ