ಸ್ನೇಹಮಯಿ ಕೃಷ್ಣ ಗಡಿಪಾರಿಗೆ ಕಾಂಗ್ರೆಸ್ ಆಗ್ರಹ…!

ಮೈಸೂರು: 

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ಶನಿವಾರ ಮತ್ತೊಂದು ದೂರು ದಾಖಲಿಸಿದೆ.

   ಸ್ನೇಹಮಹಿ ಕೃಷ್ಣ ಅವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಇಂದು ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

   ಈ ವೇಳೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ ಅವರು, ಎರಡು ತಿಂಗಳ ಹಿಂದೆ ಸ್ನೇಹಮಯಿ ಕೃಷ್ಣ ಅವರ ಸ್ನೇಹಿತರು ಎಂದು ಹೇಳಿಕೊಂಡು ಇಬ್ಬರು ನನ್ನನ್ನು ಸಂಪರ್ಕಿಸಿದ್ದರು. ಪ್ರಕರಣ ಮುಚ್ಚಿ ಹಾಕಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೂರು ದಿನದ ಹಿಂದೆ ಮತ್ತೆ ನನ್ನನ್ನು ಈ ಇಬ್ಬರೂ ಸಂಪರ್ಕಿಸಿದ್ದು, ನನಗೆ ಬೆದರಿಕೆ ಹಾಕಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ಧ ಆರೋಪ ಮುಂದುವರಿಸಿದರೆ ನಿಮ್ಮ ವಿರುದ್ಧವೂ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. 

   ಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 44 ಪ್ರಕರಣ ದಾಖಲಾಗಿದ್ದು, ಇದರಲ್ಲಿ 22 ಪ್ರಕರಣಗಳ ಎಫ್ ಐಆರ್ ನಮ್ಮಲ್ಲಿದೆ. ಈತ ರೌಡಿಶೀಟರ್ ಅಗಿದ್ದರೂ ಕಳೆದ ಮೂರುವರೆ ವರ್ಷದಿಂದ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬ್ಲಾಕ್ ಮೇಲರ್ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು. ಭಾನುವಾರ ಬೆಳಗ್ಗೆ 10 ಗಂಟೆ ಒಳಗೆ ಎಫ್ ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಬೇಕು. ಇಲ್ಲವಾದರೆ ಪೊಲೀಸ್ ಠಾಣೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದರು.

  ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ನಕಲಿ ಚಲನ್ ಸೃಷ್ಟಿಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅದಕ್ಕೆ ನಕಲಿ ಸೀಲ್ ಬಳಸಲಾಗಿದೆ. ಈ ದಾಖಲೆಯನ್ನು ನಾವು ಕೊಟ್ಟೇ ಇಲ್ಲ ಎಂದು ಮುಡಾ ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

Recent Articles

spot_img

Related Stories

Share via
Copy link
Powered by Social Snap