ಮದ್ದಿಲ್ಲದ ಮಾರಕ ವೈರಸ್ ಕೊರೋನಾ: ಜೋಕೆ!

ವಿಶೇಷ ವರದಿ :-ಯೋಗೇಶ್ ಮಲ್ಲೂರು
    ಕೊರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಡೆಡ್ಲಿ ವೈರಸ್ ಹಾಗೂ ಇಡೀ ಜಗತ್ತನ್ನೇ ಆಪೋಷಣೆ ಪಡೆಯಲು ಹೊಂಚು ಹಾಕಿ ಕಾಯುತ್ತಾ ಕುಳಿತಿರುವ ಒಂದು ಸಾಂಕ್ರಾಮಿಕ ಮಾರಕ ಕಾಯಿಲೆ ಎನ್ನಬಹುದು. ಈ ಭಯಾನಕ ವೈರಸ್ ಭಾರತದಲ್ಲಿ ಅಷ್ಟಾಗಿ ಕಂಡು ಬಂದಿಲ್ಲವಾದರೂ ನೆರೆ ರಾಷ್ಟ್ರ ಚೀನಾದಲ್ಲಿ ಇದು ತನ್ನ ಅಟ್ಟಹಾಸವನ್ನು ಮೆರೆದಿದೆ.
    ಭಾರತಕ್ಕೆ ಚೀನಿಗರ ಬಳುವಳಿಯಂತೆ ಇದೀಗ ವೈರಸ್ ಭಾರತಕ್ಕೂ ದಾಪುಗಾಲಿಡುತ್ತಿದೆ. ಚೀನಾದಲ್ಲಿ ಸುಮಾರು 560 ಜನರಿಗೆ ಈಗಾಗಲೇ ಕೊರೋನಾ ವೈರಸ್ ತನ್ನ ಪ್ರಭಾವವನ್ನು ತೋರಿ ಸ್ವರ್ಗದ ಬಾಗಿಲು ತಟ್ಟಿಸಿದೆ. ಭಾರತದ ಅಲ್ಲಲ್ಲಿ ಇತ್ತೀಚೆಗೆ ಒಂದೊಂದೇ ಪ್ರಕರಣಗಳು ದಾಖಲಾಗುತ್ತಿವೆ. ಇದೊಂದು ಸಾಂಕ್ರಾಮಿಕ ಜಾತಿಗೆ ಸೇರಿದ ವೈರಸ್ ಆಗಿರುವುದರಿಂದ ನಮ್ಮ ಸುತ್ತಮುತ್ತಲಿರುವ ಜನರ ನಡುವೆ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಇರುವುದು ಉತ್ತಮ. 
ಏನಿದು ಕೊರೋನಾ ವೈರಸ್?
    ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೋನ ವೈರಸ್ ಕೇವಲ ಸಣ್ಣ ಶೀತ ಮತ್ತು ನೆಗಡಿಯಿಂದ ಪ್ರಾರಂಭವಾಗಿ ಶ್ವಾಸಕೋಶಕ್ಕೆ ತೊಂದರೆ ಉಂಟು ಮಾಡುವ ವೈರಸ್‍ಗಳ ಜಾತಿಗೆ ಸೇರಿದ್ದು,  ಈ ವೈರಸ್‍ಗಳು ಸಹಜವಾಗಿಯೇ ಪ್ರಾಣಿಗಳಿಂದ ಮನುಷ್ಯರಿಗೆ ವರ್ಗಾವಣೆಗೊಳ್ಳುತ್ತವೆ ಎಂದು ಹೇಳಲಾಗಿದೆ. 
    ಮೊಟ್ಟ ಮೊದಲನೆಯದಾಗಿ ಈ ವೈರಸ್‍ನ ಮೂಲ ಸ್ಥಾನ ಚೀನ ದೇಶದ ವುಹಾನ್ ಎಂಬ ಪ್ರದೇಶದ ಸಮುದ್ರಾಹಾರ ಮಾರುಕಟ್ಟೆ. ಆದ್ದರಿಂದಲೇ ಇದಕ್ಕೆ ಕೊರೋನಾ ವೈರಸ್ ಎಂಬ ಹೆಸರಿದೆ. ಇಲ್ಲಿಂದ ಪ್ರಾರಂಭಗೊಂಡ ವೈರಸ್ ದಾಳಿ ಕೇವಲ ಕೆಲವೇ ದಿನಗಳಲ್ಲಿ ಮನುಷ್ಯನ ದೇಹ ಸೇರಿ ದ್ವಿಗುಣಗೊಂಡು ಇತರರಿಗೂ ಹರಡಿ ಈಗ ನೆರೆ ರಾಷ್ಟ್ರಗಳಿಗೂ ತನ್ನ ರುಚಿ ತೋರಿಸಿದೆ. 
    ಈ ಕಾಯಿಲೆಯ ಲಕ್ಷಣಗಳು ಥೇಟ್ ನ್ಯೂಮೋನಿಯ ರೋಗದ ಲಕ್ಷಣಗಳನ್ನು ಹೋಲುವಂತಿದ್ದು, ಜ್ವರ, ಕೆಮ್ಮು, ಶೀತ, ಉಸಿರುಗಟ್ಟಿದಂತಾಗುವುದು ಮತ್ತು ಉಸಿರಾಡಲು ಕಷ್ಟವಾಗುವುದು. ಈ ವೈರಸ್‍ನ ಗುಣ ಲಕ್ಷಣಗಳು ಇಷ್ಟಕ್ಕೇ ನಿಲ್ಲದೆ ಸಂಪೂರ್ಣ ಶ್ವಾಸಕೋಶವನ್ನು ಆವರಿಸುತ್ತವ. ಆದರೆ ಇದುವರೆಗೂ ಯಾವ ರೋಗಿಗಳಿಗೂ ಗಂಟಲು ನೋವು ಕಾಣಿಸಿಕೊಂಡಿಲ್ಲ. ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ಈ ವೈರಸ್ ದಾಳಿಗೆ ಬಲಿಯಾಗಿರುವವರು ನ್ಯೂಮೋನಿಯ ರೋಗಕ್ಕೂ ತುತ್ತಾಗಿದ್ದಾರೆ. ಜೊತೆಗೆ severe acute respiratory syndrome ಗುಣ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ನೀಡಿದೆ.
ವುಹಾನ್ ಕೊರೋನಾ ವೈರಸ್‍ಗೆ ಚಿಕಿತ್ಸೆ :
     ಸಾಮಾನ್ಯವಾಗಿ ಇದುವರೆಗೂ ಈ ವೈರಸ್ ದಾಳಿಯಿಂದ ಬರುವ ರೋಗಕ್ಕೆ ಯಾವುದೇ ಔಷಧಿ ಇಲ್ಲ. ಕೇವಲ ತಡೆಗಟ್ಟುವಿಕೆ ಒಂದೇ ನಮ್ಮ ನಿಮ್ಮೆಲ್ಲರಿಗೂ ಉಳಿದಿರುವ ಮಾರ್ಗ. ವೈರಸ್ ಪೀಡಿತ ರೋಗಿಯನ್ನು ಇತರ ಜನರಿಂದ ಬೇರ್ಪಡಿಸಿ ಚಿಕಿತ್ಸೆ ಒದಗಿಸಬಹುದು ಅಷ್ಟೇ. ಇದು ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾದ ಕಾಯಿಲೆಯಾಗಿದೆ ಇರುವುದರಿಂದ ಇಲ್ಲಿ ಆಂಟಿ ಬಯೋಟಿಕ್ ಔಷಧಿಗಳು ಕೆಲಸ ಮಾಡುವುದಿಲ್ಲ.
    ಜ್ವರಕ್ಕೆ ಪ್ಯಾರಸಿಟಮಾಲ್ ಔಷಧವನ್ನು ತೆಗೆದುಕೊಳ್ಳಬಹುದು. ವೈದ್ಯರೂ ಸಹ ಕೇವಲ ಈ ಕಾಯಿಲೆಯ ಗುಣ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಅಷ್ಟೇ. ಸಂಪೂರ್ಣ ಕಾಯಿಲೆಯನ್ನು ವಾಸಿ ಮಾಡುವ ಔಷಧಿಯು ಇನ್ನೂ ತಯಾರಾಗಿಲ್ಲ. ಕಾಯಿಲೆ ವಿಪರೀತವಾದಾಗ ರೋಗಿಗೆ ಲೈಫ್ ಸಪೆÇೀರ್ಟ್‍ನ ಅವಶ್ಯಕತೆ ಉಂಟಾಗಬಹುದು. ಕೊನೆಯ ಕ್ಷಣಗಳಲ್ಲಿ ವುಹಾನ್ ಕೊರೋನ ವೈರಸ್ ಮೂತ್ರ ಪಿಂಡಗಳ ಹಾನಿ ಉಂಟು ಮಾಡಿ ಕೊನೆಗೆ ಸಾವನ್ನು ತಂದೊಡ್ಡಬಹುದು ಈ ನಿಟ್ಟಿನಲ್ಲಿ ಸಂಶೋಧಕರು ಇದಕ್ಕೆ ಔಷಧಿ ಕಂಡು ಹಿಡಿಯುವ ಹಾದಿಯಲ್ಲಿ ಹಗಲಿರುಳು ಶ್ರಮ ವಹಿಸುತ್ತಿದ್ದಾರೆ.
ವೈರಸ್‍ಗೆ ಕೆಲವು ಎಚ್ಚರಿಕೆ ಕ್ರಮಗಳು: 
    ನೆರೆಯ ಚೀನಾ ರಾಷ್ಟ್ರದಲ್ಲಿ ಈಗಾಗಲೇ ಸರಿ ಸುಮಾರು 560 ಕ್ಕೂ ಹೆಚ್ಚು ಮಂದಿ ಬಲಿ ಪಡೆದಿರುವ ಈ ಮಾರಕ ಕಾಯಿಲೆ ಸುಮಾರು 28,018 ಜನರಿಗೆ ತಗುಲಿದೆ. ಇದು ತನ್ನ ಇರುವಿಕೆಯನ್ನು ಸಾಬೀತು ಪಡಿಸಲು ಇತರ ರಾಷ್ಟ್ರಗಳಿಗೂ ಹಬ್ಬುತ್ತಲೇ ಇದೆ. ಮೊದಲು ಪ್ರಾಣಿಗಳಿಂದ ಮನುಷ್ಯರಿಗೆ ಈ ವೈರಸ್ ವರ್ಗಾವಣೆಯಾಗುತ್ತದೆ ಎಂದು ಸೂಚಿಸಿದ್ದ ವಿಜ್ಞಾನಿಗಳು ಈಗಿನ ಬೆಳವಣಿಗೆಯನ್ನು ಗಮನಿಸಿ ಮನುಷ್ಯರಿಂದ ಮನುಷ್ಯರಿಗೆ ಈ ವೈರಸ್ ವರ್ಗಾವಣೆಗೊಂಡು ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದ್ದಾರೆ. ಒಂದು ಆಶ್ಚರ್ಯಕರ ವಿಷಯವೆಂದರೆ ಈ ರೋಗದ ಯಾವುದೇ ಗುಣ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಗಳಲ್ಲಿ ಕೂಡ ಕೊರೊನ ವೈರಸ್ ಪತ್ತೆಯಾಗಿದೆ.
ಸಿವಿಟ್ ಬೆಕ್ಕು ಮತ್ತು ನಾಯಿಮರಿಗಳಿಂದ ಮನುಷ್ಯರಿಗೆ ಹರಡುವುದು ದಿಟವೇ?
    ಕೊರೋನಾ ವೈರಸ್ ಸಿವಿಟ್ ಬೆಕ್ಕುಗಳು ಹಾಗೂ ನಾಯಿಮರಿಗಳಿಂದ ಹರಡುತ್ತದೆಂದು ಹಲವು ವೈದ್ಯಕೀಯ ಮೂಲಗಳು ಹೇಳುತ್ತಿವೆ. ಇವೆರಡರಿಂದಷ್ಟೇ ಅಲ್ಲದೆ ಇನ್ನೂ ಹಲವು ಪ್ರಾಣಿ ಹಾಗೂ ಪಕ್ಷಿಗಳಿಗೆ ಹರಡಿ ನಂತರ ಮನುಷ್ಯನಿಗೆ ತಗುಲುತ್ತದೆ ಎನ್ನಲಾಗಿದೆ. ಮನುಷ್ಯನಿಗೆ ಇದು ಸಂಪೂರ್ಣವಾಗಿ ದೇಹವನ್ನು ಆವರಿಸಿಕೊಳ್ಳಲು 14 ದಿನಗಳ ಕಾಲಮಿತಿ ಇರುತ್ತದೆ. ಈ ವೈರಸ್‍ನ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆ ಹಾಕಲು ವಿಶ್ವ ಆರೋಗ್ಯ ಸಂಸ್ಥೆ ಕೆಲವೊಂದು ಮೂಲ ಮಾರ್ಗಸೂಚಿಗಳನ್ನೂ ಸಹ ಹೊರತಂದಿದೆ.  
ಸೋಂಕುಳ್ಳು ಪ್ರಾಣಿಗಳನ್ನು ತಿನ್ನುವ ಮನುಷ್ಯನಿಗೆ ಹರಡುತ್ತೇ!
   ಕೊರೊನಾ ವೈರಸ್ ಸಾಮಾನ್ಯವಾಗಿ ನಾಯಿ, ಬೆಕ್ಕುಗಳು, ಹಾವು, ಹಂದಿ, ಬಾವಲಿ ರೀತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸಮುದ್ರದ ಆಹಾರವನ್ನು ಮಾರಾಟ ಮಾಡಲಾಗುವ ಹ್ಯೂನಾನ್ ಸಮುದ್ರ ಆಹಾರ ಮಾರುಕಟ್ಟೆಯಿಂದ ಪ್ರಸ್ತುತ ಈ ಸೋಂಕು ಹರಡುತ್ತಿದೆ ಎಂದು ಚೀನಾದ ಜನರು ನಂಬಿದ್ದಾರೆ. ಹೀಗಾಗಿ ಹೊಸ ವರ್ಷದಿಂದಲೇ ಹ್ಯೂನಾನ್ ಮಾರುಕಟ್ಟೆಯನ್ನು ರದ್ದುಗೊಳಿಸಲಾಗಿದ್ದು, ವೈರಸ್ ಸೋಂಕು ತಗುಲಿರುವ ಪ್ರಾಣಿಗಳನ್ನು ಚೀನಾದ ಜನರು ಸೇವಿಸುವುದರಿಂದ ವೈರಸ್‍ನ ಸೋಂಕು ಮನುಷ್ಯನ ದೇಹ ಹರಡಿ ನಂತರ ಮನುಷ್ಯನಿಂದ ಮನುಷ್ಯರಿಗೆ ಹರಡಲು ಪ್ರಾರಂಭವಾಗುತ್ತದೆ.
ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡಿ:
   ಯಾವುದೇ ಒಂದು ಸಾಂಕ್ರಾಮಿಕ ಕಾಯಿಲೆಯನ್ನು ಬರದಂತೆ ತಡೆಯಲು ಕೈಗೊಳ್ಳಬೇಕಾದ ಮೊದಲ ಕ್ರಮ ಎಂದರೆ ಅದು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡುವುದು. ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆಗೆ ನಾವೂ ಕೂಡ ಸ್ವಚ್ಛವಾಗಿರುವುದು ಬಹು ಮುಖ್ಯ. ಮೊದಲು ನಿಮ್ಮ ಕೈಗಳನ್ನು ಬಿಸಿ ನೀರಿನಿಂದ ಮತ್ತು ಸೋಪು ಉಪಯೋಗಿಸಿ ಚೆನ್ನಾಗಿ ತೊಳೆದುಕೊಳ್ಳಿ. ಕೇವಲ ಊಟ ಮಾಡುವ ಅಥವಾ ತಿಂಡಿ ತಿನ್ನುವ ಮುಂಚೆ ಈ ಕೆಲಸವನ್ನು ಸೀಮಿತಗೊಳಿಸದೆ ಆದಷ್ಟು ಪ್ರತಿ ಬಾರಿ ಆಗಾಗ ಕೈ ತೊಳೆದುಕೊಳ್ಳಿ. ಇದು ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ಮೊದಲ ಪರಿಹಾರವಾಗಿದೆ. 
ಜನ ಜಂಗುಳಿಯಿಂದ ದೂರವಿರಿ: 
   ಇದು ನೀವು ಅನುಸರಿಸಲೇಬೇಕಾದ ಎರಡನೇ ಪರಿಹಾರ ಮಾರ್ಗವೆಂದರೆ ವಿಜ್ಞಾನಿಗಳು ಸೂಚಿಸಿರುವಂತೆ ಕೊರೋನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ಲಕ್ಷಣವಾದ್ದರಿಂದ ನಮ್ಮ ಸುತ್ತ ಮುತ್ತ ಓಡಾಡುವ ಜನರಲ್ಲಿ ಯಾರಿಗೆ ಈ ವೈರಸ್ ಈಗಾಗಲೇ ತಗುಲಿದೆ ಎಂದು ಕಂಡು ಹಿಡಿಯುವುದು ಕಷ್ಟ. ಹೊರಗಡೆ ಮಾರುಕಟ್ಟೆ, ಶಾಪಿಂಗ್ ಮಾಲ್, ಸಿನಿಮಾ, ಪಾರ್ಟಿ, ಹೋಟೆಲ್ ಎಂಬಿತ್ಯಾದಿ ಪ್ರದೇಶಗಳಿಗೆ ಹೊರಡುವ ಮುಂಚೆ ಮುಖಕ್ಕೆ ಮಾಸ್ಕ್ ಧರಿಸಿ ಪ್ರಯಾಣಿಸಲು ಸಿದ್ದರಾಗಿ. ಇದು ನಿಮಗೆ ರಕ್ಷಣೆ ನೀಡುತ್ತದೆ ಮತ್ತು ಮನೆಗೆ ಬಂದ ನಂತರ ಮೊದಲು ನಿಮ್ಮ ಬಟ್ಟೆಗಳನ್ನು ಬದಲಿಸಿ ಅವುಗಳನ್ನು ವಾಶ್ ಮಾಡಿ ಜೊತೆಗೆ ನೀವು ಕೂಡ ನಿಮ್ಮ ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
ಜ್ವರ ಮತ್ತು ಕೆಮ್ಮು ಹೊಂದಿರುವವರಿಂದ ಅಂತರವಿರಲಿ:  
   ಒಂದು ವೇಳೆ ಯಾರಿಗಾದರೂ ಜ್ವರ ಅಥವಾ ಉಸಿರಾಟದ ತೊಂದರೆ ಇರುವುದು ನಿಮ್ಮ ಗಮನಕ್ಕೆ ಬಂದರೆ ಆದಷ್ಟು ಅವರಿಂದ ದೂರ ಇರುವುದು ಒಳ್ಳೆಯದು. ಇದು ವೈರಲ್ ಕಾಯಿಲೆ ಆಗಿರುವುದರಿಂದ ಸೋಂಕಿತ ವ್ಯಕ್ತಿಯ ಜೊತೆಗಿನ ಹತ್ತಿರದ ಸಂವಹನ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ನಿರ್ದಿಷ್ಟವಾಗಿ ಯಾರಿಗೆ ವುಹಾನ್ ಕೊರೋನ ವೈರಸ್ ತಗುಲಿದೆ ಎಂದು ಗೊತ್ತಿಲ್ಲದೇ ಇರುವುದರಿಂದ ಯಾವ ಜನರು ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರೋ ಅವರಿಂದ ದೂರವಿರುವುದು ಒಳಿತು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕೈವಸ್ತ್ರ ಬಳಸುವುದು ಉತ್ತಮ.
ಅರ್ಧಂಬರ್ಧ ಬೇಯಿಸಿದ ಮಾಂಸ ತಿನ್ನಬೇಡಿ: 
   ಕೆಲವು ಮಾಂಸಹಾರಿಗಳು ಅರ್ಧಂಬರ್ಧ ಬೇಯಿಸಿದ ಮಾಂಸ ಅಥವಾ ಬೇಯಿಸದೇ ಇರುವ ಮಾಂಸವನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಅಭ್ಯಾಸ ಈಗ ಬೇಡ. ಯಾವುದೇ ಮಾಂಸ ಅಥವಾ ಪೌಲ್ಟ್ರಿ ಉತ್ಪನ್ನಗಳನ್ನು ಚೆನ್ನಾಗಿ ಬೇಯಿಸಿ ನಂತರ ಸೇವಿಸಬೇಕು. ಅಹಂಕಾರ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಮಾಂಸಗಳನ್ನು ಶುಚಿ ಮಾಡದೆ ತಿನ್ನಬಾರದು. ವಿಶೇಷವಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಿದೇಶಿ ಮಾಂಸವನ್ನು ಮುಟ್ಟಲೇಬಾರದು. ಏಕೆಂದರೆ ಈ ಕಾಯಿಲೆ ಪ್ರಾಣಿಗಳಿಂದ ಮನುಷ್ಯರು ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುವ ವಿಶೇಷ ಸಾಂಕ್ರಾಮಿಕ ರೋಗ. ಆದ್ದರಿಂದ ತಿಂದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ ಮೊದಲೇ ಎಚ್ಚರಿಕೆ ವಹಿಸಬೇಕಾಗಿದೆ.
ಕೊರೊನಾ ವೈರಸ್ ಪ್ರಕರಣಗಳು:
   ಇತ್ತೀಚಿನವರೆಗೂ ಸುಮಾರು 15 ದೇಶಗಳಲ್ಲಿ ಕೊರೋನ ವೈರಸ್ ಹರಡಿದ್ದು ಸುಮಾರು 20,629 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 2,790 ಪ್ರಕರಣಗಳು ಗಂಭೀರ ಸ್ಥಿತಿಯಲ್ಲಿದ್ದು, ಈಗಾಗಲೇ 427 ಜನರು ಇದರಿಂದ ಸಾವನ್ನಪ್ಪಿದ್ದಾರೆ. ಇದರಿಂದ ಚೇತರಿಸಿಕೊಂಡ ಪ್ರಕರಣಗಳಲ್ಲಿ 658 ದಾಖಲಾಗಿವೆ.
ಭಾರತದಲ್ಲೂ ಕೊರೋನಾ ಆತಂಕ :
   ಭಾರತದಲ್ಲೂ ಕೊರೋನಾ ವೈರಸ್ ಭಾರೀ ಆತಂಕವನ್ನು ಹೆಚ್ಚಿಸಿದೆ. ಚೀನಾದಿಂದ ಹಿಂತಿರುಗಿದ್ದ ಕಾಸರಗೋಡಿನ ವೈದ್ಯಕೀಯ ವಿದ್ಯಾರ್ಥಿಯೊರ್ವನಿಗೆ ಸೋಂಕು ತಗುಲಿರುವುದು ಖಚಿತವಾಗಿ ಆತನನ್ನು ಕನ್ಹಗಡ ಜಿಲ್ಲಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‍ನಲ್ಲಿ ಸೇರಿಸಲಾಗಿದೆ. ಈ ಹಿಂದೆ ಸೋಂಕು ಖಚಿತಗೊಂಡಿರುವವರೂ ಚೀನಾದಿಂದ ವಾಪಸಾಗಿರುವವರಾಗಿದ್ದು,  ತಿರಚ್ಚೂರ್ ಮತ್ತು ಅಲಪ್ಪುಳ ಜಿಲ್ಲೆಗಳಿಗೆ ಸೇರಿದ್ದಾರೆ. 
   ಕೇರಳದಲ್ಲಿ ಚೀನಾ ಮತ್ತಿತರೆ ಕೊರೊನಾ ವೈರಸ್ ಪೀಡಿತ ದೇಶಗಳಿಂದ ಹಿಂತಿರುಗಿರುವ 1999 ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ. ಚೀನಾದಲ್ಲಿಯೇ ವೈರಸ್ ಸೋಂಕಿಗೆ ಇದುವರೆಗೆ 361 ಜನ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 17,205ಕ್ಕೆ ಹೆಚ್ಚಳಗೊಂಡಿದೆ. ಭಾರತ, ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಜಪಾನ್, ರಷ್ಯಾ, ಸ್ಪೈನ್, ಥೈಲ್ಯಾಂಡ್, ಅಮೆರಿಕ ಸೇರಿದಂತೆ ಸುಮಾರು 14 ದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.
   ವುಹಾನ್‍ನಿಂದ ಇದುವರೆಗೆ ಎರಡು ವಿಶೇಷ ವಿಮಾನಗಳಲ್ಲಿ ಅಲ್ಲಿದ್ದ ಸುಮಾರು 600 ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಆದರೆ ಈ ಎರಡು ವಿಶೇಷ ವಿಮಾನಗಳಲ್ಲಿಯೂ ಜ್ವರದಿಂದ ಬಳಲುತ್ತಿದ್ದ ಆಂಧ್ರಪ್ರದೇಶ ಮೂಲದ ಮಹಿಳಾ ಟೆಕಿಯೊಬ್ಬರನ್ನು ಹತ್ತಿಸಿಕೊಳ್ಳದ ಘಟನೆ ನಡೆದಿದೆ. ಮಾರಣಾಂತಿಕ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ಚೀನಾಗೆ ಪ್ರವಾಸವನ್ನು ರದ್ದುಗೊಳಿಸುವಂತೆ ವಿದೇಶಾಂಗ ಸಚಿವಾಲಯ ನಾಗರಿಕರಿಗೆ ಸಲಹೆ ನೀಡಿದೆ. ಭಾರತದ ಏರ್ ಇಂಡಿಯಾ, ಇಂಡೋನೇಷ್ಯಾದ ಲಯನ್ ಏರ್, ಜರ್ಮನಿಯ ಲುಫ್ತಾನ್ಸಾ ಸೇರಿದಂತೆ ಅನೇಕ ವಾಯುಯಾನ ಸಂಸ್ಥೆಗಳು ಚೀನಾದ ಪ್ರಯಾಣಗಳನ್ನು ರದ್ದುಗೊಳಿಸಿವೆ. 
ಕರ್ನಾಟಕದಲ್ಲಿ ಕೊರೋನಾ ವೈರಸ್ :
   ಕೊರೋನಾ ವೈರಸ್ ಎಂಬ ಮಹಾಮಾರಿ ಈಗಾಗಲೇ ಕರ್ನಾಟಕದಲ್ಲಿ ತೀವ್ರ ಭೀತಿ ಹುಟ್ಟಿಸಿದೆ. ಇದು ಹುಬ್ಬಳ್ಳಿ ಮೂಲದ ಟೆಕ್ಕಿಗೆ ಹಾಗೂ ಕಾಸರಗೋಡಿ ತಗುಲಿರುವ ಶಂಕೆ ಮೂಡಿಸಿದ್ದು. ಇದು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಚೀನಾದ ವ್ಯಕ್ತಿಯೊಬ್ಬ ಕರ್ನಾಟಕದ ಹುಬ್ಬಳಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಸೋಂಕು ತಗುಲಿರುವುದರಿಂದ ಚಿಕಿತ್ಸೆಗೆ ಒಳಪಡಿಸಲಾಗಿದೆ. ಇದರಿಂದ ಕರ್ನಾಟಕಕ್ಕೂ ಡೆಡ್ಲಿ ವೈರಸ್ ಆಕ್ರಮಿಸಿದ್ದು, ಇದನ್ನು ನಿಯಂತ್ರಿಸಲು ಎಲ್ಲಾ ಕಡೆಗಳಲ್ಲಿ ನಿಗಾ ವಹಿಸಲಾಗುತ್ತಿದೆ. 
ಜಿಲ್ಲೆಯಲ್ಲೂ ಕೊರೋನಾ ಶಂಕೆ- ಮುಂಜಾಗೃತ ಕ್ರಮ
    ಜಿಲ್ಲೆಯಲ್ಲೂ ಕೊರೋನಾ ವೈರಸ್ ಶಂಕೆ ಕಂಡು ಬಂದಿದ್ದು, ಆದರೆ ಇನ್ನೂ ವೈದ್ಯಕೀಯ ಮೂಲಕಗಳಿಂದ ಖಚಿತವಾಗಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ನಿಟ್ಟಿನಲ್ಲಿ ಜನರಿಗೆ ಮುನ್ನೆಚ್ಚರಿಕೆ ಕ್ರಮ, ಮಾಹಿತಿ ಹಾಗೂ ಸಲಹೆಗಳನ್ನು ನೀಡಿ ನಗರದಲ್ಲಿ ಜಾಗೃತಿ ಜಾಥಾ ನಡೆಸಿ ಕರಪತ್ರಗಳನ್ನು ಹಂಚಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಹಾಸಿಗೆಯುಳ್ಳ ವಿಶೇಷವಾದ ವಾರ್ಡ್ ಒಂದನ್ನು ತೆರೆದು ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲವೂ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 
ವೈದ್ಯಕೀಯ ವಿದ್ಯಾರ್ಥಿಗೆ ಕೊರೊನಾ ಶಂಕೆ : -ve ರಿಪೋರ್ಟ್
     ಕಳೆದ 10ದಿನಗಳ ಹಿಂದಷ್ಟೇ ಚೀನಾದಿಂದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಜಿಲ್ಲೆಗೆ ವಾಪಸ್ ಆಗಿದ್ದು, ಆತನಿಗೆ ತೀವ್ರ ಶೀತ, ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಸಂಶಯಾತ್ಮಕ ಸೋಂಕಿನ ಶಂಕೆಯಿಂದ ಜಿಲ್ಲಾಸ್ಪತ್ರೆಯಲ್ಲಿ ವಿದ್ಯಾರ್ಥಿಯನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಿ ರಕ್ತ ಹಾಗೂ ಕಫ ಪರೀಕ್ಷೆ ಮಾಡಿಸಿ ಪುಣೆಗೆ ರಿಪೋರ್ಟ್ ಕಳುಹಿಸಿದ್ದರು. ಇದೀಗ ರಿಪೋರ್ಟ್ ಬಂದಿದ್ದು ವಿದ್ಯಾರ್ಥಿಗೆ ಯಾವುದೇ ರೀತಿಯ ಕೊರೊನಾ ವೈರಸ್ ಸೋಂಕು ಕಂಡು ಬಂದಿಲ್ಲದಿರುವುದು ಖಚಿತವಾಗಿದೆ. ಇದರಿಂದ ಜಿಲ್ಲೆಯ ಜನತೆ ಯಾವುದೇ ಆತಂಕಕ್ಕೆ ಒಳಪಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 
     ಜಿಲ್ಲಾದ್ಯಂತ ಕೊರೋನಾ ವೈರಸ್‍ಗೆ ಸಂಬಂಧಪಟ್ಟಂತೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಚೀನಾದಿಂದ ಜಿಲ್ಲೆಗೆ ಯಾವುದೇ ವ್ಯಕ್ತಿಗಳು ಬಂದರೂ ಬೆಂಗಳೂರಿನಿಂದ ನಮ್ಮ ಇಲಾಖೆಗೆ ಮಾಹಿತಿ ಬರುತ್ತದೆ. ಮಾಹಿತಿ ಮೇರೆಗೆ ಅಂತಹವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಮ್ಮಲ್ಲಿ ನಡೆಯುವ ಎಲ್ಲಾ ರೀತಿಯ ಪರೀಕ್ಷೆಗಳಲ್ಲಿಯೂ ರೋಗಿಗಳೂ ಮತ್ತು ವೈದ್ಯರು ಸರಿಯಾದ ಕ್ರಮದಲ್ಲಿ ಮಾಸ್ಕ್ ಮತ್ತು ಕೈವಸ್ತ್ರಗಳನ್ನು ಬಳಸುವ ಕಡ್ಡಾಯ ಹೇರಲಾಗಿದೆ. ಅಲ್ಲದೆ ಜನರಿಗೆ ಕೊರೋನಾ ವೈರಸ್ ಬಗ್ಗೆ ಮುಂಜಾಗೃತ ಮಾಹಿತಿ ನೀಡಿ, ಎಚ್ಚರಿಸುವ ಸಲುವಾಗಿ ಜಿಲ್ಲಾಸ್ಪತ್ರೆಯಿಂದ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಲಾಗಿದೆ. ಈ ಜಾಗೃತಿ ಜಾಥಾದಲ್ಲಿ ಕರಪತ್ರಗಳನ್ನು ಹಂಚಿದ್ದೇವೆ. ಇಲಾಖೆ ವತಿಯಿಂದ ವೈರಸ್ ಕುರಿತು ಇನ್ನೂ ಕೆಲವು ಗಂಭೀರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.  
ಡಾ. ಚಂದ್ರಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link