ಸೌಜನ್ಯಾ ತಾಯಿ ಕುಸುಮಾವತಿ ಸೇರಿ 12 ಮಂದಿ ವಿರುದ್ಧ ಎಫ್‌ಐಆರ್‌

ಬೆಳ್ತಂಗಡಿ

    ತಾಲೂಕು ಕಚೇರಿ ಎದುರು ಅಕ್ರಮ ಕೂಟ ಸೇರಿದ ಆರೋಪದಲ್ಲಿ  ಸೌಜನ್ಯಾ ತಾಯಿ ಕುಸುಮಾವತಿ ಸೇರಿ 12 ಮಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸೌಜನ್ಯಾ ಪರ ಹೋರಾಟಗಾರರ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅನಮತಿ ಇಲ್ಲದಿದ್ದರೂ ಅಕ್ರಮ ಕೂಟ ಸೇರಿದ್ದರಿಂದ ಪ್ರಕರಣ ದಾಖಲಾಗಿದೆ.

    ಅ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅಕ್ರಮ ಕೂಟ ಸೇರಿದ ಆರೋಪದಲ್ಲಿ ಸೌಜನ್ಯಾ ತಾಯಿ ಕುಸುಮಾವತಿ, ತಿಮರೋಡಿ ಸಹೋದರ ಮೋಹನ್ ಶೆಟ್ಟಿ, ಪ್ರಸನ್ನ ರವಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

   ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಸೌಜನ್ಯಾ ಪರ ಹೋರಾಟಗಾರರ ವಿರುದ್ದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಸೌಜನ್ಯಾ ಪರ ಹೋರಾಟಗಾರರು ಅ.27ರಂದು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆಗಿರುವ ಗಡಿಪಾರು ಆದೇಶದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ತೀರ್ಪು ಬಾಕಿಯಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಅಥವಾ ಮನವಿ ನೀಡಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಈ ನಡುವೆ ಅ.27ರಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ಬಂದಿದ್ದವರನ್ನು ಪೊಲೀಸರು ತಡೆದಿದ್ದರು.

   ಈ ಘಟನೆ ಬಗ್ಗೆ ಬೆಳ್ತಂಗಡಿ ಎಎಸ್‌ಐ ದುರ್ಗಾದಾಸ್ ನೀಡಿರುವ ದೂರಿನಂತೆ ಅನುಮತಿಯಿಲ್ಲದೆ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ಬೆಳ್ತಂಗಡಿ ಮಿನಿವಿಧಾನ ಎದುರು ಅಕ್ರಮ ಕೂಟ ಸೇರಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link