ಸ್ಮಾರ್ಟ್‍ಸಿಟಿ ಎಂಬ ಕನಸು ಕಳಚತೊಡಗಿದಾಗ….

ತುಮಕೂರು
    ತುಮಕೂರು ನಗರವು ರಾಷ್ಟ್ರದ 100 ನಗರಗಳ ಪೈಕಿ ಒಂದು ಸ್ಮಾರ್ಟ್‍ಸಿಟಿ ಆಗಿ ಆಯ್ಕೆಗೊಂಡಿತೆಂಬ ಸಂಗತಿ ಮೂರು ವರ್ಷಗಳ ಮೊದಲು ತುಮಕೂರು ನಗರದ ಜನರಲ್ಲಿ ಒಂದು ಥ್ರಿಲ್ ಸೃಷ್ಟಿಸಿತ್ತು. ಸ್ಮಾರ್ಟ್ ಸಿಟಿ ಎಂದರೇನೆಂಬ ಪರಿಕಲ್ಪನೆಯೇ ಇಲ್ಲದಿದ್ದ ಆ ದಿನಗಳಲ್ಲಿ ಎಲ್ಲರೂ ತಮ್ಮ ತಮ್ಮ ಕಲ್ಪನೆಗಳಲ್ಲೇ ಸ್ಮಾರ್ಟ್‍ಸಿಟಿ ಎಂದರೆ ಹೀಗೀಗೆಂದು ಬಣ್ಣಿಸುತ್ತಿದ್ದ ಸಂದರ್ಭಗಳು ಹೇರಳವಾಗಿದ್ದವು.
    ಕೇಂದ್ರದ 500 ಕೋಟಿ ರೂ. ಹಾಗೂ ರಾಜ್ಯದ 500 ಕೋಟಿ ರೂ. ಸೇರಿ ಒಟ್ಟು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹಾಗೂ ಇದರೊಂದಿಗೆ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಅವಕಾಶದೊಂದಿಗೆ ಐದು ವರ್ಷಗಳ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಸೃಷ್ಟಿಯಾಗುತ್ತದೆಂಬ ಕನಸು ಆಗ ಸಮೃದ್ಧಿಯಾಗಿ ಬಿತ್ತನೆಯಾಗಿತ್ತು. 
     ಸ್ಮಾರ್ಟ್‍ಸಿಟಿ ಆಗಿ ಆಯ್ಕೆಯಾಗಲೂ ತುಮಕೂರು ಮಹಾನಗರ ಪಾಲಿಕೆ ತೀವ್ರ ಕಸರತ್ತು ನಡೆಸಿತ್ತು. ಕೇಂದ್ರ ಸರ್ಕಾರ ವಿಧಿಸಿದ್ದ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಂಡು, ತುಮಕೂರು ಪಾಲಿಕೆಯು ಹೆಚ್ಚು-ಹೆಚ್ಚು ಅಂಕಗಳನ್ನು ಗಳಿಸುತ್ತ ಹೋಯಿತು. ಅದರ ಪರಿಣಾಮವಾಗಿ ಅಂತಿಮ ಹಂತದಲ್ಲಿ ತುಮಕೂರು ನಗರವೂ ಸ್ಮಾರ್ಟ್‍ಸಿಟಿ ಆಗಿ ಆಯ್ಕೆ ಆಗಿತ್ತು. ಆಯ್ಕೆಗೊಂಡ ಬಳಿಕ ತುಮಕೂರು ನಗರವನ್ನು ಸ್ಮಾರ್ಟ್ ಮಾಡಲು ಏನೇನು ಆಗಬೇಕೆಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹವು ಕೇಂದ್ರ ಸರ್ಕಾರದ ಸೂಚನಾನುಸಾರವೇ ನಡೆದಿತ್ತು.
      ಆಗ ಪಾಲಿಕೆ ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ಜನ ಸಂಪರ್ಕ ಸಭೆಗಳು ಏರ್ಪಟ್ಟವು. ಅಂತಹ ಸಭೆಗಳಲ್ಲೆಲ್ಲ  ಪ್ರೊಜೆಕ್ಟರ್ ಮೂಲಕ ವಿದೇಶಗಳ ಸುಂದರ ರಸ್ತೆಗಳು, ಫುಟ್‍ಪಾತ್‍ಗಳು, ಭವ್ಯ ಕಟ್ಟಡಗಳು, ಸೇತುವೆಗಳು, ಅಚ್ಚುಕಟ್ಟಾದ ಕೆರೆಗಳು ಮೊದಲಾದ ಆಕರ್ಷಕ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ನಮ್ಮ ದೇಶದ ಮುಂಬೈನ ಹಳೆಯ ಹಾಗೂ ಕೊಳಚೆ ಪ್ರದೇಶ ತೆರವುಗೊಳಿಸಿ ಅಲ್ಲಿ ಅತ್ಯಾಧುನಿಕ ವಸತಿ ಸಮುಚ್ಛಯ ನಿರ್ಮಿಸಿರುವುದನ್ನೂ ವಿಶೇಷವಾಗಿ ಪ್ರದರ್ಶಿಸಲಾಗುತ್ತಿತ್ತು.
      ಅದನ್ನು ನೋಡಿದ ಜನರು ನಮ್ಮೂರೂ ಹೀಗೆಯೇ ಆಗಿಬಿಡುತ್ತದೆಂಬ ಕನಸು ಕಾಣತೊಡಗಿದರು. ಅಭಿಪ್ರಾಯ ಸಂಗ್ರಹಕ್ಕೆ ತೊಡಗಿದಾಗ, ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣ, ಅಮಾನಿಕೆರೆ, ಮಹಾತ್ಮಗಾಂಧಿ ರಸ್ತೆ, ಅಶೋಕ ರಸ್ತೆ , ಮಂಡಿಪೇಟೆ ಮೊದಲಾದ ಜನಸಾಂದ್ರತೆಯ ಪ್ರದೇಶಗಳ ಅಭಿವೃದ್ಧಿಯತ್ತಲೇ ಜನರ ಒಲವು ವ್ಯಕ್ತವಾಗತೊಡಗಿತು. 
      ಇದರ ನಡುವೆ ನಗರದಲ್ಲಿ ರೈಲು ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಖಾಸಗಿ ಸಹಭಾಗಿತ್ವದಲ್ಲಿ ಎಸ್ಕಲೇಟರ್ ನಿರ್ಮಾಣ, ನಗರಕ್ಕೆ ಅಗತ್ಯವಿರುವ ವಿದ್ಯುಚ್ಛಕ್ತಿಯನ್ನು ನಗರದ ಎಲ್ಲ ಸರ್ಕಾರಿ ಕಚೇರಿಗಳ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಫಲಕಗಳನ್ನು ಅಳವಡಿಸುವ ಮೂಲಕ ಉತ್ಪಾದಿಸುವುದು, ಖಾಸಗಿಯವರೂ ಇಚ್ಛಿಸಿದಲ್ಲಿ ಅವರಿಗೂ ಸೌರವಿದ್ಯುತ್ ಉತ್ಪಾದಿಸಿಕೊಡಲು ಅವಕಾಶ, ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಚಿತ ವೈಫೈ ಸೌಲಭ್ಯ, ಅತ್ಯಾಧುನಿಕ ಸೌಲಭ್ಯದ ವಸತಿ ಸಮುಚ್ಛಯ ನಿರ್ಮಾಣ, ಸ್ಮಾರ್ಟ್‍ಸಿಟಿಯ ನಿಗದಿತ ಪ್ರದೇಶದ ಅಭಿವೃದ್ಧಿಯ ಜೊತೆಗೆ ಮಿಕ್ಕುಳಿವ ತುಮಕೂರು ನಗರದಲ್ಲಿ ಅತ್ಯಾಧುನಿಕ ತಾಂತ್ರಿಕತೆಯ ಪ್ಯಾನ್ ಸಿಟಿ ಸೌಲಭ್ಯಗಳು, ವಿವಿಧ ಆ್ಯಪ್‍ಗಳ ಮೂಲಕ ವಿವಿಧ ವೃತ್ತಿಗಳವರು ಮತ್ತು ಸಾರ್ವಜನಿಕರಿಗೆ ನೇರ/ಸುಲಭ ಸೌಲಭ್ಯ ಸಿಗುವುದು ಮೊದಲಾದವುಗಳೂ ಚರ್ಚೆಗೊಂಡವು.
    ನಗರದ ಹಳೆಯ ಪ್ರದೇಶವನ್ನೇ ಅಭಿವೃದ್ಧಿಪಡಿಸಬೇಕೇ? ಅಥವಾ ನಗರದ ಹೊರಗೆ ಒಂದಿಷ್ಟು ಎಕರೆ ಭೂಪ್ರದೇಶದಲ್ಲಿ ಹೊಸತಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಬಡಾವಣೆಯೊಂದನ್ನೇ ರೂಪಿಸಬೇಕೇ ಎಂಬ ಚರ್ಚೆಯೂ ನಡೆದು, ಅಂತಿಮವಾಗಿ ನಗರದೊಳಗೆ ಜನಾಪೇಕ್ಷೆಯಂತೆ ಹಳೆಯ ಪ್ರದೇಶವುಳ್ಳ ನಿರ್ದಿಷ್ಟ ಸ್ಥಳದಲ್ಲೇ ಅಭಿವೃದ್ಧಿಪಡಿಸುವ ನಿಲುವು ತಾಳಲಾಯಿತು. 
    ನಗರದ ರೈಲು ನಿಲ್ದಾಣದ ಮುಂದಿನಿಂದ ಗಾಂಧಿನಗರದ ರಸ್ತೆಯ ಕೊನೆ, ಕುಣಿಗಲ್ ರಸ್ತೆಯ ಲೋಕೋಪಯೋಗಿ ಇಲಾಖೆ ಕಚೇರಿ ಮೂಲಕ ಲಕ್ಕಪ್ಪ ವೃತ್ತ, ಅಲ್ಲಿಂದ ಬಿಜಿ ಪಾಳ್ಯ ವೃತ್ತ, ಅಲ್ಲಿಂದ ಸಂತೆಪೇಟೆ, ಅಗ್ರಹಾರ ಮೂಲಕ ಗಾರ್ಡನ್ ರಸ್ತೆ, ಅಲ್ಲಿಂದ ಪೂರ್ವಾಭಿಮುಖವಾಗಿ ಕೋಡಿಬಸವಣ್ಣ ದೇವಾಲಯ, ಕೆರೆ ಪಕ್ಕದ ರಸ್ತೆ ಮೂಲಕ ಕೋತಿತೋಪು, ಅಲ್ಲಿಂದ ಹನುಮಂತಪುರ ರಸ್ತೆಯಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ ತಿರುವು, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ, ಬಿ.ಎಚ್.ರಸ್ತೆ, ಸಿದ್ಧಗಂಗಾ ಬಡಾವಣೆಯ ಮೊದಲನೇ ತಿರುವು, ಅಲ್ಲಿಂದ ನೇರವಾಗಿ ಸೋಮೇಶ್ವರಪುರಂ ರಸ್ತೆ ದಾಟಿ ರೈಲ್ವೆ ಹಳಿಯವರೆಗೂ ಸಾಗಿ, ಪಶ್ಚಿಮಾಭಿಮುಖವಾಗಿ ಉಪ್ಪಾರಹಳ್ಳಿ ಗೇಟ್ ಮೂಲಕ, ಮತ್ತೆ ರೈಲು ನಿಲ್ದಾಣ -ಇವಿಷ್ಟು ಗಡಿಯ ಒಳಭಾಗದ ಪ್ರದೇಶವನ್ನು ಸ್ಮಾರ್ಟ್‍ಸಿಟಿಯಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಯಿತು. 
    ಈ ಉದ್ದೇಶಿತ ಪ್ರದೇಶದಲ್ಲಿ ರೈಲು ನಿಲ್ದಾಣ, ಎರಡು ಬಸ್ ನಿಲ್ದಾಣಗಳು, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ನ್ಯಾಯಾಲಯ ಸಂಕೀರ್ಣ, ಮಹಾನಗರ ಪಾಲಿಕೆ ಕಚೇರಿ, ನಗರದ ಹಳೆಯ ಪ್ರದೇಶಗಳು, ಹೊಸ ಬಡಾವಣೆಗಳು, ವಾಣಿಜ್ಯ ಪ್ರದೇಶಗಳು, ಕೊಳಚೆ ಪ್ರದೇಶಗಳು ಎಲ್ಲವೂ ಇರುವುದು ಒಂದು ವೈಶಿಷ್ಟೃವೆಂದೂ ಪರಿಗಣಿಸಲಾಗಿತ್ತು. 
     2016 ರಲ್ಲಿ ಕಂಪನಿ ಕಾಯ್ದೆ ಪ್ರಕಾರ  ತುಮಕೂರು ಸ್ಮಾರ್ಟ್‍ಸಿಟಿ ಕಂಪನಿ ಲಿಮಿಟೆಡ್ ರಚಿತವಾಯಿತು. 2017 ರಲ್ಲಿ ಕಂಪನಿ ಕಾರ್ಯನಿರ್ವಹಣೆಗೆ ಕಚೇರಿ ಸೌಲಭ್ಯ ಮಾಡಿಕೊಳ್ಳಲಾಯಿತು. ಮೊದಲಿಗೆ ನಗರದ ಹಳೆಯ ಪ್ರದೇಶಗಳ ಲ್ಲೊಂದಾದ ಚಿಕ್ಕಪೇಟೆಯಲ್ಲಿರುವ ಪಾಲಿಕೆ ಸ್ವತ್ತಾದ ದಿವಾನ್ ಪೂರ್ಣಯ್ಯ ಛತ್ರವನ್ನು ಸ್ಮಾರ್ಟ್‍ಸಿಟಿ ಕಂಪನಿಗೆ ಬಿಟ್ಟುಕೊಡಲಾಯಿತು. ಕೆಲ ದಿನಗಳ ಕಾಲ ಕಂಪನಿ ಅಲ್ಲಿ ಕಾರ್ಯಾರಂಭವನ್ನೂ ಮಾಡಿತು. ಬಳಿಕ ವಿವಿಧ ಕಾರಣಗಳಿಂದ ಆ ಕಂಪನಿ ಕಚೇರಿಯು ನಗರದ ಸೋಮೇಶ್ವರ ಪುರಂ ಮುಖ್ಯರಸ್ತೆಯ ಖಾಸಗಿ ಕಾಂಪ್ಲೆಕ್ಸ್ ಒಂದಕ್ಕೆ ಸ್ಥಳಾಂತರಗೊಂಡಿತು. ಆ ಬಳಿಕ ಈವರೆಗೂ ಅಲ್ಲೇ -ಬಾಡಿಗೆ ಸ್ಥಳದಲ್ಲೇ- ಕಂಪನಿ ಕಾರ್ಯನಿರ್ವಹಿಸುತ್ತಿದೆ. 
       ಕಂಪನಿ ಕಾಯ್ದೆ ಪ್ರಕಾರ ಇದಕ್ಕೆ ಛೇರ್ಮನ್ ಇರುತ್ತಾರೆ. ಎಂ.ಡಿ. ಅಥವಾ ಸಿ.ಇ.ಓ. ಇರುತ್ತಾರೆ. ಆಡಳಿತ ಮಂಡಲಿ ನಿರ್ದೇಶಕರುಗಳಾಗಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಹಾನಗರ ಪಾಲಿಕೆ ಮೇಯರ್, ಉಪಮೇಯರ್, ಇಬ್ಬರು ಕಾಪೆರ್ರೇಟರ್‍ಗಳು ಇರುತ್ತಾರೆ. ನಿಯಮಾನುಸಾರ ನಿರ್ದೇಶಕ ಮಂಡಲಿ ಸಭೆಗಳಲ್ಲಿ ಕಂಪನಿಯ ಕಾರ್ಯನಿರ್ವಹಣೆಗೆ ಸಮ್ಮತಿ ದೊರೆಯುತ್ತದೆ. ಇದಲ್ಲದೆ ಸ್ಮಾರ್ಟ್‍ಸಿಟಿ ಆಗಿ ತುಮಕೂರು ನಗರ ಆಯ್ಕೆಗೊಂಡ ಸಂದರ್ಭದಲ್ಲಿ ಸೂಕ್ತ ಸಲಹೆ ನೀಡಲೆಂಬ ಆಶಯದಿಂದ ಒಂದು ಸಲಹಾ ಸಮಿತಿಯನ್ನೂ ರಚಿಸಲಾಯಿತು.
      ಆ ಸಮಿತಿಯಲ್ಲಿ ಸದಸ್ಯರಾಗಿ ನಗರದ ಸಂಘ-ಸಂಸ್ಥೆಗಳ ಪ್ರಮುಖರು, ಅಭಿವೃದ್ಧಿ ಚಿಂತಕರು ಮೊದಲಾದವರು ಸೇರಿಕೊಂಡಿದ್ದರು. ಆ ಸಮಿತಿ ಸಹ ಸ್ಮಾರ್ಟ್‍ಸಿಟಿಗಾಗಿ ಕಾರ್ಯನಿರ್ವಹಿಸಿದೆ.ಸ್ಮಾರ್ಟ್‍ಸಿಟಿ ಆದ ಹೊಸತರಲ್ಲಿ ತುಮಕೂರು ಪಾಲಿಕೆ ಆವರಣದಲ್ಲಿ ಬೃಹತ್ ವಸ್ತುಪ್ರದರ್ಶನವನ್ನು ಸ್ಮಾರ್ಟ್‍ಸಿಟಿ ಕಂಪನಿಯ ವತಿಯಿಂದ ಆಯೋಜಿಸಲಾಗಿತ್ತು. ರಾಜ್ಯ ಹಾಗೂ ಹೊರರಾಜ್ಯದ ಸುಮಾರು 50 ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದವು. ತಾವು ಉತ್ಪಾದಿಸುವ ಆಧುನಿಕ ತಾಂತ್ರಿಕತೆಯ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಿದ್ದವು. ಈ ವಸ್ತುಗಳಿಂದ ಆಗುವ ಸ್ಮಾರ್ಟ್ ಸೌಲಭ್ಯಗಳನ್ನು ಬಣ್ಣಿಸಲಾಗಿತ್ತು. ಇದನ್ನೆಲ್ಲ ನೋಡಿದ ನಗರದ ಸಾರ್ವಜನಿಕರು ತಮ್ಮ ಕನಸಿನ ಸ್ಮಾರ್ಟ್‍ಸಿಟಿಯನ್ನು ತಾವೇ ಊಹಿಸಿಕೊಂಡದ್ದೂ ಉಂಟು.
    ಇನ್ನು ಜನಪ್ರತಿನಿಧಿಗಳ ವಲಯದಲ್ಲೂ ಸಹ ಈ ಸ್ಮಾರ್ಟ್‍ಸಿಟಿ ಹಾಗೂ ಒಂದು ಸಾವಿರ ಕೋಟಿ ರೂ. ಕಾಮಗಾರಿಗಳು ಎಂಬುದು ಭಿನ್ನವಾದ ಕನಸನ್ನು ಬಿತ್ತಿತು. ಬೆಂಗಳೂರಿನಲ್ಲಿ ಹೈಟೆಕ್ ಆಗಿ ನಡೆಯುತ್ತಿದ್ದ ಸ್ಮಾರ್ಟ್‍ಸಿಟಿ ಸಭೆಗಳಲ್ಲಿ ಪಾಲ್ಗೊಂಡು ಬೆರಗಾಗುತ್ತಿದ್ದರು. ವರ್ಣರಂಜಿತ ಯೋಜನೆಗಳಿಗೆ ಸೈ ಎನ್ನತೊಡಗಿದರು. ಇದರ ಜೊತೆಗೆ ಕೆಲವು ಜನಪ್ರತಿನಿಧಿಗಳ ಇಚ್ಛೆಯಂತೆ ಒಂದಿಷ್ಟು ಯೋಜನೆಗಳಿಗೆ ಒಪ್ಪಿಗೆ ಸಿಗುತ್ತಿದ್ದಂತೆ ಆ ಜನಪ್ರತಿನಿಧಿಗಳು ಖುಷಿಯಾಗತೊಡಗಿದರು. ಇದನ್ನೇ ನೆಪ ಮಾಡಿಕೊಂಡು ಅಧಿಕಾರಶಾಹಿ ವ್ಯವಸ್ಥೆ ಮೇಲುಗೈ ಸಾಧಿಸುತ್ತಿದ್ದಂತೆ, ಸ್ಮಾರ್ಟ್‍ಸಿಟಿಯಲ್ಲಿ ಏಕಚಕ್ರಾಧಿಪತ್ಯ ಕಾಣತೊಡಗಿತು. ಒಬ್ಬರ ತಾಳಕ್ಕೆ ತಕ್ಕಂತೆ ಇಡೀ ಸ್ಮಾರ್ಟ್‍ಸಿಟಿ ಕಂಪನಿ ತಲೆಯಾಡಿಸಬೇಕಾದ ಹಾಗೂ ಇದನ್ನು ಪಾಲಿಸದಿದ್ದರೆ ಅಂಥವರ ಅಸ್ತಿತ್ವಕ್ಕೇ ಧಕ್ಕೆ ಆಗುವಂತಹ ಸ್ಥಿತಿ ತಲೆಯೆತ್ತಿತು. 
     ಸ್ಮಾರ್ಟ್‍ಸಿಟಿ ಎಂಬುದು ಒಂದು ಹೊಸ ಪರಿಕಲ್ಪನೆ. ಮೊದಲಿಗೆ ಇದ್ದದ್ದು ಸಿಂಗಪೂರ್, ಮಲೇಶಿಯಾ, ದುಬೈನ ರಸ್ತೆಗಳು, ಕಟ್ಟಡಗಳು, ಅಲ್ಲಿನ ಅತ್ಯಾಧುನಿಕ ಸೌಲಭ್ಯಗಳು ಮೊದಲಾದವುಗಳನ್ನೇ ಜನರ ಕಣ್ಮುಂದೆ ಇರಿಸಲಾಗುತ್ತಿತ್ತು. ಅದನ್ನು ನೋಡಿದ ಜನರು, ಜನಪ್ರತಿನಿಧಿಗಳು ಅಚ್ಚರಿಯಿಂದ ಥ್ರಿಲ್ ಆಗುತ್ತಾ ಬಂದರು. ದಿನಕಳೆದಂತೆ ಅವೆಲ್ಲ ಕನಸುಗಳು ಕಳಚುತ್ತಿವೆ. ವಿವಾದಗಳೇ ತಲೆಯೆತ್ತುತ್ತಿವೆ. ದೂರು-ಆಕ್ರೋಶಗಳೇ ಕೇಳುತ್ತಿವೆ. ಭ್ರಷ್ಟಾಚಾರದ ಕಮಟು ವಾಸನೆಯೂ ಬರತೊಡಗಿದೆ. ಒಟ್ಟಾರೆ ಇವೆಲ್ಲ ಬಹುಮುಖ ಬೆಳವಣಿಗೆಗಳ ಪರಿಣಾಮವೇ ಇಂದಿನ ತುಮಕೂರು ನಗರದ ಸ್ಥಿತಿ-ದುಸ್ಥಿತಿ.

Recent Articles

spot_img

Related Stories

Share via
Copy link