ಸ್ಮಾಟ್‍ಸಿಟಿ ಯೋಜನೆಯ ಕಾರ್ಯ ಯೋಜನೆಗಳು..!

ತುಮಕೂರು
ವಿಶೇಷ ವರದಿ: ರಾಕೇಶ್.ವಿ.
     ಸ್ಮಾರ್ಟ್‍ಸಿಟಿ  ಯೋಜನೆಯಡಿಯಲ್ಲಿ ತುಮಕೂರನ್ನು 2016ರ ಅಕ್ಟೋಬರ್ ತಿಂಗಳಲ್ಲಿ 2ನೇ ಹಂತದಲ್ಲಿ ಗುರುತಿಸಲಾಯಿತು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಸಮಗ್ರವಾಗಿ ಬಳಸಿಕೊಂಡು, ತುಮಕೂರು ನಗರಕ್ಕೆ ಸ್ಮಾರ್ಟ್ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿಕೊಂಡು ಕಾಮಗಾರಿಗಳನ್ನು ಮಾಡಲಾಗುತ್ತಿದೆ. 
     ಸ್ಮಾರ್ಟ್‍ಸಿಟಿ ಕಾಮಗಾರಿಗೆ ಒಟ್ಟು ಅನುದಾನ 1000 ಕೋಟಿಗಳು. ಈ ಅನುದಾನದಲ್ಲಿ ವಿವಿಧ ಯೋಜನೆಗಳನ್ನು 5 ವರ್ಷಗಳ ಅವಧಿಯಲ್ಲಿ  ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಇದರ ಜೊತೆಗೆ  ರೂ. 270.73  ಕೋಟಿಗಳ ವೆಚ್ಚದ 05  ಯೋಜನೆಗಳು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಯೋಜನೆಗಳಾಗಿ ಮತ್ತು ರೂ. 549.00 ಕೋಟಿಗಳ ವೆಚ್ಚದ 04 ಯೋಜನೆಗಳನ್ನು ಕನ್ವರ್ಜೆನ್ಸ್  ಯೋಜನೆಗಳಾಗಿ ಗುರುತಿಸಲಾಗಿದ್ದು, ಇತರೆ  ಇಲಾಖೆಗಳು ತಮ್ಮ ಅನುದಾನದಲ್ಲಿ ಈ ಯೋಜನೆಗಳನ್ನು ಅನುಷ್ಠಾನಗಳಿಸುತ್ತವೆ.
    ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದಶಿಯಾಗಿರುವ ಡಾ.ಶಲಿನಿ ರಜನೀಶ್ ಅವರ ಸಲಹೆ ಸೂಚನೆ ಮತ್ತು ಮಾರ್ಗದರ್ಶನದಲ್ಲಿ ಯೋಜನಾ ನಿರ್ವಹಣಾ ಸಲಹೆದಾರ ಸಂಸ್ಥೆಯಾದ ಐ.ಪಿ.ಇ ಗ್ಲೋಬಲ್ ಲಿಮಿಟೆಡ್ ಹಾಗೂ ಸಹಭಾಗಿತ್ವ ಸಂಸ್ಥೆಗಳಾದ ಗ್ರಾಂಟ್ ಥಾನ್ರ್ಟನ್ ಎಲ್‍ಎಲ್‍ಪಿ ಮತ್ತು ಆರ್ಯವರ್ತ ಡಿಸೈನ್ ಕನ್ಸಲ್ಟೆಂಟ್ ಎಲ್‍ಎಲ್‍ಪಿನ ತಜ್ಞರ ತಂಡದಿಂದ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಶುದ್ಧ ನೀರು, ಸ್ವಚ್ಛತೆ, ನೈರ್ಮಲ್ಯತೆ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಕ್ರೀಡೆ, ರಸ್ತೆ, ಶಿಕ್ಷಣ, ಆರೋಗ್ಯ, ಪರಿಸರ ಸ್ನೇಹಿ ಸಾರಿಗೆ, ಇ-ಆಡಳಿತ ವ್ಯವಸ್ಥೆ ಕಾಮಗಾರಿಗಳಿಗೆ ಸಮನಾದ ಆದ್ಯತೆ ನೀಡಿ ಕಾಮಗಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಶೈಕ್ಷಣಿಕ  ಅಭಿವೃದ್ಧಿಯ  ಯೋಜನೆಯ ಅಂದಾಜು ವೆಚ್ಚ ರೂ. 31.00 ಕೋಟಿ
     ತುಮಕೂರು ನಗರದ  ಕೇಂದ್ರ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಕೃತಿಕ  ಪುನರುಜ್ವೀವನಕ್ಕೆ ಕಾಲೇಜಿನ ಸಮಗ್ರ  ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದು, ಇದರ ಜೊತೆಗೆ ಸರ್ಕಾರಿ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ  ಅವಶ್ಯಕವಿರುವ  ಆಡಿಟೋರಿಯಂ,  ಪ್ರಯೋಗಾಲಯ, ಲೈಬ್ರರಿ ಮುಂತಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಸುಮಾರು ರೂ. 12.00 ಕೋಟಿಗಳ  ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
     ಈ ಎರಡು ಶಾಲೆಗಳ ಜೊತೆಗೆ ಉಳಿದ  ಕೆಲವು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‍ರೂಮ್, ಐಸಿಟಿ ಲ್ಯಾಬ್ಸ್ ಮತ್ತು ಇಂಗ್ಲೀಷ್ ಭಾಷಾ ಪ್ರಯೋಗಾಲಯ ನಿರ್ಮಿಸಲೂ ಸಹ ರೂ. 3.00 ಕೋಟಿಗಳ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದ್ದು, ಈಗಾಗಲೇ ಎಂಪ್ರೆಸ್ ಶಾಲೆ,  ಪದವಿಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ನಗರದ ವರ್ತುಲ ರಸ್ತೆಯ ಅಭಿವೃದ್ಧಿ
      ತುಮಕೂರು ನಗರದ ಸುತ್ತಮುತ್ತಲಿನ ಹಾಗೂ ಹೊರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮೂಲಕ   ಪ್ರಯಾಣವನ್ನು  ಸುಲಭವಾಗಿಸುವ  ರಿಂಗ್ ರಸ್ತೆಯ ಪುನರುಜ್ಜೀವನ ಮತ್ತು ಪುನರಾಭಿವೃದ್ಧಿಯನ್ನು  ಎರಡು  ಹಂತಗಳಲ್ಲಿ ರೂ. 84.97 ಕೋಟಿ ವೆಚ್ಚದಲ್ಲಿ  ಕೈಗೊಳ್ಳಲಾಗುತ್ತಿದೆ. ಇದರಿಂದ ನಗರ  ಮತ್ತು ಗ್ರಾಮೀಣ  ಭಾಗದ  ಜನರಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ.  ಎರಡೂ ಹಂತದ ಕಾರ್ಯವು ಈಗಾಗಲೇ ಪ್ರಗತಿ ಹಂತದಲ್ಲಿದೆ. 
ಸ್ಮಾರ್ಟ್ ರೋಡ್ ಅಭಿವೃದ್ಧಿ
       ತುಮಕೂರು ನಗರದ ಪ್ರದೇಶಾಧಾರಿತ ಅಭಿವೃದ್ಧಿ ವ್ಯಾಪ್ತಿಯಲ್ಲಿ (ಎಬಿಡಿ ಏರಿಯಾ) ಬರುವ ಪ್ರಮುಖ  ರಸ್ತೆಗಳನ್ನು  ಸ್ಮಾರ್ಟ್‍ರಸ್ತೆಗಳನ್ನಾಗಿ  ಪರಿವರ್ತಿಸಲು  ರೂ.228.7 ಕೋಟಿಗಳ ಯೋಜನೆಯನ್ನು ರೂಪಿಸಲಾಗಿದ್ದು, ಅನುಷ್ಠಾನದ ಹಂತದಲ್ಲಿದೆ. ಸ್ಮಾರ್ಟ್‍ರಸ್ತೆಯಲ್ಲಿ  ಉತ್ತಮವಾದ ಪಾದಚಾರಿ  ಮಾರ್ಗ,   ಪ್ರತ್ಯೇಕ  ಬೈಸಿಕಲ್ ಟ್ಯ್ರಾಕ್, ಅಂಡರ್ ಗ್ರೌಂಡ್ ಎಲೆಟ್ರಿಕಲ್ ಡಕ್ಟಿಂಗ್, ಬಹು ಕ್ರಿಯಾತ್ಮಕ ವಲಯ (ಮಲ್ಟಿ ಫಕ್ಷನಲ್ ಜೋನ್), ಹಸಿರು ವಲಯ(ಗ್ರೀನ್ ಸ್ಪೇಸ್), ಮುಂತಾದ ಅನುಕೂಲಗಳನ್ನು ಅಳವಡಿಸಲು   ಯೋಜಿಸಲಾಗಿದ್ದು,   ನಾಗರಿಕರಿಗೆ ಉತ್ತಮ ಸೌಲಭ್ಯವನ್ನು ನೀಡಲು ಸಹಕಾರಿಯಾಗಲಿದೆ.
      ಈಗಾಗಲೇ  ಫೀಲ್ಡ್ ಮಾರ್ಷಲ್  ಕಾರಿಯಪ್ಪ ರಸ್ತೆ, ಜೆ.ಸಿ.ರಸ್ತೆ, ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ,  ಹೊರಪೇಟೆ ರಸ್ತೆ,  ಮಂಡಿಪೇಟೆ ಮೊದಲನೇ ಮತ್ತು ಎರಡನೇ ಮುಖ್ಯರಸ್ತೆ,  ಖಾಸಗಿ  ಬಸ್‍ನಿಲ್ದಾಣದ ಉತ್ತರ ರಸ್ತೆ,  ಭಗವಾನ್ ಮಹಾವೀರ್ ಜೈನ್ ರಸ್ತೆ, ಅಶೋಕ ರಸ್ತೆ,  ಬೆಳಗುಂಬ  ರಸ್ತೆ, ರಾಧಕೃಷ್ಣ ರಸ್ತೆ, ಬಿ.ಎಚ್.ರಸ್ತೆ ಕಾಮಗಾರಿಗಳು  ಪ್ರಗತಿಯಲ್ಲಿವೆ.
ಇಂಟಿಗ್ರೇಟೆಡ್ ಸಿಟಿ  ಮ್ಯಾನೇಜ್‍ಮೆಂಟ್, ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ಐಸಿಎಂಸಿಸಿ)  
      ಈ ಯೋಜನೆಯ ಅಂದಾಜು ವೆಚ್ಚ ರೂ.  59.59 ಕೋಟಿಗಳು. ತುಮಕೂರು ನಗರದಲ್ಲಿ ವಿವಿಧ ಕಡೆ ಸಿಸಿಟಿವಿ  ಸರ್ವೆಲೆನ್ಸ್, ವೇರಿಯಬಲ್ ಮೆಸೆಜಿಂಗ್, ಸಿಸ್ಟಂ,  ಎನ್ವಿರೋನ್ಮೆಂಟ್   ಮಾನಿಟರಿಂಗ್, ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ ಮತ್ತು ತುಮಕೂರು ಒನ್ ಅಪ್ಲಿಕೇಶನ್  ಸೌಲಭ್ಯಗಳನ್ನೊಳಗೊಂಡ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸಿಸ್ಟಂ ಸ್ಥಾಪಿಸಿದ್ದು, ಪರೀಕ್ಷಾರ್ಥವಾಗಿ ಟೌನ್‍ಹಾಲ್ ವೃತ್ತದಲ್ಲಿ  ಸಿಗ್ನಲ್‍ಗಳ ಮಾನಿಟರಿಂಗ್ ಮಾಡಲಾಗುತ್ತಿದೆ. 
ಬಸ್ ನಿಲ್ದಾಣದ ಸಮಗ್ರ ಅಭಿವೃದ್ಧಿ
     ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸಮಗ್ರ ಅಭಿವೃದ್ಧಿ ಪಡಿಸಲು ಅಂದಾಜು ವೆಚ್ಚ ರೂ.100 ಕೋಟಿಗಳು ಯೋಜಿಸಲಾಗಿದೆ. ಪ್ರಸ್ತುತ ತುಮಕೂರು ನಗರದಲ್ಲಿರುವ ಹಳೆಯ ಬಸ್ ಸ್ಟ್ಯಾಂಡ್ ಜಾಗದಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಬಸ್ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಬಸ್ ನಿಲ್ದಾಣದಲ್ಲಿ ಇ-ಶೌಚಾಲಯ,  ಎಟಿಎಂ,  ಬಹುಮಹಡಿ ಪಾರ್ಕಿಂಗ್, ಲಿಫ್ಟ್ ಸೌಲಭ್ಯ, ಎಸ್ಕಲೇಟರ್ ಮತ್ತು ವಾಣಿಜ್ಯ  ಮಳಿಗೆಗಳು  ಮುಂತಾದ ಅನುಕೂಲಗಳನ್ನು ಕಲ್ಪಿಸುವ ಸೌಕರ್ಯಗಳು ದೊರೆಯಲಿವೆ. 
ಸ್ಮಾರ್ಟ್ ಲಾಂಜ್
     ಸ್ಮಾರ್ಟ್ ಲಾಂಜ್ ಯೋಜನೆಯ ಅಂದಾಜು ವೆಚ್ಚ ರೂ.10.00 ಕೋಟಿಗಳು. ಈ ಯೋಜನೆಯ ಪರಿಮಿತಿಯಲ್ಲಿ ಈಗಾಗಲೇ ಅಮಾನಿಕೆರೆ ಆವರಣದಲ್ಲಿ ಒಂದು ಸ್ಮಾರ್ಟ್ ಲಾಂಜ್‍ನ್ನು ( ಆಧುನಿಕ ವಿಶ್ರಾಂತಿ ಕೋಣೆ)  ಸ್ಥಾಪಿಸಲಾಗಿದ್ದು,  ಇದರಲ್ಲಿ ಡಿಜಿಟಲ್  ಲೈಬ್ರರಿ, ಏಟಿಎಂ, ಕಾಫಿ ಶಾಫ್ ಮಾಹಿತಿ ಮತ್ತು ಸಂವಹನ  ತಂತ್ರಜ್ಞಾನ ಹಾಗೂ ತುಮಕೂರು ಒನ್ ನಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳೂ ದೊರೆಯಲಿದ್ದು, ನಾಗರಿಕರಿಗೆ  ವಿಶ್ರಾಂತಿ ಸಮಯವನ್ನು  ಕಳೆಯುವ  ತಂಗುದಾಣವಾಗಿದೆ. ಈ ಯೋಜನೆಯನ್ನು ಒಂದು ಉತ್ತಮ ನವೋತ್ಮಕ  ಯೋಜನೆಯಾಗಿ  ಗುರುತಿಸಿ ಸ್ಮಾರ್ಟ್‍ಸಿಟಿ ಇಂಡಿಯಾ ಅವಾರ್ಡ್-2019 ಪ್ರಶಸ್ತಿಯನ್ನು ದೆಹಲಿಯಲ್ಲಿ ಪಡೆಯಲಾಗಿದೆ. ಇದೇ ರೀತಿ ಇನ್ನೂ ನಾಲ್ಕು ಸ್ಮಾರ್ಟ್‍ಲಾಂಜ್‍ಗಳನ್ನು  ನಗರದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
ಅಪಘಾತ ಚಿಕಿತ್ಸಾ ಕೇಂದ್ರ
      ಅಪಘಾತ ಚಿಕಿತ್ಸಾ ಕೇಂದ್ರದ ಯೋಜನೆಯ ಅಂದಾಜು ವೆಚ್ಚ ರೂ. 56.00 ಕೋಟಿಗಳು. ತುಮಕೂರು ನಗರದ ಸುತ್ತಲೂ 3 ರಾಷ್ಟ್ರೀಯ ಹೆದ್ದಾರಿಗಳಿರುವುದರಿಂದ ಆಗುತ್ತಿರುವ ಅಪಘಾತಗಳಿಗೆ  ತಕ್ಷಣವೇ ವೈದ್ಯಕೀಯ ಸೌಲಭ್ಯಗಳನ್ನು  ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ  ರೂ. 56.00ಕೋಟಿಗಳ ವೆಚ್ಚದಲ್ಲಿ  ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್‍ಅನ್ನು ಸ್ಥಾಪಿಸಲು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಯೋಜನೆಯನ್ನು ರೂಪಿಸಲಾಗಿದೆ.
ಅಮಾನಿಕೆರೆ ಅಭಿವೃದ್ಧಿ
      ಅಮಾನಿಕೆರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ರೂ.47 ಕೋಟಿಗಳ ಅಂದಾಜು ವೆಚ್ಚ ಯೋಜಿಸಲಾಗಿದ್ದು, ತುಮಕೂರು ನಗರದ ಮಧ್ಯಭಾಗದಲ್ಲಿರುವ ವಿಶಾಲವಾದ ಅಮಾನಿಕೆರೆಯ  ಸರ್ವಾಂಗೀಣ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಮೂಲಕ ಪ್ರವಾಸ ತಾಣವಾಗಿಸಲು ಕೆರೆ ಏರಿ ಸಂರಕ್ಷಣೆ ಮತ್ತು ಅಭಿವೃದ್ಧಿ, ಸೈಕಲ್ ಟ್ರ್ಯಾಕ್, ಪಾತ್‍ವೇ, ಚೈನ್‍ಲಿಂಕ್ ಫೆನ್ಸಿಂಗ್ ಮತ್ತು ಆಕರ್ಷಕ ನೃತ್ಯ ಕಾರಂಜಿ ಪ್ರದರ್ಶನ, ದೋಣಿವಿಹಾರ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಕುಡಿಯುವ ನೀರು ಸರಬರಾಜು
      ಅಮಾನಿಕೆರೆಗೆ ಬರುವ ಕೊಳಚೆ ನೀರನ್ನು ಸಂಪೂರ್ಣವಾಗಿ ತಡೆಗಟ್ಟಿ ತುಮಕೂರು  ನಗರದ ಜನರಿಗೆ ಅನುಕೂಲವಾಗುವಂತೆ ಕುಡಿಯುವ ನೀರು ಸರಬರಾಜು ಮಾಡಲು ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸಲು ಮತ್ತು ತುಂಬಿಸಿರುವ ನೀರನ್ನು ಪಿ.ಎನ್.ಪಾಳ್ಯದಲ್ಲಿ ನಿರ್ಮಿಸಿರುವ 50 ಎಂಎಲ್.ಡಿ. ನೀರು ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಿ ನಗರಕ್ಕೆ ಸರಬರಾಜು ಮಾಡಲು ರೂ. 56.55 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಸ್ಮಾಟ್‍ಸಿಟಿ ಅನುದಾನದಲ್ಲಿ (ಕೆಯುಡಬ್ಲೂ & ಡಿಬಿ) ಯಿಂದ  ಕೈಗೊಳ್ಳಲಾಗುತ್ತಿರುವ  ಈ ಯೋಜನೆಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link