ಸಾಮಾಜಿಕ ನ್ಯಾಯ ಒದಗಿಸಿದ್ದು ಜೆಡಿಎಸ್

ಗುಬ್ಬಿ:

ಗುಬ್ಬಿ ಹೊರವಲಯದಲ್ಲಿರುವ ಹೇರೂರು ಗ್ರಾಮದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಿದರು.

ಸಾಮಾಜಿಕ ನ್ಯಾಯ ಒದಗಿಸಿದ ಜೆಡಿಎಸ್ ಪಕ್ಷವು ಇಂದಿಗೂ ಜಾತ್ಯತೀತ ನಿಲುವನ್ನು ಹೊಂದಿದೆ. ಸಮುದಾಯಗಳನ್ನು ಒಡೆದು ಆಳುವ ತಂತ್ರಗಳನ್ನು ಬಳಸಿ ನನಗೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಲು ಒಗ್ಗೂಡಿ ಜೆಡಿಎಸ್ ಪಕ್ಷ ಉಳಿಸಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೈ ಮುಗಿದು ಮನವಿ ಮಾಡಿದರು.

ಗುಬ್ಬಿ ಪಟ್ಟಣದ ಹೊರ ವಲಯದ ಹೇರೂರಿನಲ್ಲಿರುವ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಹಿಂದ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಿದ ಜೆಡಿಎಸ್ ಪಕ್ಷದ ಶಕ್ತಿ ಎಂದಿಗೂ ಕುಂದಲ್ಲ. ರಾಜ್ಯದಲ್ಲಿ ಮತ್ತೆ ಹೋರಾಟದ ಮೂಲಕ ಪಕ್ಷ ಸದೃಢಗೊಳಿಸುತ್ತೇನೆ. ನಮ್ಮನ್ನು ತುಳಿಯಲು ಮುಂದಾದÀವರಿಗೆ ಪಾಠ ಕಲಿಸಲು ಕಾರ್ಯಕರ್ತರು ಸಜ್ಜಾಗಬೇಕು. ಇದು ಆವೇಶದ ನುಡಿಯಲ್ಲ. ನೋವಿನ ನಿವೇದನೆ ಎಂದು ಮತ್ತೊಮ್ಮೆ ಕೈ ಮುಗಿದು ಮನವಿ ಮಾಡಿದರು.

  ಪ್ರಾದೇಶಿಕ ಪಕ್ಷದ ಮಹತ್ವವನ್ನು ತೋರಿಸಿದ್ದೇನೆ :

ಒಕ್ಕಲಿಗ ಸಮುದಾಯದ ಸಣ್ಣ ರೈತ ಕುಟುಂಬದಿಂದ ಬಂದ ನಾನು, ಪ್ರಾದೇಶಿಕ ಪಕ್ಷದ ಮಹತ್ವವನ್ನು ರಾಜ್ಯದ ಜನತೆಗೆ ತೋರಿಸಿದ್ದೇನೆ. ನಮ್ಮ ಸಮುದಾಯವನ್ನು ಒಡೆದು ರಾಜಕಾರಣ ಮಾಡುವ ಕೆಲ ಪುಣ್ಯಾತ್ಮರು ದುರಂಹಕಾರದಲ್ಲೆ ಅಪಪ್ರಚಾರ ಮಾಡಿದ್ದಾರೆ. ಇಂತವರಿಗೆ ಉತ್ತರ ನೀಡುವವರು ನೀವುಗಳು. ಹಾಗಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಭಾವುಕರಾದ ಅವರು ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡುವ ಕೆಲಸ ಮಾಡಿದ್ದೇನೆ. ಯುವಕ ಆರ್.ಅನಿಲ್ ವಿದ್ಯಾವಂತ ಹಾಗೂ ಜನಸೇವೆ ಮಾಡಲು ಉತ್ಸುಕರಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಯುವ ಅಭ್ಯರ್ಥಿಗೆ ಮತ ಹಾಕಿ ನನ್ನ ಗೆಲುವಿಗೆ ಸಹಕರಿಸಿ ಎಂದು ಕೇಳಿಕೊಂಡರು.

ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಮಾತನಾಡಿ, ಗ್ರಾಮೀಣ ಜನರ ಸಮಸ್ಯೆಗೆ ಉತ್ತರ ನೀಡಬಲ್ಲ ಜೆಡಿಎಸ್ ಪಕ್ಷಕ್ಕೆ ನಿಮ್ಮ ಬೆಂಬಲ ನೀಡಿ ಎಂದು ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿಪಂ ಮಾಜಿ ಸದಸ್ಯರಾದ ಯಶೋಧಮ್ಮ ಶಿವಣ್ಣ, ಜಿ.ರಾಮಾಂಜಿನಪ್ಪ, ಮುಖಂಡರಾದ ಎಂ.ಗಂಗಣ್ಣ, ಬಿ.ಎಸ್.ನಾಗರಾಜು, ಶಿವಲಿಂಗಯ್ಯ, ಕೊಂಡ್ಲಿ ಕರಿಯಪ್ಪ, ಕಳ್ಳಿಪಾಳ್ಯ ಲೋಕೇಶ್, ಬೆಳ್ಳಿ ಲೋಕೇಶ್, ನರಸೇಗೌಡ, ನರಸಿಂಹಮೂರ್ತಿ ಇತರರು ಇದ್ದರು.

 

ಗುಬ್ಬಿ ಹೊರ ವಲಯದಲ್ಲಿರುವ ಹೇರೂರು ಗ್ರಾಮದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿದರು.

 

ತುಮಕೂರಿನ ಮೇಲೆ ವಿಶೇಷ ಗೌರವವಿದೆ :

ತುಮಕೂರು ಜಿಲ್ಲೆಯನ್ನು ಜೆಡಿಎಸ್ ಪಕ್ಷ ಮರೆಯುವುದಿಲ್ಲ. ಪಕ್ಷದ ಸದೃಢತೆಗೆ ಇದು ತವರೂರು ಆಗಿದೆ. ಈ ಜಿಲ್ಲೆ ಮೇಲೆ ವಿಶೇಷ ಗೌರವ ಇದ್ದೇ ಇದೆ. ಆದರೆ ಇಲ್ಲಿನ ರಾಜಕೀಯ ಕೆಲ ಚಟುವಟಿಕೆಗಳು ಸಾಕಷ್ಟು ನೋವು ನೀಡಿವೆ. ನಮ್ಮವರಿಂದಲೇ ಆಗುತ್ತಿರುವ ನೋವು ಹೇಳತೀರದು. ನಮ್ಮಿಂದಾದ ಅನ್ಯಾಯವೇನು ಎಂಬುದು ತಿಳಿಯುತ್ತಿಲ್ಲ. ಎಲ್ಲಾ ಜನಾಂಗವನ್ನು ಒಗ್ಗೂಡಿಸಿ ಪಕ್ಷ ಸಾಗಿದೆ. ಈ ಹಿಂದೆ ಪ್ರಾದೇಶಿಕ ಪಕ್ಷ ನೀಡುವ ಎಲ್ಲಾ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜೆಡಿಎಸ್ ನೀಡಿದೆ. ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳಿಗೆ ಬಲ ತಂದ ಪಕ್ಷ ಮತ್ತಷ್ಟು ಕೆಲಸ ಮಾಡಲು ಈ ವಿಧಾನ ಪರಿಷತ್ತಿನ ಚುನಾವಣೆ ಫಲಿತಾಂಶ ಮುಖ್ಯ. ಈ ಹಿನ್ನಲೆಯಲ್ಲಿ ಆರ್.ಅನಿಲ್‍ಗೆ ಮತ ಹಾಕುವಂತೆ ದೇವೇಗೌಡರು ಮನವಿ ಮಾಡಿದರು.

 

ಸೋಲಿಸಿದೆ ಎಂದವರನ್ನು ಸೋಲಿಸೋಣ :

ಶಾಸಕ ಬಿ.ಸಿ.ಗೌರಿಶಂಕರ್ ಮಾತನಾಡಿ, ಸಾರ್ವತ್ರಿಕ ಚುನಾವಣೆಯಂತೆ ಮೆರಗು ಪಡೆದ ವಿಧಾನ ಪರಿಷತ್ ಚುನಾವಣೆ ಸಲ್ಲದ ಕುತಂತ್ರ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತಗಳು ಗೆಲುವು ಸಾಧಿಸುವಷ್ಟಿದೆ. ಚುರುಕಿನ ಕೆಲಸ ಮಾಡಿ ದೇವೇಗೌಡರನ್ನು ನಾನೇ ಸೋಲಿಸಿದೆ ಎಂದು ಹೇಳಿಕೊಂಡವರನ್ನು ಸೋಲಿಸೋಣ. ಜೊತೆಗೆ ಮುಂದಿನ 2023ಕ್ಕೆ ಕುಮಾರಣ್ಣನವರ ಸರ್ಕಾರ ಸ್ಥಾಪಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

 

ಗ್ರಾಮ ಸ್ವರಾಜ್ಯ ಕನಸು ದೇವೇಗೌಡರ ಕನಸಾಗಿದೆ. ಇದರ ಸಕಾರಕ್ಕೆ ಈ ಚುನಾವಣೆ ಗೆಲುವು ಸಾಕ್ಷಿಯಾಗಬೇಕಿದೆ. ಸಾಮಾಜಿಕ ನ್ಯಾಯ ಕಲ್ಪಿಸುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಮಾತ್ರ ಇದೆ. ಈಗಾಗಲೇ ಜನರಿಗೆ ಬೇಸರ ತಂದ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ.

-ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap