ಜೆಸಿಎಂ ಭೇಟಿಯಾದ ಬಿಜೆಪಿ ಅಭ್ಯರ್ಥಿ ಸೋಮಣ್ಣ!

 ತುಮಕೂರು

        ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಮಂಗಳವಾರ ಬೆಳಿಗ್ಗೆ ದಿಢೀರ್ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಚಿಕ್ಕನಾಯಕನಹಳ್ಳಿಯ ನಿವಾಸದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಜೊತೆ ಭೇಟಿಯಾಗಿ ಸುಮಾರು ಎರಡೂವರೆ ತಾಸು ಚರ್ಚೆ ನಡೆಸಿದ್ದಾರೆ.

     ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವುದನ್ನು ತೀವ್ರವಾಗಿ ವಿರೋಧಿಸಿದ್ದ ಮಾಧುಸ್ವಾಮಿ ಅವರು ಟಿಕೆಟ್ ಘೋಷಣೆ ಆರಂಭದಲ್ಲಿ ಸೋಮಣ್ಣ ತಮ್ಮ ಮನೆಗೆ ಭೇಟಿ ನೀಡುವುದಕ್ಕೂ ವಿರೋಧಿಸಿ,ತಮಗೆ ಟಿಕೆಟ್ ತಪ್ಪಿಸಿದರೆಂದು ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದಿದ್ದರು.

    ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತುರುವೇಕೆರೆಯ ಮಾಜಿ ಶಾಸಕ ಮಸಾಲಾ ಜಯರಾಂ ಅವರ ತೋಟದ ಮನೆಗೆ ಆಗಮಿಸಿ ಮಾಧುಸ್ವಾಮಿ ಅವರನ್ನು ಅಲ್ಲಿಗೆ ಕರೆಸಿಕೊಂಡು ಮಾಧುಸ್ವಾಮಿ ಜೊತೆ ಚರ್ಚಿಸಿದ್ದರು. ಯಡಿಯೂರಪ್ಪ ಮಾತುಕತೆ ನಡೆಸಿದರೂ ಬೆಂಬಲದ ಯಾವುದೇ ತೀರ್ಮಾನ ಪ್ರಕಟಿಸಿದೆ ಉಳಿದಿದ್ದ ಮಾಧುಸ್ವಾಮಿ ಅವರನ್ನು ಮಂಗಳವಾರ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರೆ ಭೇಟಿಯಾಗಿ ಅಭ್ಯರ್ಥಿಯಾಗಿರುವುದರಲ್ಲಿ ನನ್ನ ತಪ್ಪಿಲ್ಲ.ಹೈಕಮಾಂಡ್ ಸೂಚನೆಯಂತೆ ಕಣಕ್ಕಿಳಿದಿರುವೆ. ವೈಯಕ್ತಿಕವಾಗಿ ನನ್ನ ನಿಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ. ಈ ಚುನಾವಣೆಯನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆನ್ನಲಾಗಿದೆ. ಈ ವೇಳೆ ಮಾಧುಸ್ವಾಮಿ ಅವರು ಸಹ ಸೋಮಣ್ಣ ಅವರ ಬಳಿ ತಮಗೆ ಟಿಕೆಟ್, ಸ್ಪರ್ಧೆಗೆ ಅಣಿಯಾಗಿ ಎಂದು ಹೇಳಿ ಕಡೆಗೆ ಟಿಕೆಟ್ ತಪ್ಪಿಸಿದ ನೋವನ್ನು ತೋಡಿಕೊಂಡರೆನ್ನಲಾಗಿದೆ. ಸೋಮಣ್ಣ-ಮಾಧುಸ್ವಾಮಿ ನಡುವೆ ಇದ್ದ ಅಸಮಾಧಾನ ತಣಿಸುವಲ್ಲಿ ಈ ಭೇಟಿ ಪ್ರಮುಖವೆನಿಸಿದೆ.

     ಇದಾದ ಬಳಿಕ ಸೋಮಣ್ಣ ಅವರು ಗುಬ್ಬಿ ತಾಲ್ಲೂಕಿಗೆ ಆಗಮಿಸಿ ವಿವಿಧ ಮುಖಂಡರ ಭೇಟಿಯಾಗಿ ಅಲ್ಲಿಂದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿವಿಧ ಮುಖಂಡರ ಭೇಟಿ ಮಾಡಿದ್ದಾರೆ.

ಡಾ.ಶಿವಕುಮಾರ ಶ್ರೀಗಳ ಜನ್ಮದಿನವಾದ ಏ.೧ರಂದು ನಾಮಪತ್ರ ಸಲ್ಲಿಕೆ

ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಜನ್ಮದಿನವಾದ ಏ.೧ರಂದು ಸಾಂಕೇತಿಕವಾಗಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಉಮೇದುವಾರಿಕೆ ಸಲ್ಲಿಸುತ್ತಿದ್ದು, ಏ.೩ರಂದು ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರೊಂದಿಗೆ ಬೃಹತ್ ರೋಡ್ ಶೋ ರ‍್ಯಾಲಿ ಮೂಲಕ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap