ಬರಗೂರು:

ಸಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಕದಿರೇಹಳ್ಳಿ ಗ್ರಾಮದ ರೈತ ಕಾಂತರಾಜು ಬೆಳೆದಿರುವ ಈರುಳ್ಳಿ ಮಾರಾಟ ಮಾಡಲು ಸಾಧ್ಯವಾಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ನವೆಂಬರ್‍ನಲ್ಲಿ 2 ಎಕರೆ ಭೂಮಿಯಲ್ಲಿ ಈರುಳ್ಳಿ ಬಿತ್ತನೆ ಮಾಡಿ ಬೆಳೆದಿದ್ದಾರೆ. ಗೊಬ್ಬರ, ಬಿತ್ತನೆಬೀಜ, ಕಾರ್ಮಿಕರ ಕೂಲಿ ಸೇರಿ 1 ಲಕ್ಷ ರೂಪಾಯಿ ವರೆಗೂ ಖರ್ಚು ಮಾಡಿದ್ದಾರೆ. ಹಬ್ಬದ ಸಂದರ್ಭಕ್ಕೆ ಒಳ್ಳೆಯ ಲಾಭ ಕೊಡುತ್ತದೆ ಎಂದು ನಿರೀಕ್ಷೆ ಮಾಡಿದ್ದ ರೈತನಿಗೆ ಯುಗಾದಿ ಸಂದರ್ಭದಲ್ಲಿ ಲಾಕ್‍ಡೌನ್ ಆದ ಕಾರಣ, ಕಟಾವು ಮಾಡಿದ್ದ 300 ಚೀಲದಷ್ಟು ಈರುಳ್ಳಿ ಇದುವರೆವಿಗೂ ಮಾರಾಟ ಮಾಡಲು ಸಾಧ್ಯವಾಗಿಲ್ಲ. ರೈತನ ಕಷ್ಟ ಹೇಳತೀರದಾಗಿದ್ದು, ಸರ್ಕಾರ ನೆರವಿಗೆ ದಾವಿಸುವಂತೆ ರೈತ ಮನವಿ ಮಾಡಿದ್ದಾರೆ.
ಲಾಕ್‍ಡೌನ್‍ಗಿಂತ ಒಂದು ದಿನ ಮುಂಚೆ ಕಟಾವು ಮಾಡಿದ್ದೆವು. ಕೆಲವರು 8- 10 ರೂಪಾಯಿಗೆ ಕೆಜಿ ಈರುಳ್ಳಿ ಕೇಳಿದರು, ನಾನು ಕೊಡಲಿಲ್ಲ. ಪ್ರತಿ ಚೀಲ ಈರುಳ್ಳಿ ಬೆಳೆಯಲು ಹೆಚ್ಚು ಪರಿಶ್ರಮದ ಜೊತೆ ಹೆಚ್ಚು ಖರ್ಚು ಬಂದಿದೆ. ಇಂತಹ ಸಂಕಷ್ಟ ಸಮಯದಲ್ಲಿ ತೊಟಗಾರಿಕಾ ಅಧಿಕಾರಿಗಳು ನೆರವಿಗೆ ದಾವಿಸಿದರೆ ರೈತನಾದ ನಾನು ಬದುಕುಳಿಯಲು ಸಾಧ್ಯ.
– ಕಾತರಾಜು, ಈರುಳ್ಳಿ ಬೆಳೆದ ರೈತ.








