ಮೈಸೂರು:
ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪಕ್ಷದ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್ ನ್ನು ಬಿಜೆಪಿ ನೀಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಕುರಿತು SIT ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು, ಭ್ರಷ್ಟಾಚಾರದ ಪ್ರಕರಣವನ್ನು ತನಿಖೆ ನಡೆಸಲಿ ಎಂದರು.
ಬಿಜೆಪಿ 50 ಕಾಂಗ್ರೆಸ್ ಶಾಸಕರಿಗೆ ರೂ.50 ಕೋಟಿ ಆಮಿಷವೊಡಿದ್ದೆ. ಆದರೆ, ಯಾರೂ ಅದಕ್ಕೆ ಒಪ್ಪಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿಎಂ ಹೇಳಿಕೆ ಬಫೂನ್ ಗಳು ಕೊಡುವ ಹೇಳಿಕೆ ಆಗಬಾರದು. ಅವರ ಗಮನಕ್ಕೆ ಬರದೇ ಇದು ಆಗಲ್ಲ. ಸಿಎಂ ನಿಖರವಾಗಿ 50 ಜನರಿಗೆ 50 ಕೋಟಿ ಅಂದಿದ್ದಾರೆ. ಇದಕ್ಕೂ ಕೂಡಾ ಒಂದು SIT ರಚನೆ ಮಾಡಿ ತನಿಖೆ ಮಾಡಬೇಕು ಎಂದರು.
ಸಿದ್ದರಾಮಯ್ಯ ನಡವಳಿಕೆ ನೋಡಿದ್ರೆ ಹಾಸ್ಯಾಸ್ಪದ ಅನಿಸುತ್ತಿದೆ. ವಿವಿಧ ಕಾರಣಗಳಿಗಾಗಿ ವಿಶೇಷ ತನಿಖಾ ತಂಡ ರಚಿಸಿರುವ ಸಿದ್ದರಾಮಯ್ಯ, ಈ ಪ್ರಕರಣದ ತನಿಖೆಗೂ SIT ರಚಿಸಲಿ,ಇಲ್ಲದಿದ್ದರೆ ಜನ ಸಿಎಂ ಮತ್ತು ಅವರ ಸಂಪುಟದ ಸಹೋದ್ಯೋಗಿಗಳ ಬಗ್ಗೆ ಅನುಮಾನ ಪಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.