ಶಿರಾ :
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಸಂಬಂಧ ಅಧಿವೇಶನದಲ್ಲಿ ನೀಡಿದ ಹೇಳಿಕೆಗಳು ತುಂಬಾ ನೋವು ತಂದಿದ್ದು, ಇದೀಗ ಹಿಂದುಳಿದ ವರ್ಗದ ಆಯೋಗವು ಸರ್ಕಾರಕ್ಕೆ ಈ ಸಂಬಂಧ ಸೂಚನೆ ನೀಡಿರುವುದು ಸಂತಸ ತಂದಿದೆ. ಆದರೂ 2 ಎ ಮೀಸಲಾತಿ ಪಡೆಯುವ ತನಕ ಮಠಕ್ಕೆ ಹಿಂದಿರುಗುವುದಿಲ್ಲವೆಂದು ಭಕ್ತರಿಗೆ ಮಾತು ಕೊಟ್ಟಿದ್ದೇವೆ. ಅಲ್ಲಿಯವರೆಗೂ ಈ ಹೋರಾಟ ಅನಿವಾರ್ಯ ಎಂದು ಲಿಂಗಾಯಿತ ಪಂಚಮಸಾಲಿ ಕೂಡಲ ಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶಿರಾ ನಗರದ ಹೊರವಲಯದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು ನೀಡಿದ್ದರು. ಅವರು ತಮ್ಮ ಮಾತನ್ನು ಉಳಿಸಿಕೊಂಡು ಮೀಸಲಾತಿ ನೀಡಿದರೆ ಪಂಚಮಸಾಲಿಗಳು ಅವರನ್ನು ಸ್ಮರಿಸುತ್ತಾರೆ ಎಂದರು.
ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2 ಎಗೆ ಸೇರ್ಪಡೆ ಮಾಡಿದ ಕೂಡಲೆ ರಾಜದಾನಿಯಲ್ಲಿ 10 ಲಕ್ಷ ಜನರನ್ನು ಸೇರಿಸಿ ವಿಜಯೋತ್ಸವ ಸಭೆ ಮಡಿ, ಮುಖ್ಯಮಂತ್ರಿಗಳನ್ನು ಅಭಿನಂದಿಸಲಾಗುವುದು. ನಮ್ಮ ಹೋರಾಟಕ್ಕೆ ಪ್ರತಿಫಲ ಲಭ್ಯವಾಗದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಮೀಸಲಾತಿಯ ಸಂಬಂಧವಾಗಿ ಕೆಲ ರಾಜಕೀಯ ಧುರೀಣರು ಸಣ್ಣ ಪುಟ್ಟ ಜನಾಂಗಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೆ ಈ ಬಗ್ಗೆ ಕ್ರಮ ವಹಿಸುವುದು ಅಗತ್ಯ ಎಂದರು.
ವೀರಶೈವ ಪಂಚಮಸಾಲಿ ಸಮಾಜವು ಯಾರ ಹಕ್ಕನ್ನೂ ಕಿತ್ತುಕೊಳ್ಳಲು ತಯಾರಾಗಿಲ್ಲ. ಶೇ. 69 ರಷ್ಟು ಮೀಸಲಾತಿ ನೀಡಲು ಅವಕಾಶವಿರುವುದರಿಂದ 2 ಎ ನಲ್ಲಿ ಮೀಸಲಾತಿಯನ್ನು ಶೇ. 30 ಕ್ಕೆ ಹೆಚ್ಚಳ ಮಾಡಿದರೆ ಯಾವ ಸಮುದಾಯಕ್ಕೂ ತೊಂದರೆಯಾಗದು ಎಂದು ಸ್ವಾಮೀಜಿ ಹೇಳಿದರು.
ನಾವು ನಡೆಸುತ್ತಿರುವ ಪಾದಯಾತ್ರೆಯು ದಿನಕ್ಕೆ ಕೇವಲ 10 ಕಿ.ಮೀ. ಮಾತ್ರ ಸಂಚರಿಸುತ್ತಿದೆ. ತುಮಕೂರಿಗೂ ಸಹ ಪಾದಯಾತ್ರೆಯು ತಲುಪಲಿದ್ದು, ಈ ಪಾದಯಾತ್ರೆ ರಾಜಧಾನಿಯನ್ನು ಎಂದು ತಲುಪಬೇಕು? ಅರಮನೆ ಮೈದಾನದಲ್ಲಿ ಯಾವ ದಿನ ಬೃಹತ್ ಸಭೆ ನಡೆಸಬೇಕು ಎಂಬ ವಿಚಾರದ ಬಗ್ಗೆ ಫೆ.10 ರಂದು ಸಂಜೆ 6 ಗಂಟೆಗೆ ತುಮಕೂರು ನಗರದಲ್ಲಿ ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರು ಹಾಗೂ ಸಮಾಜದ ಮುಖಂಡರ ಸಭೆಯನ್ನು ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್, ಪಂಚಮಸಾಲಿ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ನವಲಗುಂದ, ಎನ್.ಟಿ.ವೀರೇಶ್, ಶಿವಕುಮಾರ್ ಬೆಳಗೆರೆ, ನಾಗರಾಜ್ ಕೊಟಗಿ, ಶಿವು ಗುಡ್ಡಾಪುರ್, ರವಿ ತೋಟಗಾರ್, ರಾಜು ಬಗಳಿ, ಮಲ್ಲಿಕಾರ್ಜುನ್, ಮಂಜುನಾಥ್ ಮುಧೋಳ್, ಸೋಮನಗೌಡ ಪಾಟೀಲ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ