BJP ಅವಧಿಯಲ್ಲಿ ಮುಡಾ ಸೈಟ್ ಅಕ್ರಮ : ಶೀಘ್ರದಲ್ಲೇ ಪಟ್ಟಿ ಬಿಡುಗಡೆ: ಡಿಸಿಎಂ

ಬೆಂಗಳೂರು:

   ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮವಾಗಿ ಮುಡಾ ನಿವೇಶನ ಹಂಚಿಕೆ ಮಾಡಲಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುರುವಾರ ಹೇಳಿದರು.

   ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ಬಿಜೆಪಿ ಆಡಳಿತಾವಧಿಯಲ್ಲಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ನಿವೇಶನಗಳನ್ನು ಬಿಜೆಪಿಯವರೇ ಹಂಚಿಕೆ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

   ಎರಡು ವರ್ಷಗಳ ಹಿಂದೆಯೇ ಬಿಜೆಪಿ ಆಡಳಿತಾವಧಿಯಲ್ಲಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಿಜೆಪಿಯವರು ಸದನ ಪ್ರಾರಂಭದ ದಿನವೇ ಈ ವಿಚಾರ ಪ್ರಸ್ತಾಪ ಮಾಡಬಹುದಿತ್ತಲ್ಲವೇ? ಅವರ ಹಗರಣಗಳು ಈಗ ಹೊರಗೆ ಬರುವ ಭಯದಿಂದ ಈಗ ಮಾತನಾಡುತ್ತಿದ್ದಾರೆ,

    ನಿಗಮ ಮಂಡಳಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಚರ್ಚೆ ಮಾಡಲು ನಾವು ಅವಕಾಶ ಕಲ್ಪಿಸಿದ್ದೆವು. ಅವರು ತಮಗೆ ಏನೇನು ಬೇಕೋ ಅದನ್ನು ಹೇಳಿದರು. ಆದರೆ ಮುಖ್ಯಮಂತ್ರಿಗಳಿಂದ ಉತ್ತರ ಪಡೆಯಲು ಅವಕಾಶವನ್ನೇ ನೀಡಲಿಲ್ಲ. ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಬಿಜೆಪಿಯವರ ಕಾಲದ ನಿಗಮಗಳಲ್ಲಿನ ಅಕ್ರಮಗಳನ್ನು ಬಿಚ್ಚಿಟ್ಟರು. ಬಿಜೆಪಿಯವರು ತಮ್ಮ ಕಾಲದಲ್ಲಿ ಆಗಿದ್ದ ಹಗರಣಗಳನ್ನು ಬಚ್ಚಿಟ್ಟಿದ್ದರು. ಅವುಗಳು ಬಹಿರಂಗವಾಗಬಾರದು ಎಂದು ಮುಖ್ಯಮಂತ್ರಿಗಳ ಉತ್ತರಕ್ಕೆ ಅವಕಾಶ ನೀಡಲಿಲ್ಲ. ಈ ಅಕ್ರಮಗಳ ಬಗ್ಗೆ ನಮ್ಮ ಸರ್ಕಾರ ತನಿಖೆಗೆ ಆದೇಶ ನೀಡಿದೆ ಎಂದು ತಿಳಿಸಿದರು.

   ವಾಲ್ಮೀಕಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು. ಉಪ್ಪು ತಿಂದವನು ನೀರು ಕುಡಿಯುತ್ತಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಬಿಜೆಪಿಯವರು ಈಗ ಮೂಡಾ ನಿವೇಶನದ ಬಗ್ಗೆ ಗದ್ದಲ ಎಬ್ಬಿಸುತ್ತಿದ್ದಾರೆ. ನಾವು ಅವರ ಕಾಲದಲ್ಲಿ ಹೇಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ನಾವು ಹೊರಗೆ ತರುತ್ತಿದ್ದೇವೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದು, ವಿರೋಧ ಪಕ್ಷಗಳ ಬಳಿ ದಾಖಲೆ ಇದ್ದರೆ ಅದನ್ನು ತನಿಖಾಧಿಕಾರಿಗಳಿಗೆ ನೀಡಲಿ. ಆ ಜಮೀನು ಖರೀದಿ ಮಾಡಿದ್ದು, ಅದನ್ನು ದಾನಪತ್ರವಾಗಿ ನೀಡಿದ್ದು ನಿಜವಲ್ಲವೇ? ಅದನ್ನು ಅಕ್ರಮವಾಗಿ ಮೂಡಾದವರು ಬಳಸಿಕೊಂಡಿದ್ದಾರೆ. ಅದಕ್ಕೆ ಪರಿಹಾರ ನೀಡಿದ್ದಾರೆ. ಇದರಲ್ಲಿ ಅವ್ಯವಹಾರ ಏನಿದೆ? ಇಲ್ಲಿ ಅವ್ಯವಹಾರ ನಡೆದಿದ್ದರೆ ಅದು ಬಿಜೆಪಿಯವರ ಕಾಲದಲ್ಲಿ ಆಗಿದೆ ಎಂದು ತಿರುಗೇಟು ನೀಡಿದರು.

   ಬಿಜೆಪಿ ಶಾಸಕರ, ಸಚಿವರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬೊಮ್ಮಾಯಿ ಅವರ ಹಗರಣಗಳು ಹೊರಗೆ ಬರಲಿವೆ. ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿ ಎಲ್ಲಾ ಹಗರಣಗಳ ಪಿತಾಮಹ. ಅವರ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಿವರವಾಗಿ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಅವರ ಹಗರಣಗಳು ಬಯಲಾಗುತ್ತವೆ ಎನ್ನುವ ಭಯದಿಂದ ಸದನದಲ್ಲಿ ಗದ್ದಲ ಎಬ್ಬಿಸಿ ನಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕಾಲದ ಎಲ್ಲಾ ಅಕ್ರಮಗಳನ್ನು ತೆಗೆಯುತ್ತಿದ್ದೇವೆ ಎಂದರು.

   ವಾಲ್ಮೀಕಿ ಹಗರಣದಲ್ಲಿ ಅಕ್ರಮವಾಗಿ ವರ್ಗಾವಣೆಯಾಗಿರುವ 89 ಕೋಟಿ ಹಣದಲ್ಲಿ ನಮ್ಮ ತನಿಖಾಧಿಕಾರಿಗಳು ಸುಮಾರು 40 ಕೋಟಿಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮಧ್ಯೆ ಇಡಿ, ಸಿಬಿಐ ಕೂಡ ತನಿಖೆ ನಡೆಸಲು ಬಂದಿದ್ದು ಅವರನ್ನು ನಾವು ತಡೆದಿಲ್ಲ. ಅವರಿಗೂ ತನಿಖೆ ನಡೆಸುವ ಹಕ್ಕಿದೆ. ನಾವು ಯಾವುದೇ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು

Recent Articles

spot_img

Related Stories

Share via
Copy link
Powered by Social Snap