ಬೆಂಗಳೂರು
ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸುವುದಕ್ಕಾಗಿ ನೈಋತ್ಯ ರೈಲ್ವೆ ಈಗಾಗಲೇ ಕೆಲವು ವಿಶೇಷ ರೈಲುಗಳನ್ನು ಘೋಷಣೆ ಮಾಡಿದ್ದು, ಇದೀಗ ಬೆಂಗಳೂರು ಮತ್ತು ಕೇರಳದ ಕಣ್ಣೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಘೋಷಣೆ ಮಾಡಿದೆ. ರೈಲು ಸಂಖ್ಯೆ, ಸಂಚರಿಸುವ ಮಾರ್ಗ, ನಿಲುಗಡೆ ಮತ್ತು ಇತರ ವಿವರಗಳನ್ನು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಹಂಚಿಕೊಂಡಿದೆ.
ರೈಲು ಸಂಖ್ಯೆ 06573 SMVT ಬೆಂಗಳೂರು-ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 11 ರಂದು (ಶುಕ್ರವಾರ) ರಾತ್ರಿ 11:55 ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಶನಿವಾರ ಮಧ್ಯಾಹ್ನ 1:30 ಕ್ಕೆ ಕಣ್ಣೂರು ತಲುಪಲಿದೆ. ರೈಲು ಸಂಖ್ಯೆ 06574 ಕಣ್ಣೂರು-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 14 ರಂದು (ಸೋಮವಾರ) ಸಂಜೆ 6.25 ಕ್ಕೆ ಕಣ್ಣೂರಿನಿಂದ ಹೊರಟು ಮಂಗಳವಾರ ಬೆಳಿಗ್ಗೆ 8.00 ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ಬೆಂಗಳೂರು – ಕಣ್ಣೂರು ವಿಶೇಷ ರೈಲಿಗೆ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ಶೋರ್ನೂರ್, ತಿರೂರ್, ಕೋಝಿಕ್ಕೋಡ್, ವಡಕ್ಕರ, ತಲಶ್ಶೇರಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರು ಮತ್ತು ಮೈಸೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಕೆಲವೇ ದಿನಗಳ ಹಿಂದಷ್ಟೆ ನೈಋತ್ಯ ರೈಲು ಪ್ರಕಟಿಸಿತ್ತು. ಚೆನ್ನೈ, ಮುಂಬೈ, ಕೋಲ್ಕತ್ತಾಗೂ ಕೆಲವು ವಿಶೇಷ ರೈಲುಗಳನ್ನು ಘೋಷಿಸಲಾಗಿತ್ತು. ಮೈಸೂರು ಟು ಕಾರವಾರಕ್ಕೂ ವಿಶೇಷ ರೈಲು ಘೋಷಣೆ ಮಾಡಲಾಗಿತ್ತು. ಇದೀಗ ಕಣ್ಣೂರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
