ನವದೆಹಲಿ:
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು ರಾಜ್ಯಸಭೆ ಚುನಾವಣೆಗೆ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಲು ಜೈಪುರಕ್ಕೆ ಆಗಮಿಸಿದ್ದಾರೆ.
ಸೋನಿಯಾ ಗಾಂಧಿ ಅವರು ಇಂದು ಬೆಳಿಗ್ಗೆ ದೆಹಲಿಯಿಂದ ರಾಜಸ್ಥಾನಕ್ಕೆ ತೆರಳಿದ್ದು, ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ. ನಾಮಪತ್ರ ಸಲ್ಲಿಸುವ ವೇಳೆ ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಉಪಸ್ಥಿತರಿರಲಿದ್ದಾರೆ.
ಮಗ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತಿತರರು ಬರಮಾಡಿಕೊಂಡರು.ನಾಮಪತ್ರ ಸಲ್ಲಿಸಲು ಸೋನಿಯಾ ಗಾಂಧಿ ಇಲ್ಲಿನ ವಿಧಾನಸಭಾ ಭವನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪಕ್ಷವು ರಾಜ್ಯದಿಂದ ಒಂದು ರಾಜ್ಯಸಭಾ ಸ್ಥಾನವನ್ನು ಗೆಲ್ಲುವುದು ಖಚಿತವಾಗಿದೆ ಮತ್ತು ಐದು ಬಾರಿ ಲೋಕಸಭೆ ಸಂಸದರಾಗಿ ಸೇವೆ ಸಲ್ಲಿಸಿದ ನಂತರ ಮೇಲ್ಮನೆಗೆ ಸೋನಿಯಾ ಆಯ್ಕೆಯಾಗಲಿದ್ದಾರೆ.
ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯಪ್ರದೇಶದ ಕಾಂಗ್ರೆಸ್ ಘಟಕಗಳು, ಮುಖಂಡರು ತಮ್ಮ ರಾಜ್ಯದಿಂದಲೇ ಸ್ಪರ್ಧಿಸಲು ಅವರಿಗೆ ಮನವಿ ಮಾಡಿದ್ದವು. ಈ ಪೈಕಿ ರಾಜಸ್ಥಾನ ಸುರಕ್ಷಿತ ಎಂಬ ತೀರ್ಮಾನಕ್ಕೆ ನಾಯಕರು ಬಂದಿದ್ದರಿಂದ ಕೊನೆಗೆ ಸೋನಿಯಾ ಅವರು ರಾಜಸ್ಥಾನ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.
ಫೆಬ್ರುವರಿ 27ರಂದು ಚುನಾವಣೆ ನಡೆಯಲಿದ್ದು ಫೆ.15 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಆದರೂ ಕಾಂಗ್ರೆಸ್ ತನ್ನ ಯಾವುದೇ ಅಭ್ಯರ್ಥಿಗಳ ಪಟ್ಟಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ.