ಹೋಟೆಲ್‍ಗಳಲ್ಲಿ ನೀರಿನ ಬಗ್ಗೆ ಅರಿವು ಮೂಡಿಸಲಿ

 

     ಹೋಟೆಲ್‍ಗಳಲ್ಲಿಯೂ ನೀರನ್ನು ಯಥೇಚ್ಛವಾಗಿ ಖರ್ಚು ಮಾಡಲಾಗುತ್ತದೆ. ಹೋಟೆಲ್ ಒಳಗೆ ಪ್ರವೇಶಿಸಿದ ಗ್ರಾಹಕರೆಲ್ಲರಿಗೂ ನೀರಿನ ಮಿತ ಬಳಕೆಯ ಅರಿವು ಇರುವುದಿಲ್ಲ. ತಿಂಡಿ ತಿನ್ನಲು, ಊಟ ಮಾಡಲು ಹೋಟೆಲ್‍ಗಳಿಗೆ ತೆರಳಿದಾಗ ನಾವು ಹಣ ಪಾವತಿಸಿದ್ದೇವೆ ಎಂಬುದಷ್ಟೇ ಅರಿವಿರುತ್ತದೆ. ಊಟ ಮಾಡುವಾಗ ನೀರಿನ ಮಿತ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. 

      ಟೇಬಲ್ ಮೇಲೆ ಸಪ್ಲೆಯರ್ ನೀರು ತಂದಿಡುತ್ತಾನೆ. ಅರ್ಧ ನೀರು ಕುಡಿದು ಮತ್ತರ್ಧ ಲೋಟ ಹಾಗೆಯೇ ಉಳಿಸುತ್ತೇವೆ. ಇದಕ್ಕೆ ಬದಲಾಗಿ ನೀರು ಕೊಡುವಾಗಲೇ ಎಷ್ಟು ಬೇಕು ಎಂಬುದನ್ನು ಕೇಳಿ ಪಡೆಯುವ ಮಟ್ಟಕ್ಕೆ ನಾವು ಬೆಳೆಯಬೇಕು. ಒಂದು ಲೋಟ ನೀರಿನಿಂದ ಏನಾಗುತ್ತದೆ ಎಂದು ಯಾರಾದರೂ ಪ್ರಶ್ನಿಸಬಹುದು. ಒಂದು ಹೋಟೆಲ್‍ಗೆ ಒಂದು ದಿನಕ್ಕೆ ಸರಾಸರಿ 100 ಜನ ಆಗಮಿಸುತ್ತಾರೆ ಎಂದೇ ಇಟ್ಟುಕೊಳ್ಳೋಣ.

      ಇಷ್ಟೂ ಜನ ಅರ್ಧ ಲೋಟ ನೀರು ವೇಸ್ಟ್ ಮಾಡಿದರೆ ಎಷ್ಟು ಲೀಟರ್ ನೀರು ವ್ಯಯವಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಒಂದು ಹೋಟೆಲ್‍ನಲ್ಲಿ 100 ಜನ ಆದರೆ ಒಂದು ನಗರದಲ್ಲಿ ಎಷ್ಟು ಹೋಟೆಲ್‍ಗಳಿರುತ್ತವೆ. ಆ ಸಂಖ್ಯೆಗನುಗುಣವಾಗಿ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ನೀರು ವ್ಯಯವಾಗುತ್ತಾ ಹೋಗುತ್ತದೆ.

     ಕೆಲವೊಮ್ಮೆ ಕಾಫೀ, ಟೀ ಕುಡಿಯಲು ಹೋಗಿರುತ್ತಾರೆ. ಸ್ನೇಹಿತರು ಸಿಕ್ಕಿದಾಗ ಅಥವಾ ಟೈಂ ಪಾಸ್ ಗಾಗಿಯೋ, ಅಭಿರುಚಿಗಾಗಿಯೋ ಒಟ್ಟಾರೆ ಕಾಫೀ, ಟೀ ಮನುಷ್ಯರಿಗೆ ಒಗ್ಗಿ ಹೋಗಿದೆ. ಕಚೇರಿ ಕಾರ್ಯಗಳಿಗೆ ತೆರಳುವವರು ಬೆಳಗಿನ ಒಂದು ವೇಳೆ, ಸಂಜೆಯ ಒಂದು ವೇಳೆ ಚಹಾಗಾಗಿ ಪಕ್ಕದ ಹೋಟೆಲ್‍ಗಳಿಗೆ ಹೋಗುವುದು ವಾಡಿಕೆ. ಅಲ್ಲಿನ ಸಪ್ಲೈಯರ್ ಕುಡಿಯುವ ನೀರಿನ ಲೋಟ ತಂದಿಡುತ್ತಾನೆ. ನಮಗೆ ನೀರು ಕುಡಿಯಲು ಇಷ್ಟ ಇರುವುದಿಲ್ಲ ಅಥವಾ ಮನೆಯ ಹೊರಗೆ ನೀರು ಕುಡಿಯಲು ಕೆಲವರು ಒಪ್ಪುವುದಿಲ್ಲ.

       ಆದರೂ ಟೇಬಲ್ ಮೇಲೆ ನೀರು ಇಟ್ಟಾಗ ಮೌನವಾಗಿಯೇ ಇರುತ್ತೇವೆ. ನೀರು ಬೇಡ ಎಂದು ಹೇಳುವುದೇ ಇಲ್ಲ. ಟೀ ಕುಡಿದು ನೀರಿನ ಲೋಟ ಹಾಗೆಯೇ ಬಿಟ್ಟು ತೆರಳುತ್ತೇವೆ. ಅಷ್ಟು ನೀರು ವ್ಯಯವಾಗಿ ಹೋಗುತ್ತದೆ. ಟೇಬಲ್ ಸ್ವಚ್ಛ ಮಾಡುವವನು ತಿಂಡಿ ತಟ್ಟೆಯ ಜೊತೆಗೆ, ಕಾಫೀ, ಟೀ ಲೋಟಗಳ ಜೊತೆಗೆ ನೀರಿನ ಲೋಟವನ್ನು ಎತ್ತಿ ಒಯ್ಯುತ್ತಾನೆ. ಅಲ್ಲಿಗೆ ಅಷ್ಟು ನೀರು ವ್ಯಯವಾದಂತೆ.

      ಇತ್ತೀಚಿನ ದಿನಗಳಲ್ಲಿ ಹೋಟೆಲ್‍ಗಳಲ್ಲಿ ತಟ್ಟೆಯಲ್ಲಿ ಕೈತೊಳೆದುಕೊಳ್ಳುವ ಬದಲು ಪ್ರತ್ಯೇಕವಾಗಿ ಇರುವ ವಾಶ್ ಬೇಸಿನ್‍ಗಳನ್ನು ಅಳವಡಿಸಲಾಗುತ್ತಿದೆ. ಉಪಹಾರದ ನಂತರ ಅಲ್ಲಿಯೇ ಕೈತೊಳೆಯಲಾಗುತ್ತದೆ. ಇಲ್ಲಿ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರವೇ ಉಪಯೋಗಿಸುವುದು ಒಳ್ಳೆಯದು. ಕೆಲವರು ನೀರಿನ ಅರಿವೇ ಇಲ್ಲದೆ ವಿನಾಕಾರಣ ನೀರು ಪೋಲಾಗುವಂತೆ ಮಾಡುತ್ತಾರೆ. ಲೀಟರ್‍ಗಟ್ಟಲೆ ನೀರು ನಲ್ಲಿಯಿಂದ ವಾಶ್ ಬೇಸಿನ್‍ಲ್ಲಿ ಹರಿದು ಹೋಗುತ್ತದೆ. ಕೈತೊಳೆಯಲು ಎಷ್ಟು ನೀರು ಬೇಕು? ಎಷ್ಟನ್ನು ಮಾತ್ರವೇ ಉಪಯೋಗಿಸಬೇಕು ಎಂಬ ಬಗ್ಗೆ ಅರಿವು ಇರುವುದು ಅಗತ್ಯ.

        ಇತ್ತೀಚಿನ ದಿನಗಳಲ್ಲಿ ಹೋಟೆಲ್ ತಿಂಡಿ, ತಿನಿಸು ದುಬಾರಿಯಾಗುತ್ತಿದೆ. ಎಲ್ಲ ಖರ್ಚುಗಳನ್ನು ಗ್ರಾಹಕರ ತಲೆಯ ಮೇಲೆ ಹಾಕಲಾಗುತ್ತದೆ. ಇಂತಹ ಹೋಟೆಲ್‍ಗಳಿಗೆ ಹೋಗಿ ದುಬಾರಿ ಹಣ ತೆತ್ತು ಬರುವಾಗ ಕೆಲವರಿಗೆ ಮನಸ್ಸು ಒಪ್ಪುವುದಿಲ್ಲ. ಅಂತಹವರು ನೀರನ್ನು ವೇಸ್ಟ್ ಮಾಡುವುದು ಒಂದು ಸಣ್ಣ ಲಕ್ಷಣವೇ ಆಗಿರುತ್ತದೆ. ಎಲ್ಲರೂ ಈ ರೀತಿ ಮಾಡಲಾರರು. ನೀರಿನ ಪ್ರಜ್ಞೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಇದೆ. ಆದರೆ ಕೆಲವೇ ಮಂದಿ ಹೀಗೆ ನೀರು ಪೋಲು ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ.

       ನೀರಿನ ಮಹತ್ವ ಮೂಡಿಸಬೇಕಾದುದು ಹೋಟೆಲ್‍ಗಳ ಹೊಣೆಗಾರಿಕೆಯೂ ಹೌದು. ದರಪಟ್ಟಿಯನ್ನು ಪ್ರಕಟಿಸಿದಂತೆಯೇ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವತ್ತ ಹೋಟೆಲ್‍ಗಳು ಹೆಜ್ಜೆ ಇಡಬೇಕಾಗಿದೆ. ಗ್ರಾಹಕರು ಏನಾದರೂ ಅಂದುಕೊಳ್ಳಲಿ. ಆದರೆ ನೀರನ್ನು ಮಿತವಾಗಿ ಬಳಸಿ ಎಂಬಂತಹ ಸ್ಲೋಗನ್‍ಗಳುಳ್ಳ ಬರಹಗಳು ಹೋಟೆಲ್ ಗೋಡೆಗಳಲ್ಲಿ ಕಾಣಿಸುವಂತೆ ಪ್ರಕಟಿಸುವುದು ಒಳಿತು. ನೀರಿನ ತೀವ್ರತೆಯ ಬಗ್ಗೆ ಗಮನ ಸೆಳೆಯುವ ಪೋಸ್ಟರ್‍ಗಳನ್ನು ಅಂಟಿಸಿದರೆ ಇನ್ನೂ ಹೆಚ್ಚು ಅನುಕೂಲ.

       ಕೊನೆಯದಾಗಿ ಒಂದು ಮಾತು. ಯಾರೂ ಸಹ ಸುಖಾಸುಮ್ಮನೆ ನೀರನ್ನು ವೇಸ್ಟ್ ಮಾಡಲು ಹೋಗುವುದಿಲ್ಲ. ಆದರೆ ಎಷ್ಟು ನೀರನ್ನು ಖರ್ಚು ಮಾಡಬೇಕು ಎಂಬ ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಅಂತಹವರಿಗೆಲ್ಲ ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸುವುದೊಂದೇ ಇರುವ ದಾರಿ. ಇದು ಎಲ್ಲರಿಂದಲೂ ಆಗಬೇಕಿದೆ. ಹೋಟೆಲ್‍ಗಳಲ್ಲಿ ಅಥವಾ ಎಲ್ಲಿಯೇ ಆಗಲಿ ನೀರನ್ನು ಕುಡಿದು ಹಾಗೆಯೇ ಅರ್ಧ ಬಿಟ್ಟು ಹೋಗದಂತೆಯೂ ಪ್ರಕಟಣಾ ಫಲಕಗಳು ಪ್ರದರ್ಶಿಸಲಿ. ಅರಿವಿನ ಜಾಗೃತಿಯ ಮೂಲಕ ಮನಸ್ಸನ್ನು ಪರಿವರ್ತನೆ ಮಾಡಲು ಸಾಧ್ಯವಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap