ಸಾಮಾಜಿಕ ಜಾಲತಾಣ ಬಳಕೆ : ಸರ್ಕಾರಕ್ಕೆ ಹೈಕೊರ್ಟ್‌ ಕೊಟ್ಟ ಸಲಹೆ ಏನು…?

ಬೆಂಗಳೂರು

    ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಸಾಮಾಜಿಕ ತಾಣಗಳಿಗೆ ಅಡಿಕ್ಟ್‌ ಆಗುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಮತದಾನಕ್ಕೆ 21 ವರ್ಷ ನಿಗದಿ ಮಾಡಿರುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡಲು ವಯೋಮಿತಿ ನಿಗದಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಮೌಖಿಕ ಸಲಹೆ ನೀಡಿದೆ.

    ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ ಕಾರ್ಪ್ (ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮಂಗಳವಾರ ನ್ಯಾಯಮೂರ್ತಿಗಳಾದ ಜಿ. ನರೇಂದರ್ ಮತ್ತು ವಿಜಯಕುಮಾರ್‌ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

   ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘ಸಾಮಾಜಿಕ ಮಾಧ್ಯಮ ನಿಷೇಧಿಸುವುದು ಉತ್ತಮ. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈಗ ಶಾಲೆಗೆ ಹೋಗುವ ಮಕ್ಕಳೂ ಅದಕ್ಕೆ ದಾಸರಾಗಿದ್ದಾರೆ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು’ ಎಂದು ಮೌಖಿಕವಾಗಿ ಹೇಳಿತು.

   17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ?. ಬಳಕೆದಾರರಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಏಕೆಂದರೆ ಆ ವಯಸ್ಸಿನವರಿಗೆ ಮತದಾನದ ಹಕ್ಕು ನೀಡಲಾಗಿದೆ’ ಎಂದು ಪೀಠವು ಮೌಖಿಕವಾಗಿ ಹೇಳಿತು. ಇದೇ ವೇಳೆ ಪೀಠವು ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿತು.

    ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ವಕೀಲರು ‘ಕೆಲವು ಆನ್‌ಲೈನ್‌ ಗೇಮ್‌ ಆಡಲು ಕಾನೂನಿನ ಪ್ರಕಾರ ಈಗ ಆಧಾರ್‌ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಬೇಕು’ ಎಂದರು. ಆಗ ಪೀಠವು ‘ಹಾಗಾದರೆ ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ. ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ’ ಎಂದಿತು.

     ನ್ಯಾಯಪೀಠವು ಎಕ್ಸ್‌ ಕಾರ್ಪ್ ಬಳಕೆದಾರರಿಗೆ ಯಾವುದೇ ಮಾಹಿತಿ ನೀಡದೇ ಖಾತೆ ನಿರ್ಬಂಧಿಸಿದರೆ ಏನಾಗಲಿದೆ. ವಿಚಾರ ಸಾರ್ವಜನಿಕವಾಗಿದ್ದರೆ ಅದು ಜನರಿಗೆ ತಿಳಿಯುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿ, ಮಾನಹಾನಿ ದಾವೆ ಹೂಡಿದರೆ ಎಕ್ಸ್‌ ಕಾರ್ಪ್‌ಗೆ ಪರಿಹಾರವೇನು? ಇದಕ್ಕಾಗಿ ನಿಯಮದಲ್ಲಿ ನೀವು ಸಡಿಲಿಕೆ ಮಾಡಬೇಕಿದೆ. ಎಕ್ಸ್‌ ಕಾರ್ಪ್‌ಗೆ ವಿನಾಯಿತಿ ನೀಡಬೇಕು. ನಿಮ್ಮ ಎಚ್ಚರಿಕೆಗೆ ಅನುಗುಣವಾಗಿ ಖಾತೆ ನಿರ್ಬಂಧವನ್ನು ಎಕ್ಸ್‌ ಕಾರ್ಪ್‌ ಮಾಡುತ್ತಿದೆ. ನೀವು (ಕೇಂದ್ರ ಸರ್ಕಾರ) ಅವರ (ಎಕ್ಸ್‌ ಕಾರ್ಪ್) ಕೈಬಿಟ್ಟರೆ? ಎಂದು ಹೇಳಿತು.

    ಆಕ್ಷೇಪಾರ್ಹವಾದ ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 69ಎ (1) ಮತ್ತು (2) ಉಲ್ಲಂಘಿಸುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಇದನ್ನು ಉಲ್ಲಂಘಿಸುವುದು ಕಂಡುಬಂದರೆ ಎಕ್ಸ್‌ ಕಾರ್ಪ್‌ ನಿರ್ಬಂಧ ಆದೇಶಗಳನ್ನು ಪಾಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

     ಎಕ್ಸ್ ಕಾರ್ಪ್‌ ಪ್ರತಿನಿಧಿಸಿದ್ದ ವಕೀಲರು, “ಈ ಹಿಂದೆ ಪ್ರಶ್ನಿಸಿದ್ದ ಎಲ್ಲಾ ನಿರ್ಬಂಧ ಆದೇಶಗಳನ್ನು ಪಾಲಿಸಲಾಗಿದೆ. ಸಕಾರಣವಿಲ್ಲದೇ 1,000 ಟ್ವೀಟ್‌ಗಳನ್ನು ತೆಗೆಯುವಂತೆ ಹೇಳಲಾಗಿದೆ” ಎಂದರು. ಆಗ ಪೀಠವು ‘ಕೇಂದ್ರ ಸರ್ಕಾರವು ತಾನು ನಿರ್ಬಂಧ ಆದೇಶ ಮಾಡುವಾಗ ಅದಕ್ಕೆ ಸಮರ್ಥನೆ ನೀಡಬೇಕು. ಇಲ್ಲವಾದಲ್ಲಿ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವನ್ನು ಅದರ ಬಳಕೆದಾರರು ನ್ಯಾಯಾಲಯಕ್ಕೆ ಎಳೆಯಬಹುದು’ ಎಂದು ಮೌಖಿಕವಾಗಿ ಹೇಳಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap