ಶಿರಾ:
ಕೊರೋನಾ ಮಹಾಮಾರಿಯ ಸೋಂಕು ಶಿರಾ ನಗರವನ್ನು ಪ್ರವೇಶಿಸದಿರುವಂತೆ ತಾಲ್ಲೂಕು ಆಡಳಿತ ತೀವ್ರತರವಾದ ಕಸರತ್ತು ನಡೆಸಿದೆ. ನಗರಕ್ಕೆ ಹೊಂದಿಕೊಂಡಂತೆ ಇರುವ ಎಲ್ಲಾ ಹೆದ್ದಾರಿಗಳನ್ನು ಮಂಗಳವಾರ ಬಂದ್ ಮಾಡಿಸಿದ್ದು, ಇದರಿಂದ ವಾಹನ ಚಾಲಕರು ಪರದಾಡುವಂತಾಯಿತು.
ಲಾಕ್‍ಡೌನ್ ಇದ್ದಾಗ ಹೆದ್ದಾರಿಗಳನ್ನು ಬಂದ್ ಮಾಡಲು ಮುಂದಾಗದ ತಾಲ್ಲೂಕು ಆಡಳಿತ, ಇನ್ನೇನು ಲಾಕ್‍ಡೌನ್ ಪೂರ್ಣವಾಗಿ ಸಡಿಲಗೊಳ್ಳಬಹುದೆನ್ನುವ ಸಮಯದಲ್ಲಿ ಮಂಗಳವಾರ ಬೆಳಗ್ಗೆ ಹೆದ್ದಾರಿಗಳ ಬಂದ್‍ಗೆ ಕ್ರಮ ಕೈಗೊಂಡಾಗ ನಗರದ ಜನತೆಗೆ ದಿಢೀರ್ ಆತಂಕ ಶುರುವಾಯಿತು.
ಬೆಳ್ಳಂಬೆಳಗ್ಗೆ ನಗರಸಭೆಯ ಸಿಬ್ಬಂದಿ ಜೆ.ಸಿ.ಬಿ.ಗಳ ಮೂಲಕ ಹೆದ್ದರಿ ರಸ್ತೆಗಳಿಗೆ ಮಣ್ಣು ಸುರಿದು, ಯಾರೂ ನುಸುಳದಂತೆ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು ಜನತೆಗೆ ಅಚ್ಚರಿ ಮೂಡಿಸಿತು.
ಶಿರಾ ನಗರದಲ್ಲಿ ಕೊರೋನಾ ಸೋಂಕಿನಿಂದ ಓರ್ವ ವ್ಯಕ್ತಿ ಮೃತಪಟ್ಟು, ಇಬ್ಬರಿಗೆ ಸೋಂಕು ಕಾಣಿಸಿಕೊಂಡು, ಓರ್ವ ಬಾಲಕ ಸೋಂಕಿನಿಂದ ಚೇತರಿಸಿಕೊಂಡಿದ್ದಾನೆ. ಕಳೆದ ಮೂರು ದಿನಗಳ ಹಿಂದಷ್ಟೇ ಪಾದರಾಯನಪುರದ ಸೋಂಕು ಶಿರಾದಲ್ಲೂ ಕಾಣಿಸಿಕೊಂಡ ಪರಿಣಾಮ ಒಂದೆರಡು ದಿನಗಳಿಂದಲೂ ನಗರದ ಜನತೆಯಲ್ಲಿ ಆತಂಕದ ವಾತಾವರಣವಿದೆ.
ಪಾದರಾಯನಪುರದಿಂದ ಸೋಂಕನ್ನು ಶಿರಾಕ್ಕೆ ಹೊತ್ತು ತಂದ ವ್ಯಕ್ತಿಯ ಕುಟುಂಬ ಹಾಗೂ ಖಾಸಗಿ ವಾಹನ ಚಾಲಕನ ಕುಟುಂಬಗಳನ್ನು ಕ್ವಾರಂಟೈನ್‍ನಲ್ಲಿಡಲಾಗಿದ್ದು, ಕ್ವಾರಂಟೈನ್‍ನಲ್ಲಿರುವವರ ಪರೀಕ್ಷಾ ವರದಿಯ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.
ಲಾಕ್‍ಡೌನ್ ಸಡಿಲಿಕೆಯ ನಂತರ ಅನ್ಯ ರಾಜ್ಯಗಳಿಂದ ಕೆಲ ಮಂದಿ ಶಿರಾ ನಗರ ಪ್ರವೇಶಿಸಿದ್ದಾರೆ ಎಂಬ ವ್ಯಾಪಕ ವದಂತಿಯೂ ಹರಡಿತು. ಬೇರೆ ರಾಜ್ಯಗಳಿಂದ ತಮ್ಮ ಬಡಾವಣೆಗಳಿಗೆ ಬಂದವರ ಬಗ್ಗೆ ಆಯಾ ಬಡಾವಣೆಗಳ ಸಾರ್ವಜನಿಕರು ಅಧಿಕಾರಿಗಳಿಗೆ ಸುಳಿವು ನೀಡಲು ಮುಂದಾಗಿದ್ದು ಪ್ರಶಂಸಾರ್ಹವೇ ಸರಿ.
ಲಾಕ್‍ಡೌನ್ ಸಡಿಲಿಕೆಯ ನಂತರ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕೆಲ ಮಂದಿ ಶಿರಾ ನಗರಕ್ಕೆ ಪ್ರವೇಶ ಮಾಡಿದ ಪರಿಣಾಮ ಕೂಡಲೆ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಹಿರಿಯೂರು ಕಡೆಯಿಂದ ಶಿರಾ ನಗರದ ಕಡೆ ಹಾಗೂ ತುಮಕೂರು ಕಡೆಯಿಂದ ಶಿರಾ ನಗರದ ಕಡೆ ಬರುವ ಹೆದ್ದಾರಿಗಳೆರಡನ್ನೂ ಬಂದ್ ಮಾಡಿದೆ.
ತುಮಕೂರು, ಹಿರಿಯೂರು ಭಾಗದಿಂದ ಶಿರಾ ನಗರದೊಳಕ್ಕೆ ಒಳ ಬರುವ ಎಲ್ಲಾ ವಾಹನಗಳು ಬುಕ್ಕಾಪಟ್ಟಣ ರಸ್ತೆಯ ರಿಲೆಯನ್ಸ್ ಪೆಟ್ರೋಲ್ ಬಂಕ್ ಸಮೀಪದ ಚೆಕ್‍ಪೋಸ್ಟ್ ಮೂಲಕವೆ ಹಾದು ಹೋಗಬೇಕಿದೆ.
ಮಧುಗಿರಿ ಕಡೆಯಿಂದ ಬರುವ ವಾಹನಗಳು ಶಿರಾ ದೊಡ್ಡಕೆರೆ ಹಿಂಭಾಗದಲ್ಲಿರುವ ಚೆಕ್‍ಪೋಸ್ಟ್ ಮೂಲಕವೆ ಸಾಗಿ ಬರಬೇಕಿದೆ. ಹುಲಿಕುಂಟೆ ಹೋಬಳಿ, ಆಂಧ್ರ ಪ್ರದೇಶದ ಕಡೆಯಿಂದ ಶಿರಾ ನಗರಕ್ಕೆ ಬರುವ ವಾಹನಗಳು ಶಿರಾ-ಅಮರಾಪುರ ರಸ್ತೆಯಲ್ಲಿರುವ ಓಜಗುಂಟೆ ಬಳಿಯ ಚೆಕ್‍ಪೋಸ್ಟ್ ಮೂಲಕ ಸಾಗಿ ಬರಬೇಕಿದ್ದು, ಗೌಡಗೆರೆ ಹೋಬಳಿ ಭಾಗದ ವಾಹನಗಳು ಗುಡ್ಡದಹಟ್ಟಿ ಬಳಿಯ ಚೆಕ್‍ಪೋಸ್ಟ್ ಮೂಲಕವೇ ಒಳ ಬರಬೇಕಿದೆ.
ಸೋಮವಾರ ಬೆಳಗ್ಗೆ ಆರಕ್ಷಕ ಇಲಾಖೆಯೊಟ್ಟಿಗೆ ನಗರಸಭೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಶಿರಾ ನಗರದೊಳಕ್ಕೆ ಬರುವ ಹೆದ್ದಾರಿಗಳನ್ನು ಬಂದ್ ಮಾಡಿರುವುದನ್ನು ತಿಳಿದು ಮತ್ತಷ್ಟು ಕೊರೋನಾ ಪಾಸಿಟೀವ್ ಬರಬಹುದೆಂಬ ಆತಂಕ ಸಾರ್ವಜನಿಕರಲ್ಲಿದೆ.
ಈ ನಡುವೆ ಶಿರಾ ನಗರದ ನಾಲ್ಕು ದಿಕ್ಕುಗಳಲ್ಲೂ ಆರಕ್ಷಕ ಇಲಾಖೆ, ನಗರಸಭೆÉ ಹಾಗೂ ಕಂದಾಯ ಇಲಾಖಾ ಸಿಬ್ಬಂದಿ ವ್ಯಾಪಕ ಬಂದೋಬಸ್ತಿನ ಕ್ರಮ ಕೈಗೊಂಡಿದ್ದು, ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ದಂಡವನ್ನು ವಿಧಿಸುತ್ತಿದ್ದಾರೆ.
ಲಾಕ್‍ಡೌನ್ ಸಡಿಲಿಕೆಯಾದೊಡನೆ ನಗರದಲ್ಲಿ ಯಥಾಸ್ಥಿತಿಯ ವ್ಯಾಪಾರ ವಹಿವಾಟು ನಡೆಯುತ್ತದೆ ಎಂಬ ಭಾವನೆ ಹಲವರಲ್ಲಿತ್ತು. ಹಲವು ಅಂಗಡಿ-ಮುಂಗಟ್ಟುಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದರೂ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಒಂದಿಷ್ಟು ವಹಿವಾಟು ನಡೆಯುವುದು ಬಿಟ್ಟರೆ, ಉಳಿದಂತೆ ಸಾರ್ವಜನಿಕರು ಹಾಗೂ ಅಂಗಡಿಗಳ ಮಾಲೀಕರೆ ಅಂಗಡಿಗಳನ್ನು ಬಂದ್ ಮಾಡಿಕೊಳ್ಳುತ್ತಿರುವುದು ಸ್ತುತ್ತ್ಯಾರ್ಹವೆ ಸರಿ.
ಬೀದಿ ಬದಿಯ ವ್ಯಾಪಾರಕ್ಕಂತು ಬಹುತೇಕ ಕಡಿವಾಣ ಬಿದ್ದಿದ್ದು ಆರಕ್ಷಕ ಸಿಬ್ಬಂದಿಯ ಬಿಗಿ ಬಂದೋಬಸ್ತಿನ ಕಾರಣದಿಂದಾಗಿ ಬೀದಿ ಬದಿಯ ವ್ಯಾಪಾರಸ್ಥರು ಇನ್ನೂ ತಮ್ಮ ಚಟುವಟಿಕೆ ಆರಂಭಿಸದಿರಲು ಕಾರಣವಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಪಾದರಾಯನಪುರದ ಸೋಂಕು ಕಾಣಿಸಿಕೊಳ್ಳದಂತೆ ತಾಲ್ಲೂಕು ಆಡಳಿತ ಬಿಗಿ ಕ್ರಮ ಕೈಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ