ಬೆಂಗಳೂರು:
ಸ್ನೇಹಿತನ ಹತ್ಯೆಗೈದು 14 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ಹೋಟೆಲ್ ಕೆಲಸಗಾರನೊಬ್ಬನನ್ನು ಆರ್‌ಟಿ ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ಮಲ್ಲೇಶ್ವರ ಸಮೀಪ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ವೈಯಾಲಿಕಾವಲ್ ನಿವಾಸಿ ಜಾನ್ (32) ಎಂಬಾತನನ್ನು ಆರ್.ಟಿ.ನಗರ ಪೊಲೀಸರು ಆಧಾರ್ ಕಾರ್ಡ್ ನೀಡಿದ ಸುಳಿವಿನ ಆಧಾರದ ಮೇಲೆ ಬಂಧನಕ್ಕೊಳಪಡಿಸಿದ್ದಾರೆ.
2011ರಲ್ಲಿ ಜಾನ್ ಸೇರಿದಂತೆ ನಾಲ್ವರು ತನ್ನ ಗೆಳೆಯ ಚೇತನ್ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಅರುಣ್, ಚಾಟಿರಾಜ್ ಹಾಗೂ ಮಣಿಕಂಠನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಆದರೆ, ಜಾನ್ ಪತ್ತೆಯಾಗಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು, ಜಾನ್ ನನ್ನ ನಾಪತ್ತೆಯಾದ ಆರೋಪಿ ಎಂದು ಉಲ್ಲೇಖಿಸಿ, ಬಂಧಿತ ಮೂವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಜಾಮೀನು ಪಡೆದು ಹೊರಬಂದ ಬಂಧಿತರ ಪೈಕಿ ಚಾಟಿ ರಾಜ್ ನ್ಯಾಯಾಲಯದ ವಿಚಾರಣೆಗೆ ಗೈರಾದ ಹಿನ್ನೆಲೆ ಆತನ ಮೇಲೆ ವಾರೆಂಟ್ ಜಾರಿಯಾಗಿತ್ತು.
ತಿಂದ ಹಿಂದೆ ರಾಜ್ ನನ್ನು ಬಂಧಿಸಿದ ಪೊಲೀಸರಿಗೆ ಜಾನ್ ನಾಪತ್ತೆ ಮತ್ತೆ ಗಮನಕ್ಕೆ ಬಂದಿದೆ. ಜಾನ್ ವಿರುದ್ಧ ಸುಮಾರು 20 ವಾರೆಂಟ್ ಗಳು ಜಾರಿಯಾಗಿದ್ದವು. ಬಳಿಕ ತನಿಖೆಗಿಳಿದ ಪೊಲೀಸರಿಗೆ ಸ್ಥಳೀಯ ಗುಪ್ತಚರ ಪೊಲೀಸರ ಮೂಲಕ ಜಾನ್‌ನ ಪೋಷಕರು ವೈಯಾಲಿಕಾವಲ್‌ನಲ್ಲಿ ವಾಸಿಸುತ್ತಿರುವುದು ತಿಳಿದುಬಂದಿದೆ. ಆದರೆ, ಯಾವುದೇ ಮಾಹಿತಿ ಲಭ್ಯವಾಗದಿದ್ದಾಗ ಆಧಾರ್ ಕಾರ್ಡ್‌ಗಳಲ್ಲಿ ಯಾವುದಾದರೂ ಒಂದಕ್ಕೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಿದ್ದಾರೆ. ಒಂದು ಕಾರ್ಡ್ ಗ್ಯಾಸ್ ಏಜೆನ್ಸಿಗೆ ಲಿಂಕ್ ಆಗಿರುವುದು ಪತ್ತೆಯಾಗಿದೆ.
ಏಜೆನ್ಸಿಯ ಮೂಲಕ, ಜಾನ್ ಪೋಷಕರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅವರ ಹುಟ್ಟೂರು ಆಂಧ್ರಪ್ರದೇಶ ಎಂಬುದು ಪತ್ತೆಯಾಗಿದ್ದು, ತಂಡವೊಂದನ್ನು ಅಲ್ಲಿಗೆ ಕಳುಹಿಸಿದ್ದಾರೆ. ಈ ವೇಳೆ ಜಾನ್ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಶಿಫ್ಟ್ ಆಗಿರುವುದು ತಿಳಿದುಬಂದಿದೆ.ಕಳೆದ ವಾರ ವೈಯಾಲಿಕಾವಲ್‌ನಲ್ಲಿ ಜಾನ್‌ನನ್ನು ಬಂಧಿಸಲಾಯಿತು. ಜಾನ್ ಪೋಷಕರೊಂದಿಗೆ ವಾಸವಿರಲಿಲ್ಲ. ಆದರೆ, ಅವರೊಂದಿಗೆ ಸಂಪರ್ಕದಲ್ಲಿದ್ದ. ಇದು ಆತನ ಬಂಧನಕ್ಕೆ ಸಹಾಯ ಮಾಡಿತ್ತು. ಬಂಧನ ಭೀತಿಯಿಂದ ಆಗಾಗ್ಗೆ ಸ್ಥಳ ಬದಲಾಯಿಸುತ್ತಿದ್ದ. ಪೊಲೀಸರು ಹತ್ತಿರ ಹೋದಾಗ ತಾನು ಆ ವ್ಯಕ್ತಿಯಲ್ಲ ಎಂದು ಹೇಳಿದ್ದ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೊದಲು ತಿರುಪತಿಗೆ ಹೋಗಿದ್ದು, ಅಲ್ಲಿ ಆರು ವರ್ಷಗಳ ಕಾಲ ಮಾಣಿಯಾಗಿ ಕೆಲಸ ಮಾಡಿದ್ದಾವೆ. ನಂತರ ಹೊಸಕೋಟೆಗೆ ಬಂದಿದ್ದು ಸುಮಾರು ಏಳು ವರ್ಷಗಳ ಕಾಲ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದಾನೆಂದು ಮಾಹಿತಿ ನೀಡಿದ್ದಾರೆ.
ಜಾನ್, ರಾಜ, ಅರುಣ್, ಮಣಿಕಂಠ ಮತ್ತು ಚೇತನ್ ಎಲ್ಲರೂ ಸ್ನೇಹಿತರಾಗಿದ್ದರು. ಮಾತುಕತೆ ವೇಳೆ ಜಗಳವಾಗಿದೆ. ಈ ವೇಳೆ ಚೇತನ್ ರಾಜನ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿದ್ದ, ಆತ ಜೈಲಿನಿಂದ ಹೊರಬಂದ ನಂತರ ಸೇಡು ತೀರಿಸಿಕೊಳ್ಳಲು ರಾಜ ಬಯಸಿದ್ದ. ಇದರಂತೆ ಇತರ ಮೂವರ ಸಹಾಯವನ್ನು ಕೋರಿದ್ದ. ಕೊಲೆಯಾದ ದಿನ, ಆರೋಪಿಗಳು ಚೇತನ ಜೊತೆ ಜಗಳವಾಡಲು ಪ್ರಾರಂಭಿಸಿದ್ದರು. ಕೋಪದಿಂದ ಚೇತನ್ ಜಾನ್ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದ, ಬಳಿಕ ಮೂವರು ಚಾಕುವಿನಿಂದ ಇರಿದು ಚೇತನ್ ನನ್ನು ಹತ್ಯೆ ಮಾಡಿದ್ದರು.
