ವಾಹನ ದಟ್ಟಣೆ ನಿವಾರಿಸುವುದೇ ಪ್ರಮುಖ ಉದ್ದೇಶ
ತುಮಕೂರು
ವಿಶೇಷ ವರದಿ:ರಾಕೇಶ್.ವಿ
ರಾಜ್ಯದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿವೇಗವಾಗಿ ಹಾಗೂ ನಾಗಾಲೋಟದಲ್ಲಿ ವಿಸ್ತಾರಗೊಳ್ಳುತ್ತಿರುವ ನಗರ ತುಮಕೂರು. ರೈಲು, ರಸ್ತೆ ಸಂಚಾರ ಸುವ್ಯವಸ್ಥೆಯಾಗಿರುವುದರಿಂದ ರಾಜ್ಯವಷ್ಟೇ ಅಲ್ಲದೆ, ದೇಶ ವಿದೇಶಗಳಿಂದಲೂ ಪ್ರವಾಸಿಗರು ತುಮಕೂರಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವುದು ಒಂದೆಡೆಯಾದರೆ ತುಮಕೂರು ನಗರ ಮತ್ತು ಜಿಲ್ಲೆಯಾದ್ಯಂತ ಕೈಗಾರಿಕಾ ಬಡಾವಣೆಗಳು ಸ್ಥಾಪನೆಗೊಂಡಿರುವುದು ಕಲ್ಪತರು ನಾಡಿನಲ್ಲಿ ವಾಹನ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ.
ತುಮಕೂರಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು, ಈಗಾಗಲೇ ಬೃಹತ್ ಗಾತ್ರದ ವಾಹನಗಳು ನಗರದೊಳಗೆ ಬಾರದಂತೆ ಕ್ರಮ ಕೈಗೊಳ್ಳಲಾಗಿತ್ತು. ಅದಲ್ಲದೆ ಇದೀಗ ನಗರದ ಹೊರವಲಯದಲ್ಲಿರುವ ರಿಂಗ್ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿ ನಡೆತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ.
ಹೊರವಲಯದಲ್ಲಿರುವ ರಿಂಗ್ ರಸ್ತೆ ಸುಮಾರು 10.524 ಕಿಮೀ ಉದ್ದದ ರಿಂಗ್ ರಸ್ತೆ ಅಭಿವೃದ್ಧಿ ಕಾರ್ಯದ ಟೆಂಡರ್‍ಅನ್ನು ಐಪಿಇ ಗ್ಲೋಬಲ್ ಕಂಪನಿಯು ಪಡೆದಿದ್ದು, ಗಣಪತಿ ಸ್ಟೋನ್ ಕ್ರಷರ್‍ನವರು ಈ ಕಾಮಗಾರಿ ಮಾಡುತ್ತಿದ್ದಾರೆ. ಇದಕ್ಕೆ 12 ತಿಂಗಳ ಕಾಲಾವಧಿ ನೀಡಲಾಗಿದ್ದು, 2019ರ ಡಿಸೆಂಬರ್ ವೇಳೆಗೆ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ಸುತ್ತಮುತ್ತಲ ಜಿಲ್ಲೆ, ನೆರೆ ರಾಜ್ಯಗಳಿಗೆ ಉತ್ತಮ ಸಾರಿಗೆ ಸಂಪರ್ಕವಿರುವುದರಿಂದ ತೆಂಗು ನಗರ ಎಂದು ಖ್ಯಾತಿಯಾಗಿರುವ ತುಮಕೂರು ನಗರದ ಮೇಲೆ ಸಹಜವಾಗಿಯೇ ಸಂಚಾರ ಒತ್ತಡ ಹೆಚ್ಚಾಗುತ್ತಿದೆ. ಈ ಒತ್ತಡ ತಪ್ಪಿಸಬೇಕೆಂಬ ಉದ್ದೇಶದಿಂದಲೇ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟಡ್ ಈ ಸಿಗ್ನಲ್ ಫ್ರೀ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‍ಆರ್)ನಿರ್ಮಿಸಲು ಮುಂದಾಗಿದೆ. ರಾಷ್ಟ್ರೀಯ ಹೆದ್ದಾರಿ 206 ತುಮಕೂರಿಗೆ ಹೊಂದಿಕೊಂಡಿರುವುದರಿಂದ ಈ ಯೋಜನೆ ಜಾರಿ ತಂದಿದ್ದು, ಈ ಯೋಜನೆಯಿಂದ ಹೊರ ರಾಜ್ಯದ ಭಾರಿ ವಾಹನಗಳು ತುಮಕೂರು ನಗರದೊಳಗೆ ಬಾರದೆ ಪೆರಿಫೆರಲ್ ರಿಂಗ್ ರಸ್ತೆ ಮೂಲಕ ಸಾಗುತ್ತವೆ. ಇದರಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಸುವ ಹೆದ್ದಾರಿಗಳ ಮೇಲೆ ಒತ್ತಡ ಕಡಿಮೆಯಾಗಲಿದೆ.
85 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
ಪಿಆರ್‍ಆರ್ ಕಾಮಗಾರಿಯನ್ನು ಐಪಿಇ ಗ್ಲೋಬಲ್ ಲಿಮಿಟೆಡ್ ಕಂಪನಿಯು ಕೈಗೊಂಡಿದ್ದು, ಪ್ರಗತಿಯಲ್ಲಿದೆ. ನಗರದ ಹೊರವಲಯದ ಕ್ಯಾತಸಂದ್ರದಿಂದ ಗುಬ್ಬಿ ಗೇಟ್‍ವರೆಗೆ ಸುಮಾರು 85 ಕೋಟಿ ರೂ. ವೆಚ್ಚದಲ್ಲಿ 10.5 ಕಿ.ಮೀ ಉದ್ದದ ಈ ಸಿಗ್ನಲ್ ಫ್ರೀ ಪೆರಿಫೆರಲ್ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಲ್ಲದೆ ನಗರವನ್ನು ಕಾಡುತ್ತಿರುವ ವಾಯುಮಾಲಿನ್ಯ ಪ್ರಮಾಣವೂ ತಗ್ಗಲಿದೆ.
ಅಷ್ಟ ಪಥದ ಮಾರ್ಗ ಜೊತೆಗೆ ಸರ್ವಿಸ್ ರಸ್ತೆ
ಹಾಲಿ ಕೈಗೊಂಡಿರುವ ವರ್ತುಲ ರಸ್ತೆಯು ಎರಡೂ ದಿಕ್ಕಿನಲ್ಲಿ ಎರಡು ಲೇನ್ ಹಾಗೂ ಸರ್ವಿಸ್ ರಸ್ತೆ(ಕೆಲವೆಡೆ ಹೊರತುಪಡಿಸಿ)ಯನ್ನೂ ಹೊಂದಿದೆ. ಪಿಆರ್ ರಸ್ತೆಯು 75 ಮೀ. ಅಗಲ ಹೊಂದಿರುವ ಈ ಚತುಷ್ಪಥ ರಸ್ತೆಯು ಕಾರಿಡಾರ್ ಮಾದರಿಯಲ್ಲಿರುತ್ತದೆ. ಜೊತೆಗೆ ಎರಡೂ ಬದಿ ಸರ್ವಿಸ್ ರಸ್ತೆಯನ್ನೂ ಸಹ ನಿರ್ಮಿಸಲಾಗುವುದು ಹಾಗೂ ವಿಶಾಲ ಪಾದಚಾರಿ ಮಾರ್ಗದೊಂದಿಗೆ ನೀರಿನ ಕೊಳವೆ, ಕೇಬಲ್ ಸಹಿತ ನಾನಾ ಯುಟಿಲಿಟಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಈ ಹೊಸ ಮಾರ್ಗದಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸಬಹುದು.
ಪಿಆರ್ ರಸ್ತೆ ಪ್ರಯೋಜನಗಳು
ಈ ನಾಲ್ಕು ಪಥಗಳ ಸೌಲಭ್ಯದಿಂದ ಕೈಗಾರಿಕೆ, ಉದ್ಯಮ, ಪ್ರವಾಸೋದ್ಯಮ, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೊಳ್ಳಲಿದೆ. ರಸ್ತೆಯನ್ನು ಸುಧಾರಿಸುವ ಮೂಲಕ ವಾಹನಗಳ ನಿರ್ವಹಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬಹುದು. ಕಡಿಮೆ ಸಮಯದಲ್ಲಿ ನಿರೀಕ್ಷಿತ ಸ್ಥಳಕ್ಕೆ ತಲುಪಿಸುವ ಈ ರಸ್ತೆಯು ಅಗಲವಿರುವುದರಿಂದ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅನುವಾಗಲಿದ್ದು, ರಸ್ತೆ ಅಪಘಾತಗಳ ಸಂಖ್ಯೆ ತಗ್ಗಲಿದೆ
ಮೂರು ಬಾರಿ ಪರೀಕ್ಷೆ
ರಸ್ತೆ ಕಾಮಗಾರಿ ಮಾಡುವುದರಲ್ಲಿ ಗುಣಮಟ್ಟತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಂದನ್ನು ಮೂರು ಬಾರಿ ಪರೀಕ್ಷೆಯನ್ನು ಮಾಡಲಾಗುತ್ತದೆ. ರಸ್ತೆಗೆ ಹಾಕುವ ಜೆಲ್ಲಿ, ಜೆಲ್ಲಿ ಮಿಶ್ರಿತ ಮಣ್ಣು ಹಾಗೂ ರಸ್ತೆಗೆ ಹಾಕುವ ಟಾರ್ ಅನ್ನು ರಸ್ತೆ ಸಾರಿಗೆ ನಿಗಮದ ಸೂಚನೆಗಳ ಪ್ರಕಾರ ಮಾಡುವ ನಿಟ್ಟಿನಲ್ಲಿ ಸೂಚನೆಗೆ ತಕ್ಕಂತೆ ಜೆಲ್ಲಿಯ ಸಾಂಧ್ರತೆ ಎಲ್ಲವನ್ನು ಪರೀಕ್ಷೆಗೊಳಪಡಿಸಿದ ನಂತರವಷ್ಟೇ ಕಾಮಗಾರಿ ಮುಂದುವರೆಸುತ್ತಿದ್ದೇವೆ ಎನ್ನುತ್ತಾರೆ ಸಂಬಂಧಪಟ್ಟ ಎಂಜಿನಿಯರ್‍ಗಳು.
ಎರಡು ಹಂತದಲ್ಲಿ ಕಾಮಗಾರಿ
ಗುಬ್ಬಿ ಗೇಟ್ ಬಳಿಯಿಂದ ಕುಣಿಗಲ್ ರಸ್ತೆಯ ವೃತ್ತದ ವರೆಗೆ ಮೊದಲನೇ ಹಂತದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅದು ಇದೇ ವರ್ಷದ ಡಿಸೆಂಬರ್ ವೇಳೆಗೆ ಮುಗಿಯಬೇಕಿದೆ. ಕುಣಿಗಲ್ ರಸ್ತೆಯ ವೃತ್ತದಿಂದ ಕ್ಯಾತ್ಸಂದ್ರವರೆಗಿನ ರಿಂಗ್ ರಸ್ತೆಯು ಎರಡನೇ ಹಂತದ ಕಾಮಗಾರಿಯಲ್ಲಿ ನಡೆಯುತ್ತಿದ್ದು, ಇದು ಕೂಡು 2020ರ ಮೇ ತಿಂಗಳ ವರೆಗೆ ಇದಕ್ಕೆ ಗಡುವು ನೀಡಲಾಗಿದೆ.
ಗುಣಮಟ್ಟದಲ್ಲಿ ರಾಜೀ ಇಲ್ಲ – ಕಾಮಗಾರಿ ಮಾಡುವಾಗ ಗುತ್ತಿಗೆದಾರರು ಬೇಗ ಮುಗಿಸಿಕೊಳ್ಳಲು ಹಲವು ಮಾರ್ಗಗಳನ್ನು ಸೂಚಿಸಿದರೂ ಅದಾವುದನ್ನು ಲೆಕ್ಕಿಸದೆ, ಸರ್ಕಾರದ ಸೂಚನೆಗಳು ಹಾಗೂ ಸ್ಮಾರ್ಟ್ ಸಿಟಿ ಕಂಪನಿಯ ಅಧಿಕಾರಿಗಳ ಸಲಹೆ ಸೂಚನೆಗಳ ಪ್ರಕಾರ ಕಾಮಗಾರಿ ಮಾಡಿಸುತ್ತಿದ್ದುದರಿಂದ ಕಾಮಗಾರಿ ವಿಳಂಭ ವಾಗುತ್ತಿದೆ. ಇಲ್ಲಿ ಗುಣಮಟ್ಟತೆ ಕಾಪಾಡಲು ಹಲವು ಪರೀಕ್ಷೆಗಳನ್ನು ಮಾಡಿದ ನಂತರವಷ್ಟೇ ಕಾಮಗಾರಿ ಮುಂದುವರೆಸಲಾಗುವುದು. -ವರಪ್ರಸಾದ್, ರಿಂಗ್ ರಸ್ತೆಯ ಉಸ್ತುವಾರಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ