ಸೋಮಣ್ಣ ಹೆಗಲಿಗೆ 3 ಜಿಲ್ಲೆಗಳ ಜವಾಬ್ದಾರಿ…!

ಬೆಂಗಳೂರು :

    ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪದೆ ಪದೆ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಇದೀಗ ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ಅವರಿಗೆ ನೀಡಲು ತೀರ್ಮಾನಿಸಿದೆ.

    ಈಗಾಗಲೇ ರಾಜ್ಯದ ಹದಿನೈದು ಜಿಲ್ಲೆಗಳ ಜವಾಬ್ದಾರಿಯನ್ನು ವಿವಿಧ ನಾಯಕರಿಗೆ ಹಂಚಿರುವ ಹೈಕಮಾಂಡ್ , ಚುನಾವಣಾ ನಿಪುಣ ಎನ್ನಿಸಿಕೊಂಡಿರುವ ಸೋಮಣ್ಣ ಅವರಿಗೆ ಗುರುತರ ಜವಾಬ್ದಾರಿ ನೀಡಲು ತೀರ್ಮಾನಿಸಿ ದ್ದು, ಚಾಮರಾಜನಗರ, ಮೈಸೂರು ಮತ್ತು ಹಾಸನ ಜಿಲ್ಲೆಗಳ ಚುನಾವಣಾ ಜವಾಬ್ದಾರಿ ನೀಡಲಿದೆ. ಬುಧವಾರ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸೋಮಣ್ಣ ಅವರಿಗೆ ಈ ಕುರಿತು ವಿವರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಳೆ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚಿನ ಸೀಟುಗಳನ್ನು ಗೆಲ್ಲುವಂತೆ ನೋಡಿಕೊಳ್ಳಿ ಎಂದಿದ್ದಾರೆ.

    ಬೆಂಗಳೂರು ಹೊರತುಪಡಿಸಿದಂತೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಮೂವತ್ತೆöÊದು ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದ್ದು, ಇದನ್ನು ಸಾಧಿಸಲು ನಿಮ್ಮ ಶಕ್ತಿ ಬೇಕು. ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಆದರೆ ಕಳೆದ ಹಲವು ಚುನಾವಣೆಗಳಲ್ಲಿ ಪಕ್ಷ ಇಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕೊರತೆ ನೀಗಿದರೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಬಿಜೆಪಿಯ ಕನಸು ಈಡೇರುತ್ತದೆ ಎಂದು ಅಮಿತ್ ಷಾ ವಿವರಿಸಿದರು.

    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಅವರು ತಮ್ಮ ವಿಷಯದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿರುವ ಕುರಿತು ಸೋಮಣ್ಣ ಅವರು ದೂರಿದಾಗ, ಅವರ ವಿಷಯವನ್ನು ನಮಗೆ ಬಿಡಿ. ಉಳಿದಂತೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪಕ್ಷ ಹೆಚ್ಚು ಸೀಟು ಗೆಲ್ಲುವಂತೆ ನೋಡಿಕೊಳ್ಳಿ. ಇನ್ನು ಮುಂದೆ ನಿಮ್ಮ ವಿಷಯದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲದಂತೆ ನಾವು ನೋಡಿಕೊಳ್ಳುತ್ತೇವೆ. ನೀವು ಏನೇ ಇದ್ದರೂ ನಮ್ಮ ಗಮನಕ್ಕೆ ತನ್ನಿ. ಮುಂದೇನು ಮಾಡಬೇಕು ಎಂಬುದನ್ನು ನಮಗೆ ಬಿಡಿ ಎಂದು ಅಮಿತ್ ಷಾ ವಿವರಿಸಿದರು.

     ಮುಂದಿನ ಮೂರು ತಿಂಗಳ ಕಾಲ ಮೌನವಾಗಿರಿ, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಿ. ಮೊದಲು ನಾವು ಚುನಾವಣೆಯಲ್ಲಿ ಗೆಲ್ಲುವ ಕಡೆ ಗಮನ ಹರಿಸೋಣ. ನೀವು ಹಳೆ ಮೈಸೂರು ಭಾಗದ ಜಿಲ್ಲೆಗಳ ಕಡೆ ಗಮನ ಕೇಂದ್ರೀಕರಿಸಿದರೆ ಪಕ್ಷ ಗಣನೀಯ ಪ್ರಮಾಣದ ಸೀಟುಗಳನ್ನು ಗೆಲ್ಲುತ್ತದೆ ಎಂಬ ಕುರಿತು ನಮಗೆ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ನೀವು ಉಳಿದ ವಿಷಯಗಳ ಕಡೆ ಗಮನ ಹರಿಸದೆ ಈ ಭಾಗದ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ಗಮನ ಹರಿಸಿ ಎಂದು ನುಡಿದರು.

    ಉನ್ನತ ಮೂಲಗಳ ಪ್ರಕಾರ, ಪಕ್ಷದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆ ಪದೇ ಪದೇ ವಿವರಿಸಿದ ಸೋಮಣ್ಣ, ನಾವು ಪಕ್ಷಕ್ಕಾಗಿ ದುಡಿಯುತ್ತಿರುವವರು, ಯಡಿಯೂರಪ್ಪ ಅವರು ನಮ್ಮ ನಾಯಕರು. ಆದರೆ ನಮ್ಮ ಮೇಲೆ ಹಿಡಿತ ಸಾಧಿಸಲು ವಿಜಯೇಂದ್ರ ಯಾರು? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅಮಿತ್ ಷಾ, ಅವರ ವಿಷಯ ನಮಗೆ ಬಿಡಿ. ಇನ್ನು ಮುಂದೆ ಅವರ ಬಗ್ಗೆ ಬಹಿರಂಗವಾಗಿ ಏನೂ ಹೇಳಿಕೆ ಕೊಡಬೇಡಿ. ಉಳಿದಿದ್ದನ್ನು ನಾವು ಗಮನದಲ್ಲಿಟ್ಟುಕೊಂಡಿರುತ್ತೇವೆ ಎಂದು ಸಮಾಧಾನಿಸಿದರು. ಅಮಿತ್ ಷಾ ಅವರ ಮಾತಿನಿಂದ ಸಮಾಧಾನಗೊಂಡ ಸೋಮಣ್ಣ ಅವರು, ಇದೀಗ ಬಿಜೆಪಿಯಲ್ಲೇ ಉಳಿದು ಹೋರಾಡಲು ತೀರ್ಮಾನಿಸಿದ್ದು, ಈ ಬೆಳವಣಿಗೆ ಬಿಜೆಪಿ ಪಾಳೆಯದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ.

      ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದರು. ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ, ಸೋಮಣ್ಣ ಅವರು ಬೇಸರಗೊಂಡೂ ಇಲ್ಲ. ಎಲ್ಲರೂ ಅವರವರ ಕೆಲಸ ಮಾಡುತ್ತಾರೆ, ಎಲ್ಲರೂ ಸೇರಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಸೋಮಣ್ಣ ಅವರ ವಿಷಯದಲ್ಲಿ ಪಕ್ಷ ಯಾವ ಗೊಂದಲವನ್ನೂ ಅನುಭವಿಸುತ್ತಿಲ್ಲ. ಅದೇ ರೀತಿ ಇಲ್ಲಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ.

    ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದು, ಟಿಕೆಟ್ ಹಂಚಿಕೆಯ ವೇಳೆ ಎಲ್ಲರ ಹೆಸರುಗಳನ್ನು ಪರಿಗಣಿಸಲಾಗುತ್ತದೆ. ಸೋಮಣ್ಣ ಅವರನ್ನು ಹೈಕಮಾಂಡ್ ಈಗಾಗಲೇ ಕರೆಸಿ ಚರ್ಚೆ ಮಾಡಿದೆ. ಇದೇ ರೀತಿ ಸೋಮಣ್ಣ ಅವರಂತೆ ವಿಜಯೇಂದ್ರ ಅವರೂ ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅವರು ಸೂಚ್ಯವಾಗಿ ಹೇಳಿದರು.

     ಈ ಮಧ್ಯೆ ದೆಹಲಿಯಿಂದ ಹಿಂತಿರುಗಿದ ವಸತಿ ಸಚಿವ ವಿ.ಸೋಮಣ್ಣ ಸುದ್ದಿಗಾರರ ಜತೆ ಮಾತನಾಡಿದರು. ನಮ್ಮ ಗೊಂದಲವನ್ನು ಪಕ್ಷದ ವರಿಷ್ಠರು ಬಗೆಹರಿಸಿದ್ದಾರೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಇನ್ನೂ ಯುವಕ. ಬೆಳೆಯಬೇಕಾದವರು. ಅವರು ಕೂಡ ತಮ್ಮ ಕೆಲಸದ ಮೇಲೆ ಗಮನ ಹರಿಸಿದರೆ ಒಳ್ಳೆಯದು. ನಾನು ಯಡಿಯೂರಪ್ಪ ಅವರ ಗರಡಿಯಲ್ಲಿದ್ದವನು. ಅದೇ ರೀತಿ ಜೆ.ಹೆಚ್.ಪಟೇಲ್, ಹೆಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ ಅವರಂತಹ ನಾಯಕರ ಗರಡಿಯಲ್ಲಿದ್ದವನು ಎಂದು ಸೂಚ್ಯವಾಗಿ ನುಡಿದರು.

     ನಾನೇನು ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ವಿಜಯೇಂದ್ರ ಅವರೂ ತಾವು ಮಾಡಬೇಕಾದ ಕೆಲಸದ ಕಡೆ ಗಮನ ಕೊಡಲಿ. ಈ ಸೋಮಣ್ಣನಿಗೆ ಸೋಮಣ್ಣನೇ ಸರಿಸಾಟಿ. ಯಡಿಯೂರಪ್ಪ ಅವರ ಬಗ್ಗೆ ಯಾರಾದರೂ ಮಾತನಾಡಿದರೆ ಸಹಿಸುವುದಿಲ್ಲ ಎಂಬ ವಿಜಯೇಂದ್ರ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಈ ಮಾತಿಗೂ ತಮಗೂ ಸಂಬಂಧವಿಲ್ಲ. ಆಗಸದಲ್ಲಿ ಮುಖ ಮಾಡಿ ಉಗುಳಿದರೆ ಅವರ ಮುಖಕ್ಕೇ ಬೀಳುತ್ತದೆ. ನಾನು ಚುನಾವಣಾ ತಂತ್ರಜ್ಞ. ನಾನು ಹೇಗೆ ಚುನಾವಣೆ ಮಾಡುತ್ತೇನೆ ಎಂಬುದು ಮೂರೂ ಪಕ್ಷದವರಿಗೆ ಗೊತ್ತು. ಹೀಗಾಗಿ ಉಳಿದಿದ್ದನ್ನೆಲ್ಲ ಪಕ್ಕಕ್ಕಿಟ್ಟು ಮಾಡುವ ಕೆಲಸದ ಕಡೆ ಗಮನ ಕೊಡೋಣ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap