ಡಿಜಿಟಲ್ ಕೇಂದ್ರವಾದ ಸ್ಮಾರ್ಟ್ ಲಾಂಜ್..!

ತುಮಕೂರು
ವಿಶೇಷ ವರದಿ:ರಾಕೇಶ್.ವಿ.

       ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಮಾನಿಕೆರೆ ಆವರಣದಲ್ಲಿ ನಿರ್ಮಾಣ ಮಾಡಲಾದ ಸ್ಮಾಟ್ ಲಾಂಜ್ ಮಾಹಿತಿ ಮತ್ತು ತಂತ್ರಜ್ಞಾನ ಸೇರಿದಂತೆ ನಾಗರಿಕರಿಗೆ ವಿಶ್ರಾಂತಿ ಸಮಯವನ್ನು ಕಳೆಯುವ ತಂಗುದಾಣವಾಗಿದೆ.
ನಗರದಲ್ಲಿ ಒಟ್ಟು ಐದು ಕಡೆ ನಿರ್ಮಾಣ
     ತುಮಕೂರು ನಗರದಲ್ಲಿ ಒಟ್ಟು ಐದು ಕಡೆಗಳಲ್ಲಿ ಈ ಸ್ಮಾರ್ಟ್ ಲಾಂಜ್ ನಿರ್ಮಾಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದು, ಈಗಾಗಲೇ ಮಾದರಿಯಾಗಿ ತುಮಕೂರಿನ ಅಮಾನಿಕೆರೆ ಆವರಣದಲ್ಲಿ ಒಂದನ್ನು ನಿರ್ಮಾಣ ಮಾಡಲಾಗಿದೆ. ಉಳಿದಂತೆ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚಿನದಾಗಿ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಒಟ್ಟು 10 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದ್ದಿ, ಪ್ರತಿ ಲಾಂಜ್‍ಗೆ 130 ಚಮೀ ಜಾಗದಲ್ಲಿ ಇದನ್ನುನಿರ್ಮಾಣ ಮಾಡಲಾಗುವುದು. 
ಸ್ಮಾರ್ಟ್ ಸೌಲಭ್ಯಗಳು
     ಈ ಯೋಜನೆಯ ಸ್ಮಾರ್ಟ್ ಲಾಂಜ್ಹ್‍ನಲ್ಲಿ ಡಿಜಿಟಲ್ ಲೈಬ್ರರಿ, ಎಟಿಎಂ, ಕಾಫಿಶಾಪ್, ಮಾಹಿತಿ ಮತ್ತು ತಂತ್ರಜ್ಞಾನ, ಓದಲು ಪ್ರತ್ಯೇಕ ಸ್ಥಳಾವಕಾಶ, ಡಿಜಿಟಲ್ ಅಧ್ಯಯನ ವಲಯ, ಶೌಚಾಲಯ, ಮುಂತಾದವು ಸೇರಿದಂತೆ ತುಮಕೂರು ಒನ್‍ನಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳೂ ದೊರೆಯಲಿದ್ದು, ವಿವಿಧ ಕಾರ್ಯಸಾಧ್ಯವಾದ ಜಿ 2 ಸಿ ಗೆ ಅರ್ಜಿ, ಮತ್ತು ಬಿ 2 ಸಿ ಸೇವೆಗಳು, ಪಾಲಿಕೆ ಸಂಬಂಧಿಸಿದಂತೆ ಖಾತೆಗಳಿಗೆ ಅರ್ಜಿ ಹಾಕುವುದು, ಸಕಾಲ ಸೇವೆಗಳು ಸೇರಿದಂತೆ ಇನ್ನಿತರರ ಸೇವೆಗಳು ಇಲ್ಲಿ ಲಭ್ಯವಿರುತ್ತವೆ. ಜೊತೆಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶ ಮತ್ತು ಅಂಕಗಳ ಮರುಲೆಕ್ಕಾಚಾರ ಮಾಡಲು ಅರ್ಜಿ ಹಾಕಬಹುದಾಗಿದೆ.
2 ಕಿಯೋಸ್ಕ್ ಮಷಿನ್ ಅಳವಡಿಕೆ
      ಸ್ಮಾರ್ಟ್ ಲಾಂಜ್‍ನಲ್ಲಿ ಎರಡು ಕಿಯೋಸ್ಕ್ ಯಂತ್ರಗಳನ್ನು ಅಳವಡಿಕೆ ಮಾಡಲಾಗಿದೆ. ಈ ಯಂತ್ರಗಳ ಮೂಲಕ ಸ್ವಯಂ ಸೇವೆ ಮತ್ತು ಸ್ವಯಂ ಚಾಲಿತ ಘಟಕ ಇದಾಗಿದ್ದು, ಈ ಯಂತ್ರ ಬಳಸಲು ನಾಗರಿಕರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಸ್ವಯಂವಾಗಿ ಸರ್ಕಾರದ ಅರ್ಜಿಗಳನ್ನು ಹಾಕುವುದಾಗಲಿ, ಅಥವಾ ಪಾಲಿಕೆಗೆ ಹಾಕಲಾದ ಅರ್ಜಿಗಳ ಪರಿಶೀಲನೆ ಮಾಡುವುದಿರಬಹುದು ಅಥವಾ ಇತರೆ ಯಾವುದೇ ದಾಖಲಾತಿಗಳನ್ನು ಪ್ರಿಂಟ್ ಸಹ ತೆಗೆದುಕೊಳ್ಳಬಹುದಾಗಿದೆ. ಈ ಯಂತ್ರಗಳಿಗೆ ಸರಾಸರಿ 10ಲಕ್ಷದವರೆಗೆ ಖರ್ಚು ಮಾಡಲಾಗಿದೆ. 
ಬಳಕೆಗೆ14 ಗಣಕಯಂತ್ರಗಳು
       ಸ್ಮಾರ್ಟ್ ಲಾಂಜ್ ಒಳಭಾಗದಲ್ಲಿ ನಾಗರಿಕರ ಬಳಕೆಗಾಗಿ 14 ಗಣಕಯಂತ್ರಗಳನ್ನು ಜೋಡಿಸಲಾಗಿದೆ. ಜೊತೆಗೆ ಸ್ಮಾರ್ಟ್ ಲಾಂಜ್ ನಿರ್ವಾಹಕರಿಗಾಗಿ 2 ಗಣಕಯಂತ್ರಗಳನ್ನು ಇಡಲಾಗಿದೆ. ನಾಗರಿಕರ ಬಳಕೆಗೆ ಇಡಲಾದ ಕಂಪ್ಯೂಟರ್‍ಗಳಿಗೆ ವೈಫೈ ಸೌಲಭ್ಯ ಅಳವಡಿಕೆ ಮಾಡಲಾಗಿದೆ. ಇದರಲ್ಲಿ ಸ್ಮಾರ್ಟ್‍ಸಿಟಿಯ ವೆಬ್‍ಸೈಟ್ ಮೂಲಕ, ಮಿಂಟ್ ಬುಕ್ ಕಂಪನಿಯು ಅಭಿವೃದ್ಧಿ ಪಡಿಸಿದ ಮಾಹಿತಿ ಮತ್ತು ತಂತ್ರಜ್ಞಾನ, ವಿಜ್ಞಾನ, ರಾಜಕೀಯ, ಕನ್ನಡದ ಲೇಖಕರು, ಕವಿಗಳ ಪುಸ್ತಕಗಳು ಹಾಗೂ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. 
3000ಕ್ಕೂ ಕೆಚ್ಚು ಇ-ಬುಕ್‍ಗಳು
      ಸ್ಮಾರ್ಟ್ ಲಾಂಜ್‍ನಲ್ಲಿನ ಕಂಪ್ಯೂಟರ್‍ಗಳಲ್ಲಿ ಅಂತರ್ಜಾಲದ ಮೂಲಕ ಓದಲು 3000ಕ್ಕೂ ಹೆಚ್ಚು ಇ ಬುಕ್‍ಗಳು ದೊರೆಯುತ್ತವೆ. ಇದರಲ್ಲಿ ವಿವಿಧ ವಿಷಯಗಳಾಧಾರಿತ ಪುಸ್ತಕಗಳು, ನಿಯತಕಾಲಿಕೆಗಳು, ಕಾಮಿಕ್ ಪುಸ್ತಕಗಳು, ಮಕ್ಕಳಿಗೆ ಗಣಿತದ ಲೆಕ್ಕಗಳನ್ನು ಪ್ರಾಯೋಗಿಕವಾಗಿ ಮಾಡಲು ಅನುಕೂಲಕರವಾಗುವಂತೆ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.  ಇದಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಅನುಕೂಲವಾಗುವಂತೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಓದಿಕೊಳ್ಳಬಹುದಾಗಿದೆ. 
ವಾರಕ್ಕೊಮ್ಮೆ ಸಾಮಾನ್ಯಜ್ಞಾನ ಪರೀಕ್ಷೆ
      ಮಂಗಳವಾರ ಹೊರತುಪಡಿಸಿ ಪ್ರತಿನಿತ್ಯ ಸ್ಮಾರ್ಟ್ ಲಾಂಜ್‍ಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಇನ್ನಿತರರ ಮಕ್ಕಳಿಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ಸಾಮಾನ್ಯಜ್ಞಾನ ಪರೀಕ್ಷೆಯನ್ನು ನಡೆಸಲಾಗುವುದು. ಈಗಾಗಲೇ ಸಾಮಾನ್ಯ ಜ್ಞಾನದ ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಂದೊಂದು ವಾರ ಒಂದು ವಿಷಯಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ ಎಂಬ ಉದ್ದೇಶದಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಸ್ಮಾರ್ಟ್‍ಲಾಂಜ್ ನಿರ್ವಾಹಕರು. 
ಸ್ಮಾರ್ಟ್ ಲಾಂಜ್‍ನಲ್ಲಿ ವಿವಿಧ ಕಾರ್ಯಕ್ರಮಗಳು
       ಸ್ಮಾರ್ಟ್ ಲಾಂಜ್‍ನಲ್ಲಿ ಒಂದೊಂದು ವಿಷಯವಾಗಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಒಂದು ತಿಂಗಳು ಇಂಗ್ಲಿಷ್ ತರಬೇತಿ ನೀಡಿದರೆ, ಇನ್ನೊಂದು ತಿಂಗಳು ವಿಜ್ಞಾನದ ವಿಷಯಗಳ ಬಗ್ಗೆ ತರಬೇತಿ, ಒಂದು ತಿಂಗಳು ರೋಬೋಟಿಕ್ಸ್ ಬಗ್ಗೆ ತರಬೇತಿ ಹೀಗೆ ಒಂದೊಂದು ವಿಷಯಾಧಾರಿತವಾಗಿ ತರಬೇತಿಗಳನ್ನು ನೀಡಲಾಗುತ್ತದೆ. 
ಪ್ರವೇಶಾತಿಗೆ ಶುಲ್ಕ
       ಸ್ಮಾರ್ಟ್ ಲಾಂಜ್‍ಗೆ ಪ್ರವೇಶ ಮಾಡಲು ಹಾಗೂ ಅಲ್ಲಿನ ಸೌಕರ್ಯಗಳನ್ನು ಬಳಸಿಕೊಳ್ಳಲು ತಿಂಗಳಿಗೆ ನೂರು ರೂಗಳಂತೆ ಪ್ರವೇಶಾತಿ ಶುಲ್ಕ ಪಡೆಯಲಾಗುವುದು. ಒಮ್ಮೆ 100 ರೂಗಳನ್ನು ನೀಡಿ ಪ್ರವೇಶಾತಿ ಪಡೆದುಕೊಂಡವರಿಗೆ ಸ್ಮಾರ್ಟ್ ಲಾಂಜ್‍ಯಿಂದ ಐಡಿ ಕಾರ್ಡ್ ನೀಡಲಾಗುತ್ತದೆ. ಇದನ್ನು ತೋರಿಸುವ ಮೂಲಕ ಒಳ ಪ್ರವೇಶ ಮಾಡಬಹುದು. ಮತ್ತು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು.
ನಿರ್ವಹಣೆಗೆ ಆದಾಯದ ಮೂಲ
      ಇ-ಕಲಿಕೆಗೆ ಬರುವವರಿಂದ ಸಂಗ್ರಹಿಸುವ ಶುಲ್ಕ, ಡಿಜಿಟಲ್ ಸಾರ್ವಜನಿಕ ಸೇವೆಗಳಿಂದ ಬರುವ ಹಣ, ಕಾಫಿ ಶಾಪ್‍ನ ಬಾಡಿಗೆಯಿಂದ, ವೈದ್ಯಕೀಯ ಚಿಕಿತ್ಸಾ ಕೇಂದ್ರದಿಂದ ಬರುವ ಆದಾಯವನ್ನು ಸ್ಮಾರ್ಟ್ ಲಾಂಜ್ ನಿರ್ವಹಣೆಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಇದಲ್ಲದೆ ಸ್ಮಾರ್ಟ್ ಲಾಂಜ್ ಮೇಲ್ಬಾಗದಲ್ಲಿ ಅಳವಡಿಸಲಾದ ಎಲ್‍ಇಡಿ ಡಿಸ್‍ಪ್ಲೆನಲ್ಲಿ ಪ್ರಕಟವಾಗುವ ಜಾಹಿರಾತುಗಳಿಂದ ಬರುವ ಆದಾಯವನ್ನು ಸ್ಮಾರ್ಟ್ ಲಾಂಜ್ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.
     ಪ್ರತಿನಿತ್ಯ ಬೆಳಗ್ಗೆ 11 ಗಂಟೆಯಿಂದ 8 ಗಂಟೆಯವರೆಗೆ ತೆರೆದಿರುವ ಈ ಸ್ಮಾರ್ಟ್ ಲಾಂಜ್ ಅನ್ನು ಸ್ಮಾರ್ಟ್ ಸಿಟಿ ಕಂಪನಿಯು ನಿರ್ವಹಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಂದ ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗುತ್ತದೆ. ನಂತರದಲ್ಲಿ ಅದರ ನಿರ್ವಹಣೆ ಜವಾಬ್ಧಾರಿ ಪಾಲಿಕೆ ವಹಿಸಿಕೊಳ್ಳುತ್ತದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಿದ ಸ್ಮಾರ್ಟ್‍ಲಾಂಜ್ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ಇಲ್ಲದಿರುವುದರಿಂದ ಇದರ ಸದ್ಬಳಕೆ ಕಡಿಮೆಯಿದ್ದು, ಇದರ ಬಗ್ಗೆ ಹೆಚ್ಚಿನ ಪ್ರಚಾರ ಬೇಕಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಬಗ್ಗೆ ಪ್ರಚಾರ ನೀಡುವ ಮೂಲಕ ಇದನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಆಗಬೇಕಿದೆ.  
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap