ಶಿರಾ :
ತಾಲ್ಲೂಕಿನ ಶಿರಾ ಕೆರೆಯಲ್ಲಿನ ಹೇಮಾವತಿಯ ನೀರು ಕೇವಲ ಒಂದು ತಿಂಗಳಲ್ಲಿ ಖಾಲಿಯಾಗಲಿದ್ದು, ಈಗಾಗಲೆ ಸಂಪೂರ್ಣವಾಗಿ ಖಾಲಿಯಾಗಿರುವ ಕಳ್ಳಂಬೆಳ್ಳ ಕೆರೆ ಮತ್ತು ನೀರಿನ ರುಚಿಯನ್ನೆ ಕಾಣದ ಮದಲೂರು ಕೆರೆಗೆ ಕುಡಿಯಲು ನೀರನ್ನು ಹರಿಸುವಂತೆ ಶಾಸಕ ಬಿ.ಸತ್ಯನಾರಾಯಣ್ ಒತ್ತಾಯಿಸಿದರು.
ಶಿರಾ ನಗರದ ಕುಡಿಯುವ ನೀರನ್ನು ಪೂರೈಸುವ ದೊಡ್ಡ ಕೆರೆ ಜಲ ಸಂಗ್ರಹಾಗಾರಕ್ಕೆ ಸೋಮವಾರ ಭೇಟಿ ನೀಡಿದ ಶಾಸಕರು, ಕೆರೆಯ ನೀರಿನ ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲ ಹಂತದಲ್ಲಿ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಕುಡಿಯುವ ಸಲುವಾಗಿ ಹೇಮಾವತಿಯ ನೀರನ್ನು ಪೂರೈಕೆ ಮಾಡಲಾಗಿತ್ತು. ಮಳೆಯೆ ಬಾರದ ಪರಿಣಾಮ ಅತ್ಯಂತ ಕಷ್ಟದಿಂದಲೆ ಶಿರಾ ಕೆರೆಯನ್ನು ತುಂಬಿಸಿಕೊಳ್ಳಲಾಗಿತ್ತು ಆದರೆ ಕಳ್ಳಂಬೆಳ್ಳ ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಿಕೊಳ್ಳಲಾಗಲೆ ಇಲ್ಲ ಎಂದು ಶಾಸಕರು ತಿಳಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಮನೆಯಲ್ಲಿಯೆ ಇರುವ ನಗರದ ಜನತೆಗೆ ನೀರಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಗರಸಭೆಯಿಂದ ಅಗತ್ಯಕ್ಕೆ ತಕ್ಕಂತೆ ನೀರನ್ನು ಪೂರೈಸಲು ಸೂಚನೆ ನೀಡಲಾಗಿತ್ತು. ಈ ಕಾರಣದಿಂದ ನೀರು ಬೇಗನೆ ಮುಗಿಯಲು ಕಾರಣವಾಯಿತು. ಹಾಲಿ ಇರುವ ನೀರು ಕೇವಲ ಒಂದು ತಿಂಗಳು ಮಾತ್ರ ಬಳಕೆಗೆ ಬರಲಿದ್ದು, ಈ ಕೂಡಲೆ ಸರ್ಕಾರ ಶಿರಾ ಹಾಗೂ ಕಳ್ಳಂಬೆಳ್ಳ ಸೇರಿದಂತೆ ನಿಗದಿತ ಕೆರೆಗಳಿಗೆ ಉಳಿಕೆಯ ನೀರನ್ನು ಪೂರೈಕೆ ಮಾಡುವಂತೆ ಶಾಸಕರು ಒತ್ತಾಯಿಸಿದರು.
ಈ ಹಿಂದೆ ಜಿ.ಪಂ. ಸಭೆಯಲ್ಲಿ ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರೆ ಭರವಸೆ ನೀಡಿದ್ದರಾದರೂ, ಈವರೆಗೂ ನೀರನ್ನು ಹರಿಸಿಲ್ಲ. ಮಳೆ ಬಾರದೆ ಇದ್ದಲ್ಲಿ ಇನ್ನು ಒಂದು ತಿಂಗಳೊಳಗೆ ನಗರಕ್ಕೆ ನೀರಿನ ಸಮಸ್ಯೆ ಉಂಟಾಗಲಿದೆ. ಕಳ್ಳಂಬೆಳ್ಳ ಭಾಗದ ಅಂತರ್ಜಲವೂ ಕುಗ್ಗಲಿದೆ. ಈ ಕೂಡಲೆ ಜಿಲ್ಲಾ ಸಚಿವರು ಹೇಮಾವತಿಯ ನೀರನ್ನು ಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ನಗರಸಭೆ ಆಯುಕ್ತ ಪರಮೇಶ್ವರಪ್ಪ, ಎ.ಇ.ಇ. ಶಾರದ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ನಗರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ಆರ್.ರಾಮು, ಕೋಟೆ ರವಿ, ಕೋಟೆ ಮಹಾದೇವ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.








