ವಾಷಿಂಗ್ಟನ್:
ಸ್ಪೇಸ್‌ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಲ್ಲಿ ಗುರುವಾರ ಸ್ಫೋಟಗೊಂಡಿದೆ. ಟೆಕ್ಸಾಸ್‌ನಿಂದ ಉಡಾವಣೆಯಾದ ಕೆಲವೇ ನಿಮಿಷಗಳ ನಂತರ ಈ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಫ್ಲೋರಿಡಾದ ಕೆಲವು ಭಾಗಗಳಲ್ಲಿ ಆಕಾಶದಲ್ಲಿ ಹೊಗೆ ಹಾಗೂ ಬೆಳಕು ಕಾಣಿಸಿಕೊಂಡಿದೆ. ಇದು ಈ ವರ್ಷ ಎಲೋನ್ ಮಸ್ಕ್ ಅವರ ಮಾರ್ಸ್‌ಗೆ ಸತತ ಎರಡನೇ ವೈಫಲ್ಯವಾಗಿದೆ. ಸ್ಟಾರ್‌ಶಿಪ್ ತನ್ನ ಎಂಜಿನ್‌ಗಳನ್ನು ಕಡಿತಗೊಳಿಸಿ ಒಂದೇ ಸಮನೆ ಸುತ್ತಿರುಗಲು ಪ್ರಾರಂಭಿಸಿತ್ತು. ನಂತರ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿದೆ.
ಬಾಹ್ಯಾಕಾಶದಲ್ಲಿ ಸ್ಫೋಟಗೊಂಡ ನಂತರ ದಕ್ಷಿಣ ಫ್ಲೋರಿಡಾ ಮತ್ತು ಬಹಾಮಾಸ್ ಬಳಿ ಆಕಾಶದಲ್ಲಿ ಬೆಂಕಿಯ ಅವಶೇಷಗಳು ಕಾಣಿಸಿಕೊಂಡಿವೆ. ಬೆಂಕಿ ಹರಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 400 ಅಡಿಗಳಿಗಿಂತ ಹೆಚ್ಚು ಎತ್ತರದ, 33 ರಾಪ್ಟರ್ ಎಂಜಿನ್‌ಗಳನ್ನು ಹೊಂದಿರುವ ಸೂಪರ್ ಹೆವಿ ಬೂಸ್ಟರ್‌ನಿಂದ ನಡೆಸಲ್ಪಡುವ ಸ್ಟಾರ್‌ಶಿಪ್, ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆ ಬಳಿಯಿರುವ ಅದರ ಸ್ಟಾರ್‌ಬೇಸ್ ಸೌಲಭ್ಯದಲ್ಲಿರುವ ಸ್ಪೇಸ್‌ಎಕ್ಸ್‌ನ ಲಾಂಚ್‌ಪ್ಯಾಡ್‌ನಿಂದ ಸಂಜೆ 6:30 ಕ್ಕೆ ಯಶಸ್ವಿಯಾಗಿ ಉಡಾವಾಣೆ ಮಾಡಲಾಗಿತ್ತು. ಆದರೆ ಕಾರ್ಯಾಚರಣೆಯ ಸುಮಾರು ಒಂಬತ್ತು ನಿಮಿಷಗಳ ನಂತರ, ಅದು ತನ್ನ ಸಂಪರ್ಕವನ್ನು ಕಳೆದುಕೊಂಡು ಸ್ಫೋಟ ಗೊಂಡಿದೆ.
ಬಾಹ್ಯಾಕಾಶ ನೌಕೆಯಲ್ಲಿ ಯಾವುದೇ ಗಗನಯಾತ್ರಿಗಳು ಇರಲಿಲ್ಲ ಎಂದು ಸ್ಪೇಸ್ ಎಕ್ಸ್ ದೃಢಪಡಿಸಿದೆ. ಮೂಲ ಕಾರಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇಂದಿನ ಹಾರಾಟ ಪರೀಕ್ಷೆಯ ಡೇಟಾವನ್ನು ನಾವು ಪರಿಶೀಲಿಸುತ್ತೇವೆ ಎಂದು ಸಂಸ್ಥೆ ಪೋಸ್ಟ್ ಮಾಡಿದೆ. ಉಡಾವಣೆಯ ಸ್ವಲ್ಪ ಸಮಯದ ನಂತರ, ಬಾಹ್ಯಾಕಾಶ ಉಡಾವಣಾ ಅವಶೇಷಗಳ ಕಾರಣದಿಂದಾಗಿ ಗುರುವಾರ ಸಂಜೆ ಒರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಪಾಮ್ ಬೀಚ್, ಮಿಯಾಮಿ ಮತ್ತು ಫೋರ್ಟ್ ಲಾಡರ್‌ಡೇಲ್‌ಗಳಲ್ಲಿ ನಿಲುಗಡೆ ಮಾಡಲಾಗಿದೆ.
