ಶಿರಸಿ:
ಹಸಿರು ಸ್ವಾಮೀಜಿ ಎಂದೇ ಹೆಸರಾದ ಸೋಂದಾ ಶ್ರೀಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಶ್ರೀಗಳಿಂದ ಗಡಿಯಲ್ಲಿನ ಸೈನಿಕರಿಗೆ ಆಧ್ಯಾತ್ಮಿಕ ಬಲ ನೀಡುವ ಅಪರೂಪದ ಲಕ್ಷ ತುಳಸಿ ಅರ್ಚನೆ ಕಳೆದ ೨೬ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಭಾರತದ ಗಡಿಗಳಲ್ಲಿ ನಿಂತು ಪ್ರಾಣ ಪಣವಾಗಿ ದೇಶವನ್ನು ಕಾಪಾಡುವ ಸೈನಿಕರು, ಕೇವಲ ಸೈನ್ಯದ ಅಂಗವಷ್ಟೇ ಅಲ್ಲ, ಅವರು ದೇಶದ ಜೀವನಾಡಿ. ಅವರ ಹಿತಕ್ಕಾಗಿ ಪ್ರತೀ ಕೃಷ್ಣಾಷ್ಟಮಿಗೆ ಲಕ್ಷ ತುಳಸಿ ಅರ್ಚನೆ ನಡೆಯುತ್ತಿರುವುದು ವಿಶೇಷವಾಗಿದೆ.
ಕಾರ್ಗಿಲ್ ಯುದ್ಧದ ಹೊತ್ತಿನಲ್ಲಿ ಮೂಡಿದ ಸಂಕಲ್ಪ ಇದಾಗಿದ್ದು,ನಮ್ಮ ಗಡಿಯಲ್ಲಿ ನಿಂತಿರುವ ಪ್ರತಿಯೊಬ್ಬ ಯೋಧನೂ ಸುರಕ್ಷಿತನಾಗಲಿ ಎಂಬುದು ಶ್ರೀಗಳ ಪ್ರಧಾನ ಸಂಕಲ್ಪವಾಗಿದೆ. ಅಂದು ಪ್ರಾರಂಭವಾದ ತುಳಸೀ ಅರ್ಚನೆ ಯುದ್ಧ ಮುಗಿದ ನಂತರ ನಿಲ್ಲದೆ, ಪ್ರತಿ ಕೃಷ್ಣಾಷ್ಟಮಿಯಂದು ಶಾಶ್ವತ ಪರಂಪರೆಯಾಗಿ ನಡೆಯುತ್ತಿದೆ.
ಇಂದಿನ ಭಾರತದಲ್ಲಿ ನಿಗದಿತ ದಿನ, ನಿಗದಿತ ಸ್ಥಳ, ಒಂದೇ ಉದ್ದೇಶ, ಇಷ್ಟು ದೀರ್ಘಕಾಲ ನಿರಂತರವಾಗಿ ನಡೆಯುತ್ತಿರುವ ಸೈನಿಕ ರಕ್ಷಣಾ ಅರ್ಚನೆ ಇನ್ನೆಲ್ಲಿ ಯೂ ಇಲ್ಲ. ಇದು ಭಾರತದ ಏಕೈಕ ದಾಖಲೆ ಎನ್ನುತ್ತಾರೆ ಶಿರಸಿಯ ಆಯುರ್ವೇದ ವೈದ್ಯಡಾ. ರವಿಕಿರಣ ಪಟವರ್ಧನ್.
ಇನ್ನು ತುಳಸಿ ಹಿಂದೂ ಸಂಪ್ರದಾಯದಲ್ಲಿ ಪವಿತ್ರತೆಯ ಸಂಕೇತ. ಶ್ರೀಕೃಷ್ಣ ಗೀತೆಯಲ್ಲಿ ಘೋಷಿಸಿದ ರಕ್ಷಕ.ಕೃಷ್ಣಾಷ್ಟಮಿಯಂದು ತುಳಸಿ ಅರ್ಪಣೆ ಧಾರ್ಮಿಕ ವಿಧಿ ಮಾತ್ರವಲ್ಲ, ಅದು ಆಧ್ಯಾತ್ಮದಲ್ಲಿ ಹೊತ್ತಿ ಉರಿಯುವ ದೇಶಭಕ್ತಿಯ ದೀಪ ಎಂಬುದು ಪಟವರ್ಧನ್ ಅವರ ಮಾತು.
ಇದು ಯೋಧರ ಮನೋಬಲಕ್ಕೆ ಜೀವಂತ ಬಲ. ಗಡಿಯ ಮೇಲೆ ನಿಂತು ಬಿರುಗಾಳಿಯ ಚಳಿ, ಗುಂಡಿನ ಮಳೆ, ಹಿಮಪಾತ, ಮರಣದ ಬೆದರಿಕೆ ಎಲ್ಲದರ ಮಧ್ಯೆ ಕರ್ತವ್ಯ ನಿರ್ವಹಿಸುವ ಸೈನಿಕರ ಹೃದಯಕ್ಕೆ, ದೂರದ ಕರ್ನಾಟಕದ ಸೋಂದಾದಿಂದ ಹರಿಯುವ ಈ ಪ್ರಾರ್ಥನೆ, ಅದೃಶ್ಯ ಕವಚವಾಗಿ ತಲುಪುತ್ತಿರುವುದು ಗಮನಾರ್ಹವಾಗಿದೆ.
ದೇಶಪ್ರೇಮ ಕೇವಲ ಗಡಿಯಲ್ಲ, ಅದು ಪ್ರತಿಯೊಬ್ಬರ ಹೃದಯದಲ್ಲಿ ಹೊತ್ತಿರಬೇಕು. ಕಾಲ ಬದಲಾಗುತ್ತಿದ್ದರೂ ಇಲ್ಲಿ ಸಂಕಲ್ಪ ಬದಲಾಗದಿರುವುದು ವಿಶೇಷವೇ ಆಗಿದೆ.








