ಚೆನ್ನೈ:
ನಟಿ ಸೌಂದರ್ಯಾ ಅವರು ವಿಮಾನ ಅಪಘಾತದಲ್ಲಿ ನಿಧನ ಹೊಂದಿ ಅದೆಷ್ಟೋ ವರ್ಷಗಳು ಕಳೆದಿವೆ. ಆದರೆ, ಈ ಕಹಿಘಟನೆಯನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ. 2004ರಲ್ಲಿ ಸೌಂದರ್ಯಾ ಅವರು ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕೆ ಖಾಸಗಿ ವಿಮಾನದಲ್ಲಿ ಹೊರಟಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ಗಂಟೆಗಳಲ್ಲಿ ಹೊತ್ತಿ ಉರಿಯಿತು. ಕನ್ನಡದಲ್ಲಿ ನಟಿಸಿದ್ದ ಮೀನಾ ಕೂಡ ಸೌಂದರ್ಯಾ ಜೊತೆ ಇರಬೇಕಿತ್ತು. ಆದರೆ, ಅವರು ವಿಮಾನದಲ್ಲಿ ತೆರಳಿರಲಿಲ್ಲ. ಅವರ ನಿರ್ಧಾರವೇ ಅವರ ಪ್ರಾಣ ಉಳಿಸಿತು.
ಮೀನಾ ಅವರು ಸೌಂದರ್ಯಾ ಅವರ ಆಪ್ತ ಸ್ನೇಹಿತೆ. ಕನ್ನಡದಲ್ಲಿ ‘ಪುಟ್ನಂಜ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಸೌಂದರ್ಯಾ ವಿಚಾರದಲ್ಲಿ ಮೌನ ವಹಿಸಿದ್ದೇ ಹೆಚ್ಚು. ಈಗ ಅವರು ಘಟನೆ ಬಗ್ಗೆ ನೆನಪಿಸಿಕೊಂಡಿದ್ದಾರೆ. ‘ಸೌಂದರ್ಯಾ ಸಾವಿನ ವಿಚಾರ ನನಗೆ ಶಾಕ್ ತಂದಿದೆ. ಆ ಘಟನೆ ನಡೆದು ಇಷ್ಟ ವರ್ಷಗಳಾದರೂ ನಾನು ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ’ ಎನ್ನುತ್ತಾರೆ ಮೀನಾ.
‘ನಾನು ಕೂಡ ಅಂದು ಸೌಂದರ್ಯಾ ಜೊತೆ ಇರಬೇಕಿತ್ತು. ಆದರೆ, ನನಗೆ ಶೂಟ್ ಇದೆ ಎಂದು ಹೇಳಿದೆ. ನನಗೆ ರಾಜಕೀಯದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಹೀಗಾಗಿ, ನಾನು ಅವರ ಜೊತೆ ತೆರಳಿಲ್ಲ. ಏನಾಯಿತು ಎಂಬ ವಿಚಾರ ತಿಳಿದಾಗ ನನನಗೆ ಸಾಕಷ್ಟು ಬೇಸರ ಆಯಿತು’ ಎಂದು ಅವರು ಹೇಳಿದ್ದಾರೆ.
