ದೇಶ:
ಭಾರತ- ಆಫ್ರಿಕಾ ಟೆಸ್ಟ್ ಆರಂಭಕ್ಕೆ ಒಂದೇ ದಿನ ಬಾಕಿ: ಕೋಚ್ ದ್ರಾವಿಡ್ರಿಂದ ಆಟಗಾರರಿಗೆ ಸ್ಪೆಷಲ್ ಕ್ಲಾಸ್
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆಫ್ರಿಕಾ ಪಿಚ್ನ ಮರ್ಮವನ್ನು ತಿಳಿಯಲು ವಿರಾಟ್ ಕೊಹ್ಲಿ ಪಡೆ ನೆಟ್ನಲ್ಲಿ ಬೆವರು ಹರಿಸುತ್ತಿದೆ. ಡಿಸೆಂಬರ್ 26 ರಂದು ಶುರುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಸರಣಿಗೆ ಚಾಲನೆ ಸಿಗಲಿದೆ.
ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಹೀಗಾಗಿ ಭಾರತ ತಂಡಕ್ಕೆ ಈ ಸರಣಿ ಮುಖ್ಯವಾಗಿದೆ. ಅಲ್ಲದೆ ಹರಿಣಗಳ ನೆಲದಲ್ಲಿ ಭಾರತ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಕೂಡ ಇದೆ. ಇದಕ್ಕಾಗಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ವಿಶೇಷ ಪ್ಲಾನ್ ಕೂಡ ರೂಪಿಸಿದಂತಿದೆ.
ಸದ್ಯಕ್ಕೆ ಸೆಂಚೂರಿಯನ್‌ನ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಭಾರತ ತಂಡ, ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಕಳೆದ ಒಂದು ವಾರದಿಂದ ಅಭ್ಯಾಸ ನಡೆಸುತ್ತಿದೆ. ಅದರಲ್ಲೂ ಕ್ರೀಡಾಂಗಣದ ಸೆಂಟರ್ ಪಿಚ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಟ್ರೈನಿಂಗ್ ಸೆಷನ್ನಲ್ಲಿ ಆರ್ ಅಶ್ವಿನ್ ಬೌಲಿಂಗ್ ಅಭ್ಯಾಸ ನಡೆಸಿದರೆ, ನೆಟ್ ಸೆಷನ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಪ್ರಾಕ್ಟೀಸ್ ಬೆವರಿಳಿಸಿದರು.
ಇತ್ತ ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ಕಿಂಗ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಲೋಪಗಳನ್ನು ತಿದ್ದುವ ಮೂಲಕ ಹೊಸ ಹೊಳಪು ನೀಡುವತ್ತ ಗಮನ ಹರಿಸಿತ್ತಿದ್ದಾರೆ. ಎಲ್ಲ ಆಟಗಾರರನ್ನು ಒಟ್ಟುಗೂಡಿಸಿ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಅಂದಹಾಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಅತ್ಯಂತ ಮಹತ್ವದ ಸರಣಿಯಾಗಿದೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ತಾಯ್ನಾಡಿನಲ್ಲಿ ನ್ಯೂಜಿಲೆಂಡ್ ಎದುರು ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಸರಣಿಯನ್ನು ಗೆದ್ದಾಗಿದೆ. ಈಗ ನೂತನ ಕೋಚ್ ಅಡಿ ವಿದೇಶದಲ್ಲಿ ಮೊದಲ ಸರಣಿಯನ್ನಾಡುತ್ತಿದ್ದು, ಭಾರತ ತಂಡಕ್ಕೆ ಯಶಸ್ಸು ತಂದುಕೊಡುವ ಜವಾಬ್ದಾರಿ ದ್ರಾವಿಡ್ ಮೇಲಿದೆ.
ಇದರ ನಡುಗೆ ಭಾರತದ ಪ್ಲೇಯಿಂಗ್ ಇಲೆವೆನ್ ಕಟ್ಟುವುದೇ ತಲೆನೋವಾಗಿ ಪರಿಣಮಿಸಿದೆ. ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ಹನುಮಾ ವಿಹಾರಿ ಪೈಕಿ ಯಾರಿಗೆ ಸ್ಥಾನ ನೀಡುವುದು ಎಂಬ ಗೊಂದಲ ಟೀಮ್ ಇಂಡಿಯಾದಲ್ಲಿ ಉಂಟಾಗಿದೆ. ಒಬ್ಬ ಬ್ಯಾಟರ್ ಅಥವಾ ಆಲ್ರೌಂಡರ್ ಅನ್ನು ಆಯ್ಕೆ ಮಾಡಬೇಕಾದ ಗೊಂದಲದಲ್ಲಿದೆ. ಆಫ್ರಿಕಾ ವಾತಾವರಣಕ್ಕೆ ಐವರು ವೇಗಿಗಳನ್ನು ಇಳಿಸುವುದು ಕೊಹ್ಲಿಯ ಮೊದಲ ಆಯ್ಕೆ. ಆದರೆ, ಹೀಗಾದಲ್ಲಿ ರಹಾನೆ ಅಥವಾ ವಿಹಾರಿ ಅವರನ್ನು ಕೈಬಿಡಬೇಕಾಗುತ್ತದೆ.
ಹೀಗೆ ಅನೇಕ ವಿಚಾರಗಳಿಂದ ಮೊದಲ ಟೆಸ್ಟ್ನ ಪ್ಲೇಯಿಂಗ್ ಇಲೆವೆನ್ ಕೊಹ್ಲಿ ಹಾಗೂ ಮ್ಯಾನೇಜ್ಮೆಂಟ್ಗೆ ಕಬ್ಬಿಣದ ಕಡಲೆಯಂತಾಗಿದೆ. ಹಾಗಾದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡುವುದಾದರೆ…
ಭಾರತದ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್/ಅಜಿಂಕ್ಯಾ ರಹಾನೆ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್/ಹನುಮಾ ವಿಹಾರಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ