ಬೆಂಗಳೂರು:
ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಅವರ ಪುತ್ರ ಹಾಗೂ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ಆರಂಭಿಸಿದೆ.
ಸಂತ್ರಸ್ತರ ಮಹಿಳೆಯರಲ್ಲಿ ಒಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಪ್ರಕರಣ ಭುಗಿಲೆದ್ದಿದೆ. ಅಲ್ಲದೆ ಲೈಂಗಿಕ ದೌರ್ಜನ್ಯದ ಅಶ್ಲೀಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರಕರಣ ಸಂಬಂಧ ಎಡಿಜಿಪಿ-ಸಿಐಡಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಹೆಚ್ಚುವರಿ ಕಮಿಷನರ್ ಸುಮನ್ ಡಿ ಪೆನ್ನೇಕರ್ ಮತ್ತು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಅವರನ್ನೊಳಗೊಂಡ ಎಸ್ಐಟಿ ತಂಡ ತನಿಖೆಯನ್ನು ಆರಂಭಿಸಿದೆ.
ಪೊಲೀಸರು ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ), 354ಡಿ (ಮಹಿಳೆಗೆ ಮುಜುಗರ), 506 (ಬೆದರಿಕೆ), 509 (ಮಹಿಳೆಯರ ಮರ್ಯಾದೆಗೆ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ರೇವಣ್ಣ ಅವರನ್ನು 1 ಮತ್ತು ಪ್ರಜ್ವಲ್ ರೇವಣ್ಣ ಅವರನ್ನು 2ನೇ ಆರೋಪಿಗಳನ್ನಾಗಿ ಮಾಡಲಾಗಿದೆ. ಮನೆಯಲ್ಲಿ ಒಬ್ಬಳೇ ಇದ್ದಾಗ ರೇವಣ್ಣ ಮತ್ತು ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಅಂದಾಜು 2,876 ಮಹಿಳೆಯರನ್ನು ಪ್ರಜ್ವಲ್ ಶೋಷಣೆ ಮಾಡಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹೇಳಿದ್ದು, ಈ ಸಂಬಂಧ ತಮ್ಮ ವಾಟ್ಸಾಪ್ ಖಾತೆಯಲ್ಲಿ ದೂರನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಹಾಸನ ಜಿಲ್ಲೆಯ ಬೇಲೂರಿನ ನವೀನ್ ಗೌಡ ವಿರುದ್ಧ ಪ್ರಜ್ವಲ್ ಎಫ್‌ಐಆರ್ ದಾಖಲಿಸಿದ್ದಾರೆ, ಅಲ್ಲದೆ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.
ವಿಡಿಯೋವನ್ನು ಸಡಷ್ಟಿಸಲಾಗಿದ್ದು, ಚುನಾವಣೆ ವೇಳೆ ನನ್ನ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಎಸ್‌ಐಟಿ ತನಿಖೆಗೆ ನೀಡಿದ ಒಂದು ದಿನದ ನಂತರ ಪ್ಪಜ್ವಲ್ ಅವರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ