ಅನಿಲ್‌ ಕುಮಾರ್ ವಿರುದ್ಧ ಶೀಘ್ರ ಲೋಕಾಯುಕ್ತಕ್ಕೆ ದೂರು: ಎಎಪಿ

ಬಿಬಿಎಂಪಿ ಕಮೀಷನರ್ ಆಗಿದ್ದಾಗ ಕೋಟ್ಯಾಂತರ ಭ್ರಷ್ಟಾಚಾರದಲ್ಲಿ ಭಾಗಿ ಆರೋಪ

ತುಮಕೂರು

     ಕೊರಟಗೆರೆ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಅವರು ಬಿಬಿಎಂಪಿ ಕಮೀಷನರ್ ಆಗಿದ್ದಾಗ 1300 ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಡಾ.ಬಿ.ಎಲ್ ವಿಶ್ವನಾಥ್ ಅವರು ಈ ಸಂಬAಧ ವಾರದೊಳಗೆ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರಟಗೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಹೊರಟಿರುವ ಅನಿಲ್‌ಕುಮಾರ್ ಅವರ ಮೇಲೆ ಮೂರು ಗಂಭೀರ ಭ್ರಷ್ಟಾಚಾರ ಪ್ರಕರಣದ ಆರೋಪಗಳಿದ್ದು, 2019-20ರಲ್ಲಿ ಬಿಬಿಎಂಪಿ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಗುತ್ತಿಗೆ ಪಡೆದಿದ್ದ ಕಂಪನಿಗೆ 31.6 ಕೋಟಿ ಮಂಜೂರಾದ ಅನುದಾನಕ್ಕೆ ಹೆಚ್ಚುವರಿಯಾಗಿ 2ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕಮೀಷನ್ ವ್ಯವಹಾರ ನಡೆದಿದೆ ಎಂಬ ಅನುಮಾನವಿದೆ.

     ಅಂತೆಯೆ ಬೆಂಗಳೂರಿನ ರಾಜಕಾಲುವೆ ಹೂಳು ತೆಗೆಯುವ ಕಾಮಗಾರಿಗೆ ಮೀಸಲಿರಿಸಿದ 36 ಕೋಟಿಯಲ್ಲೂ ಅವ್ಯವಹಾರವಾಗಿದ್ದು, ಯೋಗ ಅಂಡ್ ಕಂಪನಿ ಒಂದೇ ಸಂಸ್ಥೆಗೆ 36 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಿದ್ದು ಕಾಮಗಾರಿ ಸರಿಯಾಗಿ ನಡೆದಿಲ್ಲ. ಮಳೆಬಂದಾಗ ಪ್ರವಾಹ ನಿಲ್ಲದಿರುವುದೇ ಇದಕ್ಕೆ ಸಾಕ್ಷಿ. ಅಂತೆಯೇ ಕೊಳವೆ ಬಾವಿ ಕೊರೆಸುವಿಕೆಗೆ ಸಂಬಂಧಿಸಿದಂತೆ 969 ಕೋಟಿ ಬಿಬಿಎಂಪಿಯಲ್ಲಿ ಬಿಡುಗಡೆ ಮಾಡಿದ್ದು, ಕೆಲವೆಡೆ 20-25 ಅಡಿ ಮಾತ್ರ ಕೊರೆದಿರುವುದಕ್ಕೂ ಬಿಲ್ ಮಂಜೂರು ಮಾಡಲಾಗಿದೆ. ಇನ್ನೂ ಕೋವಿಡ್ ಚಿಕಿತ್ಸೆಗಾಗಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ತೆರೆಯಲಾದ ಬೃಹತ್ ಕೋವಿಡ್ ಸೆಂಟರ್‌ನಲ್ಲಿ ಕೋಟ್ಯಾಂತರ ಮೊತ್ತದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಪ್ರೇಂಕುಮಾರ್, ನಗರ ಟಕೆಟ್ ಆಕಾಂಕ್ಷಿ ಮಹಮ್ಮದ್‌ಗೌಸ್‌ಪೀರ್, ಬಾನು ಇತರರಿದ್ದರು.
 
ಬಿಜೆಪಿಗೆ ಬಂದರೆ ಪವಿತ್ರರಾಗುವರೇ?:

     ತಮ್ಮದೇ ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿದ್ದು ಭ್ರಷ್ಟಾಚಾರದ ಆರೋಪಹೊತ್ತವರಿಗೆ ಬಿಜೆಪಿ ಟಿಕೆಟ್ ನೀಡುವುದು ಎಷ್ಟರ ಮಟ್ಟಿಗೆ ಸಮಂಜಸ? ಕಳಂಕಿತರು ಬಿಜೆಪಿಗೆ ಬಂದರೆ ಪವಿತ್ರರಾಗುವರೇ? ಇಡಿ, ಐಟಿ ಇವೆಲ್ಲ ವಿಪಕ್ಷಗಳಿಗೆ ಮಾತ್ರವೇ ಸೀಮಿತವೇ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಗುತ್ತಿಗೆ ಮುಗಿದರೂ ಟೋಲ್ ವಸೂಲಿ ಕಮೀಷನ್‌ಗೋಸ್ಕರವೇ?

     ವಕೀಲ, ಕೊರಟಗೆರೆ ಟಿಕೆಟ್ ಆಕಾಂಕ್ಷಿ ರಮೇಶ್ ನಾಯ್ಕ್ ಮಾತನಾಡಿ ಟೋಲ್ ಸಂಗ್ರಹದ ಹೆಸರಲ್ಲಿ ರಾಷ್ಟ್ರೀ ಯ, ರಾಜ್ಯ ಹೆದ್ದಾರಿಯಲ್ಲಿ ಸುಲಿಗೆ ನಡೆಯುತ್ತಿದ್ದು, ಪಂಜಾಬ್‌ನಲ್ಲಿ ಖುದ್ದು ಸಿಎಂ ಭಗವಂತ್‌ಮಾನ್ ಅವರೇ ಅವೈಜ್ಞಾನಿಕ ಶುಲ್ಕ ವಸೂಲಿ ಮಾಡುತ್ತಿದ್ದ 8 ಟೋಲ್‌ಗಳನ್ನು ಮುಚ್ಚಿಸಿದ್ದಾರೆ. ರಾಜ್ಯದಲ್ಲಿ ಏಕೆ ಆಗುತ್ತಿಲ್ಲ. ರಾಜ್ಯ ಹೆದ್ದಾರಿಗಳಲ್ಲೂ 10 ಕಿ.ಮೀಗೊಂದು ಟೋಲ್ ನಿರ್ಮಿಸಿ ಹಣ ದೋಚುತ್ತಿದ್ದು, ನೆಲಮಂಗಲ, ತುಮಕೂರು ವ್ಯಾಪ್ತಿಯ 32 ಕಿ.ಮೀ ಹೆದ್ದಾರಿ ಟೋಲ್‌ನಲ್ಲಿ 18 ವರ್ಷ ಅವಧಿ ಮುಗಿದರೂ ಮತ್ತೆ ಹಣ ವಸೂಲಿ ನಿಂತಿಲ್ಲ. ರಾಜ್ಯ ಸರ್ಕಾರ ಯಾವುದೇ ಕ್ರಮ ವಹಿಸದಿರುವುದರ ಹಿಂದೆ ಕಮೀಷನ್ ಪಡೆಯುತ್ತಿರುವ ಅನುಮಾನವಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ