ಬೆಳಗಾವಿ:
ಜನರಿಗೆ ಉತ್ತಮ ಸೇವೆಗಳನ್ನು ನೀಡುವುದಕ್ಕಾಗಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೊಂಕಣ ರೈಲ್ವೆ ಜಾಲವು ಕೇರಳದಿಂದ ಮಹಾರಾಷ್ಟ್ರದವರೆಗೆ ಹರಡಿಕೊಂಡಿದೆ. ಪ್ರಯಾಣಿಕರಿಗೆ ಹೆಚ್ಚಿನ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವು ಇದನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿದ ನಂತರ, ವಿಲೀನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.ಕರ್ನಾಟಕ ರಾಜ್ಯವೊಂದರಲ್ಲೇ ಒಟ್ಟು 742 ಕಿ.ಮೀ. ಕ್ರಮಿಸುತ್ತದೆ ಎಂದು ಸೋಮಣ್ಣ ತಿಳಿಸಿದರು.
ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಹೀಗಾಗಿ ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಹಿಂದೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರದ ಶೇ.50ರಷ್ಟು ಕೊಡುಗೆಯೊಂದಿಗೆ ರಾಜ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು ಆದರೆ ಈಗ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರವಿಲ್ಲ ಎಂಬ ಕಾರಣಕ್ಕೆ ‘ಎಲ್ಲಾ ವೆಚ್ಚವನ್ನು ಕೇಂದ್ರವೇ ಭರಿಸಲಿದೆ’ ಎಂದು ನಿರ್ಧರಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.