ಮುಂಬಯಿ
ಪಲಾಶ್ ಮುಚ್ಛಲ್ ಜೊತೆಗಿನ ವಿವಾಹ ರದ್ದಾದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಂಧಾನ ಅವರು, ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ದೆಹಲಿಯ ಭಾರತ ಮಂಟಪದಲ್ಲಿ ನಡೆದ ಅಮೇಜಾನ್ ಕಾರ್ಯಕ್ರಮದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ಸ್ಮೃತಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಬ್ಯಾಟಿಂಗ್ ಮಾಡುವ ಅಭಿಲಾಷೆ ಈಗಲೂ ಇದೆ. ಹಾಗಾಗಿ ಬ್ಯಾಟಿಂಗ್ ಮಾಡಲು ಹೋದಾಗ ಮನಸ್ಸಿನಲ್ಲಿ ಬೇರೆ ಯಾವುದೇ ಆಲೋಚನೆಗಳು ಇರುತ್ತವೆ ಎಂದು ನಾನು ಭಾವಿಸುವುದಿಲ್ಲ. ದೇಶಕ್ಕಾಗಿ ಪಂದ್ಯ ಗೆಲ್ಲುವುದೇ ನನ್ನ ಗುರಿಯಾಗಿದೆ ಎಂದರು.
ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತೀಯ ಮಹಿಳಾ ತಂಡ ಸಿದ್ದತೆ ನಡೆಸುತ್ತಿದೆ. ಈ ಸರಣಿಯು ಡಿಸೆಂಬರ್ 21 ರಂದು ವೈಜಾಗ್‌ನಲ್ಲಿ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಸ್ಮೃತಿ ಮಧಾನ ಅವರು ಅಭ್ಯಾಸ ನಡೆಸಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಂಚಿಕೊಂಡಿದ್ದ ಮಂಧಾನ, “ನಾನು ಕ್ರಿಕೆಟ್ ಆಟಕ್ಕಿಂತ ಹೆಚ್ಚಾಗಿ ಯಾವುದನ್ನು ಪ್ರೀತಿಸುವುದಿಲ್ಲ. ಬದುಕಲ್ಲಿ ಏನೇ ನಡೆದಿದ್ದರೂ, ಭಾರತದ ಜೆರ್ಸಿ ಧರಿಸಿದಾಗ ಎಲ್ಲವೂ ಮರೆಯಾಗುತ್ತದೆ” ಎಂದು ಬರೆದುಕೊಂಡಿದ್ದಾರೆ.
ಮಂಧಾನ ಹಾಗೂ ಪಲಾಶ್ ನಡುವಣ ವಿವಾಹ ನವೆಂಬರ್ 23ರಂದು ನಿಗದಿಯಾಗಿತ್ತು. ಆದರೆ ಮಂದಾನ ಅವರ ತಂದೆ ಶ್ರೀನಿವಾಸ್ ಅವರಿಗೆ ಹೃದಯಬೇನೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿವಾಹ ರದ್ದಾಗಿತ್ತು ಎಂದು ಹೇಳಲಾಗಿತ್ತು. ಇದಾದ ಬಳಿಕ ಡಿಸೆಂಬರ್ 7ರಂದು ವಿವಾಹ ರದ್ದಾಗಿದೆ ಎಂಬ ವಿಷಯವನ್ನು ಮಂಧಾನ ಖಚಿತಪಡಿಸಿದ್ದರು. ಎಲ್ಲವನ್ನು ಇಲ್ಲಿಗೇ ಬಿಟ್ಟು, ಮುಂದುವರಿಯುವ ಆಲೋಚನೆ ಮಾಡಿರುವುದಾಗಿ ಮತ್ತು ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದರು.
ವಿವಾಹ ರದ್ದಾದ ಬೆನ್ನಲ್ಲೇ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ‘ಅನ್‌ಫಾಲೋ’ ಮಾಡಿಕೊಂಡಿದ್ದಾರೆ. ಪಲಾಶ್ ಮುಚ್ಛಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಂಧಾನ ಅವರೊಂದಿಗೆ ಹಂಚಿಕೊಂಡಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.








