ತುಮಕೂರು
ಕಾಂಗ್ರೆಸ್ ಪಕ್ಷವು ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದಾಗ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಕುಹುಕವಾಡಿದ್ದ ಬಿಜೆಪಿ ನಾಯಕರು, ಈಗ ಮೋದಿ ಹೆಸರಿನ ಜೊತೆಗೆ ಗ್ಯಾರಂಟಿ ಪದವನ್ನು ಗಟ್ಟಿಯಾಗಿ ಅಂಟು ಹಾಕುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರಿಗೆ ಸ್ಪಷ್ಟವಾಗಿ ತಿಳಿಸಬೇಕು. ಇಲ್ಲವಾದರೆ ನಮ್ಮ ಸರ್ಕಾರ ಅನುಷ್ಟಾನಗೊಳಿಸಿರುವ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಯವರು ತಮ್ಮ ಹೆಸರು ಹಾಕಿಕೊಂಡು ತಿರುಗುತ್ತಾರೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲುದಾರರಾಗಬೇಕು. ಸ್ವಾತಂತ್ರ್ಯಕ್ಕಾಗಿ ಅನೇಕ ಮಹಿಳೆಯರು ಹೋರಾಡಿ ಪ್ರಾಣ ತ್ಯಜಿಸಿದ್ದಾರೆ. ದೇಶದ ಅಭಿವೃದ್ಧಿಯಲ್ಲಿಯೂ ಪಾಲು ಸಿಗಬೇಕು. ಹೀಗಾಗಿ ಪಂಚಾಯಿತಿ ವ್ಯವಸ್ಥೆಯಲ್ಲಿ ಮೊದಲಿಗೆ ಅಧಿಕಾರ ಸಿಗುವಂತೆ ಮಾಡಲಾಯಿತು. ಇದರಿಂದ ರಾಜಕೀಯವಾಗಿ ಮೇಲೆ ಬರಲು ಸಹಾಯವಾಗುತ್ತದೆ ಎಂಬ ನಿಟ್ಟಿನಲ್ಲಿ ಮಹಿಳಾ ಮೀಸಲಾತಿಗೆ ರಾಜೀವ್ ಗಾಂಧಿ ಅವರು ತಿದ್ದುಪಡಿ ತಂದರು ಎಂದು ತಿಳಿಸಿದರು.
ಮಹಿಳೆಯರಿಗಾಗಿ ಏನೆಲ್ಲ ಕಾರ್ಯಕ್ರಮಗಳನ್ನು ರೂಪಿಸಬಹುದು ಎಂದು ಯೋಚಿಸಿದಾಗ ಸಚಿವರಾಗಿದ್ದ ಮೋಟಮ್ಮ ಅವರು ಸ್ತ್ರೀ ಶಕ್ತಿ ಸಂಘಟನೆಯ ಬಗ್ಗೆ ತಿಳಿಸಿದರು. ಸ್ತ್ರೀ ಶಕ್ತಿ ಸಮಾವೇಶದ ಹೆಸರಿನಲ್ಲಿ ಹೆಬ್ಬೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದಾಗ ಏಳು ಲಕ್ಷ ಮಹಿಳೆಯರು ಸೇರಿದ್ದರು. ಅಲ್ಲಿಂದ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಯಿತು ಎಂದರು.
ಹಳ್ಳಿಗಳಿಗೆ ಜನಪ್ರತಿನಿಧಿಗಳು ಬಂದರೆ ಅವರನ್ನು ಪ್ರಶ್ನಿಸುವ ಧೈರ್ಯ ಮಹಿಳೆಯರಿಗೆ ಬರಬೇಕಲ್ಲ. ಇದಕ್ಕೆ ಸ್ತ್ರೀ ಶಕ್ತಿ ಸಹಾಯವಾಯಿತು. ಅನೇಕ ಹಳ್ಳಿಗಳಲ್ಲಿ ಸಾರಾಯಿ ಮಾರಾಟ ನಿಲ್ಲಿಸಲು ಧ್ವನಿ ಎತ್ತಿದ್ದಾರೆ. ಮಹಿಳೆಯರಿಗೆ ಹೆಚ್ಚು ಸ್ಥಾನಗಳನ್ನು ನೀಡಲಾಗುತ್ತಿದೆ ಎಂದರು.
ಸಮಾಜದ ಮಹತ್ವದ ತೀರ್ಮಾನದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಮುದ್ದಹನುಮೇಗೌಡ ಅವರ ಗೆಲುವಿಗೆ ಶ್ರಮಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ. ಬೇರೆಯವರು ಸಂಸದರಾದರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಹೀಗಾಗಿ ಮುದ್ದಹನುಮೇಗೌಡರು ಸಂಸದರಾಗಲೇ ಬೇಕಿದೆ. ಗ್ಯಾರಂಟಿ ಯೋಜನೆಗಳನ್ನು ಬರೀ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾತ್ರ ನೀಡಿಲ್ಲ. ಎಲ್ಲ ತಾಯಂದಿರಿಗೆ ನೀಡಿದ್ದೇವೆ. ಅವರ ಮನವೊಲಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಸೋಮಣ್ಣ ಶಸ್ತ್ರ ತ್ಯಜಿಸಿ ಹೋಗ್ಬೇಕು:-
ಎಸ್.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಬೇಕು. ಗೃಹ ಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ಕೊಟ್ಟರು ಮಹಿಳೆಯರು ಬಂದಿಲ್ಲ ಎಂದು ಆಡಿಕೊಳ್ತಾರೆ. ಹೀಗಾಗಿ, ಬರಿ ಹೆಣ್ಮಕ್ಕಳು ತುಂಬಿದ್ರು ಅಂತ ಮಾತಾಡಿಕೊಳ್ಬೇಕು. ಮಹಿಳಾ ಶಕ್ತಿಯನ್ನು ನೋಡಿ ಸೋಮಣ್ಣ ಅವತ್ತೇ ಶಸ್ತ್ರ ತ್ಯಜಿಸಿ ತುಮಕೂರು ಬಿಟ್ಟು ಬೆಂಗಳೂರಿಗೆ ಹೊರಟು ಹೋಗ್ಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ