ಮಂಗಳೂರು
ಕರಾವಳಿ ಕರ್ನಾಟಕದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭುಕುಸಿತದಿಂದಾಗಿ ಹಾನಿಯಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹೊಸದಾಗಿ ವೇಗದ ಮಿತಿ ಹೇರಿದೆ. ಸುರತ್ಕಲ್ ಮತ್ತು ತೊಕ್ಕೊಟ್ಟು ನಡುವಿನ ರಾಷ್ಟ್ರೀಯ ಹೆದ್ದಾರಿ-66 ಮಾರ್ಗದಲ್ಲಿ ಮತ್ತು ಬಿಸಿ ರೋಡ್ ಮತ್ತು ನಂತೂರು ನಡುವಿನ ರಾಷ್ಟ್ರೀಯ ಹೆದ್ದಾರಿ-73 ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಗಂಟೆಗೆ 40 ಕಿಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಏತನ್ಮಧ್ಯೆ, ಎಲ್ಲಾ ಇತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ವೇಗವನ್ನು ಗಂಟೆಗೆ 60 ಕಿಮೀಗೆ ಮಿತಿಗೊಳಿಸುವಂತೆ ಪ್ರಾಧಿಕಾರ ವಾಹನ ಸವಾರರಿಗೆ ಸೂಚಿಸಿದೆ.
ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರದ ಕಡಗರವಳ್ಳಿ ಮತ್ತು ಯಡಕುಮೇರಿ ನಿಲ್ದಾಣಗಳ ನಡುವೆ ನಡೆಯುತ್ತಿರುವ ಪುನಃಸ್ಥಾಪನೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ನೈಋತ್ಯ ರೈಲ್ವೆ ಹೇಳಿದೆ. 15 ಕಿಮೀ ವೇಗದ ಮಿತಿಯೊಂದಿಗೆ ಗೂಡ್ಸ್ ರೈಲು ಸಂಚಾರಕ್ಕೆ ಟ್ರ್ಯಾಕ್ ಸೂಕ್ತವೆಂದು ಆಗಸ್ಟ್ 4 ರಂದು ಪರಿಗಣಿಸಲಾಗಿದೆ. ಪ್ರಾಯೋಗಿಕ ಉದ್ದೇಶಗಳಿಗಾಗಿ ಸರಕುಸಾಗಣೆಯ ಖಾಲಿ ರೈಲನ್ನು ಈಗಾಗಲೇ ಓಡಿಸಲಾಗಿದೆ. ರೈಲಿನ ಚಾಲನೆ ಸಂದರ್ಭ ಯಾವುದೇ ಕಂಪನಗಳನ್ನು ಗಮನಿಸಲಾಗಿಲ್ಲ. ಇದಲ್ಲದೆ, ಲೋಡ್ ಮಾಡಿದ ಸರಕು ಸಾಗಣೆ ರೈಲಿನ ಸಂಚಾರದ ಪ್ರಯೋಗವೂ ಶೀಗ್ರ ನಡೆಯಲಿದೆ. ಆ ನಂತರ ಪ್ರಯಾಣಿಕ ರೈಲು ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ರೈಲ್ವೆ ತಿಳಿಸಿದೆ.
ಏತನ್ಮಧ್ಯೆ, ಮಂಗಳೂರು ಬೆಂಗಳೂರು ಪ್ರಯಾಣಿಕ ರೈಲುಗಳ ಸಂಚಾರ ರದ್ದತಿ ಮುಂದುವರಿದಿದೆ. 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ರೈಲನ್ನು ಆಗಸ್ಟ್ 6 ಮತ್ತು ಆಗಸ್ಟ್ 7 ರವರೆಗೆ ರದ್ದುಗೊಳಿಸಲಾಗಿದೆ. 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ರೈಲನ್ನು ಆಗಸ್ಟ್ 7 ಮತ್ತು ಆಗಸ್ಟ್ 8, 16595 ಕೆಎಸ್ಆರ್ ಬೆಂಗಳೂರು-ಕಾರವಾರ ರೈಲನ್ನು ಆಗಸ್ಟ್ 6 ಮತ್ತು ಆಗಸ್ಟ್ 7 ರವರೆಗೆ, 16596 ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ಅನ್ನು ಆಗಸ್ಟ್ 7 ಮತ್ತು ಆಗಸ್ಟ್ 8 ರವರೆಗೆ ರದ್ದುಗೊಳಿಸಲಾಗಿದೆ.