ಹುಬ್ಬಳ್ಳಿ:
ಸಾರ್ವಜನಿಕರ ಬೇಡಿಕೆಯ ಮೇರೆಗೆ ಮಹಾ ಶಿವರಾತ್ರಿ ಆಚರಣೆಗೆ ತೆರಳುವ ಭಕ್ತಾದಿಗಳು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಮಹಾ ಶಿವರಾತ್ರಿ ಆಚರಣೆಯ ಪ್ರಯುಕ್ತ ಶಿವರಾತ್ರಿ ಜಾಗರಣೆ, ಶಿವಸ್ತುತಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲು ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ಹುಬ್ಬಳ್ಳಿ ಧಾರವಾಡ ಅವಳಿ ನಗರ ಸುತ್ತಮುತ್ತಲಿನ ಊರುಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳುತ್ತಾರೆ. ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಈ ಅವಧಿಯಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರಿಂದ ಮನವಿ ಬಂದಿರುತ್ತದೆ.
ಪ್ರಯಾಣಿಕರ ಬೇಡಿಕೆಯಂತೆ ಉಭಯ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಫೆಬ್ರವರಿ 25 ರಂದು ಮಂಗಳವಾರ ರಾತ್ರಿ ಮತ್ತು 26 ರಂದು ಬುಧವಾರ ಬೆಳಿಗ್ಗೆ ಹುಬ್ಬಳ್ಳಿಯಿಂದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ನೇರ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಬಸ್ ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
