ತುಮಕೂರು
ವಿಶೇಷ ವರದಿ :ರಾಕೇಶ್.ವಿ
ತುಮಕೂರು ನಗರವನ್ನಾಗಿ ಸೇಫ್ ಸಿಟಿಯನ್ನಾಗಿಸುವ ದೃಷ್ಟಿಯಿಂದ ಶಾಸಕರ ಕಚೇರಿ ಕಟ್ಟಡದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‍ಅನ್ನು ನಿರ್ಮಾಣ ಮಾಡಿದ್ದಾರೆ. ಸಾರ್ವಜನಿಕ ರಸ್ತೆ, ಸೂಕ್ಷ್ಮ ಪ್ರದೇಶಗಳು ಸೇರಿದಂತೆ ನಗರದ ಹಲವಾರು ಪ್ರದೇಶಗಳಲ್ಲೂ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಲೈವ್ ಮಾನಿಟರಿಂಗ್ ವ್ಯವಸ್ಥೆ ಜಾರಿ ಮಾಡಲಾಗಿದೆ.
ಸ್ಮಾರ್ಟ್ ಸಿಟಿ ಆಗುತ್ತಿರುವ ತುಮಕೂರು ನಗರದಲ್ಲಿ ಎಲ್ಲ ಸೌಲಭ್ಯಗಳ ನಿರ್ವಹಣೆ ಕಾರ್ಯಗಳ ನಿಯಂತ್ರಣ ಹಾಗೂ ಮೇಲುಸ್ತುವಾರಿ ಯನ್ನು ಸಮರ್ಪಕವಾಗಿ ನಿರ್ವಹಿಸಲು ಮಾಹಿತಿ ತಂತ್ರಜ್ಞಾನ ಜಾಲವನ್ನು ಬಳಸಿಕೊಂಡು ನಗರದಲ್ಲಿ ಸಂಯೋಜಿತ ಆಜ್ಞೆ ಮತ್ತು ನಿಯಂತ್ರಣ ಕೇಂದ್ರದ ವ್ಯವಸ್ಥೆ ಸಿದ್ದಮಾಡಲಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ಒಂದೇ ವೇದಿಕೆಯಲ್ಲಿ ವಾಯುಮಾಲಿನ್ಯ ಮಾಪನ, ನೀರು ಮತ್ತು ವಿದ್ಯುತ್ ಪೂರೈಕೆ, ನೈರ್ಮಲೀಕರಣ, ಸಂಚಾರ ವ್ಯವಸ್ಥೆ ನಿರ್ವಹಣೆ, ನಗರ ಸಂಪರ್ಕ ಸಾರಿಗೆ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ, ಹಾಗೂ ಇಂಟರ್‍ನೆಟ್ ಮೂಲಸೌಕರ್ಯ (ಡೇಟಾ ಸೆಂಟರ್) ಇವುಗಳನ್ನು ಆನ್‍ಲೈನ್ ಮೂಲಕವೇ ನಿಯಂತ್ರಣ ಮತ್ತು ನಿರ್ವಹಣೆ ಮಾಡಲಿದೆ. ಹೈಟೆಕ್ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ವೇದಿಕೆ ಮೂಲಕ ನಿರ್ವಹಿಸಲಾಗುತ್ತದೆ.
ಒಟ್ಟು 48 ಕೋಟಿ ರೂ. ವೆಚ್ಚದ ಯೋಜನೆ ಐಪಿಐ ಗ್ಲೋಬಲ್ ಲಿಮಿಟೆಡ್ ಹಾಗೂ ಗ್ರಾಂಟ್ ಥಾನ್ರ್ಟನ್ ಎಲ್‍ಎಲ್‍ಪಿ ತಜ್ಞರು ಸಿದ್ದಪಡಿಸಿದ ರೂಪುರೇಷೆ ಯಾಗಿದೆ. ಈ ವ್ಯವಸ್ಥೆಯನ್ನು ಎಫ್ಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ರೂಪಿಸಿದ್ದು, ಮಹಾನಗರ ಪಾಲಿಕೆಯ ಟೌನ್ ಹಾಲ್ ಕಟ್ಟಡದಲ್ಲಿ 1,500 ಚದರ ಅಡಿ ಜಾಗದಲ್ಲಿ ಈ ಕೇಂದ್ರ ಸಿದ್ಧಗೊಂಡಿದೆ. ಇಲ್ಲಿ ವಿಶ್ವದರ್ಜೆಯ ತಂತ್ರಾಂಶ ಸಹಿತ ಎಲ್ಲ ಬಗೆಯ ಉಪಕರಣಗಳನ್ನು ಅಳವಡಿಸಲಾಗಿದ್ದು, ಈ ಕೇಂದ್ರಕ್ಕೆ ಲಿಂಕ್ ಆಗಿರುವ ವಿವಿಧ ವ್ಯವಸ್ಥೆಗಳ ಮೇಲೆ ನಿಗಾ ಇರಿಸಿ ನಿರ್ದೇಶನಗಳನ್ನು ಇಲ್ಲಿಂದಲೇ ನೀಡಬಹುದಾಗಿದೆ.
ಕಮ್ಯಾಂಡಿಗ್ ಸೆಂಟರ್‍ಗೆ ಲಿಂಕ್ ಮಾಡಿ, ನಗರದಲ್ಲಿ ಒಟ್ಟು 47,000 ಬೀದಿ ದೀಪಗಳನ್ನು ಇದರಡಿ ತರಲಾಗುತ್ತಿದೆ. ಅವುಗಳನ್ನು ಬೆಳಗಿಸುವುದು ಮತ್ತು ಆರಿಸುವುದು ಕೇಂದ್ರಿಯ ವ್ಯವಸ್ಥೆಗೆ ಸೇರಿಕೊಂಡಿರುತ್ತದೆ. ಅಲ್ಲದೆ ಬೀದಿ ದೀಪಗಳ ಪ್ರಕಾಶವನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ. ನಮಗೆ ಬೇಕಾದಷ್ಟನ್ನೇ ಉರಿಸಿ ವಿದ್ಯುಚ್ಛಕ್ತಿ ಉಳಿತಾಯ ಮಾಡಬಹುದಾಗಿದೆ. ಅಲ್ಲದೆ ಸಾರಿಗೆ ವ್ಯವಸ್ಥೆ ನಿಯಂತ್ರಣದಲ್ಲೂ ಸಹಕಾರಿಯಾಗಲಿದೆ.
ಇದಕ್ಕಾಗಿ ಪ್ರಮುಖ ವೃತ್ತಗಳಲ್ಲಿ ಆಧುನಿಕತೆಯ 360 ಡಿಗ್ರಿ ತಿರುಗುವ ಸಿಸಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಒಟ್ಟು 218 ಕೆಮರಾ ಅಳವಡಿಸಲು ಕಾರ್ಯಯೋಜನೆ ರೂಪಿಸಲಾಗಿದ್ದು, ಪ್ರಥಮ ಹಂತದಲ್ಲಿ ಮುಖ್ಯ 7 ವೃತ್ತಗಳಲ್ಲಿ 63 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಾರಿಗೆ ಕಚೇರಿಯ ಮಾಹಿತಿ ವ್ಯವಸ್ಥೆಯು ಈ ಕೇಂದ್ರಕ್ಕೆ ಲಿಂಕ್ ಆಗಿದ್ದರಿಂದ ರಸ್ತೆ ನಿಯಮ ಉಲ್ಲಂಘಿಸಿದ ವಾಹನ ಮಾಲಿಕರನ್ನು ಸುಲಭವಾಗಿ ಪತ್ತೆ ಮಾಡಿ ಅವರಿಗೆ ನೋಟಿಸ್ ರವಾನಿಸಬಹುದು.
ನಗರದಲ್ಲಿ ಅಳವಡಿಸಲಾದ ಸಿಸಿಕ್ಯಾಮೆರಾಗಳಲ್ಲಿ ಮೂರು ವಿಧಗಳಿದ್ದು ಅವುಗಳು, ಪಿಟಿಝಡ್ ಕ್ಯಾಮೆರಾ, ಆರ್‍ಎಲ್‍ವಿಡಿ ಕ್ಯಾಮೆರಾ, ಎಎನ್‍ಪಿಆರ್ ಕ್ಯಾಮರಾ.
ಪಿಟಿಝಡ್ ಕ್ಯಾಮೆರಾ: ಪ್ಯಾನ್ ಟಿಲ್ಟ್ ಝೂಮ್
ಮಹಿಳೆಯರು ಹೆಚ್ಚಾಗಿ ಓಡಾಡುವ 7 ಜನನಿಬಿಡ ಪ್ರದೇಶಗಳು, ಪಾರ್ಕ್‍ಗಳಲ್ಲಿ ಸೇರಿದಂತೆ ಒಟ್ಟು 19 ಕಡೆಗಳಲ್ಲಿ ಪ್ಯಾನ್ ಟಿಲ್ಟ್ ಝೂಮ್ (ಪಿಟಿಝಡ್) ಕ್ಯಾಮೆರಾ ಅಳವಡಿಸಲಾಗಿದೆ. ಇವು 360 ಡಿಗ್ರಿ ತಿರುಗಬಲ್ಲವು. ನಿಖರವಾಗಿ ಅನುಮಾನಸ್ಪಾದ ವ್ಯಕ್ತಿ, ಘಟನೆಯ ಸ್ಥಳದತ್ತ ಜೂಮ್ ಮಾಡಿ ಠಾಣೆಯಲ್ಲಿ ಕುಳಿತೇ ಅಸಹಜ ಚಟುವಟಿಕೆಗಳಿಗೆ ಪೋಲೀಸರು ಪ್ರತಿಕ್ರಿಯಿಸಬಹುದಾಗಿದೆ.