ಶಿರಾ :

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಪಕ್ಷಕ್ಕೆ ನಿಷ್ಠೆಯಿಂದ ದುಡಿದಿದ್ದು, ರಾಜ್ಯದ ಏಕೈಕ ಗೊಲ್ಲ ಸಮಾಜದ ಮಹಿಳಾ ಶಾಸಕಿಗೆ ಬಿ.ಜೆ.ಪಿ. ವರಿಷ್ಠರು ಸಚಿವ ಸ್ಥಾನ ನೀಡದ ಪರಿಣಾಮ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಯಾರಿಗೂ ಹಂಚಿಕೆ ಮಾಡದೆ ಮುಖ್ಯಮಂತ್ರಿಗಳು ಉಳಿಸಿಕೊಂಡಿರುವ ಮೂರು ಸಚಿವ ಸ್ಥಾನಗಳ ಪೈಕಿ ಒಂದನ್ನು ಪೂರ್ಣಿಮಾ ಅವರಿಗೆ ನೀಡುವಂತೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿ.ಜೆ.ಪಿ. ಮುಖಂಡ ಹಾಗೂ ಕಾಡು ಗೊಲ್ಲ ಸಮಾಜದ ಮುಖಂಡ ಚಂಗಾವರಣ ಮಾರಣ್ಣ ಒತ್ತಾಯಿಸಿದರು.
ತುಮಕೂರು ಹಾಗೂ ಚಿತ್ರದುರ್ಗ ಲೋಕಸಭಾ ಚುನಾವಣೆಯ ಸಮಯದಲ್ಲಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲೂ ಕೂಡ ಗೊಲ್ಲ ಸಮಾಜದ ಮತದಾರರ ಮನವೊಲಿಸುವ ಮೂಲಕ ಈ ಎರಡೂ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಆಯ್ಕೆಗೊಳ್ಳಲು ಪೂರ್ಣಿಮಾ ಅವರು ಪ್ರಮುಖ ಕಾರಣವಾಗಿದ್ದರು. ಇತ್ತೀಚೆಗಷ್ಟೇ ನಡೆದ ಶಿರಾ ಉಪ ಚುನಾವಣೆಯಲ್ಲಿ ಕ್ಷೇತ್ರದ ಪ್ರತಿ ಕಾಡುಗೊಲ್ಲ ಸಮುದಾಯದ ಮನೆ ಮನೆಗೂ ಭೇಟಿ ನೀಡಿ ಮತ ಯಾಚನೆ ಮಾಡಿ ಮನವೊಲಿಸಿದ್ದಾರೆ. ಈ ಉಪ ಚುನಾವಣೆಯಲ್ಲೂ ಬಿ.ಜೆ.ಪಿ. ಅಭ್ಯರ್ಥಿ ಗೆಲುವಿಗೆ ಅವರೂ ಕೂಡ ಒಂದು ಪ್ರಬಲ ಕಾರಣವಾಗಿದ್ದಾರೆ. ಇಡೀ ರಾಜ್ಯದಲ್ಲಿಯೇ ಪ್ರವಾಸ ಮಾಡಿ ಕಾಡುಗೊಲ್ಲರ ಸಂಘಟನೆಗೆ ಮುಂದಾಗಿ ಕಾಡುಗೊಲ್ಲರನ್ನು ಬಿ.ಜೆ.ಪಿ. ಪರ ಒಲವು ಮೂಡಲು ಪೂರ್ಣಿಮಾ ಕಾರಣವಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಚಂಗಾವರ ಮಾರಣ್ಣ ಒತ್ತಾಯಿಸಿದ್ದಾರೆ.
ಶಿರಾ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಮಾತನಾಡಿ, ರಾಜ್ಯದಲ್ಲಿ 40 ಲಕ್ಷ ಕಾಡು ಗೊಲ್ಲ ಜನಸಂಖ್ಯೆ ಇದ್ದು, ಕಳೆದ ಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯ ಬಿ.ಜೆ.ಪಿ. ಬೆಂಬಲಿಸಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರ ಪತಿ ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಚಿದಾನಂದ್ ಎಂ.ಗೌಡರ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಶಿರಾ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಜುಂಜಪ್ಪನಗುಡ್ಡೆ ಅಭಿವೃದ್ಧಿಗೆ ಅನುದಾನ ನೀಡಿರುವ ಸರ್ಕಾರಕ್ಕೆ ನಮ್ಮ ಅಭಿನಂಧನೆ ಇದ್ದು, ಈ ಕೂಡಲೆ ಸರ್ಕಾರ ಕಾಡು ಗೊಲ್ಲ ನಿಗಮದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡುವಂತೆ ಈರಣ್ಣ ಒತ್ತಾಯಿಸಿದರು.
ಸಮಾಜದ ಮುಖಂಡರಾದ ಅಜ್ಜಣ್ಣ, ತಿಮ್ಮರಾಜು, ಜಯರಾಮ್, ಗೋವಿಂದರಾಜು, ಮಧುಯಾದವ್, ಅಭಿಷೇಕ್, ಕರಿಯಣ್ಣ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








