ಬೆಂಗಳೂರು:
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಮತ್ತಿತರರ ವಿರುದ್ಧ ಬಿಜೆಪಿ ಗುರುವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇಲ್ಲಿನ ಬಿಟಿಎಂ ಲೇಔಟ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದಿಂದ ಗ್ಯಾರೆಂಟಿ ಕಾರ್ಡ್‌ಗೆ ಬದಲಾಗಿ ಆಧಾರ್ ನೀಡುವಂತೆ ಹೇಳುವ ಮೂಲಕ ಮತದಾರರಿಗೆ ಪ್ರೇರೆಪಿಸುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಗಳಿಂದ ಚುನಾವಣೆ ನಂತರ ಮತದಾರರು 1 ಲಕ್ಷ ರೂ. ಬಾಂಡ್ ಸ್ವೀಕರಿಸಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿಯ ಚುನಾವಣಾ ಏಜೆಂಟ್ ಗಜೇಂದ್ರ ಎಸ್ ದೂರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಮತ್ತಿತರ ಕಾಂಗ್ರೆಸ್ ಪಕ್ಷದ ನಾಯಕರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷವೊಡ್ಡುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಾಕ್ಷ್ಯವಾಗಿ ಛಾಯಾಚಿತ್ರಗಳನ್ನು ಬಿಜೆಪಿ ಸಲ್ಲಿಸಿದೆ.
ಏಪ್ರಿಲ್ 17 ರಂದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ಸೂಚನೆ ಮೇರೆಗೆ ಕಾಂಗ್ರೆಸ್ ಮುಖಂಡ ಮಂಜುನಾಥ್ ರೆಡ್ಡಿ ಮತ್ತು ಇತರ ಮುಖಂಡರು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ ಮತದಾರರಿಗೆ ತಮ್ಮ ಮತ ನೀಡುವಂತೆ ಪ್ರೇರೇಪಿಸುತ್ತಿರುವುದು ಕಂಡುಬಂದಿದೆ. ಗ್ಯಾರಂಟಿ ಕಾರ್ಡ್ ಗೆ ಪ್ರತಿಯಾಗಿ ಆಧಾರ್ ಕಾರ್ಡ್‌ಗಳು ಮತ್ತು ಇತರ ವೈಯಕ್ತಿಕ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ, ಚುನಾವಣೆಯ ನಂತರ ಅವರಿಗೆ 1 ಲಕ್ಷ ರೂಪಾಯಿಗಳ ಬಾಂಡ್‌ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಲಾಗುತ್ತಿದೆ. ಇದನ್ನು ಛಾಯಾಚಿತ್ರಗಳು ಮತ್ತು ವೀಡಿಯೊಗಳಲ್ಲಿ ಸೆರೆಹಿಡಿಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣೆಯ ನಂತರ ಹಣ ಪಾವತಿಯ ಭರವಸೆಯಾಗಿ ಸಹಿ ಮಾಡಲಾಗುತ್ತಿರುವ ಗ್ಯಾರಂಟಿ ಕಾರ್ಡ್ ಗಳನ್ನು ನೀಡಲಾಗುತ್ತಿದೆ. ಇದು ನಿರ್ದಿಷ್ಟ ವ್ಯಕ್ತಿಗೆ ನೀಡುವ ಮತಕ್ಕೆ ಪ್ರತಿಯಾಗಿ ನೀಡಲಾಗುವ ಬಹುಮಾನವಾಗಿದೆ. ಕಾಂಗ್ರೆಸ್ ನಾಯಕರ ಇಂತಹ ಕ್ರಮ ಲಂಚಕ್ಕೆ ಸಮಾನವಾಗಿರುತ್ತದೆ. ಅಧಿಕಾರಿಗಳು ಎಫ್‌ಐಆರ್ ದಾಖಲಿಸಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ