ಮುಡಾ ಕೇಸ್‌ : ಸಿಬಿಐ ತನಿಖೆಗೆ ಮೇಲ್ಮನವಿ ಇಲ್ಲ: ಸ್ನೇಹಮಯಿ ಕೃಷ್ಣ

ಮೈಸೂರು:

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಮುಡಾ ಹಗರಣ ಹೋರಾಟದ ಪ್ರಕರಣದಲ್ಲಿ ಇನ್ನೊಂದು ತಿರುವು ಉಂಟಾಗಿದೆ. ಮುಡಾ ಹಗರಣದ ವಿರುದ್ಧದ ಕಾನೂನು ಹೋರಾಟದಲ್ಲಿ ತಾತ್ಕಾಲಿಕವಾಗಿ ಹಿಂದೆ ಸರಿಯುವುದಾಗಿ, ಸುಪ್ರೀಂ ಕೋರ್ಟ್‌ಗೆ  ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ  ಹೇಳಿದ್ದಾರೆ.

   ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನನಗೆ ತಾವೆಲ್ಲರೂ ಪ್ರಶ್ನೆ ಮಾಡುತ್ತಿದ್ದದ್ದು ಸರಿಯಷ್ಟೆ. ಮಾನ್ಯ ಉಚ್ಚ ನ್ಯಾಯಾಲಯವು ನನ್ನ ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಅಂಶಗಳನ್ನು ಓದಿದ ನಂತರ ಎರಡು ದಿನಗಳ ಕಾಲ ಚಿಂತನೆ ನಡೆಸಿ, ನನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ, ನನ್ನ ಕೆಲವು ಆತ್ಮೀಯ ವಕೀಲರೊಂದಿಗೆ-ಹಿತೈಷಿಗಳೊಂದಿಗೆ ಚರ್ಚೆ ನಡೆಸಿ, ನನ್ನ ಇದುವರೆಗಿನ ಕಾನೂನು ಹೋರಾಟದ ಅನುಭವವನ್ನು ಆಧರಿಸಿ ಒಂದು ನಿರ್ಧಾರಕ್ಕೆ ಬಂದಿರುತ್ತೇನೆ ಎಂದು ಹೇಳಿದ್ದಾರೆ.

   ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮತ್ತಷ್ಟು ಕಾಲ ವಿಳಂಬ ಮಾಡುವ ಬದಲು, ಲೋಕಾಯುಕ್ತ ಅಧಿಕಾರಿಗಳು ಏನೇ ವರದಿ ಸಲ್ಲಿಸಿದರೂ ಸಹ, ನನ್ನ ಬಳಿ ಇರುವ ಮತ್ತು ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಆಧರಿಸಿ, ಮಾನ್ಯ ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಿ, ಆರೋಪಿತರಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದ್ದರಿಂದ, ವಕೀಲರ ಪರೋಕ್ಷ ಸಹಕಾರ ಪಡೆದುಕೊಂಡು, ಅವಶ್ಯಕತೆ ಬಿದ್ದರೆ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಕ್ಕನ್ನು ಉಳಿಸಿಕೊಂಡು, ಖುದ್ದಾಗಿ ನಾನೇ  ಮಾನ್ಯ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿ, ವಾದ ಮಂಡನೆ ಮಾಡಿ, ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಿ, ಆದಷ್ಟು ಬೇಗ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

   ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯದ ಧಾರವಾಡ ಪೀಠ ಮೊನ್ನೆ ವಜಾಗೊಳಿಸಿದೆ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆಯನ್ನು ಸಿಬಿಐಗೆ  ಒಪ್ಪಿಸಬೇಕು ಎಂಬ ದೂರುದಾರರ ಕೋರಿಕೆಯನ್ನು ಮಾನ್ಯ ಮಾಡಲು ಹೈಕೋರ್ಟ್‌ ನಿರಾಕರಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮಹತ್ವದ ನ್ಯಾಯಾಂಗದ ಜಯ ದೊರೆತಿದೆ. ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆ ಮುಡಾ ಕೇಸ್‌ ಬಗ್ಗೆ ತನಿಖೆ ನಡೆಸಿ ಸಿಎಂ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು.

Recent Articles

spot_img

Related Stories

Share via
Copy link